2nd Ayurveda World Summit: ಡಿ.25ರಿಂದ 28ರವರೆಗೆ ಬೆಂಗಳೂರಿನಲ್ಲಿ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನ
ಕಜೆ ಆಯುರ್ವೇದ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯದ ಸಹಯೋಗದಲ್ಲಿ ಡಿಸೆಂಬರ್ 25 ರಿಂದ 28ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನ ಆಯೋಜಿಸಲಾಗಿದೆ. 4 ದಿನದ ಕಾರ್ಯಕ್ರಮದಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ.
ಆಯುರ್ವೇದ ವಿಶ್ವ ಸಮ್ಮೇಳನದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಡಾ. ಗಿರಿಧರ ಕಜೆ ಮಾತನಾಡಿದರು. -
ಬೆಂಗಳೂರು, ಡಿ.23: ಕಜೆ ಆಯುರ್ವೇದ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯದ ಸಹಯೋಗದಲ್ಲಿ ಡಿಸೆಂಬರ್ 25 ರಿಂದ 28ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನವನ್ನು (2nd Ayurveda World Summit) ಆಯೋಜಿಸಿದ್ದು, ಆಯುರ್ವೇದದ ವೈಶಿಷ್ಟ್ಯಗಳ ಅನಾವರಣ ಬೃಹತ್ ರೂಪದಲ್ಲಿ ನೆರವೇರಲಿದೆ. ನಾಡಿನ ಸಂತ ಮಹಂತರು - ಗಣ್ಯ ಮಾನ್ಯರು - ದೇಶ ವಿದೇಶಗಳ ಆಯುರ್ವೇದ ತಜ್ಞರ ಉಪಸ್ಥಿತಿಯಲ್ಲಿ ವಿಶಿಷ್ಟ ಆಯುರ್ವೇದ ಉತ್ಸವ ನಡೆಯಲಿದೆ.
ಶ್ರೀ ಧನ್ವಂತರಿ ಪೂಜೆ, ಸಮ್ಮೇಳನ ಆಶೀರ್ವಚನ, ಶ್ರೀ ಧನ್ವಂತರಿ ಮಹಾಯಜ್ಞ, ವೈಜ್ಞಾನಿಕ ವಿಚಾರ ಸಂಕಿರಣಗಳು, ಧನ್ವಂತರಿ ರಥೋತ್ಸವ, ಆಯುರ್ವೇದ ಅನುಭವ ಕೇಂದ್ರಗಳು, ಆಯುರ್ವೇದ ವಸ್ತು ಪ್ರದರ್ಶನ, ಆಯುರ್ವೇದ ಆಹಾರ ಪ್ರದರ್ಶನಿ, ಆಯುರ್ವೇದ ಪಾಕೋತ್ಸವ, ಮೆಗಾ ಆಯುರ್ವೇದ ಎಕ್ಸ್‌ಪೋ, ಜನಪ್ರಿಯ ವೈದ್ಯರ ವಿಚಾರ ಧಾರೆ, ಆಯುರ್ವೇದ ಲೇಸರ್ ಶೋ, ಔಷಧೀಯ ಸಸ್ಯಗಳ ಉಚಿತ ವಿತರಣೆ, ಸಾಂಸ್ಕೃತಿಕ ಉತ್ಸವಗಳು, ವಿಶ್ವದ ನಾನಾ ಭಾಗಗಳ 6000+ ಪ್ರತಿನಿಧಿಗಳು, 400 ಸಾಧಕರಿಗೆ ಸನ್ಮಾನ, ಯಕ್ಷಗಾನ ಯಾನ, ಸ್ವದೇಶಿ ಮೇಳ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ಈ ಐತಿಹಾಸಿಕ ಆಯುರ್ವೇದ ವಿಶ್ವ ಸಮ್ಮೇಳನದಲ್ಲಿ ಇರಲಿದ್ದು, 4 ದಿನದ ಕಾರ್ಯಕ್ರಮದಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ.
