ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ದೇಹದ ಶಕ್ತಿ ಹೆಚ್ಚಿಸಲು ದಿನನಿತ್ಯ ಈ ಆಹಾರ ಸೇವಿಸಿ

Health Tips: ನೀವು ಸೇವಿಸುವಂತಹ ಆಹಾರವು ಅಗತ್ಯ ಪೌಷ್ಠಿಕಾಂಶ, ಜೀವಸತ್ವ ಮತ್ತು ಖನಿಜಗಳಿಂದ ಸಮೃದ್ಧವಾಗಿಲ್ಲದಿದ್ದರೆ ದೇಹವು ದುರ್ಬಲವಾಗುತ್ತದೆ. ಹಾಗಾಗಿ ಉತ್ತಮ ಆಹಾರದ ಸೇವನೆಯಿಂದ ಪೋಷಕಾಂಶ ದೊರೆಯುವ ಜತೆಗೆ ದೇಹದ ಶಕ್ತಿ ಕೂಡ ಹೆಚ್ಚುತ್ತದೆ. ಹೀಗಾಗಿ ನಿಮ್ಮ ದೇಹಕ್ಕೆ ಶಕ್ತಿ ತುಂಬುವ ಕೆಲವೊಂದು ಆಹಾರಗಳ ಸೇವನೆಯನ್ನು ರೂಢಿಸಿಕೊಳ್ಳಬೇಕು.

ದೇಹಕ್ಕೆ ಶಕ್ತಿ ನೀಡುವ ನೈಸರ್ಗಿಕ ಆಹಾರಗಳಿವು

energy-boosting

Profile Pushpa Kumari Mar 10, 2025 7:00 AM

ನವದೆಹಲಿ: ನಾವು ದಿನನಿತ್ಯ ಸೇವಿಸುವ ಆಹಾರಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ದೇಹವನ್ನು ಸದೃಢ ರೀತಿಯಲ್ಲಿ ಇಟ್ಟುಕೊಳ್ಳಲು, ದೇಹಕ್ಕೆ ಶಕ್ತಿ ಸಿಗಲು ಪೋಷಕಾಂಶ ಭರಿತ ಆಹಾರ ಸೇವಿಸುವುದು ಅಗತ್ಯ. ನೀವು ಸೇವಿಸುವ ಆಹಾರವು ಅಗತ್ಯ ಪೌಷ್ಠಿಕಾಂಶ, ಜೀವಸತ್ವ ಮತ್ತು ಖನಿಜಗಳಿಂದ ಸಮೃದ್ಧವಾಗಿಲ್ಲದಿದ್ದರೆ ದೇಹವು ದುರ್ಬಲವಾಗುವ ಸಾಧ್ಯತೆ ಇದೆ. ಹಾಗಾಗಿ ಒಳ್ಳೆಯ ಆಹಾರ ಸೇವಿಸಿದರೆ ಪೋಷಕಾಂಶದ ಜತೆಗೆ ದೇಹದ ಶಕ್ತಿ ಕೂಡ ಹೆಚ್ಚುತ್ತದೆ (Health Tips). ಹೀಗಾಗಿ ನಿಮ್ಮ ದೇಹಕ್ಕೆ ಶಕ್ತಿ ತುಂಬುವ ಕೆಲವೊಂದು ಆಹಾರಗಳ ಸೇವನೆಯನ್ನು ರೂಢಿಸಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಪ್ರತಿನಿತ್ಯ ನಿಮ್ಮ ಆಹಾರದಲ್ಲಿ ಇವುಗಳನ್ನು ಸೇರಿಸುವುದು ಉತ್ತಮ.

​ಮೊಟ್ಟೆ​

ದೇಹಕ್ಕೆ ಶಕ್ತಿ ನೀಡುವ ಆಹಾರದಲ್ಲಿ ಮೊಟ್ಟೆಯೂ ಸೇರಿಕೊಂಡಿದೆ. ಮೊಟ್ಟೆಯು ಅತ್ಯಂತ ಆರೋಗ್ಯಯುತ ಆಹಾರವಾಗಿದ್ದು, ಇದು ಪ್ರೋಟೀನ್ ಮತ್ತು ಇತರ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ದೇಹಕ್ಕೆ ತ್ರಾಣವನ್ನು ನೀಡಲು ಸಹಾಯ ಮಾಡುತ್ತದೆ. ಹಾಗಾಗಿ ದಿನ ನಿತ್ಯ ಒಂದಾದರೂ ಮೊಟ್ಟೆ ಸೇವಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

​ಬಾಳೆಹಣ್ಣು​

ಬಾಳೆಹಣ್ಣು ಕೂಡ ದೇಹಕ್ಕೆ ಅಗತ್ಯವಾದ ಪೋಷಕಾಂಶವನ್ನು ಒದಗಿಸುತ್ತದೆ. ಇದು ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುವ ಅತ್ಯುತ್ತಮ ಆಹಾರಗಳಲ್ಲಿ ಒಂದು. ಇದರಲ್ಲಿ ಕಾರ್ಬೋಹೈಡ್ರೇಟ್‌ಗಳು ಹೆಚ್ಚಾಗಿದ್ದು, ದೇಹಕ್ಕೆ ಬೇಕಾದ ಶಕ್ತಿಯನ್ನು ನೀಡುತ್ತದೆ.

​ಮೊಸರು​

ನಿಮ್ಮ ಆಹಾರದಲ್ಲಿ ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಒಳಗೊಂಡಿರುವ ಮೊಸರು ಸೇರಿಸಬೇಕು. ಇದರಿಂದ ದೇಹಕ್ಕೆ ಅಗತ್ಯವಿರುವಷ್ಟು ಶಕ್ತಿ ದೊರೆಯುತ್ತದೆ. ಮೊಸರು ಪ್ರೋಬಯಾಟಿಕ್ ಆಹಾರವಲ್ಲದೆ ಪ್ರೋಟೀನ್‌ನಿಂದ ಸಮೃದ್ಧವಾಗಿದೆ‌‌. ಇದು ಮೆಗ್ನೀಸಿಯಮ್ ಮತ್ತು ವಿಟಮಿನ್‌ಗಳು B6 ಮತ್ತು B12 ಖನಿಜಗಳನ್ನು ಒಳಗೊಂಡಿದೆ.

ಓಟ್ಸ್

ಓಟ್ಸ್‌ನಲ್ಲಿ ನಾರಿನಾಂಶವು ಅಧಿಕ ಪ್ರಮಾಣದಲ್ಲಿ ಇದ್ದು, ಇದು ಬೇಗ ಹೊಟ್ಟೆ ತುಂಬುವಂತೆ ಮಾಡುತ್ತದೆ. ಅಲ್ಲದೆ ಕಾರ್ಬೋಹೈಡ್ರೇಟ್ ಮತ್ತು ಫೈಬರ್ ಹೆಚ್ಚು ಇರುವ ಓಟ್ಸ್ ಸೇವನೆ ದೇಹಕ್ಕೆ ಅಗತ್ಯ ಪೋಷಕಾಂಶವನ್ನು ಒದಗಿಸುತ್ತದೆ. ಹಾಗಾಗಿ ಇದನ್ನು ಬೇಯಿಸಿ ಅಥವಾ ಹಾಗೆಯೇ ಸೇವಿಸಬಹುದು.

​ಕಾಳುಗಳು​

ಕಬ್ಬಿಣ ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಕಾಳುಗಳ ಸೇವನೆ ಕೂಡ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಇವು ಕೆಂಪು ರಕ್ತ ಕಣಗಳ ಉತ್ಪಾದನೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಜತೆಗೆ ದೇಹಕ್ಕೆ ಹೆಚ್ಚು ಶಕ್ತಿಯನ್ನು ಒದಗಿಸುತ್ತದೆ.

ಡಾರ್ಕ್ ಚಾಕಲೇಟ್

ದೇಹಕ್ಕೆ ತಕ್ಷಣವೇ ಶಕ್ತಿ ಒದಗಿಸುವಲ್ಲಿ ಡಾರ್ಕ್ ಚಾಕಲೇಟ್ ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದು ದೇಹಕ್ಕೆ ಶಕ್ತಿಯನ್ನು ನೀಡುವ ಜತೆಗೆ ರಕ್ತ ಸಂಚಾರವನ್ನು ಉತ್ತಮಪಡಿಸುವ ಗುಣವನ್ನು ಕೂಡ ಹೊಂದಿದೆ. ಮೆದುಳು ಮತ್ತು ಸ್ನಾಯುಗಳಿಗೆ ಆಮ್ಲಜನಕವನ್ನು ಸರಿಯಾಗಿ ನೀಡಲು ಡಾರ್ಕ್ ಚಾಕಲೇಟ್ ಪರಿಣಾಮಕಾರಿ.

