ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Israel-Iran strikes: ಭಾರತೀಯ ಸಿಬ್ಬಂದಿಯನ್ನೊಳಗೊಂಡ ಹಡಗಿನ ಮೇಲೆ ದಾಳಿ; ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಪ್ರಕ್ಷುಬ್ಧ

Israel-Iran strikes: ಇಸ್ರೇಲ್‌-ಅಮೆರಿಕ ಜಂಟಿ ಕಾರ್ಯಾಚರಣೆಯಿಂದಾಗಿ ಈಗಾಗಲೇ ಇರಾನ್‌ ಸುಪ್ರೀಂ ಲೀಡರ್‌ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದು, ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಯುದ್ಧ ಆರಂಭವಾಗಿದೆ. ಈ ಮಧ್ಯೆ ಹೊರ್ಮುಜ್‌ ಜಲಸಂಧಿಯಲ್ಲಿ 15 ಭಾರತೀಯರನ್ನು ಒಳಗೊಂಡ ತೈಲ ಹಡಗಿನ ಮೇಲೆ ದಾಳಿ ನಡೆದಿದೆ.

ಭಾರತೀಯ ಸಿಬ್ಬಂದಿಯನ್ನೊಳಗೊಂಡ ಹಡಗಿನ ಮೇಲೆ ದಾಳಿ

ಹಡಗಿನ ಮೇಲೆ ದಾಳಿ. -

Ramesh Ballamoole
Ramesh Ballamoole Mar 1, 2026 5:55 PM

ಟೆಹರಾನ್‌, ಮಾ. 1: ಇಸ್ರೇಲ್‌-ಅಮೆರಿಕ ಜಂಟಿ ಕಾರ್ಯಾಚರಣೆಯಿಂದಾಗಿ (Israel-Iran strikes) ಈಗಾಗಲೇ ಇರಾನ್‌ ಸುಪ್ರೀಂ ಲೀಡರ್‌ ಆಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಹತ್ಯೆಯಾಗಿದ್ದು, ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಯುದ್ಧ ಆರಂಭವಾಗಿದೆ. ಹೊರ್ಮುಜ್‌ ಜಲಸಂಧಿಯನ್ನು (Strait of Hormuz) ಇರಾನ್‌ ಈಗಾಗಲೇ ಸ್ಥಗಿತಗೊಳಿಸಲು ಮುಂದಾಗಿದೆ. ಈ ಮಧ್ಯೆ ಹೊರ್ಮುಜ್‌ ಜಲಸಂಧಿಯಲ್ಲಿ 15 ಭಾರತೀಯರನ್ನು ಒಳಗೊಂಡ ತೈಲ ಹಡಗಿನ ಮೇಲೆ ಒಮಾನ್‌ನ ಮುಸಂದಮ್ ಪರ್ಯಾಯ ದ್ವೀಪದ ಬಳಿ ದಾಳಿ ನಡೆದಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸ್ಕೈಲೈಟ್ ಹಡಗಿನ ಮೇಲೆ ಈ ದಾಳಿ ನಡೆದಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ವರದಿಗಳ ಪ್ರಕಾರ, ಆಯಕಟ್ಟಿನ ಜಲಮಾರ್ಗದ ಮೂಲಕ ಹಾದುಹೋಗುವಾಗ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ ಟ್ಯಾಂಕರ್‌ನಿಂದ ದಟ್ಟವಾದ ಕಪ್ಪು ಹೊಗೆ ಮೇಲೇರುತ್ತಿರುವುದನ್ನು ಮತ್ತು ಡೆಕ್ ಬಳಿ ಜ್ವಾಲೆಗಳು ಗೋಚರಿಸುತ್ತಿರುವುದು ಕಂಡು ಬಂದಿದೆ.

ದಾಳಿಯಲ್ಲಿ ನಾಲ್ವರು ನಾವಿಕರು ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ. ಈಗಾಗಲೇ ಇಡೀ ಸಿಬ್ಬಂದಿಯನ್ನು ಹಡಗಿನಿಂದ ಸ್ಥಳಾಂತರಿಸಲಾಗಿದೆ. ಟ್ಯಾಂಕರ್‌ಗೆ ಆಗಿರುವ ಹಾನಿಯ ಪ್ರಮಾಣ ಸ್ಪಷ್ಟವಾಗಿಲ್ಲ. ಈ ಬಗ್ಗೆ ಇರಾನ್‌ ಸರ್ಕಾರ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಈ ಜಲಸಂಧಿಯ ಮೂಲಕ ಒಟ್ಟು ಕಚ್ಚಾ ತೈಲದ ಅಂದಾಜು ಶೇ. 30ರಷ್ಟು ಸಾಗಣೆಯಾಗುತ್ತದೆ.

