ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sunita Williams: ಸುನೀತಾ ವಿಲಿಯಮ್ಸ್‌ ಇದ್ದ ಕ್ಯಾಪ್ಸೂಲ್‌ ನೀರಿಗೆ ಇಳಿದಿದ್ದೇಕೆ?

Sunita Williams: ಸುರಕ್ಷತಾ ಕಾರಣಗಳಿಂದಾಗಿ ಈ ಬಾಹ್ಯಾಕಾಶ ಕ್ಯಾಪ್ಸೂಲ್‌ ನೆಲದ ಮೇಲೆ ಇಳಿಯುವ ಬದಲು ಸಮುದ್ರದ ನೀರಿನಲ್ಲಿ ಇಳಿದಿದೆ. ಸ್ಪೇಸ್‌ಎಕ್ಸ್‌ ಸಿಬ್ಬಂದಿ ಇವರನ್ನು ನೌಕೆಗೆ ವರ್ಗಾಯಿಸಿ ಹೂಸ್ಟನ್‌ನಲ್ಲಿರುವ ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರಕ್ಕೆ ಕರೆತಂದಿದ್ದಾರೆ. ಅಲ್ಲಿ ಅವರು ಕುಟುಂಬಸ್ಥರನ್ನು ಭೇಟಿಯಾಗಿದ್ದಾರೆ ಎಂದು ನಾಸಾ (NASA) ತಿಳಿಸಿದೆ.

ಸುನೀತಾ ವಿಲಿಯಮ್ಸ್‌ ಇದ್ದ ಕ್ಯಾಪ್ಸೂಲ್‌ ನೀರಿಗೆ ಇಳಿದಿದ್ದೇಕೆ?

ಸ್ಪೇಸ್‌ಎಕ್ಸ್‌ ಕ್ಯಾಪ್ಸೂಲ್‌ನ ಪ್ಯಾರಾಚೂಟ್‌ಗಳು ಬಿಚ್ಚಿಕೊಳ್ಳುತ್ತಿರುವುದು

ಹರೀಶ್‌ ಕೇರ ಹರೀಶ್‌ ಕೇರ Mar 19, 2025 7:35 AM

ನ್ಯೂಯಾರ್ಕ್‌: ಒಂಬತ್ತು ತಿಂಗಳು ಬಾಹ್ಯಾಕಾಶದಲ್ಲಿ (Space) ಕಳೆದ ನಂತರ ನಾಸಾದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ (Sunita Williams) ಮತ್ತು ಬ್ಯಾರಿ ಬುಚ್ ವಿಲ್ಮೋರ್ (Butch Wilmore) ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಇವರಿದ್ದ ನೌಕೆ ನಿರೀಕ್ಷೆಯಂತೆ ಬುಧವಾರ ಬೆಳಗಿನ ಜಾವ 3:27ಕ್ಕೆ ಫ್ಲೋರಿಡಾ ಕರಾವಳಿಯಲ್ಲಿ ಇಳಿದಿದೆ. ಸುರಕ್ಷತಾ ಕಾರಣಗಳಿಂದಾಗಿ ಈ ಬಾಹ್ಯಾಕಾಶ ಕ್ಯಾಪ್ಸೂಲ್‌ ನೆಲದ ಮೇಲೆ ಇಳಿಯುವ ಬದಲು ಸಮುದ್ರದ ನೀರಿನಲ್ಲಿ ಇಳಿದಿದೆ. ಸ್ಪೇಸ್‌ಎಕ್ಸ್‌ ಸಿಬ್ಬಂದಿ ಇವರನ್ನು ನೌಕೆಗೆ ವರ್ಗಾಯಿಸಿ ಹೂಸ್ಟನ್‌ನಲ್ಲಿರುವ ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರಕ್ಕೆ ಕರೆತಂದಿದ್ದಾರೆ. ಅಲ್ಲಿ ಅವರು ಕುಟುಂಬಸ್ಥರನ್ನು ಭೇಟಿಯಾಗಿದ್ದಾರೆ ಎಂದು ನಾಸಾ (NASA) ತಿಳಿಸಿದೆ.