ಧನ್ವಂತರಿ ಮಹಾಯಜ್ಞ - ಪೂಜೆ - ರಥೋತ್ಸವ
ಆಯುರ್ವೇದದ ಬೃಹತ್ ಉತ್ಸವದಲ್ಲಿ ಧನ್ವಂತರಿಯ ಮಹಾರಾಧನೆ ನಡೆಯಲಿದ್ದು, ಶ್ರೀ ಧನ್ವಂತರಿ ಮಹಾಯಜ್ಞ - ಧನ್ವಂತರಿ ಪೂಜೆಗಳು ನೆರವೇರಲಿದೆ. ಪಾರಂಪರಿಕ ರಥದಲ್ಲಿ ಧನ್ವಂತರಿಯ ರಥೋತ್ಸವವು ಬಹಳ ವಿಜೃಂಭಣೆಯಿಂದ ನಡೆಯಲಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಪಾರಂಪರಿಕ ರಥೋತ್ಸವ ಅಪರೂಪವಾಗಿದ್ದು, ಆಯುರ್ವೇದ ಸಮ್ಮೇಳನದ ಕಳೆಯನ್ನು ಹೆಚ್ಚಿಸುವುದರ ಜತೆಗೆ ದೇವತಾನುಗ್ರಹವನ್ನೂ ಕರುಣಿಸಲಿದೆ.
ಆಯುರ್ವೇದ ಅನುಭವ ಕೇಂದ್ರಗಳು
ಆಯುರ್ವೇದದ ಇತಿಹಾಸದಲ್ಲಿಯೇ ಪ್ರಥಮಬಾರಿಗೆ ವೈಶಿಷ್ಟ್ಯಪೂರ್ಣವಾದ 10 ಆಯುರ್ವೇದ ಅನುಭವ ಕೇಂದ್ರಗಳನ್ನು ಈ ಸಮ್ಮೇಳನದಲ್ಲಿ ಸ್ಥಾಪಿಸಲಾಗುತ್ತಿದ್ದು, ಪ್ರಾತ್ಯಕ್ಷಿಕೆ ರೂಪದಲ್ಲಿ ಪಾರಂಪರಿಕ ಆಯುರ್ವೇದ ಚಿಕಿತ್ಸಾ ವಿಧಾನ, ಸಂವಾದಾತ್ಮಕ ರೀತಿಯಲ್ಲಿ ಆಯುರ್ವೇದದ ಚಿಕಿತ್ಸಾ ಪದ್ಧತಿಯ ಪರಿಚಯವನ್ನು ಈ ಅನುಭವ ಕೇಂದ್ರಗಳು ಮಾಡಲಿದ್ದು, ಆಯುರ್ವೇದ ಜೀವನ ಪದ್ಧತಿಯ ಪ್ರತ್ಯಕ್ಷ ಅನುಭವವನ್ನು ಇದು ಕಟ್ಟುಕೊಡಲಿದೆ.
ಡಿ.25ರಿಂದ ದ್ವಿತೀಯ ವಿಶ್ವ ಆಯುರ್ವೇದ ಸಮ್ಮೇಳನ; ಬೈಕ್ ರ್‍ಯಾಲಿಗೆ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಚಾಲನೆ
ವೈಜ್ಞಾನಿಕ ವಿಚಾರ ಸಂಕಿರಣ - ಸಂಶೋಧನಾ ಪ್ರಬಂಧಗಳ ಮಂಡನೆ
'ಚರಕ ಸಭಾ' ವೇದಿಕೆಯಲ್ಲಿ ನಾಲ್ಕು ದಿನಗಳ ಕಾಲ ನಿರಂತರವಾಗಿ ವೈಜ್ಞಾನಿಕ ವಿಚಾರಗಳ ಸಂಕಿರಣ ನಡೆಯಲಿದ್ದು, ದೇಶ ವಿದೇಶಗಳ ಆಯುರ್ವೇದ ತಜ್ಞರು ಇಂದಿನ ಜ್ವಲಂತ ಆರೋಗ್ಯ ಸಮಸ್ಯೆಗಳ ಕುರಿತಾಗಿ ಸಂಶೋಧನಾ ಪ್ರಬಂಧಗಳ ಮಂಡನೆಯನ್ನು ಮಾಡಲಿದ್ದಾರೆ. ಆಯುರ್ವೇದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ನಡೆದ ವೈಜ್ಞಾನಿಕ ಪ್ರಬಂಧ ಮಂಡನೆ ಸ್ಪರ್ಧೆಯಲ್ಲಿ ಬಹುಮಾನಿತ ಪ್ರಬಂಧಗಳ ಮಂಡನೆಯೂ ಇಲ್ಲಿ ನಡೆಯಲಿದ್ದು, ಪ್ರಸ್ತುತ ಕಾಲದಲ್ಲಿ ಆಯುರ್ವೇದ ಆಗತ್ಯತೆಯ ಕುರಿತಾದ ಚಿಂತನ - ಮಂಥನ ನಡೆಯಲಿದೆ.
ಆಯುರ್ವೇದ ವಸ್ತು ಪ್ರದರ್ಶನ
ಪಾರಂಪರಿಕ ಆಯುರ್ವೇದ ಚಿಕಿತ್ಸೆಯಲ್ಲಿ ಬಳಸುವ ಅಪರೂಪದ ಪರಿಕರಗಳು, ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿತವಾದ ಆಯುರ್ವೇದ ಗಿಡಮೂಲಿಕೆಗಳ ಕುರಿತಾದ ಪ್ರದರ್ಶನ ಇರಲಿದ್ದು, ಆಯುರ್ವೇದದ ವೈಜ್ಞಾನಿಕತೆ ಹಾಗೂ ಆಯುರ್ವೇದ ಸಾಗಿಬಂದ ದಾರಿಯನ್ನು ಇದು ಜಗತ್ತಿನ ಮುಂದೆ ಪ್ರಸ್ತುತ ಪಡಿಸಲಿದೆ.
ಆಯುರ್ವೇದ ಲೇಸರ್ ಶೋ
ಪ್ರಾಚೀನ ಆಯುರ್ವೇದ ಮುನ್ನೆಡೆದು ಬಂದ ದಾರಿ, ಆಯುರ್ವೇದದ ಮಹತ್ವವನ್ನು ಆಧುನಿಕ ಲೇಸರ್ ಶೋ ಮೂಲಕ ವಿಭಿನ್ನವಾಗಿ ಚಿತ್ರಿಸುವ, ಆಯುರ್ವೇದದ ಕುರಿತಾದ ಚಿಂತನೆಯನ್ನು ಕಟ್ಟಿಕೊಡುವ ವಿಶಿಷ್ಟ ಪ್ರಯೋಗ ಇದಾಗಿರಲಿದೆ.
ಆಯುರ್ವೇದ ಆಹಾರ ಪ್ರದರ್ಶಿನಿ – ಪಾಕೋತ್ಸವ
ಪಾರಂಪರಿಕವಾದ ಹಾಗೂ ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿತವಾದ ವೈವಿಧ್ಯಮಯ ಅಹಾರಗಳ ಪ್ರದರ್ಶನ ಇರಲಿದ್ದು, ಪಾಕೋತ್ಸವದಲ್ಲಿ ನಾಲಿಗೆಗೆ ಮುದ ನೀಡುವ ಹಾಗೂ ದೇಹ ಹಾಗೂ ಮನಸ್ಸಿಗೆ ಹಿತನೀಡುವ ವಿಶೇಷ ತಿಂಡಿ ತಿನಿಸು - ತಂಬಳಿಗಳು ಇಲ್ಲಿರಲಿವೆ.
ದೇಶ ವಿದೇಶಗಳ 6000+ ಪ್ರತಿನಿಧಿಗಳು
ವೈದ್ಯಕೀಯ ಸಮ್ಮೇಳನಗಳ ಇತಿಹಾಸದಲ್ಲಿ ಮೈಲುಗಲ್ಲು ಎಂಬಂತೆ ಈ ಆಯುರ್ವೇದ ಸಮ್ಮೇಳನದಲ್ಲಿ ವಿಶ್ವದ ನಾನಾ ಭಾಗಗಳ 6000+ ಪ್ರತಿನಿಧಿಗಳು ಭಾಗವಹಿಸಲಿದ್ದು, ಆಯುರ್ವೇದದ ಪ್ರಾಚೀನತೆಯ ಹಾಗೂ ಆಧುನಿಕ ಜಗತ್ತಿನಲ್ಲಿ ಅದರ ಅಗತ್ಯತೆಯ ಕುರಿತಾದ ವಿಚಾರ ವಿಮರ್ಷೆಗಳು ನಡೆಯಲಿವೆ.