ಬಾದಾಮಿ

ಬಾದಾಮಿಯಲ್ಲಿ ಪೋಷಕಾಂಶಗಳು ಹೇರಳವಾಗಿದ್ದು, ಇವು ದೇಹಕ್ಕೆ ಸರಿಪ್ರಮಾಣದ ಶಕ್ತಿ ಒದಗಿಸುತ್ತವೆ. ಇದರಲ್ಲಿ ಒಮೆಗಾ-3 ಕೊಬ್ಬಿನಾಮ್ಲ ಮತ್ತು ಆ್ಯಂಟಿ ಆಕ್ಸಿಡೆಂಟ್ ಶಕ್ತಿಯ ಅಂಶ ಹೆಚ್ಚಾಗಿದ್ದು, ಉರಿಯೂತದಿಂದ ದೇಹವನ್ನು ರಕ್ಷಿಸುತ್ತದೆ. ಇದರಲ್ಲಿರುವ ವಿಟಮಿನ್ ಬಿ ದೇಹಕ್ಕೆ ಶಕ್ತಿ ನೀಡಲು ತುಂಬಾ ಸಹಕಾರಿ.

ಕುಂಬಳಕಾಯಿ ಬೀಜಗಳು

ಕುಂಬಳಕಾಯಿ ಬೀಜಗಳು ದೇಹಕ್ಕೆ ಪ್ರೋಟೀನ್, ಆರೋಗ್ಯಕಾರಿ ಕೊಬ್ಬು ಮತ್ತು ನಾರಿನಾಂಶವನ್ನು ಒದಗಿಸುತ್ತದೆ. ಹಾಗಾಗಿ ಪ್ರೋಟೀನ್, ಫೈಬರ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಿಂದ ತುಂಬಿರುವ ಕುಂಬಳಕಾಯಿ ಬೀಜಗಳನ್ನು ತಿನ್ನುವುದನ್ನು ರೂಢಿಸಿಕೊಳ್ಳಬೇಕು..

ಕಪ್ಪು ಒಣದ್ರಾಕ್ಷಿ

ಕಪ್ಪು ಒಣದ್ರಾಕ್ಷಿ ಗ್ಲೂಕೋಸ್ ಮತ್ತು ಫ್ರಕ್ಟೋಸ್‌ನಂತಹ ನೈಸರ್ಗಿಕ ಸಕ್ಕರೆಗಳನ್ನು ಹೊಂದಿದ್ದು, ಇವುಗಳ ಸೇವನೆಯು ಆರೋಗ್ಯಕ್ಕೆ ಉತ್ತಮ. ಕಪ್ಪು ಒಣದ್ರಾಕ್ಷಿ ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸಲು ಸಹಾಯ ಮಾಡುತ್ತದೆ. ಒಣದ್ರಾಕ್ಷಿಯಲ್ಲಿ ಕಬ್ಬಿಣಾಂಧವೂ ಹೇರಳವಾಗಿದೆ. ಇದು ರಕ್ತ ಹೀನತೆಯನ್ನು ತಡೆಯಲು ಮತ್ತು ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಇದನ್ನು ಓದಿ: Health Tips: ಮಕ್ಕಳಲ್ಲಿ ಕಾಡುತ್ತಿದೆಯೇ ಬೊಜ್ಜಿನ ಸಮಸ್ಯೆ? ಪೋಷಕರೇ ಈಗ್ಲೇ ಹುಷಾರಾಗಿರಿ

ಸೇಬು

ಸೇಬು ಫೈಬರ್​​​ನ ಸಮೃದ್ಧ ಮೂಲವಾಗಿದ್ದು ಇದರ ಸೇವನೆ ಕೂಡ ಆರೋಗ್ಯಕ್ಕೆ ಬಹಳ ಉತ್ತಮ. ಸೇಬು ಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಶಕ್ತಿ ಕೂಡ ಸಿಗುತ್ತದೆ. ಇದರಲ್ಲಿ ಸಾಕಷ್ಟು ಪ್ರಮಾಣದ ಉತ್ಕರ್ಷಣ ನಿರೋಧಕ ಗುಣಗಳೂ ಇದ್ದು, ಯಾವುದೇ ರೋಗ ಭಾದಿಸದಂತೆ ರಕ್ಷಣೆ ನೋಡಿಕೊಳ್ಳುತ್ತದೆ. ಹಾಗಾಗಿ ದಿನಕ್ಕೊಂದು ಸೇಬು ಹಣ್ಣಿನ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ.