ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sharif Osman Hadi: ಶೆಕ್ ಹಸೀನಾ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದ ಶರೀಫ್ ಉಸ್ಮಾನ್ ಹಾದಿ ಯಾರು ಗೊತ್ತಾ...?

ಬಾಂಗ್ಲಾದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ನಿಧನದ ಸುದ್ದಿ ಬಾಂಗ್ಲಾದೇಶದಲ್ಲಿ ಅಲ್ಲೋಕಲ್ಲೋದ ವಾತಾವರಣದ ಸ್ಥಿತಿಗೆ ಕಾರಣವಾಗಿದ್ದು, ಬಾಂಗ್ಲಾದ ವಿವಿಧ ಭಾಗಗಳಲ್ಲಿ ಉದ್ವಿಗ್ನತೆ ಹೆಚ್ಚಿ, ಹಿಂಸಾತ್ಮಕ ಘಟನೆಗಳು ಮರುಕಳಿಸುತ್ತಿವೆ. ಫೆಬ್ರವರಿ 12ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದ ವೇಳೆ ಷರೀಫ್‌ಗೆ ತಲೆಗೆ ಗುಂಡೇಟು ತಗುಲಿದ ಕಾರಣ ಗಂಭೀರವಾಗಿ ಗಾಯಗೊಂಡಿದ್ದ ಎನ್ನಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಕೊನೆಯುಸಿರೆಳೆದಿದ್ದಾನೆ.

ಷರೀಫ್ ಉಸ್ಮಾನ್ ಹಾದಿ

ಢಾಕಾ, ಡಿ.18: ಬಾಂಗ್ಲಾದೇಶದಲ್ಲಿ (Bangladesh) ನಡೆಯುತ್ತಿರುವ ಹಿಂಸಾಚಾರ ಮತ್ತು ಸಂಘರ್ಷಗಳು ದಿನೇ ದಿನೇ ಗಂಭೀರ ಸ್ವರೂಪ ಪಡೆಕೊಳ್ಳುತ್ತಿದ್ದು, ದೇಶದೆಲ್ಲೆಡೆ ಉದ್ವಿಗ್ನತೆ ಸೃಷ್ಟಿಯಾಗಿದೆ. ಅಲ್ಲಿನ ಪರಿಸ್ಥಿತಿ ಹದೆಗೆಟ್ಟಿರುವ ಈ ಸಂದರ್ಭದಲ್ಲಿ ಬಾಂಗ್ಲಾದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ (Sharif Osman Hadi) ನಿಧನದ(Death) ಸುದ್ದಿ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದ್ದು, ಗುರುವಾರ ರಾತ್ರಿ ದೇಶದ ಹಲವು ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಭುಗಿಲೆದ್ದಿವೆ.

ಹಾದಿ ಸಾವಿನ ಸುದ್ದಿ ಹೊರಬಿದ್ದ ತಕ್ಷಣವೇ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ಉದ್ವಿಗ್ನತೆ ಹೆಚ್ಚಿದ್ದು, ಹಿಂಸಾತ್ಮಕ ಘಟನೆಗಳು ಮರುಕಳಿಸುತ್ತಿವೆ. ಫೆಬ್ರವರಿ 12ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದ ವೇಳೆ ಷರೀಫ್‌ಗೆ ತಲೆಗೆ ಗುಂಡೇಟು ತಗುಲಿ ಸಾವನ್ನಪ್ಪಿದ್ದಾನೆ. ಗುಂಡೇಟು ಬೀಳುತ್ತಿದ್ದಂತೆ ಗಂಭೀರ ಗಾಯಗೊಂಡಿದ್ದ ಷರೀಫ್‌ ಅನ್ನು ಮೊದಲಿಗೆ ಢಾಕಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಸಿಂಗಾಪುರಕ್ಕೆ ಕಳುಹಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಈ ಕುರಿತು ಸಿಂಗಾಪುರ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದ್ದು, ಡಿಸೆಂಬರ್ 15ರಂದು ಅವರನ್ನು ಸಿಂಗಾಪುರ ಜನರಲ್ ಆಸ್ಪತ್ರೆಯ ನ್ಯೂರೋಸರ್ಜಿಕಲ್ ಐಸಿಯುವಿಗೆ ವಿಮಾನದ ಮೂಲಕ ಸ್ಥಳಾಂತರಿಸಲಾಗಿತ್ತು ಎನ್ನಲಾಗಿದೆ. ಈ ಮಧ್ಯೆ ಢಾಕಾದಲ್ಲಿ ಗಲಭೆ ಹೆಚ್ಚಾಗಿದ್ದು, ಇದಕ್ಕೆ ಷರೀಫ್ ಅವರ ನಿಧನವೇ ಕಾರಣ ಎನ್ನಲಾಗಿದೆ. ಹಾಗಿದ್ರೆ ಯಾರು ಬಾಂಗ್ಲಾದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ...? ಅವನ ಹಿನ್ನಲೆ ಏನು..? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಶರೀಫ್ ಉಸ್ಮಾನ್ ಹಾದಿ ಯಾರು?

ಷರೀಫ್ ಉಸ್ಮಾನ್ ಹಾದಿ, ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಆಡಳಿತದ ವಿರುದ್ಧ ನಡೆದ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಹಸೀನಾ ಅವರ ತೀವ್ರ ವಿರೋಧಿಯಾಗಿದ್ದರು. ಜುಲೈ ತಿಂಗಳಲ್ಲಿ ನಡೆದ ಸರ್ಕಾರ ವಿರೋಧಿ ಪ್ರತಿಭಟನೆಗಳಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಈ ಆಂದೋಲನಗಳು ಹಸೀನಾ ಅವರ ರಾಜಕೀಯ ಪತನಕ್ಕೆ ಕಾರಣವಾಗಿದ್ದವು. ಅವಾಮಿ ಲೀಗ್ ಪಕ್ಷದ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿದ್ದ ಹಾದಿ, ಆ ಪಕ್ಷವನ್ನು ರಾಜಕೀಯವಾಗಿ ದುರ್ಬಲಗೊಳಿಸುವ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿದ್ದರು.

