ವಾಷಿಂಗ್ಟನ್: ಅಮೆರಿಕದ ಕಾನೂನು ಜಾರಿ ಸಂಸ್ಥೆಗಳ (American law enforcement agency) ಜೊತೆ ಸೇರಿ ವೆನೆಜುವೆಲಾದ (Venezuela) ಮೇಲೆ ದೊಡ್ಡ ಪ್ರಮಾಣದ ವೈಮಾನಿಕ ದಾಳಿ ( Us Venezuela Strike) ನಡೆಸಿದ ಅಮೆರಿಕ ಸೇನಾ ಪಡೆ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ (Venezuela President Nicolas Maduro) ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಂಧಿಸಿದೆ. ಈ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ಶನಿವಾರ ಸಾಮಾಜಿಕ ಮಾಧ್ಯಮ ಖಾತೆಯಾದ ಟ್ರುತ್ ಸೋಷಿಯಲ್ ನಲ್ಲಿ ಮಾಹಿತಿ ಹಂಚಿಕೊಂಡರು. ವೆನೆಜುವೆಲಾದ ಮೇಲೆ ದಾಳಿಯಾದ ಕೆಲವೇ ಗಂಟೆಗಳಲ್ಲಿ ಅಮೆರಿಕ ಪಡೆಗಳು ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿತ್ತು.
ದಾಳಿಗೆ ಕಾರಣವೇನು?
ಅಮೆರಿಕನ್ ಸೇನಾ ಪಡೆಯು ವೆನೆಜುವೆಲಾದ ಮೇಲೆ ನಡೆಸಿದ ದಾಳಿಗೆ ಕಾರಣವೇನು ಎಂಬುದರ ಕುರಿತು ಟ್ರಂಪ್ ಹೇಳಿರುವುದು ಹೀಗೆ..
ವೆನೆಜುವೆಲಾ ಅಧ್ಯಕ್ಷ, ಪತ್ನಿಯನ್ನು ಸೆರೆ ಹಿಡಿದ ಅಮೆರಿಕ ಸೇನೆ; ಸೋಶಿಯಲ್ ಮೀಡಿಯದಲ್ಲಿ ಟ್ರಂಪ್ ಪೋಸ್ಟ್
ಅಮೆರಿಕದ ದಕ್ಷಿಣ ಗಡಿಯಲ್ಲಿ ಲಕ್ಷಾಂತರ ವಲಸಿಗರು ಆಗಮಿಸಿದ್ದು, ಇದಕ್ಕೆ ವೆನೆಜುವೆಲಾ ಕಾರಣ. 2013 ರಿಂದ ಸುಮಾರು ಎಂಟು ಮಿಲಿಯನ್ ವೆನೆಜುವೆಲಾದ ಜನರು ಅಮೆರಿಕಕ್ಕೆ ಪಲಾಯನ ಮಾಡಿದ್ದಾರೆ. ಇವರಲ್ಲಿ ಹೆಚ್ಚಿನವರು ಲ್ಯಾಟಿನ್ ಅಮೆರಿಕದ ಭಾಗಗಳಲ್ಲಿ ವಾಸವಾಗಿದ್ದಾರೆ. ಮಡುರೊ ತಮ್ಮ ದೇಶದ ಜೈಲು, ಹುಚ್ಚಾಸ್ಪತ್ರೆಗಳನ್ನು ಖಾಲಿ ಮಾಡಿಸಿ ಅಲ್ಲಿದ್ದವರನ್ನು ಯುನೈಟೆಡ್ ಸ್ಟೇಟ್ಸ್‌ಗೆ ವಲಸೆ ಹೋಗಲು ಒತ್ತಾಯಿಸಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ. ಆದರೆ ಇದನ್ನು ವೆನೆಜುವೆಲಾ ನಿರಾಕರಿಸಿದೆ.
ವೆನೆಜುವೆಲಾ ಕೊಕೇನ್‌ಗೆ ಪ್ರಮುಖ ಸಾಗಣೆ ಮಾರ್ಗವಾಗಿದೆ. ವೆನೆಜುವೆಲಾದ ಟ್ರೆನ್ ಡಿ ಅರಾಗುವಾ ಮತ್ತು ಕಾರ್ಟೆಲ್ ಡಿ ಲಾಸ್ ಸೋಲ್ಸ್ ಅನ್ನು ವಿದೇಶಿ ಭಯೋತ್ಪಾದಕ ಸಂಘಟನೆಗಳು (FTOs) ತೆಗೆದುಕೊಳ್ಳುತ್ತಿದ್ದು, ಇದರಲ್ಲಿ ಒಂದನ್ನು ಮಡುರೊ ಸ್ವತಃ ಮುನ್ನಡೆಸುತ್ತಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ವೆನೆಜುವೆಲಾ, ನಿಕೋಲಸ್ ಮಡುರೊ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಅಮೆರಿಕ ಈ ದಾಳಿ ನಡೆಸಿದೆ. ಮಾದಕವಸ್ತುಗಳ ಮೇಲಿನ ಯುದ್ಧವನ್ನು ಶಸ್ತ್ರಾಸ್ತ್ರವಾಗಿ ಬಳಸುತ್ತಿದೆ ಎಂದು ದೂರಿದೆ.
ದಾಳಿ ಹೇಗಾಯ್ತು?
ಯುಎಸ್ ಪಡೆಗಳು ಸಣ್ಣ ಕಾರ್ಯಾಚರಣೆ ನಡೆಸಿ ಮಡುರೊ ಮತ್ತು ಅವರ ಪತ್ನಿಯನ್ನು ಬಂಧಿಸಿ ವೆನೆಜುವೆಲಾದಿಂದ ಹೊರಗೆ ಕರೆದುಕೊಂಡು ಬರಲಾಗಿದೆ. ದಾಳಿಯ ವೇಳೆ ಕ್ಯಾರಕಾಸ್‌ನ ಮೈದಾನದಲ್ಲಿ ಸ್ಫೋಟಗಳಾಗಿವೆ. ಮಿಲಿಟರಿ ಸ್ಥಾಪನೆಗಳ ಸುತ್ತಲೂ ವಿದ್ಯುತ್ ಕಡಿತ ಮಾಡಲಾಗಿದೆ ಎಂದು ಟ್ರಂಪ್ ಹೇಳಿದ್ದರೆ, ವೆನೆಜುವೆಲಾ ಸರ್ಕಾರವು ಯುನೈಟೆಡ್ ಸ್ಟೇಟ್ಸ್ ನಾಗರಿಕ ಮತ್ತು ಮಿಲಿಟರಿ ತಾಣಗಳ ಮೇಲೆ ದಾಳಿ ಮಾಡಿದೆ ಎಂದು ಆರೋಪಿಸಿದೆ.
ವೆನೆಜುವೆಲಾದ ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಆರೋಪ
ವೆನೆಜುವೆಲಾದ ಮೇಲಿನ ದಾಳಿಯ ಬಳಿಕ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡ ಯುಎಸ್ ಅಟಾರ್ನಿ ಜನರಲ್ ಪ್ಯಾಮ್ ಬೋಂಡಿ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಲಾಗುವುದು. ದಂಪತಿ ಅಮೆರಿಕದ ನ್ಯಾಯಾಲಯಗಳಲ್ಲಿ ಅಮೆರಿಕದ ನೆಲದಲ್ಲಿ ಅಮೆರಿಕನ್ನರ ಕೋಪವನ್ನು ಎದುರಿಸಬೇಕಾಗುತ್ತದೆ. ನಿಕೋಲಸ್ ಮಡುರೊ ವಿರುದ್ಧ ಮಾದಕ ವಸ್ತು, ಭಯೋತ್ಪಾದನೆ, ಕಳ್ಳಸಾಗಣೆಗೆ ವೆನೆಜುವೆಲಾ ಸಹಕಾರ ನೀಡುತ್ತಿದೆ ಎನ್ನುವ ಆರೋಪಗಳಿವೆ ಎಂದು ಹೇಳಿದರು.
ದಾಳಿಯ ನೇರಪ್ರಸಾರ ವೀಕ್ಷಿಸಿದ ಟ್ರಂಪ್
ಮಡುರೊ ಅವರ ಬಂಧನ ಕಾರ್ಯಾಚರಣೆಯಲ್ಲಿ ಯಾವೊಬ್ಬ ಅಮೆರಿಕನ್ ಕೂಡ ಸಾವನ್ನಪ್ಪಿಲ್ಲ. ಇದು ಯೋಜನಾಬದ್ಧವಾದ ಟಿವಿ ಕಾರ್ಯಕ್ರಮವನ್ನು ನೋಡಿದಂತಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಬಂಧನ ಕಾರ್ಯಾಚರಣೆ ಯಶಸ್ವಿಯಾದ ಬಳಿಕ ತಮ್ಮ ಸೇನೆಯನ್ನು ಶ್ಲಾಘಿಸಿದ ಅವರು, ದಾಳಿಯ ಸಂದರ್ಭದಲ್ಲಿ ಇಬ್ಬರಿಗೆ ಗಾಯಗಳಾಗಿವೆ. ಈ ದಾಳಿಯ ನೇರಪ್ರಸಾರವನ್ನು ನಾನು ವೀಕ್ಷಿಸಿದ್ದೇನೆ ಎಂದು ತಿಳಿಸಿದ್ದಾರೆ.
