Popcorn Brain Syndrome: ಯಾವಾಗ್ಲೂ ಮೊಬೈಲ್ ನೋಡೋ ಗೀಳು ನಿಮಗಿದ್ಯಾ? ಈ ಕಾಯಿಲೆ ಕಾಡುತ್ತೆ ಎಚ್ಚರ... ಎಚ್ಚರ!
Popcorn Brain Syndrome: ನೋಯ್ಡಾದ ಮನೋವೈದ್ಯರೊಬ್ಬರು ಯುವಕರಲ್ಲಿ ಹೆಚ್ಚುತ್ತಿರುವ ‘ಪಾಪ್‌ಕಾರ್ನ್ ಬ್ರೇನ್ ಸಿಂಡ್ರೋಮ್’ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಸ್ಮಾರ್ಟ್‌ಫೋನ್ ಮತ್ತು ಇತರ ಡಿಜಿಟಲ್ ಸಾಧನಗಳ ನಿರಂತರ ಬಳಕೆಯಿಂದ ಹದಿಹರೆಯದ ಹಾಗೂ ಯುವ ವಯಸ್ಕರ ಮೆದುಳು ಅತಿಯಾಗಿ ಉದ್ರೇಕಗೊಂಡು, ಗಮನ ಕೇಂದ್ರೀಕರಣ ಮತ್ತು ನೈಜ ಜೀವನದ ನಿಧಾನಗತಿಯೊಡನೆ ಹೊಂದಿಕೊಳ್ಳುವ ಸಾಮರ್ಥ್ಯ ಕುಗ್ಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಈ ಹೊಸ ತಲೆಮಾರಿನ ಮಾನಸಿಕ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿರುವುದು ನಿರಂತರವಾಗಿ ಮೊಬೈಲ್ ವೀಕ್ಷಿಸುವುದು ಎಂದು ಅವರು ಹೇಳಿದ್ದಾರೆ.
ಪಾಪ್ಕಾರ್ನ್ ಬ್ರೈನ್ ಸಿಂಡ್ರೋಮ್‍ಗೆ ಅತಿ ಹೆಚ್ಚು ಮೊಬೈಲ್ ಬಳಕೆಯೇ ಕಾರಣ -
Priyanka P
Nov 3, 2025 4:17 PM
ನವದೆಹಲಿ: ಇತ್ತೀಚೆಗಿನ ದಿನಗಳಲ್ಲಂತೂ ಹದಿಹರೆಯದವರು, ಯುವಜನರಲ್ಲಿ ಮೊಬೈಲ್ ವೀಕ್ಷಣೆ ಸಮಯ ಹೆಚ್ಚುತ್ತಿದೆ. ಅನೇಕರು ದಿನಗಟ್ಟಲೇ ತಮ್ಮ ಮೊಬೈಲ್ ಫೋನ್‍ಗಳಲ್ಲೇ ಕಾಲ ಕಳೆಯುತ್ತಾರೆ. ಸಾಮಾಜಿಕ ಜಾಲತಾಣ, ವಿಡಿಯೊಗಳು, ಗೇಮ್ ಇತ್ಯಾದಿಗಳನ್ನು ನೋಡುತ್ತಾ ಸಮಯಕಳೆಯುತ್ತಾರೆ. ರಾತ್ರಿ ಮಲಗುವಾಗಲೂ ಮೊಬೈಲ್ ನೋಡಿಕೊಂಡೇ ಮಲಗುತ್ತಾರೆ. ಇದರಿಂದ ದಿನಕಳೆಯುವುದೇ ಅವರಿಗೆ ಗೊತ್ತಾಗುವುದಿಲ್ಲ. ಈ ಡಿಜಿಟಲ್ ಓವರ್‌ಲೋಡ್ ಗಮನ, ಸ್ಮರಣೆ ಮತ್ತು ಮಾನಸಿಕ ಆರೋಗ್ಯದ (Mental health) ಮೇಲೆ ಪರಿಣಾಮ ಬೀರುತ್ತದೆ. ಪಾಪ್‍ಕಾರ್ನ್ ಮೆದುಳು ಸಿಂಡ್ರೋಮ್ (Popcorn Brain Syndrome), ಇದು ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ನೋಯ್ಡಾದ ಹೆಡ್‌ಸ್ಪೇಸ್ ಹೀಲಿಂಗ್‌ನ ಕ್ಲಿನಿಕಲ್ ಸೈಕಾಲಜಿಸ್ಟ್ ಮತ್ತು ಸಂಸ್ಥಾಪಕಿ ಡಾ. ಜಯಾ ಸುಕುಲ್ ಎಂಬುವವರು ವಿವರಿಸಿದ್ದಾರೆ.
ಪಾಪ್‌ಕಾರ್ನ್ ಮೆದುಳು ಎಂದರೇನು?
ಪಾಪ್‌ಕಾರ್ನ್ ಮೆದುಳು, ನರಮಂಡಲಗಳು ನಿರಂತರವಾಗಿ ಡಿಜಿಟಲ್ ಇನ್‌ಪುಟ್‌ಗಳಿಂದ ಅತಿಯಾಗಿ ಪ್ರಚೋದಿಸಲ್ಪಡುವ ಸಂವೇದನೆಯಾಗಿದೆ. ಆಧುನಿಕ ಜೀವನಶೈಲಿ, ಸಾಮಾಜಿಕ ಮಾಧ್ಯಮ ಮತ್ತು ನಿರಂತರವಾಗಿ ಮೊಬೈಲ್, ಲ್ಯಾಪ್ಟಾಪ್ ಇತ್ಯಾದಿ ವೀಕ್ಷಿಸುವುದು ಮೆದುಳಿನ ಚಟುವಟಿಕೆಯನ್ನು ಮರುರೂಪಿಸಿದೆ ಎಂದು ಅವರು ವಿವರಿಸಿದ್ದಾರೆ . ನಿಮ್ಮ ಮೆದುಳು ನವೀನತೆಯನ್ನು ಬಯಸುತ್ತದೆ, ಹೀಗಾಗಿ ಇಂತಹ ಸಾಧನಗಳು ಈ ಹಂಬಲವನ್ನು ಬಳಸಿಕೊಳ್ಳುತ್ತವೆ. ಕಾಲಾನಂತರದಲ್ಲಿ, ಇದು ಒತ್ತಡವನ್ನು ಹೆಚ್ಚಿಸಬಹುದು, ಗಮನವನ್ನು ಕಡಿಮೆ ಮಾಡಬಹುದು ಮತ್ತು ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ.
ಈ ಸುದ್ದಿಯನ್ನೂ ಓದಿ:Health Tips: ಮಹಿಳೆಯರಿಗೆ ಬೇಕಾಗುವ ಈ ಸತ್ವಗಳು ನಿಮ್ಮ ಆಹಾರದಲ್ಲೂ ಇದೆಯೇ?
ಪಾಪ್‌ಕಾರ್ನ್ ಮೆದುಳು ಹದಿಹರೆಯದವರು ಮತ್ತು ಯುವಜನರಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದರೂ, ಇದು 30 ರಿಂದ 45 ವರ್ಷ ವಯಸ್ಸಿನ ಜನರ ಮೇಲೂ ಪರಿಣಾಮ ಬೀರುತ್ತದೆ ಎಂದು ಡಾ. ಸುಕುಲ್ ಎಚ್ಚರಿಸಿದ್ದಾರೆ. ಇದು ಇಂಟರ್ನೆಟ್ ವ್ಯಸನದಂತೆ ಅಲ್ಲ ಎಂದು ಅವರು ಸ್ಪಷ್ಟಪಡಿಸುತ್ತಾರೆ. ಇಂಟರ್ನೆಟ್ ವ್ಯಸನವು ಕೆಲಸ, ಸಂಬಂಧಗಳು ಮತ್ತು ದೈನಂದಿನ ಜೀವನವನ್ನು ಅಡ್ಡಿಪಡಿಸುವ ಕ್ಲಿನಿಕಲ್ ಸಿಂಡ್ರೋಮ್ ಆಗಿದೆ. ಪಾಪ್‌ಕಾರ್ನ್ ಮೆದುಳು ನಿಮ್ಮ ಜೀವನದ ಗುಣಮಟ್ಟ, ಗಮನ ಮತ್ತು ಭಾವನಾತ್ಮಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಅದು ಸಂಬಂಧಗಳನ್ನು ಅಥವಾ ವೃತ್ತಿಜೀವನದ ಕಾರ್ಯಕ್ಷಮತೆಯನ್ನು ಹಾಳುಮಾಡುವುದಿಲ್ಲ.
ಪಾಪ್‌ಕಾರ್ನ್ ಮೆದುಳಿನ ಲಕ್ಷಣಗಳು ಇಲ್ಲಿವೆ:
- ಕಿರಿಕಿರಿ ಮತ್ತು ಆತಂಕ
- ನಿದ್ರೆಯಲ್ಲಿ ತೊಂದರೆ
- ಗಮನ ಕೇಂದ್ರೀಕರಿಸುವುದು ಅಥವಾ ಗಮನ ಕೊಡುವುದು ಕಷ್ಟ
- ಅತಿ ಜಾಗರೂಕತೆ ಅಥವಾ ಒತ್ತಡದ ಭಾವನೆ
ಈ ಸುದ್ದಿಯನ್ನೂ ಓದಿ: Health Tips: ಮಹಿಳೆಯರಿಗೆ ಬೇಕಾಗುವ ಈ ಸತ್ವಗಳು ನಿಮ್ಮ ಆಹಾರದಲ್ಲೂ ಇದೆಯೇ?
