ಬೆಂಗಳೂರು : ಬಹುತೇಕ ಎಲ್ಲರೂ ಜೀವನದ ಒಂದಲ್ಲಾ ಒಂದು ಹಂತದಲ್ಲಿ ತಲೆನೋವು ಅಥವಾ ದೃಷ್ಟಿ ಮಂದವಾಗುವ ಅನುಭವ ಹೊಂದುತ್ತಾರೆ. ಬಹಳಷ್ಟು ಸಮಯ ಈ ರೋಗಲಕ್ಷಣಗಳು ನಿರಪಾಯಕಾರಿ ಮತ್ತು ಒತ್ತಡ, ನಿದ್ರೆಯ ಕೊರತೆ, ನಿರ್ಜಲೀಕರಣ, ಕಣ್ಣಿನ ಆಯಾಸ, ಮೈಗ್ರೇನ್ ಅಥವಾ ಸ್ಕ್ರೀನ್ ಗಳ ಮುಂದೆ ಹೆಚ್ಚಿನ ಸಮಯ ಕಳೆಯುವುದರಿಂದ ಉಂಟಾಗುತ್ತವೆ. ಆದಾಗ್ಯೂ ಬ್ರೈನ್ ಟ್ಯೂಮರ್ ಅರಿವಿನ ಮಾಸದಲ್ಲಿ ಅಪರೂಪದ ಪ್ರಕರಣಗಳಲ್ಲಿ ಈ ಸಾಮಾನ್ಯ ದೂರುಗಳು ಬ್ರೈನ್ ಟ್ಯೂಮರ್ ನ ಎಚ್ಚರಿಕೆಯ ಸಂಕೇತಗಳೂ ಆಗಿಸಬಹುದು ಎಂದು ಅರ್ಥ ಮಾಡಿ ಕೊಳ್ಳುವುದು ಬಹಳ ಮುಖ್ಯ ಎಂದು ಶೇಷಾದ್ರಿಪುರಂ ಅಪೋಲೋ ಹಾಸ್ಪಿಟಲ್ಸ್, ನ್ಯೂರೋ ಸರ್ಜರಿ ಅಂಡ್ ಸ್ಪೈನ್ ಸರ್ಜರಿ ಸೀನಿಯರ್ ಕನ್ಸಲ್ಟೆಂಟ್ ಡಾ. ಆದೇಶ್ ಜೆ ಅವರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆದುಳಿನ ಒಳಗಡೆ ಅಥವಾ ಸುತ್ತುವರಿದ ಜೀವ ಕೋಶಗಳ ಒಳಗಡೆ ಅಸಹಜ ಜೀವಕೋಶಗಳು ಬೆಳೆದಾಗ ಬ್ರೈನ್ ಟ್ಯೂಮರ್ ಉಂಟಾಗುತ್ತದೆ. ಟ್ಯೂಮರ್ ಗಳು ಕ್ಯಾನ್ಸರ್ ಕಾರಕವಲ್ಲದ ಅಥವಾ ಕ್ಯಾನ್ಸರ್ ಕಾರನವಾಗಿರಬಹುದು, ಆದರೆ ಎರಡೂ ಮೆದುಳಿನ ಕಾರ್ಯಕ್ಕರ ಹಾನಿಯುಂಟು ಮಾಡುತ್ತವೆ, ಏಕೆಂದರೆ ತಲೆಬುರುಡೆ ಮುಚ್ಚಿಕೊಂಡ ಸ್ಥಳವಾಗಿರುತ್ತದೆ. ಟ್ಯೂಮರ್ ಬೆಳೆದಂತೆ ತಲೆಬುರುಡೆಯ ಒಳಗಡೆ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ಹತ್ತಿರದ ನರಗಳು ಮತ್ತು ಮೆದುಳಿನ ಜೀವಕೋಶವನ್ನು ಸಂಕುಚಿತ ಗೊಳಿಸುತ್ತದೆ. ಈ ಹೆಚ್ಚಿದ ಒತ್ತಡವನ್ನು ಇಂಟ್ರಾಕ್ರೇನಿಯಲ್ ಪ್ರೆಷರ್ ಎಂದು ಕರೆಯಲಾಗುತ್ತಿದ್ದು ಅದು ರೋಗಿಗಳಲ್ಲಿ ತಲೆನೋವು ಮತ್ತು ದೃಷ್ಟಿಯ ಸಮಸ್ಯೆಗಳನ್ನು ಬೆಳೆಸಿಕೊಳ್ಳಲು ಪ್ರಮುಖ ಕಾರಣಗಳಲ್ಲಿ ಒಂದಾಗುತ್ತದೆ.
ಇದನ್ನೂ ಓದಿ: Popcorn Brain Syndrome: ಯಾವಾಗ್ಲೂ ಮೊಬೈಲ್ ನೋಡೋ ಗೀಳು ನಿಮಗಿದ್ಯಾ? ಈ ಕಾಯಿಲೆ ಕಾಡುತ್ತೆ ಎಚ್ಚರ... ಎಚ್ಚರ!
ಬಹಳಷ್ಟು ತಲೆನೋವುಗಳು ಮೆದುಳಿನ ಟ್ಯೂಮರ್ ಗಳಿಂದ ಉಂಟಾಗುವುದಿಲ್ಲ. ಆದಾಗ್ಯೂ, ಕೆಲವು ಮಾದರಿಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ಬ್ರೈನ್ ಟ್ಯೂಮರ್ ಗಳಿಗೆ ಸಂಬಂಧಿಸಿದ ತಲೆನೋವುಗಳು ಸಾಮಾನ್ಯ ಟೆನ್ಷನ್ ತಲೆನೋವುಗಳು ಅಥವಾ ಮೈಗ್ರೇನ್ ಗಳಿಗಿಂತ ಭಿನ್ನವಾಗಿರುತ್ತವೆ. ಅವು ಕೆಲವು ವಾರಗಳು ಅಥವಾ ತಿಂಗಳು ಕಳೆದಂತೆ ಸುಧಾರಣೆಯ ಬದಲು ಮತ್ತಷ್ಟು ಹದಗೆಡಬಹುದು. ಹಲವಾರು ರೋಗಿಗಳು ಬೆಳಗಿನ ವೇಳೆ ಅಥವಾ ನಿದ್ರೆಯಿಂದ ಎಬ್ಬಿಸಿದಾಗ ಅತ್ಯಂತ ತೀವ್ರವಾದ ನೋವಿರುತ್ತದೆ ಎಂದು ಗಮನಿಸಿದ್ದಾರೆ. ತಲೆನೋವು ಕೆಮ್ಮಿದಾಗ, ಸೀನಿದಾಗ, ಮುಂದೆ ಬಾಗಿದಾಗ ಅಥವಾ ಆಯಾಸಗೊಂಡಾಗ ಹೆಚ್ಚು ತೀವ್ರವಾಗಬಹುದು.
ಸಾಮಾನ್ಯವಾಗಿ ಕಾಡುವ ತಲೆನೋವುಗಳಂತೆ ಅಲ್ಲದೆ ಈ ರೋಗಲಕ್ಷಣಗಳು ಸಾಮಾನ್ಯ ನೋವಿನ ಔಷಧಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅವು ವಾಂತಿ, ತಲೆ ತಿರುಗುವುದು, ಅಸಮತೋಲನ, ಗೊಂದಲ ಅಥವಾ ಕೈಗಳು ಮತ್ತು ಕಾಲುಗಳಲ್ಲಿ ದೌರ್ಬಲ್ಯದೊಂದಿಗೆ ಉಂಟಾಗಬಹುದು. ಅಪರೂಪಕ್ಕೆ ತಲೆನೋವುಗಳನ್ನು ಅನುಭವಿಸುವವರಲ್ಲಿ ಈ ಮಾದರಿಯಲ್ಲಿ ದಿಢೀರ್ ಬದಲಾವಣೆ ಅಥವಾ ತಲೆನೋವಿನ ತೀವ್ರತೆ ಕಂಡುಬಂದಲ್ಲಿ ವೈದ್ಯರ ಪರೀಕ್ಷೆ ಅಗತ್ಯ ಎಂದರು.
ಮೆದುಳು ನಾವು ನೋಡುವ ಪ್ರತಿಯೊಂದನ್ನೂ ನಿಯಂತ್ರಿಸುತ್ತದೆ ಮತ್ತು ಸಂಸ್ಕರಿಸುತ್ತದೆ. ಕಣ್ಣಿನ ನರಗಳು ಅಥವಾ ದೃಷ್ಟಿಯ ಮಾರ್ಗದಲ್ಲಿ ಒತ್ತುವ ಟ್ಯೂಮರ್ ಗಳು ಈ ಸಂಕೇತಗಳ ಮಧ್ಯಪ್ರವೇಶ ಮಾಡಬಹುದು ಮತ್ತು ಎದ್ದು ಕಾಣುವ ದೃಷ್ಟಿಯ ರೋಗ ಲಕ್ಷಣಗಳನ್ನು ಉಂಟು ಮಾಡಬಹುದು. ರೋಗಿಗಳಲ್ಲಿ ಮಂದ ದೃಷ್ಟಿ, ಎರಡು ದೃಷ್ಟಿ, ದೃಷ್ಟಿ ಕೇಂದ್ರೀಕರಣ ಕಷ್ಟವಾಗುವುದು ಅಥವಾ ತಾತ್ಕಾಲಿಕ ದೃಷ್ಟಿ ನಷ್ಟದ ಸನ್ನಿವೇಶಗಳು ಉಂಟಾಗಬಹುದು. ಕೆಲವು ಜನರು ಸುತ್ತಲಿನ ದೃಷ್ಟಿ ಯನ್ನು ಕಳೆದುಕೊಳ್ಳುತ್ತಾರೆ, ಅದನ್ನು “ಟನಲ್ ವಿಷನ್” ಎಂದು ಕರೆಯಲಾಗುತ್ತದೆ, ಇದರಿಂದ ವಸ್ತುಗಳಿಗೆ ಡಿಕ್ಕಿ ಹೊಡೆಯುತ್ತಾರೆ ಅಥವಾ ಚಾಲನೆಯಲ್ಲಿ ಕಷ್ಟವಾಗುತ್ತದೆ.
ಕೆಲ ಪ್ರಕರಣಗಳಲ್ಲಿ ರೋಗಿಗಳು ಮೊದಲಿಗೆ ನೇತ್ರ ತಜ್ಞರಲ್ಲಿ ಕನ್ನಡಕ ಹಾಕಿಕೊಂಡರೆ ಸಾಕು ಎಂದು ಭೇಟಿ ನೀಡುತ್ತಾರೆ, ಆಗ ಅವರಿಗೆ ಸಮಸ್ಯೆ ಮೆದುಳಿನಿಂದ ಉಂಟಾಗುತ್ತಿದೆ ಎಂದು ತಿಳಿಯುತ್ತದೆ. ತಲೆನೋವುಗಳೊಂದಿಗೆ ದೃಷ್ಟಿಯ ಬದಲಾವಣೆಗಳು ಅಥವಾ ವ್ಯಕ್ತಿತ್ವದ ಬದಲಾವಣೆಗಳನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಬೇಕು. ಟ್ಯೂಮರ್ ಇರುವ ಪ್ರದೇಶ ಆಧರಿಸಿ ಮೂರ್ಛೆ ಬೀಳುವುದು, ಮಾತನಾಡಲು ಕಷ್ಟವಾಗುವುದು, ಶ್ರವಣ ದೋಷಗಳು, ಸ್ಮರಣೆಯ ತೊಂದರೆಗಳು, ವ್ಯಕ್ತಿತ್ವದಲ್ಲಿ ಬದಲಾವಣೆಗಳು ಅಥವಾ ಸಹಕಾರದ ಕೊರತೆಯಂತಹ ಹೆಚ್ಚುವರಿ ರೋಗಲಕ್ಷಣ ಗಳು ಉಂಟಾಗಬಹುದು. ಈ ರೋಗಲಕ್ಷಣಗಳು ನಿಧಾನವಾಗಿ ಬೆಳೆಯುವುದರಿಂದ ಪ್ರಾರಂಭಿಕ ಹಂತದಲ್ಲಿ ಪತ್ತೆ ಮಾಡುವುದು ಕಷ್ಟವಾಗುತ್ತದೆ. ಮೊದಲೇ ಪತ್ತೆ ಮಾಡಿದರೆ ಜೀವ ಉಳಿಸಬಹುದು ಎಂದು ಮಾಹಿತಿ ನೀಡಿದರು.