400 ಸಾಧಕರಿಗೆ ಸನ್ಮಾನ
ಆಯುರ್ವೇದ ಕ್ಷೇತ್ರಕ್ಕೆ ಹಲವಾರು ರೀತಿಯಲ್ಲಿ ಅಪಾರ ಸೇವೆಯನ್ನು ಸಮರ್ಪಿಸಿದ ನಾಡಿನ 400 ಅಪರೂಪದ ಸಾಧಕರನ್ನು ಇಲ್ಲಿ ಗೌರವಿಸಲಾಗುತ್ತಿದ್ದು, ಆಯುರ್ವೇದ ಸಂಶೋಧಕರು, ವೈದ್ಯರು, ಔಷಧ ತಯಾರಕರು, ಆಯುರ್ವೇದ ಸಂಸ್ಥೆಗಳನ್ನು ಗುರುತಿಸಿ, ಆಯುರ್ವೇದ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಮಹೋನ್ನತವಾದ ಗೌರವವನ್ನು ನೀಡಲಾಗುವುದು.
ಮೆಗಾ ಆಯುರ್ವೇದ ಎಕ್ಸ್'ಪೋ - ಸ್ವದೇಶಿ ಮೇಳ
ಆಯುರ್ವೇದ ಕ್ಷೇತ್ರಕ್ಕೆ ಸಂಬಂಧಿಸಿದ ಬೃಹತ್ ಎಕ್ಸ್'ಪೋ ಪ್ರದರ್ಶನ ನಡೆಯಲಿದ್ದು, ಆಯುರ್ವೇದ ಸಮ್ಮೇಳನಗಳ ಇತಿಹಾಸದಲ್ಲೇ ದಾಖಲೆಯ ಪ್ರದರ್ಶನ ಇದಾಗಲಿದೆ. ಹಾಗೆಯೇ ಸ್ವದೇಶಿ ಮೇಳ ಇಲ್ಲಿರಲಿದ್ದು, ಗುಡಿಕೈಗಾರಿಕೆ - ಗೃಹೋದ್ಯಮ ಉತ್ಪನ್ನಗಳ ಮಾರಾಟ ಮಳಿಗೆಗಳೂ ಇರಲಿವೆ.
7 ರಾಜ್ಯಗಳನ್ನು ಸಂದರ್ಶಿಸಿ ಬಂದ ಆಯುರ್ವೇದ ರಥಯಾತ್ರೆ
ದ್ವಿತೀಯ ವಿಶ್ವ ಆಯುರ್ವೇದ ಸಮ್ಮೇಳನ ಹಾಗೂ ಆಯುರ್ವೇದ ಪದ್ಧತಿಯ ಕುರಿತಾದ ಜನಜಾಗೃತಿಗೆ ಆಯುರ್ವೇದ ರಥಯಾತ್ರೆ ನಡೆದಿದ್ದು, ಇದು ದಕ್ಷಿಣ ಭಾರತದ 7 ರಾಜ್ಯಗಳನ್ನು ಕಳೆದ ಒಂದೂವರೆ ತಿಂಗಳಿನಲ್ಲಿ ಸಂದರ್ಶಿಸಿ ಬಂದಿದೆ. ಕರ್ನಾಟಕದ ಎಲ್ಲಾ ಆಯುರ್ವೇದ ಕಾಲೇಜುಗಳು ಹಾಗೂ ಗೋವಾ, ಕೇರಳ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ತಮಿಳುನಾಡಿನ 30ಕ್ಕೂ ಅಧಿಕ ಆಯುರ್ವೇದ ಕಾಲೇಜು ಸೇರಿದಂತೆ ಒಟ್ಟು 137 ಆಯುರ್ವೇದ ವಿದ್ಯಾಲಯಗಳನ್ನು ಒಟ್ಟು ಎರಡು ರಥಗಳು ಸಂಚರಿಸಿವೆ.
ಸಾಂಸ್ಕೃತಿಕ ಉತ್ಸವಗಳು
ನಾಡಿನ ಖ್ಯಾತ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಪಂಡಿತ್ ಪ್ರವೀಣ್ ಗೋಡ್ಖಿಂಡಿ ತಂಡದ ಕೊಳಲು, ಅನೂರು ಅನಂತಕೃಷ್ಣ ಶರ್ಮರ ತಾಳ ತರಂಗ, ರಾಘವೇಂದ್ರ ಹೆಗಡೆಯವರ ಮರಳು ಕಲೆ, ಖ್ಯಾತ ಕಲಾವಿದರ ಯಕ್ಷಗಾನ ಪ್ರದರ್ಶನ, ವಿಭಿನ್ನ ಪಿಕ್ಸಲ್ ಪೋಯ್ ಪ್ರದರ್ಶನ, ಹುಲಿವೇಷ ಮುಂತಾದವು ಜನಮನ ರಂಜಿಸಲಿವೆ. 350 ಕಲಾವಿದರಿಂದ ವಿಶಿಷ್ಟ ಆಳ್ವಾಸ್ ಸಾಂಸ್ಕೃತಿಕ ಸಂಭ್ರಮವು ಸಾಂಸ್ಕೃತಿಕ ಕಾರ್ಯಕ್ರಮಗಳ ವಿಶೇಷತೆಗಳಲ್ಲೊಂದಾಗಿರಲಿದೆ.
