ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರಾಷ್ಟ್ರೀಯ ಬಂಜೆತನ ಜಾಗೃತಿ ಸಪ್ತಾಹದಲ್ಲಿ ಮಾನಸಿಕ ಆರೋಗ್ಯ ಮತ್ತು ಫಲವಂತಿಕೆ ಕುರಿತು ಜಾಗೃತಿ

, ವಿಶ್ವದಲ್ಲಿ ಪ್ರತೀ 6 ದಂಪತಿಗಳಲ್ಲಿ ಒಂದು ದಂಪತಿ ಬಂಜೆತನ ಸಮಸ್ಯೆ ಎದುರಿಸುತ್ತಾರೆ. ಒಂದು ವರ್ಷದವರೆಗೆ ನಿಯಮಿತವಾಗಿ ಯಾವುದೇ ರಕ್ಷಣೆಯಿಲ್ಲದೆ ನಡೆಸುವ ದೈಹಿಕ ಸಂಪರ್ಕದ ನಂತರವೂ ಗರ್ಭಧಾರಣೆಯಾಗದೇ ಇದ್ದರೆ ಅದನ್ನು ಬಂಜೆತನ ಎಂದೇ ಪರಿಗಣಿಸಲಾಗುತ್ತದೆ. ಈ ವರ್ಷ #ಆಲ್‌ಇನ್‌ ಫರ್ಟಿಲಿಟಿ ಎಂಬ ಥೀಮ್ ಇಡಲಾಗಿದ್ದು, ಬಂಜೆತನ ಸಮಸ್ಯೆ ವಿರುದ್ಧ ಹೋರಾಡುವಾಗ ವೈದ್ಯರು, ಮನಶ್ಶಾಸ್ತ್ರಜ್ಞರು, ಕುಟುಂಬ ಮತ್ತು ಕಚೇರಿಯಲ್ಲಿ ಬೆಂಬಲ ಪಡೆಯುವ ಅಗತ್ಯದ ಕುರಿತು ಜಾಗೃತಿ ನಡೆಯಲಿದೆ

ಮಾನಸಿಕ ಆರೋಗ್ಯ ಮತ್ತು ಫಲವಂತಿಕೆ ಕುರಿತು ಜಾಗೃತಿ

Profile Ashok Nayak Apr 26, 2025 2:37 PM

ಬೆಂಗಳೂರು: ಜನಗಣತಿಯ ಭಾಗವಾಗಿ ನಡೆಸಿದ ಸ್ಯಾಂಪಲ್ ರಿಜಿಸ್ಟ್ರೇಷನ್ ಸಿಸ್ಟಮ್ ಪ್ರಕಾರ, ಕರ್ನಾಟಕದಲ್ಲಿನ ಪ್ರತೀ ವಯಸ್ಕ ಮಹಿಳೆಯ ಸರಾಸರಿ ಮಕ್ಕಳ ಸಂಖ್ಯೆ ಅಥವಾ ಫಲವಂತಿಕೆ ದರ 1.6 ಇದೆ. ಫಲವಂತಿಕೆ ದರ ಕಡಿಮೆಯಾಗಿರುವುದನ್ನು ಈ ಸಮೀಕ್ಷೆಯು ಸೂಚಿಸಿದೆ. ಇದೀಗ ದೇಶವು ರಾಷ್ಟ್ರೀಯ ಬಂಜೆತನ ಜಾಗೃತಿ ಸಪ್ತಾಹ ಆಚರಿಸುತ್ತಿದ್ದು, ಅದರ ಭಾಗವಾಗಿ ಫಲವಂತಿಕೆ ಸಮಸ್ಯೆ ಗಳ ಕುರಿತು ಜನರಲ್ಲಿ ಜಾಗೃತಿ ಉಂಟು ಮಾಡುವ ಅಗತ್ಯವಿದೆ. ಅದರಲ್ಲೂ ಬಂಜೆತನ ಸಮಸ್ಯೆ ಎದುರಿಸುತ್ತಿರುವ ದಂಪತಿಗಳಿಗೆ ಭಾವನಾತ್ಮಕ ಬೆಂಬಲ ನೀಡುವ ಕೆಲಸ ತುರ್ತಾಗಿ ಆಗಬೇಕಾಗಿದೆ. ಭಾವನಾತ್ಮಕ ಬೆಂಬಲ ದೊರೆತರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗಲಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದಲ್ಲಿ ಪ್ರತೀ 6 ದಂಪತಿಗಳಲ್ಲಿ ಒಂದು ದಂಪತಿ ಬಂಜೆತನ ಸಮಸ್ಯೆ ಎದುರಿಸುತ್ತಾರೆ. ಒಂದು ವರ್ಷದವರೆಗೆ ನಿಯಮಿತವಾಗಿ ಯಾವುದೇ ರಕ್ಷಣೆಯಿಲ್ಲದೆ ನಡೆಸುವ ದೈಹಿಕ ಸಂಪರ್ಕದ ನಂತರವೂ ಗರ್ಭಧಾರಣೆಯಾಗದೇ ಇದ್ದರೆ ಅದನ್ನು ಬಂಜೆತನ ಎಂದೇ ಪರಿಗಣಿಸಲಾಗುತ್ತದೆ. ಈ ವರ್ಷ #ಆಲ್‌ಇನ್‌ಫರ್ಟಿಲಿಟಿ ಎಂಬ ಥೀಮ್ ಇಡಲಾಗಿದ್ದು, ಬಂಜೆತನ ಸಮಸ್ಯೆ ವಿರುದ್ಧ ಹೋರಾಡುವಾಗ ವೈದ್ಯರು, ಮನಶ್ಶಾಸ್ತ್ರಜ್ಞರು, ಕುಟುಂಬ ಮತ್ತು ಕಚೇರಿಯಲ್ಲಿ ಬೆಂಬಲ ಪಡೆಯುವ ಅಗತ್ಯದ ಕುರಿತು ಜಾಗೃತಿ ನಡೆಯಲಿದೆ.

