ಇಸ್ಲಾಮಾಬಾದ್: ಪಾಕಿಸ್ತಾನ ಅಸೆಂಬ್ಲಿಯ ಅಧಿವೇಶನದ ಸಮಯದಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, (Viral News) ದುಡ್ಡಿಗಾಗಿ ಪಾಕ್ ಸಂಸದರು ಮುಗಿಬಿದ್ದಿದ್ದಾರೆ. ಪಾಕಿಸ್ತಾನದ ಆರ್ಥಿಕತೆ ಸಂಪೂರ್ಣವಾಗಿ ಕುಸಿದಿದೆ ಎಂಬ ವರದಿ ಹೊರಬಿದ್ದ ಬೆನ್ನಲ್ಲೇ ಈ ವಿಡಿಯೋ ವೈರಲ್ ಆಗಿದೆ. ಪಾಕಿಸ್ತಾನದ ಸ್ಪೀಕರ್ ಅಯಾಜ್ ಸಾದಿಕ್ ಅವರು ಹತ್ತು ಪಿಕೆಆರ್ 5,000 ಕರೆನ್ಸಿ ನೋಟುಗಳಿರುವ ಸುಮಾರು 16 ಸಾವಿರ ರೂ. ಮೌಲ್ಯದ ನೋಟುಗಳನ್ನು ಯಾರದ್ದು ಎಂದು ಕೇಳಿದ್ದಾರೆ. ಅಸೆಂಬ್ಲಿಯ 12-13 ಸದಸ್ಯರು ನಗದು ಪಡೆಯಲು ಕೈ ಎತ್ತಿದ್ದಾರೆ.
ಸದ್ಯ ಸಂಸದರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪಾಕಿಸ್ತಾನವನ್ನು ಕಾಲೆಳೆದಿದ್ದಾರೆ. 10 ನೋಟುಗಳಿವೆ ಆದರೆ 12 ಜನರು ಕೈಯೆತ್ತಿದ್ದಾರೆ ಎಂದು ಹಲವರು ವ್ಯಂಗ್ಯ ಮಾಡಿದರು. ಒಬ್ಬ ಬಳಕೆದಾರರು "ವ್ಯವಸ್ಥೆಯ ಕೊಳೆತ ಮೊಟ್ಟೆಗಳು" ಎಂದು ಬರೆದರೆ, ಇನ್ನೊಬ್ಬರು "ಇವರು ವಿಧಾನಸಭೆಯಲ್ಲಿ ಕುಳಿತಿರುವ ಪಾತ್ರಗಳು. ಎಲ್ಲಾ ವಂಚನೆಗಳು ಮತ್ತು ಭ್ರಷ್ಟರು. ಈ ಚಾರಿತ್ರ್ಯಹೀನರು ಉನ್ನತ ಸ್ಥಾನಗಳನ್ನು ಆಕ್ರಮಿಸಿಕೊಂಡಿರುವಾಗ ಪಾಕಿಸ್ತಾನ ಎಂದಿಗೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ" ಎಂದು ಕಾಮೆಂಟ್ ಮಾಡಿದ್ದಾರೆ.
ಪಾಕಿಸ್ತಾನದ ಆಜ್ ಟಿವಿಯ ಪ್ರಕಾರ, ಪಿಟಿಐ ನಾಯಕ ಮುಹಮ್ಮದ್ ಇಕ್ಬಾಲ್ ಅಫ್ರಿದಿ ಹಣದ ನಿಜವಾದ ಮಾಲೀಕ ಎಂದು ಗುರುತಿಸಿದಾಗ ಈ ವಿಷಯವು ಇತ್ಯರ್ಥವಾಯಿತು. ನಂತರ ಅವರು ವಿಧಾನಸಭೆ ಕಚೇರಿಯಿಂದ ಹಣವನ್ನು ಸಂಗ್ರಹಿಸಿದ್ದಾರೆ.
ನ್ಯಾಯಾಧೀಶರ ರೂಂನಿಂದ ಸೇಬು ಹಣ್ಣು, ಹ್ಯಾಂಡ್ವಾಶ್ ಕಳ್ಳತನ
ಪಾಕಿಸ್ತಾನದ ಲಾಹೋರ್‌ನಲ್ಲಿ ಸೆಷನ್ ಕೋರ್ಟ್ ನ್ಯಾಯಮೂರ್ತಿಯವರ ಕೊಠಡಿಯಿಂದ 2 ಸೇಬು ಹಣ್ಣುಗಳು ಮತ್ತು ಹ್ಯಾಂಡ್ ವಾಶ್ ಕಳ್ಳತನವಾಗಿದೆ. ಇದಾದ ನಂತರ ಕೇಸ್ ದಾಖಲಿಸಲಾಗಿದೆ. ಡಿಸೆಂಬರ್ 5ರಂದು ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಮೂರ್ತಿ ನೂರ್ ಮುಹಮ್ಮದ್ ಬಸ್ಮಲ್ ಅವರ ಕೊಠಡಿಯಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ನ್ಯಾಯಾಧೀಶರ ಸೂಚನೆಯಡಿಯಲ್ಲಿ ದೂರು ದಾಖಲಿಸಲಾಗಿದೆ. ಪಾಕಿಸ್ತಾನ ದಂಡ ಸಂಹಿತೆಯ ಸೆಕ್ಷನ್ 380ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ತಪ್ಪಿತಸ್ಥರೆಂದು ಸಾಬೀತಾದರೆ, ಅವರಿಗೆ 7 ವರ್ಷಗಳ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು.