ನವದೆಹಲಿ: ದುಬೈನಿಂದ (dubai) ಇಸ್ರೇಲ್ (israel)ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ (flydubai crash attempt) ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ (Smith Machchhar) ಮೇಲೆ ದಾಳಿ ನಡೆಸಿದ ಸಹ ಪೈಲೆಟ್ ಅಲ್-ಹಮ್ಮಾಮಿ ಓಮನ್ ಪ್ರಜೆ ಎಂದು ಗುರುತಿಸಲಾಗಿದೆ. ಆತ ಅಲ್ ಖೈದಾದ ಗುಂಪಿನೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕಾರಣ ಆತನ ಹೆಸರಿನಲ್ಲಿರುವ ಸಾಮಾಜಿಕ ಮಾಧ್ಯಮದ ಪ್ರೊಫೈಲ್‌ನಲ್ಲಿ ಎರಡು ಪೋಸ್ಟ್‌ಗಳನ್ನು ಮಾಡಲಾಗಿದೆ. ಇದು ಇಸ್ಲಾಂ ಧರ್ಮದ ಮೂರು ಅತ್ಯಂತ ಪವಿತ್ರ ಸ್ಥಳಗಳನ್ನು ಚಿತ್ರಿಸುವ ಕೃತಕ ಬುದ್ಧಿಮತ್ತೆಯಿಂದ ರಚಿಸಲಾದ ಚಿತ್ರವನ್ನು ಒಳಗೊಂಡಿತ್ತು.
ಉಗ್ರ ಮನೋಭಾವ ಹೊಂದಿದ್ದ ಅಲ್-ಹಮ್ಮಾಮಿ ಬಗ್ಗೆ ಆತಂಕ ಉಂಟಾಗಿದ್ದ ಹಿನ್ನೆಲೆಯಲ್ಲಿ ಕಳೆದ ವರ್ಷ ಓಮನ್‌ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಿಂದ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಇದೀಗ 'ಫ್ಲೈದುಬೈ' ಘಟನೆಯ ಬಳಿಕ ಆತ ಅಲ್ ಖೈದಾ ಜೊತೆ ಸಂಪರ್ಕ ಹೊಂದಿದ್ದಾನೆ ಎನ್ನುವ ಶಂಕೆ ವ್ಯಕ್ತವಾಗಿದೆ.
ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ದಾಳಿ ಮಾಡಿದ್ದ ಕೋ-ಪೈಲಟ್ ಗುರುತು ಬಹಿರಂಗ
ಫ್ಲೈ ದುಬೈ ಘಟನೆಯ ಬಳಿಕ ಆತನ ಸಾಮಾಜಿಕ ಮಾಧ್ಯಮದ ಫ್ರೋಫೈಲ್ ಎರಡು ಪೋಸ್ಟ್ ಗಳನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ಕಾಕ್‌ಪಿಟ್‌ನ ದೃಶ್ಯಗಳು, ಅಲ್-ಖೈದಾದೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳ ಚಿತ್ರಗಳು, ಇಸ್ಲಾಂ ಧರ್ಮದ ಮೂರು ಅತ್ಯಂತ ಪವಿತ್ರ ಸ್ಥಳಗಳನ್ನು ಚಿತ್ರಿಸುವ ಕೃತಕ ಬುದ್ಧಿಮತ್ತೆಯಿಂದ ರಚಿಸಿರುವ ಚಿತ್ರಗಳು ಸೇರಿವೆ.
'ಫ್ಲೈದುಬೈ' ವಿಮಾನ ಪತನಗೊಳಿಸುವ ಪ್ರಯತ್ನ ನಡೆದ ಕೆಲವೇ ಗಂಟೆಗಳಲ್ಲಿ ಈ ಚಿತ್ರಗಳನ್ನು ಒಮಾನಿ ಪೈಲಟ್‌ನ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಹಂಚಿಕೆ ಮಾಡಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಘಟನೆ ನಡೆದ ಸುಮಾರು ಒಂಬತ್ತು ಗಂಟೆಗಳ ಅವಧಿಯಲ್ಲಿ ಎರಡು ಪೋಸ್ಟ್‌ಗಳನ್ನು ಪ್ರಕಟಿಸಲಾಗಿದೆ. ಇವುಗಳನ್ನು ಯಾರು ಪ್ರಕಟಿಸಿದರು, ಇದನ್ನು ಮೊದಲೇ ನಿಗದಿಪಡಿಸಲಾಗಿತ್ತೇ ಎಂಬುದು ಸ್ಪಷ್ಟವಾಗಿಲ್ಲ. ಬಳಿಕ ಆ ಲಿಂಕ್ಡ್‌ಇನ್ ಪ್ರೊಫೈಲ್ ಅನ್ನು ಅಳಿಸಲಾಗಿದೆ.