ತೈಲ ಹಡಗಿನ ಮೇಲೆ ನಡೆದ ದಾಳಿ:



ಒಮನ್‌ನ ಕಡಲ ಭದ್ರತಾ ಕೇಂದ್ರ ಈ ಬಗ್ಗೆ ಎಕ್ಸ್‌ ಮೂಲಕ ಮಾಹಿತಿ ಹಂಚಿಕೊಂಡಿದೆ. ಮುಸಂದಮ್‌ನ ಖಾಸಬ್ ಬಂದರಿನಿಂದ 5 ನಾಟಿಕಲ್‌ ಮೈಲು ದೂರದಲ್ಲಿ ಈ ಘಟನೆ ನಡೆದಿದೆ. ಹಡಗಿಗೆ ಯಾವ ರೀತಿಯ ದಾಳಿ ನಡೆದಿದೆ ಎನ್ನುವುದು ತಿಳಿದುಬಂದಿಲ್ಲ. ಹಡಗಿನಲ್ಲಿ 15 ಭಾರತೀಯರು ಮತ್ತು 5 ಇರಾನ್‌ ಪ್ರಜೆಗಳಿದ್ದಾರೆ.

ಇಸ್ರೇಲ್‌ನಿಂದ ಮತ್ತೆ ಕ್ಷಿಪಣಿ ದಾಳಿ ಶುರು; ರಾಜಧಾನಿ ಟೆಹ್ರಾನ್‌ನಲ್ಲಿ ಭಾರಿ ಸ್ಫೋಟ

ವಿಶ್ವದ ತೈಲ ಪೂರೈಕೆಯ ಸರಿಸುಮಾರು ಐದನೇ ಒಂದು ಭಾಗದಷ್ಟು ಸಾಗಾಟ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುತ್ತದೆ. ಇದಕ್ಕೂ ಮುನ್ನ ಒಮಾನ್‌ನ ರಾಜ್ಯ ಸುದ್ದಿಸಂಸ್ಥೆ ವರದಿಯು ಡುಕ್ಮ್ ವಾಣಿಜ್ಯ ಬಂದರಿಗೆ ಎರಡು ಡ್ರೋನ್‌ಗಳು ಡಿಕ್ಕಿ ಹೊಡೆದಿದ್ದು, ಒಬ್ಬ ವಲಸಿಗ ಕಾರ್ಮಿಕ ಗಾಯಗೊಂಡಿದ್ದಾನೆ ಎಂದು ವರದಿ ಮಾಡಿತ್ತು. ಮತ್ತೊಂದು ಡ್ರೋನ್‌ನ ಅವಶೇಷ ಇಂಧನ ಸಂಗ್ರಹ ಟ್ಯಾಂಕ್‌ಗಳ ಬಳಿ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿಗಳ ನಂತರ ಮಧ್ಯಪ್ರಾಚ್ಯದಲ್ಲಿ ಪ್ರಕ್ಷುಬ್ಧ ವಾತಾವರಣ ಕಂಡು ಬಂದಿರುವ ಮಧ್ಯೆ ಹಡಗು ಮೇಲೆ ದಾಳಿ ನಡೆಸಿದೆ. ಹಡಗು ಕಂಪನಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ಇಸ್ರೇಲ್‌-ಅಮೆರಿಕ ದಾಳಿಗೆ ಇರಾನ್‌ನ 40ಕ್ಕೂ ಅಧಿಕ ಅಧಿಕಾರಿಗಳು ಹತ್ಯೆಯಾಗಿದ್ದಾರೆ.

ಇರಾನ್‌ನಿಂದ ಪ್ರತೀಕಾರದ ಎಚ್ಚರಿಕೆ

ಈ ಮಧ್ಯೆ ಇರಾನ್‌ ಪ್ರತೀಕಾರದ ಎಚ್ಚರಿಕೆ ನೀಡಿದೆ. ಈಗಾಗಲೇ ಅಮೆರಿಕ ಮತ್ತು ಇಸ್ರೇಲ್‌ ನೆಲೆಗಳ ಮೇಲೆ ದಾಳಿ ನಡೆಸಿದೆ. ಕೊಲ್ಲಿ ರಾಷ್ಟ್ರಗಳ ಮೇಲೆ ಕ್ಷಿಪಣಿ ಮೂಲಕ ಅಟ್ಯಾಕ್‌ ಮಾಡಿದೆ.

ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.