ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಖಮೇನಿ ನಿಧನಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಸಂತಾಪ; ಅಮೆರಿಕ-ಇಸ್ರೇಲ್ ವಿರುದ್ಧ ವಾಗ್ದಾಳಿ

Putin expresses condolences: ಅಮೆರಿಕ ಮತ್ತು ಇಸ್ರೇಲ್‌ ದಾಳಿಗಳಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನಕ್ಕೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದು ನೈತಿಕತೆ ಮತ್ತು ಕಾನೂನಿನ ಉಲ್ಲಂಘನೆ ಎಂದು ಹೇಳಿದ್ದಾರೆ.

ಖಮೇನಿ ನಿಧನಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಸಂತಾಪ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (ಸಂಗ್ರಹ ಚಿತ್ರ) -

Priyanka P
Priyanka P Mar 1, 2026 8:08 PM

ಮಾಸ್ಕೋ, ಮಾ. 1: ಅಮೆರಿಕ ಮತ್ತು ಇಸ್ರೇಲ್‌ ದಾಳಿಗಳಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರ ನಿಧನಕ್ಕೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಸಂತಾಪ ವ್ಯಕ್ತಪಡಿಸಿದ್ದು, ಇದು ನೈತಿಕತೆ ಮತ್ತು ಕಾನೂನಿನ ಉಲ್ಲಂಘನೆ ಎಂದು ಹೇಳಿದ್ದಾರೆ. ಉಕ್ರೇನ್‌ನೊಂದಿಗಿನ ಯುದ್ಧದ ನಂತರ ಅಮೆರಿಕದೊಂದಿಗಿನ ರಷ್ಯಾದ ಸಂಬಂಧ ಹಳಸಿದೆ. ಇರಾನ್ (Iran) ರಷ್ಯಾದ (Russia) ಮೈತ್ರಿ ದೇಶಗಳಲ್ಲಿ ಒಂದಾಗಿದೆ. ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಪೂರೈಸುವ ಮೂಲಕ ಉಕ್ರೇನ್‌ ಮೇಲಿನ ರಷ್ಯಾದ ಯುದ್ಧಕ್ಕೆ ಇರಾನ್ ಬೆಂಬಲ ನೀಡಿತ್ತು.

ಖಮೇನಿಯ ಹತ್ಯೆಗೆ ಪುಟಿನ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಹತ್ಯೆಯನ್ನು ಮಾನವ ನೈತಿಕತೆ ಮತ್ತು ಅಂತಾರಾಷ್ಟ್ರೀಯ ಕಾನೂನಿನ ಎಲ್ಲ ನಿಯಮಗಳನ್ನೂ ಕ್ರೂರವಾಗಿ ಉಲ್ಲಂಘಿಸಿ ನಡೆಸಲಾಗಿದೆ ಎಂದು ಅವರು ಹೇಳಿದರು.

ಶನಿವಾರ (ಫೆಬ್ರವರಿ 28) ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸಿದ ವೈಮಾನಿಕ ದಾಳಿಯಲ್ಲಿ ಖಮೇನಿ ಸಾವನ್ನಪ್ಪಿದರು. ಭಾನುವಾರ ಮುಂಜಾನೆ ಇರಾನ್‌ನ ಮಾಧ್ಯಮವು ಅವರ ಸಾವನ್ನು ದೃಢಪಡಿಸಿತು. ಖಮೇನಿ ಅವರ ಮೃತದೇಹ ಪತ್ತೆಯಾಗಿದೆ ಎಂದು ಇಸ್ರೇಲ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಮೃತದೇಹದ ಫೋಟೊವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ತೋರಿಸಲಾಗಿದೆ ಎಂದು ಇಸ್ರೇಲ್‌ನ ಚಾನೆಲ್ 12 ವರದಿ ಮಾಡಿದೆ.

ಇರಾನ್‌ ಸುಪ್ರೀಂ ನಾಯಕ ಖಮೇನಿಯನ್ನು ಇಸ್ರೇಲ್‌-ಅಮೆರಿಕ ಸೇನೆ ಹೊಡೆದುರುಳಿಸಿದ್ದು ಹೇಗೆ?

ರಷ್ಯಾದ ಪ್ರತಿಕ್ರಿಯೆ

ಶನಿವಾರ ನಡೆದ ಅಮೆರಿಕ-ಇಸ್ರೇಲ್ ದಾಳಿಯನ್ನು ಸಾರ್ವಭೌಮ ಮತ್ತು ಸ್ವತಂತ್ರ ಯುಎನ್ ಸದಸ್ಯ ರಾಷ್ಟ್ರದ ವಿರುದ್ಧ ಪೂರ್ವಯೋಜಿತ ಹಾಗೂ ಪ್ರಚೋದನೆಯಿಲ್ಲದ ಸಶಸ್ತ್ರ ಆಕ್ರಮಣ ಎಂದು ರಷ್ಯಾ ವಿವರಿಸಿದೆ. ತಕ್ಷಣವೇ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲು ಒತ್ತಾಯಿಸಿದ್ದು, ಮತ್ತೆ ರಾಜತಾಂತ್ರಿಕ ಮಾತುಕತೆಗೆ ಮರಳುವಂತೆ ಕರೆ ನೀಡಿದೆ.

ಇರಾನ್‌ನ ಪರಮಾಣು ಕಾರ್ಯಕ್ರಮದ ಬಗ್ಗೆ ಅಮೆರಿಕ ಮತ್ತು ಇಸ್ರೇಲ್ ಮರೆಮಾಚುತ್ತಿವೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಆರೋಪಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ತನ್ನ ನಿಜವಾದ ಮುಖವನ್ನು ತೋರಿಸಿದ್ದಾರೆ. ಯಾರಿಗೂ ನಿಜವಾಗಿ ಮಾತುಕತೆ ನಡೆಸುವ ಆಸಕ್ತಿ ಇರಲಿಲ್ಲ ಎಂದು ರಷ್ಯಾದ ಭದ್ರತಾ ಮಂಡಳಿಯ ಉಪಾಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಹೇಳಿದ್ದಾರೆ.

ಖಮೇನಿಯ ಉತ್ತರಾಧಿಕಾರಿ

ಖಮೇನಿಯ ಮರಣದ ನಂತರ ಇರಾನ್, ಅಲಿರೆಜಾ ಅರಾಫಿ ಅವರನ್ನು ತಾತ್ಕಾಲಿಕ ನಾಯಕತ್ವ ಮಂಡಳಿಯ ಧಾರ್ಮಿಕ ನ್ಯಾಯತಜ್ಞ ಸದಸ್ಯರಾಗಿ ನೇಮಿಸಿದೆ. ಧರ್ಮಗುರು ಹಾಗೂ ಗಾರ್ಡಿಯನ್ ಕೌನ್ಸಿಲ್‌ನ ಸದಸ್ಯರಾಗಿರುವ ಅರಫಿ, ಈ ಮಂಡಳಿಯಲ್ಲಿ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಮತ್ತು ಮುಖ್ಯ ನ್ಯಾಯಮೂರ್ತಿ ಘೋಲಮ್‌ಹೊಸ್ಸೇನ್ ಮೊಹ್ಸೆನಿ ಎಜೆಯ್ ಅವರೊಂದಿಗೆ ಕಾರ್ಯ ನಿರ್ವಹಿಸಲಿದ್ದಾರೆ. ಈ ತಜ್ಞರ ಸಭೆಯು ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವವರೆಗೆ ಸರ್ವೋಚ್ಚ ನಾಯಕನ ಕರ್ತವ್ಯಗಳನ್ನು ನಿರ್ವಹಿಸುತ್ತದೆ.