ಟೆಹರಾನ್, ಮಾ. 1: ಸುಮಾರು ಮೂರೂವರೆ ದಶಕಗಳ ಕಾಲ ಇರಾನ್‌ನ ಅನಭಿಷಕ್ತ ದೊರೆಯಾಗಿ ಮೆರೆದ ಸುಪ್ರಿಂ ನಾಯಕ 86 ವರ್ಷದ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರನ್ನು ಇಸ್ರೇಲ್-ಅಮೆರಿಕ ಜಂಟಿ ಕಾರ್ಯಾಚರಣೆ ಮೂಲಕ ಹೊಡೆದುರುಳಿಸಲಾಗಿದ್ದು, ಮುಂದಿನ ಬೆಳವಣಿಗೆ ಬಗ್ಗೆ ಜಗತ್ತೇ ಆತಂಕದಿಂದ ಎದುರು ನೋಡುತ್ತಿದೆ. ಜಗತ್ತು ಯಾವುದು ಆಗಬಾರದು ಎಂದುಕೊಂಡಿತ್ತೋ ಅದೇ ಆಗಿದೆ (Iran–Israel War). ತನ್ನ ಸರ್ವೋಚ್ಛ ನಾಯಕನ ಹತ್ಯೆಗೆ ತೀವ್ರವಾದ ಸೇಡು ತೀರಿಸಿಕೊಳ್ಳಲು ಇದೀಗ ಇರಾನ್ ಮುಂದಾಗಿದ್ದು, ಶಕ್ತವಾಗಿಯೇ ತಿರುಗೇಟು ನೀಡಲು ನಿರ್ಧರಿಸಿದೆ. ಅದಕ್ಕೆ ಮುನ್ನುಡಿಯಾಗಿ ಇದೀಗ ಮಸೀದಿ ಮೇಲೆ ಕೆಂಪು ಧ್ವಜ ಹಾರಿಸಲಾಗಿದೆ. ಈಗಾಗಲೇ ಪ್ರಕ್ಷುಬ್ಧವಾಗಿರುವ ಮಧ್ಯಪ್ರಾಚ್ಯ 3ನೇ ಮಹಾಯುದ್ಧಕ್ಕೆ ಸಿದ್ಧತೆ ನಡೆಸುತ್ತಿದ್ಯಾ ಎನ್ನುವ ಅನುಮಾನ, ಆತಂಕವನ್ನು ಈ ಬಾವುಟ ಮೂಡಿಸಿದೆ.
ಖಮೇನಿ ಅವರ ಸಾವು ದೃಢಪಟ್ಟ ನಂತರ ಇರಾನ್‌ನ ಪವಿತ್ರ ನಗರ ಕೋಮ್‌ನಲ್ಲಿರುವ ಜಮ್ಕರನ್ ಮಸೀದಿಯ ಗುಮ್ಮಟದ ಮೇಲೆ ಕೆಂಪು ಧ್ವಜವನ್ನು ಏರಿಸಲಾಗಿದೆ. ಇದನ್ನು ʼಪ್ರತೀಕಾರದ ಧ್ವಜʼ ಎಂದು ಕರೆಯಲಾಗುತ್ತದೆ. ಈ ಧ್ವಜ ಹಾರಿಸುವುದು ನ್ಯಾಯ ಮತ್ತು ಪ್ರತೀಕಾರ ಕರೆ ಎಂದು ಪರಿಗಣಿಸಲಾಗುತ್ತದೆ. ಶಿಯಾ ಸಂಸ್ಕೃತಿಯಲ್ಲಿ ಇದು ನ್ಯಾಯ ಮತ್ತು ಸೇಡಿನ ಸಂಕೇತ ಎನ್ನಲಾಗಿದೆ. ಖಮೇನಿ ಹತ್ಯೆಯ ಬಳಿಕ ಅವರ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತೀಕಾರಕ್ಕಾಗಿ ಹಾತೊರೆಯುತ್ತಿದ್ದಾರೆ.
ಕೋಮ್‌ನಲ್ಲಿರುವ ಜಮ್ಕರನ್ ಮಸೀದಿಯ ಮೇಲೆ ಹಾರಾಡಿದ ಕೆಂಪು ಧ್ವಜ:
ಜಮ್ಕರನ್ ಮಸೀದಿ ಇರಾನ್‌ನ ಪ್ರಮುಖ ಧಾರ್ಮಿಕ ಕೇಂದ್ರ ಎನಿಸಿಕೊಂಡಿದೆ. ಇದರ ಮೇಲೆ ಕೆಂಪು ಧ್ವಜ ಹಾರಿಸುವುದು ಮುಂದೆ ನಡೆಯಲಿರುವ ತೀವ್ರ ಪರಿಣಾಮದ ಸೂಚನೆ ಎಂದು ಮೂಲಗಳು ತಿಳಿಸಿವೆ. ಹಿಂದೆಯೂ ಪ್ರಮುಖ ರಾಷ್ಟ್ರೀಯ ದುರಂತಗಳ ನಂತರ ಜಮ್ಕರನ್ ಮಸೀದಿಯಲ್ಲಿ ಕೆಂಪು ಧ್ವಜವನ್ನು ಹಾರಿಸಲಾಗಿತ್ತು. ಸದ್ಯ ಖಮೇನಿ ಬೆಂಬಲಿಗರ ಈ ನಡೆ ಇಲ್ಲಿ ಹೆಚ್ಚುತ್ತಿರುವ ಉದ್ವಿಗ್ನ ಪರಿಸ್ಥಿತಿಯ ಪ್ರತಿಬಿಂಬ ಎಂದೇ ವಿಶ್ಲೇಷಿಸಲಾಗುತ್ತಿದೆ. ತಜ್ಞರು ಇರಾನ್‌ನ ನಡೆಯನ್ನು ಆತಂಕದ ಕಣ್ಣುಗಳಿಂದ ನೋಡುತ್ತಿದ್ದಾರೆ.