ಮಂಗಳವಾರ (ಮಾರ್ಚ್ 18) ಇಬ್ಬರೂ ಗಗನಯಾತ್ರಿಗಳು ಮತ್ತು ಇತರ ಇಬ್ಬರು ಸಹೋದ್ಯೋಗಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಸ್ಪೇಸ್‌ಎಕ್ಸ್ ಕ್ಯಾಪ್ಸೂಲ್‌ನಲ್ಲಿ ಹೊರಟರು. ಬೆಳಿಗ್ಗೆ 10:35ಕ್ಕೆ ಕ್ರ್ಯೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ನಿಲ್ದಾಣದಿಂದ ಬೇರ್ಪಟ್ಟು ಭೂಮಿಗೆ 17 ಗಂಟೆಗಳ ಪ್ರಯಾಣವನ್ನು ಪ್ರಾರಂಭಿಸಿ ನಿರೀಕ್ಷೆಯಂತೆ ಬುಧವಾರ ಬೆಳಗಿನ ಜಾವ 3:27ಕ್ಕೆ ಫ್ಲೋರಿಡಾ ಕರಾವಳಿಯಲ್ಲಿ ಇಳಿದಿದೆ. ಸುರಕ್ಷತಾ ಕಾರಣಗಳಿಂದಾಗಿ ಈ ಬಾಹ್ಯಾಕಾಶ ಕ್ಯಾಪ್ಸೂಲ್‌ ನೆಲದ ಮೇಲೆ ಇಳಿಯುವ ಬದಲು ಸಾಗರದಲ್ಲಿ ಇಳಿದಿದೆ. ಈ ಪ್ರಕ್ರಿಯೆಯನ್ನು ಸ್ಪ್ಲಾಶ್‌ಡೌನ್ ಎಂದು ಕರೆಯಲಾಗುತ್ತದೆ. ಸ್ಪ್ಲಾಶ್‌ಡೌನ್ ಎಂದರೆ ಪ್ಯಾರಾಚೂಟ್‌ನ ಸಹಾಯದಿಂದ ಬಾಹ್ಯಾಕಾಶ ನೌಕೆಯನ್ನು ನಿಧಾನವಾಗಿ ನೀರಿನಲ್ಲಿ ಇಳಿಸುವುದು. ಬಾಹ್ಯಾಕಾಶದಿಂದ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಕರೆತರಲು ಇದು ಸಾಮಾನ್ಯ ವಿಧಾನವಾಗಿದೆ.



ಭೂಮಿಗೆ ಹಿಂತಿರುಗುವಾಗ, ಬಾಹ್ಯಾಕಾಶ ನೌಕೆಯು ತುಂಬಾ ವೇಗದಲ್ಲಿ ಬರುತ್ತಿದ್ದು, ಅದನ್ನು ನಿಧಾನಗೊಳಿಸುವುದು ಅವಶ್ಯಕ. ಒಂದು ಬಾಹ್ಯಾಕಾಶ ನೌಕೆ ಭೂಮಿಯ ವಾತಾವರಣವನ್ನು ಪ್ರವೇಶಿಸಿದಾಗ, ಗಾಳಿಯ ಕಣಗಳೊಂದಿಗೆ ಘರ್ಷಣೆ ಉಂಟಾಗುವುದರಿಂದ ಬಾಹ್ಯಾಕಾಶ ನೌಕೆಯ ವೇಗ ಕಡಿಮೆಯಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಚಲನ ಶಕ್ತಿಯು ಶಾಖವಾಗಿ ಪರಿವರ್ತನೆಗೊಳ್ಳುತ್ತದೆ. ಈ ಶಾಖವು ಸುತ್ತಮುತ್ತಲಿನ ಗಾಳಿಯನ್ನು ತುಂಬಾ ಬಿಸಿಯಾಗಿ ಮಾಡುತ್ತದೆ. ಭೂಮಿಗೆ ಪುನಃ ಪ್ರವೇಶದ ವೇಗವು ಶಬ್ದದ ವೇಗಕ್ಕಿಂತ ಹಲವಾರು ಪಟ್ಟು ಹೆಚ್ಚಾಗಬಹುದು. ಆಗ ಗಾಳಿಯ ಒತ್ತಡವು ಬಾಹ್ಯಾಕಾಶ ನೌಕೆಯ ಸುತ್ತಲಿನ ತಾಪಮಾನವನ್ನು ಸುಮಾರು 2,700 °F (1,500 °C) ತಲುಪುವಂತೆ ಮಾಡುತ್ತದೆ.