ಎಲ್ಲೆಡೆ ಕತ್ತಲೆಯಾಗಿತ್ತು, ಸ್ವಲ್ಪ ಜನನಿಬಿಡ ಪ್ರದೇಶವಾಗಿತ್ತು. ಭೂಮಿಯ ಮೇಲೆ ಬೇರೆ ಯಾವುದೇ ದೇಶವು ಈ ರೀತಿಯಾಗಿ ದಾಳಿ ಮಾಡಲು ಸಾಧ್ಯವಿಲ್ಲ. ದಾಳಿಯ ವೇಗವನ್ನು ನೋಡಿದರೆ ಯಾವುದೇ ಹಿಂಸಾಚಾರವಿಲ್ಲದೆ ನಡೆದ ಅದ್ಭುತವಾದ ಕೆಲಸ ಎಂದು ತಿಳಿಸಿದರು.
ಹೆಲಿಕಾಪ್ಟರ್, ಫೈಟರ್ ಜೆಟ್‌ಗಳು ಸೇರಿದಂತೆ ಬೃಹತ್ ಸಂಖ್ಯೆಯ ವಿಮಾನಗಳು ದಾಳಿಯಲ್ಲಿ ಭಾಗಿಯಾಗಿದ್ದವು. ನಾಲ್ಕು ದಿನಗಳ ಹಿಂದೆ ಕಾರ್ಯಾಚರಣೆ ಹೇಗೆ ನಡೆಯಬೇಕು ಎಂಬುದೆಲ್ಲವನ್ನು ಸ್ಪಷ್ಟಪಡಿಸಿದ್ದೆ. ಆದರೆ ಹವಾಮಾನ ವೈಪರಿತ್ಯದಿಂದ ಸ್ವಲ್ಪ ತೊಂದರೆಯಾಯಿತು ಎಂದು ತಿಳಿಸಿದರು.
ವಿವಾಹ ಪೂರ್ವ ಲೈಂಗಿಕ ಕ್ರಿಯೆಗೆ ಜೈಲು ಶಿಕ್ಷೆ; ಜನವರಿ 2ರಿಂದಲೇ ಜಾರಿಗೆ ಬಂತು ಹೊಸ ಕಾನೂನು
ಮಡುರೊ ತುಂಬಾ ಬಿಗಿ ಭದ್ರತೆಯಲ್ಲಿದ್ದರು. ಅವರು ಒಂದು ಕೋಟೆಯಲ್ಲಿದ್ದರು. ಅದಕ್ಕೆ ಉಕ್ಕಿನ ಬಾಗಿಲುಗಳಿದ್ದವು, ಸುತ್ತಲೂ ಘನ ಉಕ್ಕಿನಿಂದ ಕೂಡಿದ ಸುರಕ್ಷತಾ ಸ್ಥಳವಿತ್ತು ಎಂದ ಟ್ರಂಪ್, ದಾಳಿಯ ವೇಳೆ ಅಮೆರಿಕದ ಹೆಲಿಕಾಪ್ಟರ್ ವೊಂದಕ್ಕೆ ಹಾನಿಯಾಗಿದೆ ಎಂದು ತಿಳಿಸಿದರು.
ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಬಂಧನದ ಬಳಿಕ ಅವರನ್ನು ಅಮೆರಿಕದ ಯುದ್ಧನೌಕೆ ಐವೊ ಜಿಮಾದಲ್ಲಿ ನ್ಯೂಯಾರ್ಕ್‌ಗೆ ಕರೆತರಲಾಗಿದೆ. ಅವರನ್ನು ಅಲ್ಲಿ ವಿಚಾರಣೆಗೆ ಒಳಪಡಿಸಲಾಗುವುದು ಎಂದರು.