ಭಾರತೀಯ ಸಿಬ್ಬಂದಿಯನ್ನೊಳಗೊಂಡ ಹಡಗಿನ ಮೇಲೆ ದಾಳಿ; ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಪ್ರಕ್ಷುಬ್ಧ
ವೈಮಾನಿಕ ದಾಳಿಯ ಮೂಲಕ ಹತೈ
ವೈಮಾನಿಕ ದಾಳಿ ಮೂಲಕ ಟೆಹರಾನ್‌ನಲ್ಲಿದ್ದ ಖಮೇನಿ ಅವರನ್ನು ಶನಿವಾರ (ಫೆಬ್ರವರಿ 28) ಹತ್ಯೆ ಮಾಡಲಾಗಿದೆ. ಇಸ್ರೇಲ್ ಮತ್ತು ಅಮೆರಿಕ ಆರಂಭಿಸಿದ ಜಂಟಿ ಕಾರ್ಯಾಚರಣೆಯ ಮೊದಲ ದಿನವೇ ಖಮೇನಿ ಹತ್ಯೆ ನಡೆದಿದೆ. ಭಾನುವಾರ ಇರಾನ್ ಸರ್ಕಾರ ಖಮೇನಿ ಹತ್ಯೆಯನ್ನು ಖಚಿತಪಡಿಸುತ್ತಿದ್ದಂತೆ ದೇಶಾದ್ಯಂತ ಪ್ರತಿಭಟನೆ ಭುಗಿಲೆದ್ದಿದೆ. ಇರಾನ್, ಭಾರತ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಖಮೇನಿ ಬೆಂಬಲಿಗರು ಬೀದಿಗಿಳಿದಿದ್ದಾರೆ. ಜತೆಗೆ ಪ್ರತೀಕಾರದ ಘೋಷಣೆ ಮೊಳಗಿದೆ.
ಟ್ರಂಪ್ ಹೇಳಿದ್ದೇನು?
ಖಮೇನಿ ಹತ್ಯೆಯ ಬಗ್ಗೆ ಪ್ರತಿಕ್ರಿಯಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ʼʼಇತಿಹಾಸದ ಅತ್ಯಂತ ಕ್ರೂರಿ ಖಮೇನಿ ಹತರಾಗಿದ್ದಾರೆʼʼ ಎಂದು ಹೇಳಿದ್ದಾರೆ. ʼʼಇದು ಇರಾನ್ ಪ್ರಜೆಗಳಿಗೆ ತಮ್ಮ ದೇಶವನ್ನು ಮರಳಿ ಪಡೆಯಲು ದೊರೆತ ಏಕೈಕ ಅವಕಾಶ ಇದುʼʼ ಎಂದೂ ತಿಳಿಸಿದ್ದಾರೆ. ಆ ಮೂಲಕ ಖಮೇನಿ ಹತ್ಯೆ ತಮ್ಮ ಉದ್ದೇಶವಾಗಿತ್ತು ಎನ್ನುವುದನ್ನು ಪರೋಕ್ಷವಾಗಿ ಜಗತ್ತಿನೆದುರು ತೆರೆದಿಟ್ಟಿದ್ದಾರೆ.
ಇರಾನ್ ಮೇಲೆ ಹಿಂದೆಂದೂ ನೋಡಿರದ ಬಲಪ್ರಯೋಗ ಮಾಡುತ್ತೇವೆ: ಡೊನಾಲ್ಡ್ ಟ್ರಂಪ್
ಇರಾನ್ ಮಧ್ಯಂತರ ಪರಮೋಚ್ಛ ನಾಯಕನಾಗಿ ಅಲಿರೆಜಾ ಅರಾಫಿ ಆಯ್ಕೆ
ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ನಿಧನದ ಬಳಿಕ ಇದೀಗ ಹಿರಿಯ ಧರ್ಮಗುರು ಅಯತೊಲ್ಲಾ ಅಲಿರೆಜಾ ಅರಾಫಿ ಮಧ್ಯಂತರ ನಾಯಕನಾಗಿ ಆಯ್ಕೆಯಾಗಿದ್ದಾರೆ. ಖಮೇನಿ ಸಾವಿನ ಬಳಿಕ ಅವರ ಉತ್ತರಾಧಿಕಾರಿ ಯಾರಾಗ್ತಾರೆ ಎನ್ನುವ ಕುತೂಹಲದ ಮಧ್ಯೆ ಇದೀಗ ಅರಾಫಿ ಅವರನ್ನು ಮಧ್ಯಂತರ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಖಮೇನಿ ಹತ್ಯೆಗೆ ಅವರು ಯಾವ ರೀತಿ ಪಣ ತೊಡುತ್ತಾರೆ ಎನ್ನುವುದನ್ನು ತಿಳಿಯಲು ಬೆಂಬಲಿಗರು ಕಾತುರದಿಂದ ಕಾಯುತ್ತಿದ್ದಾರೆ.