ಇದನ್ನೂ ಓದಿ: Grater Bangalore: ಗ್ರೇಟರ್‌ ಬೆಂಗಳೂರು ವಿಧೇಯಕಕ್ಕೆ ರಾಜ್ಯಪಾಲರ ಗ್ರೀನ್‌ ಸಿಗ್ನಲ್‌

ಈ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮಾನದಂಡಗಳ ಫರ್ಟಿಲಿಕಿ ಚಿಕಿತ್ಸಾ ಪದ್ಧತಿಗಳನ್ನು ಹೊಂದಿರುವ ಅತಿದೊಡ್ಡ ಫರ್ಟಿಲಿಟಿ ಚೈನ್‌ ಗಳಲ್ಲಿ ಒಂದಾಗಿರುವ ನೋವಾ ಐವಿಎಫ್ ಫರ್ಟಿಲಿಟಿಯು ಕನಿಷ್ಠ ಶೇ.10ರಷ್ಟು ಮಹಿಳೆಯರು ಬಂಜೆತನ ಎದುರಿಸುವ ಸಮಯದಲ್ಲಿ ತೀವ್ರ ಖಿನ್ನತೆಗೆ ಒಳಗಾಗುತ್ತಾರೆ ಎಂಬುದನ್ನು ಗಮನಿಸಿದೆ. ಅಲ್ಲದೇ ಶೇ.50-60 ಮಹಿಳೆಯರು ಬಂಜೆತನ ಸಮಸ್ಯೆ ಮತ್ತು ಫರ್ಟಿಲಿಟಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಒತ್ತಡ ಅನುಭವಿಸುತ್ತಾರೆ ಎಂದೂ ತಿಳಿಸಿದೆ.

ಫರ್ಟಿಲಿಟಿ ತಜ್ಞರನ್ನು ಸಂಪರ್ಕಿಸುವುದು ಮುಖ್ಯ

ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವ ದಂಪತಿಗಳು ಫರ್ಟಿಲಿಟಿ ತಜ್ಞರನ್ನು ಸಂಪರ್ಕಿಸುವುದು ಒಂದು ಪ್ರಮುಖ ಹೆಜ್ಜೆಯಾಗಿದೆ. ಆರಂಭದ ಹಂತದಲ್ಲಿ ಮಹಿಳೆಯರಿಗೆ ಹಾರ್ಮೋನ್ ಮಟ್ಟದ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಉದಾಹರಣೆಗೆ ಹೇಳುವುದಾದರೆ ಆಂಟಿ-ಮುಲ್ಲೇರಿಯನ್ ಹಾರ್ಮೋನ್ (ಎಎಂಎಚ್) ಪರೀಕ್ಷೆ ನಡೆಸಲಾಗುತ್ತಿದ್ದು, ಈ ಪರೀಕ್ಷೆಯು ಅಂಡಾಶಯದ ಮೀಸಲು ಅಥವಾ ಒವೇರಿಯನ್ ರಿಸರ್ವ್ ಅನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.