Bangladesh National Anthem: ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶದ ರಾಷ್ಟ್ರಗೀತೆ: ಬಿಜೆಪಿಯಿಂದ ತರಾಟೆ

ಇಂಕಿಲಾಬ್ ಮಂಚ್’ ಸಂಘಟನೆಯ ಸಂಚಾಲಕ

ಅಲ್ಲದೇ ಭಾರತ ವಿರೋಧಿ ಹೇಳಿಕೆಗಳಿಂದ ಗಮನ ಸೆಳೆದ ‘ಇಂಕಿಲಾಬ್ ಮಂಚ್’ ಸಂಘಟನೆಯ ಸಂಚಾಲಕನಾಗಿದ್ದು, ಈ ಸಂಘಟನೆಯ ಮೂಲಕ ಅವರು ಭಾರತ ವಿರೋಧಿ ಭಾವನೆಗಳನ್ನು ಪ್ರಚೋದಿಸುತ್ತಿದ್ದರು ಎಂಬ ಆರೋಪಗಳಿವೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಢಾಕಾದ ಒಂದು ಕ್ಷೇತ್ರದಿಂದ ಸ್ಪರ್ಧಿಸಲು ಅವರು ಸಿದ್ಧತೆ ನಡೆಸುತ್ತಿದ್ದರು. ಆದರೆ ಯೂನಸ್ ಸರ್ಕಾರವು ಅವರ ಪಕ್ಷಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿಲ್ಲ.

ತನಿಖೆ ಕೈಗೆತ್ತಿಕೊಂಡ ಯೂನಸ್ ಸರ್ಕಾರ

ಹಾದಿ ಅವರ ಹತ್ಯೆಯ ಪ್ರಕರಣದ ಕುರಿತು ಯೂನಸ್ ಸರ್ಕಾರ ತನಿಖೆಯನ್ನು ಕೈಗೊಂಡಿದ್ದು, ತಪ್ಪಿತಸ್ಥರನ್ನು ಕಾನೂನಿನ ಮುಂದೆ ತರಲಾಗುತ್ತದೆ ಎಂದು ಭರವಸೆ ನೀಡಿದೆ. “ಅವರು ಫ್ಯಾಸಿಸ್ಟ್ ಹಾಗೂ ಭಯೋತ್ಪಾದಕ ಶಕ್ತಿಗಳ ಶತ್ರುವಾಗಿದ್ದರು. ಕ್ರಾಂತಿಕಾರಿಗಳ ಧ್ವನಿಯನ್ನು ಮೌನಗೊಳಿಸಲು ಯತ್ನಿಸಿದವರನ್ನು ನಾವು ಸೋಲಿಸುತ್ತೇವೆ,” ಎಂದು ಯೂನಸ್ ಹೇಳಿದ್ದಾರೆ. ಜೊತೆಗೆ ಶನಿವಾರವನ್ನು ರಾಷ್ಟ್ರೀಯ ಶೋಕದಿನವಾಗಿ ಘೋಷಿಸಲಾಗಿದೆ.

ಈ ಪ್ರಕರಣದಲ್ಲಿ ಮುಖ್ಯ ಆರೋಪಿ ಫೈಸಲ್ ಕರೀಂ ಮಸೂದ್ ಅವರ ಪತ್ನಿ ಸೇರಿದಂತೆ ಕುಟುಂಬದ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ನಡುವೆ, ಹಾದಿ ಅವರ ಬೆಂಬಲಿಗರು ಈ ಹತ್ಯೆಗೆ ಭಾರತ ಕಾರಣವೆಂದು ಆರೋಪಿಸಿ, ಆರೋಪಿಗಳು ನೆರೆಯ ದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ಇದರ ಬೆನ್ನಲ್ಲೇ ಢಾಕಾದಲ್ಲಿರುವ ಭಾರತೀಯ ಹೈಕಮಿಷನ್ ಅನ್ನು ಮುಚ್ಚುವಂತೆ ಯೂನಸ್ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ.

ಗುರುವಾರ ರಾತ್ರಿ ನಡೆದ ಪ್ರತಿಭಟನೆಗಳ ವೇಳೆ ಭಾರತ ವಿರೋಧಿ ಘೋಷಣೆಗಳು ಮೊಳಗಿದ್ದು, ಕೆಲವು ಪ್ರತಿಭಟನಾಕಾರರು ಅವಾಮಿ ಲೀಗ್ ಕಚೇರಿಗೂ ನುಗ್ಗಿದ್ದಾರೆ. ಯೂನಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಇಸ್ಲಾಮಿಸ್ಟ್ ಶಕ್ತಿಗಳು ಬಲಪಡುತ್ತಿವೆ ಎಂಬ ಟೀಕೆಗಳು ಕೇಳಿಬರುತ್ತಿದ್ದು, ಶರೀಫ್ ಉಸ್ಮಾನ್ ಹಾದಿ ಅವರ ನಿಧನವು ಬಾಂಗ್ಲಾದೇಶದ ರಾಜಕೀಯದಲ್ಲಿ ವಿವಿಧ ಬೆಳವಣಿಗಳಿಗೆ ದಾರಿ ಮಾಡಿ ಕೊಡುವ ಸಾಧ್ಯತೆ ಇದೆ.