ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bangladesh National Anthem: ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶದ ರಾಷ್ಟ್ರಗೀತೆ: ಬಿಜೆಪಿಯಿಂದ ತರಾಟೆ

ಗುವಾಹಟಿಯ ಶ್ರೀಭೂಮಿ ಜಿಲ್ಲೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಬಂಗಾಳದ ವಿಭಜನೆಯ ಮೊದಲು ಅಂದರೆ 1905ರಲ್ಲಿ ರವೀಂದ್ರನಾಥ ಟ್ಯಾಗೋರ್ ಬರೆದಿರುವ 'ಅಮರ್ ಸೋನಾರ್ ಬಾಂಗ್ಲಾ' (ನನ್ನ ಚಿನ್ನದ ಬಂಗಾಳ) ಹಾಡನ್ನು ಹಾಡಲಾಗಿದ್ದು, ಇದೀಗ ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಗಿದೆ.

ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶದ ರಾಷ್ಟ್ರಗೀತೆ

-

ದಿಸ್‌ಪುರ: ಕಾಂಗ್ರೆಸ್ (Congress) ಕಾರ್ಯಕ್ರಮದಲ್ಲಿ ಬಾಂಗ್ಲಾದೇಶದ ರಾಷ್ಟ್ರಗೀತೆಯನ್ನು (Bangladesh National Anthem) ಹಾಡಲಾಗಿದ್ದು, ಇದನ್ನು ಬಿಜೆಪಿ (BJP) ತೀವ್ರವಾಗಿ ಟೀಕಿಸಿದೆ. ಶ್ರೀಭೂಮಿ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ನಾಯಕರೊಬ್ಬರು ಬಾಂಗ್ಲಾದೇಶದ ರಾಷ್ಟ್ರಗೀತೆ ʼಅಮರ್ ಸೋನಾರ್ ಬಾಂಗ್ಲಾʼ (ನನ್ನ ಚಿನ್ನದ ಬಂಗಾಳ) ಹಾಡನ್ನು ಹಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral News) ಆಗಿದೆ. ಈ ಬಗ್ಗೆ ಅಸ್ಸಾಂನ ಬಿಜೆಪಿ ಘಟಕವು ಟೀಕಿಸಿದೆ. ಕಾಂಗ್ರೆಸ್‌ಗೆ ಬಾಂಗ್ಲಾದೇಶದ ಗೀಳು ಅಂಟಿಕೊಂಡಿದೆ ಎಂದು ಬಿಜೆಪಿ ಹೇಳಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಬಂಗಾಳ ವಿಭಜನೆಯ ಮೊದಲು 1905ರಲ್ಲಿʼಅಮರ್ ಸೋನಾರ್ ಬಾಂಗ್ಲಾʼ (ನನ್ನ ಚಿನ್ನದ ಬಂಗಾಳ) ಹಾಡನ್ನು ರವೀಂದ್ರನಾಥ ಟ್ಯಾಗೋರ್ ಬರೆದಿದ್ದರು. ಈ ಹಾಡು ಬಂಗಾಳದ ವಿಭಜನೆಯ ವಿರುದ್ಧದ ಪ್ರತಿಭಟನೆಯಾಗಿತ್ತು. ಬಳಿಕ ಬ್ರಿಟಿಷರ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆದವು. ಇದರಿಂದಾಗಿ 1911ರಲ್ಲಿ ಬಂಗಾಳ ವಿಭಜನೆಯನ್ನು ರದ್ದುಗೊಳಿಸಲಾಯಿತು. ಸುಮಾರು ಏಳು ದಶಕಗಳ ಅನಂತರ 1971ರಲ್ಲಿ ಸ್ವಾತಂತ್ರ್ಯಗೊಂಡ ಬಾಂಗ್ಲಾದೇಶ ʼಅಮರ್ ಸೋನಾರ್ ಬಾಂಗ್ಲಾʼ ಹಾಡನ್ನು ತನ್ನ ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡಿತ್ತು.

ಈ ಹಾಡಿನಲ್ಲಿ ರವೀಂದ್ರನಾಥ ಟ್ಯಾಗೋರ್ ಬಂಗಾಳದ ನೈಸರ್ಗಿಕ ಸೌಂದರ್ಯ ಮತ್ತು ಬಂಗಾಳಿಗಳಿಗೆ ಈ ಭೂಮಿಯೊಂದಿಗಿನ ಆಳವಾದ ಸಂಪರ್ಕದ ಬಗ್ಗೆ ಬರೆದಿದ್ದಾರೆ. ಹೀಗಾಗಿ ಗಡಿಯ ಎರಡೂ ಬದಿಗಳಲ್ಲಿರುವ ಬಂಗಾಳಿ ಭಾಷಿಕರು ಸಾರ್ವಜನಿಕ ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ಈ ಹಾಡನ್ನು ಹೆಚ್ಚಾಗಿ ಹಾಡುತ್ತಾರೆ.