ಹೀಗಾಗಿ, ಬಾಹ್ಯಾಕಾಶ ನೌಕೆಯನ್ನು ಸುರಕ್ಷಿತವಾಗಿ ಇಳಿಸಲು, ನಿಧಾನಗೊಳಿಸಲು ಮತ್ತು ಸಿಬ್ಬಂದಿ ಸುರಕ್ಷಿತವಾಗಿ ಇಳಿಯುವುದನ್ನು ಖಚಿತಪಡಿಸಿಕೊಳ್ಳಲು ಪ್ಯಾರಾಚೂಟ್‌ಗಳನ್ನು ಬಳಸಲಾಗುತ್ತದೆ. ಇವು ಸುಮಾರು 9,000 ಅಡಿ ಎತ್ತರದಲ್ಲಿ ಮತ್ತು 130 mph ವೇಗದಲ್ಲಿ ತೆರೆದುಕೊಳ್ಳುತ್ತವೆ. ಮುಖ್ಯ ಪ್ಯಾರಾಚೂಟ್‌ಗಳು ಬಾಹ್ಯಾಕಾಶ ನೌಕೆಯನ್ನು ಗಂಟೆಗೆ 17 ಮೈಲುಗಳ ವೇಗದಲ್ಲಿ ಕೆಳಕ್ಕೆ ಇಳಿಸುತ್ತವೆ. ಪ್ಯಾರಾಚೂಟ್ ಇದ್ದರೂ ಸಹ, ಬಾಹ್ಯಾಕಾಶ ನೌಕೆಯನ್ನು ನೆಲದ ಮೇಲೆ ಇಳಿಸುವುದು ಅಪಾಯಕಾರಿ. ನೆಲಕ್ಕೆ ಅಪ್ಪಳಿಸುವ ಆಘಾತವನ್ನು ತಡೆದುಕೊಳ್ಳಲು ನೌಕೆಗೆ ಸಾಧ್ಯವಿಲ್ಲ. ನೀರು ಉತ್ತಮ ಶಾಕ್‌ ಅಬ್ಸಾರ್ಬರ್. ಹೀಗಾಗಿ ಸ್ಪ್ಲಾಶ್‌ಡೌನ್ ರೂಢಿ ಶುರುವಾಯಿತು.

2007ರಲ್ಲಿ ರಷ್ಯಾದ ಬಾಹ್ಯಾಕಾಶ ನೌಕೆ ಸೋಯುಜ್‌ನಿಂದ ಹಿಂತಿರುಗಿದ ನಾಸಾದ ಮಾಜಿ ಗಗನಯಾತ್ರಿ ಮೈಕೆಲ್ ಲೋಪೆಜ್-ಅಲೆಗ್ರಿಯಾ, ಈ ಅನುಭವ ಕಾರು ಅಪಘಾತದಂತಿತ್ತು ಎಂದು ಹೇಳಿದ್ದರು. 1976ರಲ್ಲಿ ಸೋಯುಜ್ ಬಾಹ್ಯಾಕಾಶ ನೌಕೆ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಯಿತು. ಭೂಮಿಗೆ ಮರುಪ್ರವೇಶದ ಸಮಯದಲ್ಲಿ, ಕ್ಯಾಪ್ಸುಲ್ ನೀರನ್ನು ಬಿಟ್ಟು ಹೆಪ್ಪುಗಟ್ಟಿದ ಸರೋವರಕ್ಕೆ ಅಪ್ಪಳಿಸಿತ್ತು. ಸಿಬ್ಬಂದಿ ಕೂದಲೆಳೆಯ ಅಂತರದಲ್ಲಿ ಪಾರಾದರು.

ನೀರಿನಲ್ಲಿ ಇಳಿಸುವುದರಿಂದ ಒಂದು ಅನನುಕೂಲತೆಯಿದೆ. ಅದೇನೆಂದರೆ, ತೀರದಿಂದ ಬಹಳ ದೂರದಲ್ಲಿ ಇಳಿದರೆ ಸುರಕ್ಷತಾ ಸಿಬ್ಬಂದಿ ಬರುವವರೆಗೂ ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ನೆಲದ ಮೇಲೆ ಲ್ಯಾಂಡ್‌ ಆದರೆ ಒಳಗಿರುವವರೇ ಬಾಹ್ಯಾಕಾಶ ನೌಕೆಯಿಂದ ಹೊರಬರಬಹುದು. ನೀರಿನಲ್ಲಿ ಏನಾದರೂ ತೊಂದರೆಯಾದರೆ ಇದು ಕಷ್ಟವಾಗುತ್ತದೆ. 2003ರಲ್ಲಿ, ಸೋಯುಜ್ ಬಾಹ್ಯಾಕಾಶ ನೌಕೆಯು ತನ್ನ ಗುರಿಯಾದ ಕಝಾಕಿಸ್ತಾನ್‌ನ ಬಯಲು ಪ್ರದೇಶದಿಂದ 200 ಮೈಲುಗಳು (322 ಕಿಮೀ) ದೂರದಲ್ಲಿ ಇಳಿಯಿತು. ಭೂಮಿಯಲ್ಲಿ ಕೆಲವು ಗಂಟೆಗಳ ಕಾಲ ಕಾಯಬಹುದು, ಆದರೆ ನೀರಿನಲ್ಲಿ ಅದು ಕಷ್ಟ.

ಇದನ್ನೂ ಓದಿ: Sunita Williams: ಸುರಕ್ಷಿತವಾಗಿ ಭೂಮಿಗೆ ಮರಳಿದ ಸುನೀತಾ ವಿಲಿಯಮ್ಸ್