ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಜೀರ್ಣ, ಅಸಿಡಿಟಿ ಹಾಗು ಗ್ಯಾಸ್ ಟ್ರಬಲ್ ಸಮಸ್ಯೆಗೆ ಆಯುರ್ವೇದದ ಪರಿಹಾರ

ಆಹಾರ ಸೇವನೆಯ ನಂತರ ಹೊಟ್ಟೆಯಲ್ಲಿ ಅತಿಯಾದ ಗ್ಯಾಸ್ ಉತ್ಪತ್ತಿ, ಸಶಬ್ದವಾಗಿ ತೇಗು ಬರುವುದು, ಕೆಳಮುಖವಾಗಿ ಅಪಾನ ವಾಯು ಹೊರಹೋಗುವುದು, ಹೊಟ್ಟೆಯಲ್ಲಿ ಗುಡು ಗುಡು ಶಬ್ದ ಇವು ಗ್ಯಾಸ್ ಟ್ರಬಲ್ ನ ಲಕ್ಷಣಗಳು. ಅತಿಯಾದ ಕಾಳುಗಳ ಸೇವನೆ, ಆಲೂಗೆಡ್ಡೆ ಯಂತಹ ತರಕಾರಿಗಳನ್ನು ವರ್ಜಿಸುವುದು. ಸ್ವಲ್ಪ ಜೀರಿಗೆಯನ್ನು ನೀರಿಗೆ ಹಾಕಿ ಕುದಿಸಿ ಅರ್ಧ ಬತ್ತಿಸಿ ಸೋಸಿ ಈ ನೀರನ್ನು ಸಣ್ಣ ಲೋಟದಲ್ಲಿ ಆಗಾಗ ಕುಡಿಯುವುದರಿಂದ ಗ್ಯಾಸ್ ಉತ್ಪತ್ತಿ ಕಡಿಮೆಯಾಗುತ್ತದೆ.

ಅಜೀರ್ಣ ಅಸಿಡಿಟಿ ಹಾಗು ಗ್ಯಾಸ್ ಟ್ರಬಲ್ ಇವು ಪ್ರತ್ಯೇಕ ಸಮಸ್ಯೆಗಳಂತೆ ಕಂಡರೂ ಇವುಗಳ ಮೂಲ ಒಂದೇ ಅದೇ ಮಂದಗತಿಯ ಪಚನ ಕ್ರಿಯೆ.

ಸರಿಯಾದ ಪಚನ ಕ್ರಿಯೆಯ ಲಕ್ಷಣಗಳೇನು?

ಬೆಳಿಗ್ಗೆ ಎದ್ದ ಕೂಡಲೇ ಮಲ ಮೂತ್ರಗಳ ಪ್ರವೃತ್ತಿ, ದೇಹದ ಲಘುತ್ವ, ಶುದ್ಧವಾದ ತೇಗು, ಸಮಯಕ್ಕೆ ಸರಿಯಾಗಿ ಹಸಿವಾಗುವುದು, ಆಹಾರ ಸೇವಿಸಿದ ನಂತರ ಮನಸ್ಸಿಗೆ ತೃಪ್ತಿ ಹಾಗು ಉಲ್ಲಾಸದ ಅನುಭವ ಇವು ನಮ್ಮ ಪಚನ ಕ್ರಿಯೆ ಸರಿಯಾಗಿದೆ ಎಂಬುದರ ಲಕ್ಷಣಗಳಾಗಿವೆ.

ಅಜೀರ್ಣದ ಲಕ್ಷಣಗಳು: ಸರಿಯಾದ ಸಮಯಕ್ಕೆ ಹಸಿವಾಗದಿರುವುದು, ಮಲಬದ್ಧತೆ ಅಥವಾ ಅಪೂರ್ಣವಾದ ಮಲ ವಿಸರ್ಜನೆ, ಆಹಾರದ ನಂತರ ದೇಹ ಭಾರವಾಗುವುದು, ಸೋಮಾರಿತನ, ಕೆಲವೊಮ್ಮೆ ತೂಕಡಿಕೆ ಇವು ಅಜೀರ್ಣದ ಲಕ್ಷಣಗಳು

ಪರಿಹಾರ:

“ಲಂಘನಂ ಪರಮೌಷಧಂ”

ಹಸಿವಾಗಿ ದೇಹ ಹಗುರವಾಗುವವರೆಗೆ ಉಪವಾಸವಿರುವುದು, ನಂತರ ಗಂಜಿ ಯಂತಹ ಲಘುವಾದ ಆಹಾರ ಸೇವಿಸುವುದು, ಉಷ್ಣ ಜಲವನ್ನು ಮಿತವಾಗಿ ಸೇವಿಸುವುದು ಹಿತಕಾರಿ.