ಮೊದಲ ಪೋಸ್ಟ್‌ನಲ್ಲಿ ಕಾಕ್‌ಪಿಟ್ ದೃಶ್ಯಗಳು ಮತ್ತು ಅಲ್-ಖೈದಾ ವ್ಯಕ್ತಿಗಳ ಚಿತ್ರಗಳಿದ್ದವು. ಇದು ಬೋಯಿಂಗ್ 737 ಮ್ಯಾಕ್ಸ್ ವಿಮಾನದ ಕಾಕ್‌ಪಿಟ್ ಒಳಗೆ ಚಿತ್ರಗಳು ಎನ್ನಲಾಗಿದೆ. ಅಮೆರಿಕದ ಸುದ್ದಿ ಸಂಸ್ಥೆಯೊಂದು ಇದು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದೆ ಎಂದು ಗುರುತಿಸಿದೆ. ಇದರಲ್ಲಿ ಕಾಕ್‌ಪಿಟ್ ಪರದೆಯು OMA624 ವಿಮಾನ ಸಂಖ್ಯೆ ಮತ್ತು ಅಕ್ಟೋಬರ್ 11, 2023 ದಿನಾಂಕವನ್ನು ತೋರಿಸಿದೆ. ಇದು ಸಾಮಾನ್ಯವಾಗಿ ದುಬೈ ಮತ್ತು ಮಸ್ಕತ್ ನಡುವೆ ಕಾರ್ಯನಿರ್ವಹಿಸುವ ಮಾರ್ಗಕ್ಕೆ ಸಂಬಂಧಿಸಿದ್ದಾಗಿದೆ.
ಇನ್ನೊಂದರಲ್ಲಿ ಒಸಾಮಾ ಬಿನ್ ಲಾಡೆನ್ ಮರಣದ ಬಳಿಕ ಅಲ್-ಖೈದಾವನ್ನು ಮುನ್ನಡೆಸಿದ ಐಮನ್ ಅಲ್-ಜವಾಹ್ರಿ ಮತ್ತು 2009ರ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ ಹುಮಾಮ್ ಖಲೀಲ್ ಅಬು-ಮುಲಾಲ್ ಅಲ್-ಬಲಾವಿ ಅವರ ಚಿತ್ರಗಳನ್ನು ಒಳಗೊಂಡಿದೆ. ಇನ್ನೊಂದು ಪೋಸ್ಟ್‌ನಲ್ಲಿ ಮಕ್ಕಾ, ಮದೀನಾ ಮತ್ತು ಜೆರುಸಲೆಮ್‌ಗಳ ಚಿತ್ರವಿದೆ. ಇವು ಕೃತಕ ಬುದ್ಧಿಮತ್ತೆಯಿಂದ ರಚಿಸಿರುವಂತದ್ದು.
ಅಲ್ ಹಮ್ಮಮಿ ಪ್ರೊಫೈಲ್ ಮಾಹಿತಿ ಪ್ರಕಾರ ಆತ ಓಮನ್ ಏರ್‌ನಲ್ಲಿ ಏಳು ವರ್ಷಗಳ ಕಾಲ ಕೆಲಸ ಮಾಡಿದ್ದು, ಕಳೆದ 2025ರ ಜೂನ್ ನಲ್ಲಿ ರಾಯಲ್ ಏರ್ ಮೊರಾಕೊಗೆ ಸೇರಿದ್ದಾನೆ. ಈ ವರ್ಷದ ಆರಂಭದಲ್ಲಿ ಆತನನ್ನು ಕೆಲಸದಿಂದ ತೆಗೆಯಲಾಗಿತ್ತು. 'ಫ್ಲೈದುಬೈ' ಸೇರಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಆತನ ಸಹೋದ್ಯೋಗಿಯೊಬ್ಬರು ಆತ ಸುಮಾರು ಎಂಟು ತಿಂಗಳಿನಿಂದ ಫ್ಲೈ ದುಬೈಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಿದ್ದಾರೆ.
ಅಲ್ ಹಮ್ಮಮಿ ಸಾಮಾಜಿಕ ಮಾಧ್ಯಮ ಖಾತೆಗಳ ಮೇಲೆ ತನಿಖಾಧಿಕಾರಿಗಳು ನಿಗಾ ಇರಿಸಿದ್ದಾರೆ. ಆತ ಉಗ್ರವಾದವನ್ನು ಬೆಂಬಲಿಸುವ ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದ. ಆತ ಹೆಚ್ಚಿನ ಸಮಯವನ್ನು ಪ್ರಾರ್ಥನೆಯಲ್ಲಿ ಕಳೆಯುತ್ತಿದ್ದನು. ಮಹಿಳೆಯರಿಗೆ ಹಸ್ತಲಾಘವ ಮಾಡುತ್ತಿರಲಿಲ್ಲ. ಆತನ ಧಾರ್ಮಿಕ ನಂಬಿಕೆಗಳ ಬಗ್ಗೆ ಒಮನ್ ಏರ್ ಸಿಬ್ಬಂದಿಗಳಲ್ಲಿ ಕೆಲವರಿಗೆ ಆತಂಕ ಉಂಟು ಮಾಡಿತ್ತು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.