ಧನ್ವಂತರಿ ಜ್ಯೋತಿಯಿಂದ ಸಮ್ಮೇಳನದ ಉದ್ಘಾಟನೆ
ದಕ್ಷಿಣ ಭಾರತದ 7 ರಾಜ್ಯಗಳನ್ನು ಸಂಚರಿಸಿ ಬಂದಿರುವ ಆಯುರ್ವೇದ ರಥಗಳು, ತಮ್ಮ ಜತೆಗೆ ಧನ್ವಂತರಿ ಜ್ಯೋತಿಯನ್ನು ಹೊತ್ತು ತಂದಿವೆ. ಅದೇ ಧನ್ವಂತರಿ ಜ್ಯೋತಿಯ ಮೂಲಕ ವಿಶ್ವ ಸಮ್ಮೇಳನದ ಭವ್ಯ ಉದ್ಘಾಟನೆ ನೆರವೇರಲಿದೆ. ಹಾಗೂ 137 ಆಯುರ್ವೇದ ವಿದ್ಯಾಲಯಗಳ ಮಣ್ಣನ್ನು ತಂದಿದ್ದು, ಆ ಮಣ್ಣಿನಿಂದ ಬೆಳೆಸಿದ ಗಿಡಕ್ಕೆ ನೀರೆರೆಯುವ ಮೂಲಕ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ. ಇದಷ್ಟೇ ಅಲ್ಲದೇ ಆಯುರ್ವೇದ ಉದ್ಯೋಗ ಮೇಳ, ಆಯುರ್ವೇದ ಉದ್ಯಮಿಗಳ ಸಮಾಲೋಚನೆ, ಆಯುರ್ವೇದ ನವೋದ್ಯಮಕ್ಕೆ ಹೂಡಿಕೆ ಸಾಧ್ಯತೆಗಳ ಚರ್ಚೆಗಳು, ರಕ್ತದಾನ ಶಿಬಿರ, ತಂತ್ರಜ್ಞಾನ ತರಬೇತಿ ಶಿಬಿರ, ದಿಕ್ಸೂಚಿ ಭಾಷಣಗಳು ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ಆಯುರ್ವೇದ ಸಮ್ಮೇಳನದಲ್ಲಿ ಇರಲಿದೆ.
2nd Ayurveda World Summit: ಬೆಂಗಳೂರಿನಲ್ಲಿ ಡಿ.25ರಿಂದ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನ; ರಥಯಾತ್ರೆಗೆ ಚಾಲನೆ
ಸಾರ್ವಜನಿಕರಿಗೆ ಉಚಿತ ಹಾಗೂ ಮುಕ್ತ ಪ್ರವೇಶ
ಆಯುರ್ವೇದ ಸಮ್ಮೇಳನದಲ್ಲಿ ಸಾರ್ವಜನಿಕರಿಗೆ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದ್ದು, ಆಯುರ್ವೇದದ ಅನುಭವ ಹಾಗೂ ಪ್ರಾಚೀನ ಪದ್ಧತಿಯ ಕುರಿತಾಗಿ ತಮ್ಮ ಕುತೂಹಲವನ್ನು ಸಾರ್ವಜನಿಕರು ತಣಿಸಿಕೊಳ್ಳಬಹುದಾಗಿದೆ. ಎಲ್ಲಾ ವಯೋಮಾನದ ಜನರ ಅಭಿರುಚಿಗೆ ತಕ್ಕಂತೆ ವೈವಿಧ್ಯಮಯ ಕಾರ್ಯಕ್ರಮಗಳು ಇಲ್ಲಿರುವುದು ವಿಶೇಷವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.