ಇದನ್ನೂ ಓದಿ: 2025ರ ಬೆಂಗಳೂರಿನ ಟಾಪ್ ಸ್ಟಾರ್ಟಪ್‌ ಗಳ ಪಟ್ಟಿ ಬಿಡುಗಡೆ ಮಾಡಿದ ಲಿಂಕ್ಡ್‌ ಇನ್‌

ಅಸ್ಸಾಂನ ಶ್ರೀಭೂಮಿ ಬಾಂಗ್ಲಾದೇಶದ ಗಡಿ. ಇದು ಬಂಗಾಳಿ ಪ್ರಾಬಲ್ಯದ ಬರಾಕ್ ಕಣಿವೆಯ ಭಾಗವಾಗಿದೆ. ಹೀಗಾಗಿ ಇಲ್ಲಿ ಈ ಹಾಡನ್ನು ಹಾಡಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.



ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್, ಬಿಜೆಪಿಗೆ ಈ ಹಾಡಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ ಗೊತ್ತಿಲ್ಲ ಎಂದು ಹೇಳಿದ್ದಾರೆ. ಅವರು ಇದು ಮುಸ್ಲಿಂ ಸಮುದಾಯದ ಹಾಡು ಮತ್ತು ಬಾಂಗ್ಲಾದೇಶದ ರಾಷ್ಟ್ರಗೀತೆ ಎಂದು ಹೇಳಿಕೊಳ್ಳುತ್ತಿದೆ. ಅವರು ಮೊದಲು ಈ ಹಾಡಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಅರ್ಥ ಮಾಡಿಕೊಳ್ಳಲಿ. ನೊಬೆಲ್ ಪ್ರಶಸ್ತಿ ವಿಜೇತ ಮತ್ತು ಭಾರತದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ರವೀಂದ್ರನಾಥ ಟ್ಯಾಗೋರ್ ಇದನ್ನು ಬರೆದಿದ್ದಾರೆ. ನಮ್ಮ ಹಂಚಿಕೆಯ ಪರಂಪರೆ ಮತ್ತು ಸಾಹಿತ್ಯ ಪರಂಪರೆಯನ್ನು ಆಚರಿಸುವ ಬಂಗಾಳಿ ಹಾಡನ್ನು ನಾವು ಏಕೆ ಹಾಡಬಾರದು? ಎಂದು ಅವರು ತಿಳಿಸಿದ್ದಾರೆ.



ಬಿಜೆಪಿ ಅಸ್ಸಾಂ ಘಟಕವು ಈ ವಿಡಿಯೊ ಬಗ್ಗೆ ಮಾತನಾಡಿದ್ದು, ಕೆಲವು ದಿನಗಳ ಹಿಂದೆ ಬಾಂಗ್ಲಾದೇಶವು ಇಡೀ ಈಶಾನ್ಯವನ್ನು ನುಂಗುವ ನಕ್ಷೆಯನ್ನು ಪ್ರಕಟಿಸಿತ್ತು. ಬಾಂಗ್ಲಾದೇಶದ ಗೀಳು ಹೊಂದಿರುವ ಕಾಂಗ್ರೆಸ್ ಇದನ್ನು ಇಲ್ಲಿ ಹೆಮ್ಮೆಯಿಂದ ಹಾಡುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದೆ.

ಅಸ್ಸಾಂ ಸಚಿವ ಅಶೋಕ್ ಸಿಂಘಾಲ್, ಬಾಂಗ್ಲಾದೇಶದ ರಾಷ್ಟ್ರಗೀತೆ 'ಅಮರ್ ಸೋನಾರ್ ಬಾಂಗ್ಲಾ' ಅನ್ನು ಅಸ್ಸಾಂನ ಶ್ರೀಭೂಮಿಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಹಾಡಲಾಗಿದೆ. ಈಶಾನ್ಯವನ್ನು ಭಾರತದಿಂದ ಬೇರ್ಪಡಿಸಲು ಬಯಸುತ್ತಿರುವುದು ಅದೇ ದೇಶ ಎಂದು ಹೇಳಿದ್ದಾರೆ.