ಶಮನಗೊಳಿಸುವುದು ಹೇಗೆ?
ಗಮನ ಮತ್ತು ಮನಸ್ಸಿನ ಶಾಂತಿಯನ್ನು ಮರಳಿ ಪಡೆಯಲು ಡಾ. ಸುಕುಲ್ ಹಲವಾರು ತಂತ್ರಗಳನ್ನು ಸೂಚಿಸಿದ್ದಾರೆ:
- ಸ್ಕ್ರೀನ್-ಮುಕ್ತ ವಲಯಗಳನ್ನು ರಚಿಸಿ: ನಿಮ್ಮ ಮನೆಯಲ್ಲಿ ಫೋನ್‌ಗಳು ಮತ್ತು ಡಿಜಿಟಲ್ ಸಾಧನಗಳನ್ನು ಬಳಸದ ಸ್ಥಳವನ್ನು ಆರಿಸಿ.
- ವಿರಾಮ ತೆಗೆದುಕೊಳ್ಳಿ: ಮೊಬೈಲ್, ಲ್ಯಾಪ್ಟಾಪ್‍ಗಳಿಂದ ಉದ್ದೇಶಪೂರ್ವಕ ವಿರಾಮಗಳನ್ನು ತೆಗೆದುಕೊಳ್ಳಿ.
- ಮೈಂಡ್‌ಫುಲ್‌ನೆಸ್ ಅನ್ನು ಅಭ್ಯಾಸ ಮಾಡಿ: ಧ್ಯಾನ, ಯೋಗ ಮತ್ತು ಉಸಿರಾಟದ ವ್ಯಾಯಾಮ ಮಾಡುವುದರಿಂದ ಗಮನವನ್ನು ಸುಧಾರಿಸಲು ಮತ್ತು ಅತಿಯಾದ ಪ್ರಚೋದನೆಯನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.
- ಡಿಜಿಟಲ್ ಸಾಧನದ ಬಳಕೆಯ ಬಗ್ಗೆ ಜಾಗರೂಕರಾಗಿರಿ: ನಿಮ್ಮನ್ನು ನೀವು ಪ್ರಶ್ನೆ ಮಾಡಿಕೊಳ್ಳಿ, ಯಾರು ನಿಯಂತ್ರಣದಲ್ಲಿದ್ದಾರೆ ಎಂಬುದು. ಆದಷ್ಟು ಸಾಮಾಜಿಕ ಮಾಧ್ಯಮದಿಂದ ದೂರವಿರಿ.
- ಸುಖಾಸುಮ್ಮನೆ ಸ್ಕ್ರೋಲಿಂಗ್ ಮಾಡುವುದನ್ನು ತಪ್ಪಿಸಿ: ನಿಷ್ಕ್ರಿಯ ಬ್ರೌಸಿಂಗ್ ನಿಮ್ಮ ಮೆದುಳನ್ನು ಸಕ್ರಿಯವಾಗಿ ಅತಿಯಾಗಿ ಉತ್ತೇಜಿಸುತ್ತದೆ. ಹೀಗಾಗಿ ಕುಳಿತುಕೊಂಡಲ್ಲೇ ಮೊಬೈಲ್ ಸ್ಕ್ರೋಲಿಂಗ್ ಮಾಡುವುದನ್ನು ಕಡಿಮೆ ಮಾಡಿ.
ಡಿಜಿಟಲ್ ಬಳಕೆಯನ್ನು ಪ್ರಜ್ಞಾಪೂರ್ವಕವಾಗಿ ನಿರ್ವಹಿಸುವ ಮೂಲಕ ಮತ್ತು ಕೆಲವೊಂದು ಅಭ್ಯಾಸಗಳನ್ನು ಬೆಳೆಸಿಕೊಳ್ಳುವ ಮೂಲಕ, ನೀವು ನಿಮ್ಮ ಗಮನವನ್ನು ಮರಳಿ ಪಡೆಯಬಹುದು, ಒತ್ತಡವನ್ನು ಕಡಿಮೆ ಮಾಡಬಹುದು ಮತ್ತು ಒಟ್ಟಾರೆ ಆರೋಗ್ಯವನ್ನು ಸುಧಾರಿಸಬಹುದು ಎಂದು ಡಾ. ಸುಕುಲ್ ತಿಳಿಸಿದ್ದಾರೆ.