ಅಲ್ಟ್ರಾಸೌಂಡ್‌ಗಳನ್ನು ನಡೆಸಬಹುದಾಗಿದ್ದು, ಅದರಿಂದ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್ ಅಥವಾ ಪಿಸಿಓಡಿ) ಮತ್ತು ಗರ್ಭಾಶಯ ಸಮಸ್ಯೆಗಳನ್ನು ಗುರುತಿಸಬಹುದಾಗಿದೆ. ಅದೇ ಥರ ಪುರುಷರು ವೀರ್ಯ ವಿಶ್ಲೇಷಣೆ ಅಥವಾ ಸೀಮೆನ್ ಅನಾಲಿಸಿಸ್ ಅನ್ನು ಮಾಡಿಕೊಳ್ಳುವ ಮೂಲಕ ವೀರ್ಯದ ಆರೋಗ್ಯದ ಕುರಿತು ಮೌಲ್ಯಮಾಪನ ಮಾಡಬಹುದು. ಸುಮಾರು ಶೇ.30 ರಷ್ಟು ಬಂಜೆತನ ಸಮಸ್ಯೆಗಳು ಪುರುಷರಿಂದ ಉಂಟಾಗುತ್ತವೆ ಅನ್ನುವುದನ್ನು ಇಲ್ಲಿ ಗಮನಿಸ ಬಹುದು. ಸ್ಪರ್ಮ್ ಕೌಂಟ್ ಕಡಿಮೆ ಇರುವುದು ಅಥವಾ ವೀರ್ಯದ ಗುಣಮಟ್ಟ ಕಡಿಮೆ ಇರುವುದು ಅದಕ್ಕೆ ಕಾರಣವಾಗಿರಬಹುದು.

ಬಂಜೆತನಕ್ಕೆ ಕಾರಣಗಳು

ಹಾರ್ಮೋನ್ ಅಸಮತೋಲನ, ಪರಿಸರದಲ್ಲಿರುವ ವಿಷಕಾರಕಗಳಿಗೆ ಒಡ್ಡಿಕೊಳ್ಳುವುದು ಮತ್ತು ಜೀವನಶೈಲಿಯ ಅಂಶಗಳು ಇವು ಮೂರು ಪುರುಷರು ಮತ್ತು ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವಾಗುವ ಕೆಲವು ಸಾಮಾನ್ಯ ಅಂಶಗಳು. ಈ ಕುರಿತು ಮಾತನಾಡುವ ಬೆಂಗಳೂರಿನ ಕಲ್ಯಾಣ ನಗರದ ನೋವಾ ಐವಿಎಫ್ ಫರ್ಟಿಲಿಟಿಯ ಫರ್ಟಿಲಿಟಿ ತಜ್ಞೆ ಡಾ. ಅಪೂರ್ವ ಸತೀಶ್ ಅಮರನಾಥ್ ಅವರು, “ಸುಮಾರು ಶೇ.30ರಷ್ಟು ಬಂಜೆತನ ಸಮಸ್ಯೆಗಳು ಪುರುಷರಿಂದ ಉಂಟಾಗುತ್ತವೆ.

