Sultan Bashiruddin Mahmood: ಪಾಕ್ ಸೇನಾ ಮುಖ್ಯಸ್ಥನ ತಂದೆಗಿತ್ತು ಉಗ್ರರೊಂದಿಗೆ ನೇರ ನಂಟು! ಸುಲ್ತಾನ್ ಬಶೀರುದ್ದೀನ್ ಮಹಮೂದ್ ಯಾರು?
ಪಾಕಿಸ್ತಾನದ ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್‌ಪಿಆರ್) ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ತಂದೆ ಸುಲ್ತಾನ್ ಬಶೀರುದ್ದೀನ್ ಮಹಮೂದ್ ಪರಮಾಣು ವಿಜ್ಞಾನಿಯಾಗಿದ್ದು ಭಯೋತ್ಪಾದಕ ಸಂಘಟನೆಗಳಾದ ಅಲ್-ಖೈದಾ ಮತ್ತು ತಾಲಿಬಾನ್ ಗೆ ರಾಸಾಯನಿಕ, ಜೈವಿಕ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ನೀಡಿದ್ದನು ಎನ್ನುವ ಆರೋಪಗಳಿವೆ.


ನವದೆಹಲಿ: ಪಾಕಿಸ್ತಾನ ಸೇನೆಯ ಮಾಹಿತಿ ವಿಭಾಗದ ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ( Pakistan’s Inter-Services Public Relations ) ನ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ (General Ahmed Sharif Chaudhary) ಭಯೋತ್ಪಾದಕರ ಜೊತೆ ನಂಟು ಹೊಂದಿದ್ದ ಸುಲ್ತಾನ್ ಬಶೀರುದ್ದೀನ್ ಮಹಮೂದ್ (Sultan Bashiruddin Mahmood) ನ ಮಗ ಎನ್ನುವ ಆಘಾತಕಾರಿ ಸಂಗತಿ ಇತ್ತೀಚೆಗೆ ಬೆಳಕಿಗೆ ಬಂದಿದೆ. ಅಹ್ಮದ್ ಷರೀಫ್ ಚೌಧರಿ ಅವರ ತಂದೆ ಸುಲ್ತಾನ್ ಬಶೀರುದ್ದೀನ್ ಮಹಮೂದ್ ಪರಮಾಣು ವಿಜ್ಞಾನಿಯಾಗಿದ್ದು ಈತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಜೊತೆ ಸಂಪರ್ಕ ಹೊಂದಿದ್ದನು.
ಪಾಕಿಸ್ತಾನದ ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್‌ಪಿಆರ್) ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ತಂದೆ ಸುಲ್ತಾನ್ ಬಶೀರುದ್ದೀನ್ ಮಹಮೂದ್ ಪರಮಾಣು ವಿಜ್ಞಾನಿಯಾಗಿದ್ದು ಭಯೋತ್ಪಾದಕ ಸಂಘಟನೆಗಳಾದ ಅಲ್-ಖೈದಾ ಮತ್ತು ತಾಲಿಬಾನ್ ಗೆ ರಾಸಾಯನಿಕ, ಜೈವಿಕ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ನೀಡಿದ್ದನು ಎನ್ನುವ ಆರೋಪಗಳಿವೆ. ವಿಜ್ಞಾನದ ಬಗ್ಗೆ ವಿಲಕ್ಷಣವಾದ ದೃಷ್ಟಿಕೋನ ಹೊಂದಿದ್ದ ಸುಲ್ತಾನ್ ಬಶೀರುದ್ದೀನ್ ಮಹಮೂದ್ ಒಮ್ಮೆ ಜಿನ್‌ಗಳನ್ನು ವಿದ್ಯುತ್ ಉತ್ಪಾದಿಸಲು ಬಳಸಬಹುದು ಎಂದು ಹೇಳಿಕೊಂಡಿದ್ದ.

ಯುಎನ್ ಮಾಹಿತಿ ಪ್ರಕಾರ ಸುಲ್ತಾನ್ ಬಶೀರುದ್ದೀನ್ ಮಹಮೂದ್ ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಅನ್ನು ಭೇಟಿಯಾಗಿ ಆತನಿಗೆ ಪರಮಾಣು ಶಸ್ತ್ರಾಸ್ತ್ರಗಳಿಗೆ ಬೇಕಾದ ಅಗತ್ಯ ಮೂಲಸೌಕರ್ಯ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ನೀಡಿದ್ದನು.
1999ರಲ್ಲಿ ಸುಲ್ತಾನ್ ಬಶೀರುದ್ದೀನ್ ಮಹಮೂದ್ ಸ್ಥಾಪಿಸಿದ್ದ ಬಲಪಂಥೀಯ ಸಂಘಟನೆಯಾದ ಉಮ್ಮಾ ತಮೀರ್-ಎ-ನೌ (UTN) ಅನ್ನು 2001ರಲ್ಲಿ ಯುನೈಟೆಡ್ ಸ್ಟೇಟ್ಸ್ ನಿಷೇಧಿಸಿತ್ತು. 2001ರ ಡಿಸೆಂಬರ್ ನಲ್ಲಿ ಅಲ್-ಖೈದಾ ಜೊತೆ ಸಂಪರ್ಕ ಹೊಂದಿರುವ ಆರೋಪದ ಮೇರೆಗೆ ಬಶಿರುದ್ದೀನ್ ಮಹಮೂದ್ ನನ್ನು ಅಮೆರಿಕದ ವಿದೇಶಿ ಆಸ್ತಿ ನಿಯಂತ್ರಣ ಕಚೇರಿಯು ಜಾಗತಿಕ ಭಯೋತ್ಪಾದಕ ಎಂದು ಗುರುತಿಸಿತು.
ಯುನೈಟೆಡ್ ಕಿಂಗ್‌ಡಮ್ ಮತ್ತು ಜರ್ಮನಿಯಲ್ಲಿ ಎಂಜಿನಿಯರಿಂಗ್ ಅಧ್ಯಯನ ಮಾಡಿರುವ ಬಶೀರುದ್ದೀನ್ ಗೆ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಪಾಕಿಸ್ತಾನದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಸಿತಾರಾ-ಎ-ಇಮ್ತಿಯಾಜ್ ನೀಡಿ ಗೌರವಿಸಿದರು. ಆದರೆ ಬಳಿಕ ಬಶೀರುದ್ದೀನ್ ಅವರ ರಾಜಕಾರಣದ ಬಗ್ಗೆ ವಿಮರ್ಶೆಗಳನ್ನು ನೀಡತೊಡಗಿದ ಮತ್ತು ಅಫ್ಘಾನಿಸ್ತಾನದಲ್ಲಿ ಜಿಹಾದಿಗಳನ್ನು ಬೆಂಬಲಿಸಿದನು.
ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳ ಶಸ್ತ್ರಾಗಾರಕ್ಕಾಗಿ ಯುರೇನಿಯಂ ಮತ್ತು ಪ್ಲುಟೋನಿಯಂ ಉತ್ಪಾದಿಸಲು ಸ್ಥಾವರಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಬಶೀರುದ್ದೀನ್, ಇಸ್ಲಾಮಿಕ್ ಸೈನ್ಸ್ ಎಂಬ ಬ್ರ್ಯಾಂಡ್‌ನ ಚಂದಾದಾರರಾಗಿದ್ದನು. ಇದು ಕುರಾನ್ ವೈಜ್ಞಾನಿಕ ಜ್ಞಾನದ ಮೂಲ ಎನ್ನುತ್ತದೆ.
ಇದನ್ನೂ ಓದಿ: Viral Video: ಪಾಕ್ ಹಾರಿಸಿದ ಕ್ಷಿಪಣಿ ಹಿಡಿದುಕೊಂಡು ಈ ವ್ಯಕ್ತಿ ಮಾಡಿದ್ದೇನು? ವಿಡಿಯೊ ನೋಡಿ!
ಜಿನ್ ಬಗ್ಗೆ ಪತ್ರಿಕೆಗಳನ್ನು ಪ್ರಕಟಿಸಿರುವ ಬಶೀರುದ್ದೀನ್, ಜಿನ್‌ಗಳು ಬೆಂಕಿಯಿಂದ ಸೃಷ್ಟಿಸಲ್ಪಟ್ಟ ಅಲೌಕಿಕ ಜೀವಿಗಳು. ಮನುಷ್ಯರಂತೆ ಮತ್ತು ಸ್ವತಂತ್ರ ಇಚ್ಛಾಶಕ್ತಿಯನ್ನು ಹೊಂದಿವೆ. ಅವು ಮನುಷ್ಯರಿಗೆ ಅಗೋಚರವಾಗಿರುತ್ತವೆ ಮತ್ತು ಪ್ರಾಣಿಗಳ ರೂಪಗಳನ್ನು ಒಳಗೊಂಡಂತೆ ವಿವಿಧ ರೂಪಗಳನ್ನು ತೆಗೆದುಕೊಳ್ಳಬಹುದು. ಮನುಷ್ಯರಂತೆ ಜಿನ್‌ಗಳು ಒಳ್ಳೆಯವರಾಗಿರಬಹುದು ಅಥವಾ ಕೆಟ್ಟವರಾಗಿರಬಹುದು ಮತ್ತು ಆಯ್ಕೆಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿವೆ ಎಂದು ಕುರಾನ್‌ನಲ್ಲಿ ವಿವರಿಸಲಾಗಿದೆ. ಇಂಧನ ಬಿಕ್ಕಟ್ಟನ್ನು ಪರಿಹರಿಸಲು ಇದನ್ನು ಬಳಸಬಹುದು ಎಂದು ಆತ ಹೇಳಿದ್ದಾನೆ. ಮರಣಾನಂತರದ ಜೀವನದ ಯಂತ್ರಶಾಸ್ತ್ರ ಹೇಗೆ ಅರ್ಥಮಾಡಿಕೊಳ್ಳುತ್ತದೆ ಎಂಬುದರ ಕುರಿತು ಆತ ಬರೆದಿದ್ದಾನೆ.
ನಾವು ನಮ್ಮ ಆತ್ಮಗಳ ಜೊತೆ ಸಂವಹನವನ್ನು ನಡೆಸಬಹುದು ಎಂದು ಬಶೀರುದ್ದೀನ್ ಮಹಮೂದ್ 1998 ರಲ್ಲಿ ನೀಡಿದ ಸಂದರ್ಶನದಲ್ಲಿ ಜಿನ್ ಬಗ್ಗೆ ಹೇಳಿಕೊಂಡಿದ್ದ. ಪ್ರತಿಯೊಂದು ಹೊಸ ಕಲ್ಪನೆಗೂ ಅದರ ವಿರೋಧಗಳಿರುತ್ತವೆ. ಆದರೆ ಇಸ್ಲಾಂ ಮತ್ತು ವಿಜ್ಞಾನದ ನಡುವೆ ಯಾವುದೇ ಸಂಘರ್ಷವಿಲ್ಲ ಎಂದು ಆತ ಹೇಳಿದ್ದನು.
1970ರ ದಶಕದಲ್ಲಿ ಪಾಕಿಸ್ತಾನದ ಕರಾಚಿ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಕೆನಡಾ ಅಳವಡಿಸಿದ ಉಗಿ ಕೊಳವೆಗಳಲ್ಲಿನ ಸೋರಿಕೆಯನ್ನು ಪತ್ತೆಹಚ್ಚುವ ರಿಯಾಕ್ಟರ್ ತಂತ್ರವನ್ನು ಅಭಿವೃದ್ಧಿಪಡಿಸಿದ ಬಳಿಕ ಬಶೀರುದ್ದೀನ್ ಎಂಜಿನಿಯರ್ ಆಗಿ ಹೆಚ್ಚು ಪ್ರಸಿದ್ದಿ ಪಡೆದನು. ಅಲ್ಲದೇ ಬಶೀರುದ್ದೀನ್ ಇಸ್ಲಾಮಾಬಾದ್ ಬಳಿಯ ಕಹುತಾ ಸ್ಥಾವರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಇದು ವರ್ಷಕ್ಕೆ ಸುಮಾರು 100 ಕೆಜಿ ಅಂದರೆ ಆರು ಡಜನ್ ಬಾಂಬ್‌ಗಳಿಗೆ ಸಾಕಾಗುವಷ್ಟು ಯುರೇನಿಯಂ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗುತ್ತದೆ.
ಪಾಕಿಸ್ತಾನವು ಪರಮಾಣು ಶಕ್ತಿಯ ಶಾಂತಿಯುತ ಬಳಕೆಯನ್ನು ಅಭಿವೃದ್ಧಿಪಡಿಸಲು ಪರೀಕ್ಷಾ ಸ್ಫೋಟಗಳನ್ನು ನಡೆಸಬೇಕಾಗಿತ್ತು. ಇದಕ್ಕಾಗಿ ಸಮಗ್ರ ಪರೀಕ್ಷಾ ನಿಷೇಧ ಒಪ್ಪಂದವನ್ನು ವಿರೋಧಿಸುವುದಾಗಿ ಬಶೀರುದ್ದೀನ್ ಹೇಳಿದ್ದನು. ಬಶೀರುದ್ದೀನ್ 2001ರಲ್ಲಿ ಬಂಧನಕ್ಕೊಳಗಾದ ಬಳಿಕ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ನನ್ನು ಭೇಟಿಯಾಗಿದ್ದಾಗಿ ಒಪ್ಪಿಕೊಂಡಿದ್ದನು. ಆತನನ್ನು ಭೇಟಿಯಾಗಿ ಅಫ್ಘಾನಿಸ್ತಾನದಲ್ಲಿ ತಾಂತ್ರಿಕ ಕಾಲೇಜಿಗೆ ನಿಧಿ ಸಂಗ್ರಹಿಸುವ ಬಗ್ಗೆ ಮಾತನಾಡಿರುವುದಾಗಿ ಹೇಳಿದ್ದನು.
ಪರಮಾಣು ಶಸ್ತ್ರಾಸ್ತ್ರಗಳ ರಹಸ್ಯಗಳನ್ನು ಅಲ್-ಖೈದಾಗೆ ನೀಡಲು ಬಶೀರುದ್ದೀನ್ ತಾಂತ್ರಿಕ ಜ್ಞಾನವನ್ನು ಹೊಂದಿಲ್ಲ ಎಂದು ದೃಢಪಟ್ಟ ಬಳಿಕ ಐಎಸ್ಐ ಆತನನ್ನು ಬಿಡುಗಡೆ ಮಾಡಿತು.