ಇದನ್ನೂ ಓದಿ: 2nd Ayurveda World Summit: ಡಿ.25ರಿಂದ 28ರವರೆಗೆ ಬೆಂಗಳೂರಿನಲ್ಲಿ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನ

ಅಸಿಡಿಟಿಯ ಲಕ್ಷಣಗಳು:

ಆಹಾರ ಅಧಿಕ ಸಮಯ ಹೊಟ್ಟೆಯಲ್ಲೇ ಉಳಿದಾಗ ರಾಸಾಯನಿಕ ಕ್ರಿಯೆಗಳಿಂದ ಆಹಾರ ಹುಳಿ ಬಂದು ಅತಿಯಾದ ಆಮ್ಲ ಉತ್ಪತ್ತಿಯು ಅಸಿಡಿಟಿಯನ್ನು ಉಂಟುಮಾಡುತ್ತದೆ. ಹುಳಿ ತೇಗು, ಎದೆ ಉರಿ, ಹೊಟ್ಟೆ ನೋವು, ಅರ್ಧ ತಲೆನೋವು, ಕೆಲವರಲ್ಲಿ ವಾಂತಿ ಇವು ಅಸಿಡಿಟಿಯ ಲಕ್ಷಣಗಳು

ಪರಿಹಾರ: ಅತಿಯಾದ ಹುಳಿ, ಉಪ್ಪು ಹಾಗೂ ಖಾರವನ್ನು ಸೇವಿಸದಿರುವುದು, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸದಿರುವುದು, ಜಿಡ್ಡಿನ ಪದಾರ್ಥಗಳನ್ನು ಬಿಡುವುದು.

ದಿನಕ್ಕೆ 1-2 ಚಮಚ ನೆಲ್ಲಿಕಾಯಿ ಪುಡಿಯನ್ನು ಕಾದರಿದ ನೀರಿನಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವಿಸುದರಿಂದ ಸಣ್ಣ ಪ್ರಮಾಣದ ಅಸಿಡಿಟಿಯು ಪರಿಹಾರವಾಗುತ್ತದೆ.

ಗ್ಯಾಸ್ ಟ್ರಬಲ್ ನ ಲಕ್ಷಣಗಳು:

ಆಹಾರ ಸೇವನೆಯ ನಂತರ ಹೊಟ್ಟೆಯಲ್ಲಿ ಅತಿಯಾದ ಗ್ಯಾಸ್ ಉತ್ಪತ್ತಿ, ಸಶಬ್ದವಾಗಿ ತೇಗು ಬರುವುದು, ಕೆಳಮುಖವಾಗಿ ಅಪಾನ ವಾಯು ಹೊರಹೋಗುವುದು, ಹೊಟ್ಟೆಯಲ್ಲಿ ಗುಡು ಗುಡು ಶಬ್ದ ಇವು ಗ್ಯಾಸ್ ಟ್ರಬಲ್ ನ ಲಕ್ಷಣಗಳು.

ಪರಿಹಾರ: ಅತಿಯಾದ ಕಾಳುಗಳ ಸೇವನೆ, ಆಲೂಗೆಡ್ಡೆಯಂತಹ ತರಕಾರಿಗಳನ್ನು ವರ್ಜಿಸು ವುದು. ಸ್ವಲ್ಪ ಜೀರಿಗೆಯನ್ನು ನೀರಿಗೆ ಹಾಕಿ ಕುದಿಸಿ ಅರ್ಧ ಬತ್ತಿಸಿ ಸೋಸಿ ಈ ನೀರನ್ನು ಸಣ್ಣ ಲೋಟದಲ್ಲಿ ಆಗಾಗ ಕುಡಿಯುವುದರಿಂದ ಗ್ಯಾಸ್ ಉತ್ಪತ್ತಿ ಕಡಿಮೆಯಾಗುತ್ತದೆ.

ಯಾವಾಗ ವೈದ್ಯರನ್ನು ಕಾಣಬೇಕು?

ಯಾವಾಗ ಮನೆಯಲ್ಲೇ ಮಾಡಿದ ತಾಜಾ ಹಾಗೂ ಲಘುವಾದ ಆಹಾರವೂ ಸರಿಯಾಗಿ ಜೀರ್ಣ ವಾಗದೇ ಸಮಸ್ಯೆ ಉಂಟು ಮಾಡುತ್ತದೆಯೋ ಆಗ ವೈದ್ಯರ ಬಳಿ ತೆರಳಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವುದು ಅತ್ಯಗತ್ಯ

ರೋಗಾಃ ಸರ್ವೇಧಿಪಿ ಮಂದಾಗ್ನೌ

ದೀರ್ಘಕಾಲದ ಪಚನ ಕ್ರಿಯೆಯ ಏರುಪೇರು ಹಲವು ರೀತಿಯ ಗಂಭೀರ ಆರೋಗ್ಯ ಸಮಸ್ಯೆಯನ್ನು ಉಂಟುಮಾಡಬಹುದು ಹಾಗೆಯೇ ಸರಿಯಾದ ಆಹಾರ ಕ್ರಮ ಹಾಗು ಉತ್ತಮ ಪಚನ ಸಾಮರ್ಥ್ಯ ಆರೋಗ್ಯವನ್ನೂ ಸುದೃಢ ಶರೀರವನ್ನು ನೀಡುತ್ತದೆ

ಡಾ॥ ಸುಹಾಸ್ ಹೆಚ್. ಡಿ

ಬಿಎಎಂಎಸ್, ಎಂಡಿ(ಆಯು)

ಮುಖ್ಯ ವೈದ್ಯಾಧಿಕಾರಿಗಳು

ಶ್ರೀ ಶಾರದಾ ಧನ್ವಂತರಿ ಆಯುರ್ವೇದ ಆಸ್ಪತ್ರೆ

ಶೃಂಗೇರಿ