ಆ ಪುರುಷರು ಸಾಮಾನ್ಯವಾಗಿ ಸ್ಪರ್ಮ್ ಕೌಂಟ್ ಕಡಿಮೆ ಹೊಂದಿರುತ್ತಾರೆ ಅಥವಾ ಇತರ ಸಮಸ್ಯೆ ಹೊಂದಿರುತ್ತಾರೆ. ಇನ್ನೊಂದು ಶೇ.30ರಷ್ಟು ಬಂಜೆತನ ಮಹಿಳೆಯರಿಂದ ಉಂಟಾಗುತ್ತವೆ. ಅದಕ್ಕೆ ಆ ಮಹಿಳೆಯರ ಅಂಡೋತ್ಪತ್ತಿ ಸಮಸ್ಯೆ, ಆನುವಂಶೀಯತೆ ಇತ್ಯಾದಿ ಕಾರಣವಾಗುತ್ತದೆ. ಶೇ.10ರಷ್ಟು ಬಂಜೆತನಗಳು ವಿವರಿಸಲಾಗದ ಕಾರಣಗಳನ್ನ ಹೊಂದಿರುತ್ತವೆ ಮತ್ತು ಉಳಿದ ಶೇ.30ರಷ್ಟು ಸಮಸ್ಯೆ ಗಳು ಪುರುಷ ಮತ್ತು ಮಹಿಳೆ ಇಬ್ಬರಿಂದಲೂ ಉಂಟಾಗಬಹುದು. 12 ತಿಂಗಳುಗಳ ಕಾಲ ನಿಯಮಿತವಾಗಿ ರಕ್ಷಣೆಯಿಲ್ಲದ ದೈಹಿಕ ಸಂಪರ್ಕ ಮಾಡಿದ ಬಳಿಕವೂ ಗರ್ಭಧಾರಣೆಯಾಗ ದಿದ್ದಾಗ ಅಥವಾ 35 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು 6 ತಿಂಗಳ ನಂತರ ಗರ್ಭಧಾರಣೆ ಆಗದಿದ್ದಾಗ ತಕ್ಷಣ ಫರ್ಟಿಲಿಟಿ ತಜ್ಞರನ್ನು ಭೇಟಿಯಾಗಿ ಸಮಾಲೋಚನೆ ನಡೆಸಬೇಕು,” ಎನ್ನುತ್ತಾರೆ.

ಮಾನಸಿಕ ಪರಿಣಾಮ

ಸಾಮಾನ್ಯವಾಗಿ ಬಂಜೆತನದಿಂದ ಉಂಟಾಗುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಪ್ರಯತ್ನ ಬಹುತೇಕ ಎಲ್ಲೂ ನಡೆಯುವುದಿಲ್ಲ. ಭಾವನಾತ್ಮಕವಾಗಿ ಕುಗ್ಗುವುದರಿಂದ ಸಮಸ್ಯೆ ಮತ್ತಷ್ಟು ಜಾಸ್ತಿಯಾಗಬಹುದು. ಈ ಸಂದರ್ಭದಲ್ಲಿ ದಂಪತಿಗಳು ಹಿಂಜರಿಕೆಯಿಂದ ಕುಗ್ಗಬಹುದು, ಸಂಬಂಧಗಳಲ್ಲಿ ತೊಂದರೆಗಳಾಗಬಹುಗು, ಆತ್ಮೀಯತೆಯ ಕೊರತೆ ಎದುರಿಸಬಹುದು, ಹೆಚ್ಚಿನ ಒತ್ತಡ ಉಂಟಾಗಬಹುದು ಮತ್ತು ಕೆಲವು ಸಂದರ್ಭಗಳಲ್ಲಿ ಆತ್ಮಹತ್ಯೆಯ ಆಲೋಚನೆಗಳನ್ನು ಮಾಡಬಹುದು.

ಈ ಕುರಿತು ನೋವಾ ಐವಿಎಫ್ ಫರ್ಟಿಲಿಟಿಯ ಚೀಫ್ ಸೈಕಾಲಾಜಿಕಲ್ ಕೌನ್ಸಿಲರ್ ಡಯಾನಾ ದಿವ್ಯಾ ಕ್ರಾಸ್ಟಾ ಅವರು, “ಸಾಮಾನ್ಯವಾಗಿ ನಮ್ಮಲ್ಲಿ ಜನರು ಬಂಜೆತನವನ್ನು ತಮ್ಮ ಆತ್ಮಗೌರವದ ಜೊತೆ ಜೋಡಿಸಿಬಿಡುತ್ತಾರೆ. ಬಂಜೆತನ ಅನ್ನುವುದು ದೇಹಕ್ಕೆ ಸಂಬಂಧಿಸಿದ್ದಾದರೂ ಸಾಮಾಜಿಕ ಕಳಂಕ ಮತ್ತು ಭಾವನಾತ್ಮಕ ಒತ್ತಡದಿಂದಾಗಿ ನಮ್ಮ ಬಂಜೆತನ ಸಮಸ್ಯೆ ಇರುವವರು ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುವುದನ್ನು ನಾವು ಗಮನಿಸಿದ್ದೇವೆ. ಅವರು ತಮ್ಮ ಬಂಜೆತನ ಸಮಸ್ಯೆ ಎದುರಿಸುವ ಸಂದರ್ಭದಲ್ಲಿ ಭಾರಿ ಒಂಟಿತನ ಅನುಭವಿಸುತ್ತಾರೆ. ಯಾಕೆಂದರೆ ಅವರಿಗೆ ಕುಟುಂಬದಿಂದ ಗರ್ಭಧಾರಣೆಗೆ ಒತ್ತಡ ಇರುತ್ತದೆ. ಗರ್ಭಧಾರಣೆಯಾಗದಿರುವುದಕ್ಕೆ ಸಮಾಜ ಅವರನ್ನು ವಿಭಿನ್ನವಾಗಿ ನೋಡುತ್ತದೆ. ಕೆಲವೊಮ್ಮೆ ಆ ಕುರಿತು ಎಲ್ಲಾ ಆರೋಪಗಳನ್ನು ಮಹಿಳೆಯರ ಮೇಲೆ ಹೊರಿಸಲಾಗುತ್ತದೆ. ಅಂಥದ್ದನ್ನೆಲ್ಲಾ ಧೈರ್ಯವಾಗಿ ಎದುರಿಸಲು ಬಂಜೆತನ, ಗರ್ಭಪಾತದ ಸಮಸ್ಯೆಗಳನ್ನು ಎದುರಿಸುತ್ತಿರುವ ದಂಪತಿಗಳು ಮಾನಸಿಕ ಸಮಾಲೋಚನೆಯಲ್ಲಿ ಅಥವಾ ಸೈಕಾಲಾಜಿಕಲ್ ಕೌನ್ಸಿಲಿಂಗ್ ನಲ್ಲಿ ಭಾಗವಹಿಸಿ ಮಾನಸಿಕ ಬೆಂಬಲವನ್ನು ಪಡೆಯಬೇಕು. ಯಾಕೆಂದರೆ ಬಂಜೆತನ ಸಮಸ್ಯೆಯು ವ್ಯಕ್ತಿಯ ಆತ್ಮಗೌರವಕ್ಕೆ ಮಾತ್ರ ಕುಂದು ತರುವುದಲ್ಲ ಜೊತೆಗೆ ಭಾರಿ ಒತ್ತಡವನ್ನು ಸೃಷ್ಟಿಸುತ್ತದೆ ಮತ್ತು ಸಂಬಂಧಗಳಲ್ಲಿ ಬಿರುಕು ಉಂಟು ಮಾಡುವ ಸಾಧ್ಯತೆ ಇರುತ್ತದೆ,” ಎಂದು ಹೇಳುತ್ತಾರೆ.

ಕೌಟುಂಬಿಕ ಬೆಂಬಲ

ದಂಪತಿಗಳು ಬಂಜೆತನ ಸಮಸ್ಯೆ ಎದುರಿಸುವ ಸಂದರ್ಭದಲ್ಲಿ ಅವರಿಗೆ ಕುಟುಂಬದ ಬೆಂಬಲವು ಬಹಳ ಮುಖ್ಯವಾಗುತ್ತದೆ. ಪದೇ ಪದೇ ಫ್ಯಾಮಿಲಿ ಪ್ಲಾನಿಂಗ್ ಕುರಿತ ಪ್ರಶ್ನೆಗಳನ್ನು ಕೇಳಿ ಕೇಳಿ ಒತ್ತಡವನ್ನು ಹೆಚ್ಚಿಸುವ ಬದಲು ಕುಟುಂಬದ ಸದಸ್ಯರು ಮತ್ತು ಸಂಬಂಧಿಕರು ಅವರ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕು. ಅವರ ಖಾಸಗಿತನವನ್ನು ಗೌರವಿಸಬೇಕು. ಪ್ರೋತ್ಸಾಹ ದಾಯಕ ಮತ್ತು ಎಲ್ಲವನ್ನೂ ಅರ್ಥೈಸಿಕೊಳ್ಳುವ ವಾತಾವರಣವನ್ನು ಸೃಷ್ಟಿಸಿದರೆ ದಂಪತಿಗಳು ವೈದ್ಯಕೀಯ ಮತ್ತು ಭಾವನಾತ್ಮಕ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದಾಗಿದೆ.