ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದಿನನಿತ್ಯದ ಆಯ್ಕೆಗಳೇ ಮುಂದಿನ ಆಯುಷ್ಯದ ಅಡಿಪಾಯ

ಸಮಯಕ್ಕೆ ಮಲಗುವುದು, ಬೇಗ ಎಚ್ಚರಗೊಳ್ಳುವುದು, ನಿಯಮಿತ ಜೀವನಕ್ರಮ ಹಾರ್ಮೋನ್ ನ ಸಮತೋಲನ ಕಾಪಾಡುತ್ತದೆ. ರಾತ್ರಿ ನಿದ್ರೆಯಲ್ಲೇ ದೇಹದ ಕೋಶಗಳು ಪುನರ್ ನಿರ್ಮಾಣ ವಾಗುತ್ತವೆ. ನಿದ್ರಾಹೀನತೆ ವೃದ್ಧಾಪ್ಯವನ್ನು ವೇಗ ಗೊಳಿಸುತ್ತದೆ. ದೀರ್ಘಾಯುಷ್ಯ ಮತ್ತು ಮೆದುಳಿನ ದಕ್ಷತೆಯನ್ನು ಕಾಪಾಡಿಕೊಳ್ಳುವಲ್ಲಿ ರಾತ್ರಿಯ 6 ರಿಂದ 9 ಗಂಟೆಗಳ ಕಾಲದ ಗಾಢ ನಿದ್ರೆ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ.

ದೀರ್ಘಾಯುಷ್ಯ ಹೊಂದಬೇಕು ಎಂದರೆ ಪ್ರತಿದಿನದ ನಮ್ಮ ಆಯ್ಕೆಗಳಲ್ಲಿ ಪ್ರಶಸ್ತವಾದ ಸಣ್ಣ ಬದಲಾವಣೆಯನ್ನು ಮಾಡಿಕೊಳ್ಳಬೇಕು. ರೋಗ ಬಂದ ನಂತರ ಚಿಕಿತ್ಸೆ ಪಡೆಯು ವುದಕ್ಕಿಂತ, ರೋಗವೇ ಬರದಂತೆ ಜೀವನಶೈಲಿಯನ್ನು ರೂಪಿಸುವುದು ಆರೋಗ್ಯಕರ ದೀರ್ಘಾಯುಷ್ಯದ ಮೂಲತತ್ವವಾಗಿದೆ. ಬಹುತೇಕ ರೋಗಗಳು ಆಕಸ್ಮಿಕವಾಗಿ ಉಂಟಾಗು ವುದಿಲ್ಲ. ಅವು ವರ್ಷಗಳ ಕಾಲ ನಮ್ಮ ತಪ್ಪಾದ ಜೀವನಶೈಲಿಯ ಪ್ರತಿಬಿಂಬವಾಗಿರುತ್ತದೆ.

ಅಸಮರ್ಪಕವಾದ ಆಹಾರ ಕ್ರಮ, ನಿದ್ರೆ ಮತ್ತು ಒತ್ತಡ ನಿರ್ವಹಣೆಯ ಫಲಿತಾಂಶವಾಗಿ ನಾವು ಹಲವಾರು ಕಾಯಿಲೆಗಳಿಗೆ ಗುರಿಯಾಗುತ್ತಿದ್ದು ನಮ್ಮ ಚೈತನ್ಯಯುಕ್ತ ದೀರ್ಘಾ ಯುಷ್ಯದ ನನಸು ಮರೀಚಿಕೆಯಂತಾಗುತ್ತಿದೆ. ಆದ್ದರಿಂದ ದೀರ್ಘಾಯುಷ್ಯವು ಚಿಕಿತ್ಸೆ ಗಳಿಂದ ಅಲ್ಲ, ದಿನನಿತ್ಯದ ಜಾಗೃತ ಆಯ್ಕೆಗಳಿಂದ ನಿರ್ಮಾಣವಾಗುತ್ತದೆ. ಆಧುನಿಕ ವೈದ್ಯಕೀಯ ವಿಜ್ಞಾನದ ಪ್ರಕಾರ, ಒಬ್ಬ ವ್ಯಕ್ತಿಯ ಆಯಸ್ಸು ಶೇ.25ರಷ್ಟು ಮಾತ್ರ ವಂಶ ವಾಹಿಗಳ ಮೇಲೆ ಅವಲಂಬಿತವಾಗಿದ್ದರೆ, ಉಳಿದ ಶೇ.75ರಷ್ಟು ಆತನ ಜೀವನ ಶೈಲಿಯ ಮೇಲೆ ನಿಂತಿದೆ. ಹಾಗಾಗಿ ದೀರ್ಘ ಮತ್ತು ಆರೋಗ್ಯಪೂರ್ಣ ಜೀವನಕ್ಕಾಗಿ ನಾವು ಕೆಲವು ಅಂಶಗಳನ್ನು ಅನುಸರಿಸಬೇಕಾಗಿದೆ.

ಆಹಾರ ಪದ್ಧತಿ: ಆಯುರ್ವೇದದ ಮೂಲಸೂತ್ರವೇ 'ಸ್ವಸ್ಥಸ್ಯ ಸ್ವಾಸ್ಥ್ಯ ರಕ್ಷಣಂ'. ಅಂದರೆ, ಆರೋಗ್ಯವಂತರ ಆರೋಗ್ಯ ಕಾಪಾಡುವುದೇ ಮೊದಲ ಕರ್ತವ್ಯ ಎಂದು. ಇದಕ್ಕಾಗಿ ಮೊದಲ ಹೆಜ್ಜೆ ಸರಿಯಾದ ಆಹಾರ ಪದ್ಧತಿ. ಅಸಮಯದ ಊಟ, ವಿಧಿವರ್ಜಿತ ಆಹಾರ ಸೇವನೆಯ ಪ್ರವೃತ್ತಿ, ಅಸಂಸ್ಕರಿತ ಆಹಾರ, ಅತಿಯಾದ ಸಕ್ಕರೆ, ಎಣ್ಣೆಯಲ್ಲಿ ಕರಿದ ಆಹಾರ ಮತ್ತು ಅತಿಯಾಗಿ ಆಹಾರ ಸೇವಿಸುವುದರಿಂದ ನಮ್ಮ ಜೀರ್ಣಶಕ್ತಿಯು ಕುಗ್ಗಿ ದೇಹದಲ್ಲಿ 'ಆಮ' ಎಂಬ ವಿಷ ಪದಾರ್ಥವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: Health Tips: ಹಿಪ್ಪಲಿಯ ಔಷಧೀಯ ಗುಣಗಳ ಬಗ್ಗೆ ಗೊತ್ತೆ?

ಇದೇ ಮುಂದೆ ಹಲವಾರು ಕಾಯಿಲೆಗಳಿಗೆ ಕಾರಣೀಭೂತವಾಗಿದ್ದು ಪ್ರಮುಖವಾದ ಜೀವನ ಶೈಲಿ ರೋಗಗಳಾದ ಮಧುಮೇಹ, ರಕ್ತದೊತ್ತಡ, ಸ್ಥೂಲತೆ ಮುಂತಾದ ದೀರ್ಘ ಕಾಲಿಕ ರೋಗಗಳಿಗೆ ನಿಮಿತ್ತವಾಗುತ್ತದೆ. ಹಾಗಾಗಿ ಸಮಯಕ್ಕೆ ಸರಿಯಾದ, ಸರಳ, ಸುಲಭ ವಾಗಿ ಜೀರ್ಣವಾಗುವ, ಅಗತ್ಯದ ಪ್ರಮಾಣದ ಆಹಾರ ಸೇವನೆ ಮತ್ತು ತಾಜಾ ಆಹಾರ ಸೇವನೆ ದೇಹದ ಕೋಶಗಳನ್ನು ರಕ್ಷಿಸುತ್ತದೆ. ಸಮತೋಲಿತ ಆಹಾರದ ಸೇವನೆ ಯೂ ಕೂಡಾ ದೀರ್ಘಾಯಷ್ಯದ ನಮ್ಮ ಗುರಿಗೆ ಸಹಕಾರಿಯಾಗಿದೆ.

ತಡರಾತ್ರಿಯ ಭೋಜನವನ್ನು ತ್ಯಜಿಸಿ, ಸೂರ್ಯಾಸ್ತದ ಒಳಗೆ ಲಘು ಆಹಾರ ಸೇವಿಸುವುದು ಜೀರ್ಣಾಂಗವ್ಯೂಹಕ್ಕೆ ಮರುಜೀವ ನೀಡುತ್ತದೆ. ಅದರೊಂದಿಗೆ 15 ದಿನಕ್ಕೊಮ್ಮೆ ಉಪವಾಸ ಮಾಡುವುದೂ ಕೂಡಾ ನಮ್ಮ ಜೀರ್ಣಾಂಗವ್ಯೂಹಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ.

ಸಮತೋಲಿತ ನಿದ್ರೆ: ಸಮಯಕ್ಕೆ ಮಲಗುವುದು, ಬೇಗ ಎಚ್ಚರಗೊಳ್ಳುವುದು, ನಿಯಮಿತ ಜೀವನಕ್ರಮ ಹಾರ್ಮೋನ್ ನ ಸಮತೋಲನ ಕಾಪಾಡುತ್ತದೆ. ರಾತ್ರಿ ನಿದ್ರೆಯಲ್ಲೇ ದೇಹದ ಕೋಶಗಳು ಪುನರ್ ನಿರ್ಮಾಣವಾಗುತ್ತವೆ. ನಿದ್ರಾಹೀನತೆ ವೃದ್ಧಾಪ್ಯವನ್ನು ವೇಗ ಗೊಳಿಸುತ್ತದೆ. ದೀರ್ಘಾಯುಷ್ಯ ಮತ್ತು ಮೆದುಳಿನ ದಕ್ಷತೆಯನ್ನು ಕಾಪಾಡಿಕೊಳ್ಳುವಲ್ಲಿ ರಾತ್ರಿಯ 6 ರಿಂದ 9 ಗಂಟೆಗಳ ಕಾಲದ ಗಾಢ ನಿದ್ರೆ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ.

ನಿದ್ರೆಯ ಅವಧಿಯಲ್ಲಿ ನಮ್ಮ ದೇಹವು ಕೇವಲ ವಿಶ್ರಾಂತಿ ಪಡೆಯುವುದಿಲ್ಲ, ಬದಲಾಗಿ ಹಾನಿಗೊಳಗಾದ ಜೀವಕೋಶಗಳನ್ನು ಸರಿಪಡಿಸುವ 'ಸೆಲ್ಯುಲಾರ್ ರಿಪೇರಿ' ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತದೆ. ವಿಶೇಷವಾಗಿ ಮೆದುಳು ನಿದ್ರೆಯ ಸಮಯದಲ್ಲಿ ತನ್ನಲ್ಲಿ ಸಂಗ್ರಹ ವಾದ ಬೀಟಾ-ಅಮಿಲಾಯ್ಡ್' ಎಂಬ ವಿಷಕಾರಿ ಅಂಶಗಳನ್ನು ಹೊರಹಾಕುವ ಮೂಲಕ ತನ್ನನ್ನು ತಾನು ಶುಚಿಗೊಳಿಸಿಕೊಳ್ಳುತ್ತದೆ. ಒಂದು ವೇಳೆ ಸರಿಯಾದ ನಿದ್ರೆಯಿಲ್ಲದಿದ್ದರೆ, ಈ ವಿಷಕಾರಿ ಅಂಶಗಳು ಮೆದುಳಿನಲ್ಲಿ ಸಂಗ್ರಹಗೊಂಡು ಮರೆಗುಳಿತನ ಉಂಟಾಗುವ ಸಾಧ್ಯತೆಯನ್ನು ಶೇ. 30ರಷ್ಟು ಹೆಚ್ಚಿಸುತ್ತವಲ್ಲದೆ, ಅಲ್ಝೈಮರ್ಸ್ ಮತ್ತು ಹೃದ್ರೋಗ ದಂತಹ ಗಂಭೀರ ಅಪಾಯಗಳಿಗೂ ದಾರಿ ಮಾಡಿಕೊಡುತ್ತವೆ. ಅಂತೆಯೇ ರಾತ್ರಿ ಭೋಜನದ ಕೂಡಲೇ ನಿದ್ರೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳಿತಲ್ಲ.

ಇನ್ಸುಲಿನ್ ಪ್ರತಿರೋಧದ ನಿರ್ವಹಣೆ: ಸಂಸ್ಕರಿಸಿದ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳ ಅತಿಯಾದ ಸೇವನೆಯು ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ. ಇದು ಮಧುಮೇಹ ಮತ್ತು ಹೃದ್ರೋಗಕ್ಕೆ ನಾಂದಿ ಹಾಡುತ್ತದೆ. ದಿನಕ್ಕೆ ಕನಿಷ್ಠ 12-14 ಗಂಟೆಗಳ ಕಾಲ ಅಂತರಾಳದ ಉಪವಾಸ ಮಾಡುವುದರಿಂದ ದೇಹವು ತನ್ನಲ್ಲಿರುವ ಕೆಟ್ಟ ಜೀವಕೋಶ ಗಳನ್ನು ತಾನೇ ಸ್ವಚ್ಛಗೊಳಿಸುವ 'ಆಟೋಫಜಿ' ಪ್ರಕ್ರಿಯೆಯನ್ನು ಆರಂಭಿಸುತ್ತದೆ.

ಮಾನಸಿಕ ಆರೋಗ್ಯ: ದೀರ್ಘಕಾಲದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿ ಕೊಳ್ಳಲು ಮನಃಶಾಂತಿ ಅತ್ಯಗತ್ಯ. ದೀರ್ಘಕಾಲದ ಮಾನಸಿಕ ಒತ್ತಡವು ದೇಹದಲ್ಲಿ 'ಕಾರ್ಟಿ ಸೋಲ್' ಹಾರ್ಮೋನ್ ಮಟ್ಟವನ್ನು ಹೆಚ್ಚಿಸಿ, ದೇಹದ ರೋಗನಿರೋಧಕ ಶಕ್ತಿಯಾದ 'ಓಜಸ್ಸನ್ನು' ಕುಂಠಿತಗೊಳಿಸುವ ಸಾಧ್ಯತೆಗಳಿದ್ದು ಮತ್ತು ಉರಿಯೂತವನ್ನು ಹೆಚ್ಚಿಸಿ ಹೃದಯಕ್ಕೆ ಹಾನಿ ಮಾಡುತ್ತದೆ. ದಿನಕ್ಕೆ ಕೇವಲ 10 ನಿಮಿಷಗಳ ಕಾಲ ಮಾಡುವ ಧ್ಯಾನ, ಪ್ರಾಣಾಯಾಮ ಅಥವಾ ದೀರ್ಘ ಉಸಿರಾಟದ ಕ್ರಿಯೆಯು 'ವೇಗಸ್ ನರವನ್ನು' ಉತ್ತೇಜಿ ಸುವ ಮೂಲಕ ನರಮಂಡಲವನ್ನು ಸಮತೋಲನದಲ್ಲಿರಿಸುತ್ತದೆ. ಇಂತಹ ಸಕಾರಾತ್ಮಕ ಚಿಂತನೆಗಳು ಮನಸ್ಸನ್ನು ಸ್ಥಿರಗೊಳಿಸಿ, ಮೆದುಳಿನ ಆರೋಗ್ಯವನ್ನು ವೃದ್ಧಿಸುವುದಲ್ಲದೆ, ದೇಹದ ಒಟ್ಟಾರೆ ಸಮತೋಲನವನ್ನು ಕಾಯ್ದುಕೊಂಡು ಜೀವಿತಾ ವಧಿಯನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ.

ದೈಹಿಕ ಆರೋಗ್ಯದ ನಿರ್ವಹಣೆ: ದೈಹಿಕ ಚಟುವಟಿಕೆಯು ದೀರ್ಘಾಯುಷ್ಯದ ಪ್ರಮುಖ ಅಂಗವಾಗಿದ್ದು, ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ವೇಗದ ನಡಿಗೆ, ಯೋಗ ಅಥವಾ ವ್ಯಾಯಾಮ ಮಾಡುವುದು ರಕ್ತ ಸಂಚಾರವನ್ನು ಸುಧಾರಿಸಿ ಹೃದಯ, ಸ್ನಾಯು ಮತ್ತು ಸಂಧಿಗಳ ಆರೋಗ್ಯವನ್ನು ಕಾಪಾಡುತ್ತದೆ. ಆಯುರ್ವೇದದ ಪ್ರಕಾರ, ದೈಹಿಕ ಪರಿಶ್ರಮ ವಿಲ್ಲದ ಅಸಮರ್ಪಕ ಜೀವನಶೈಲಿಯು ದೇಹದಲ್ಲಿ 'ವಾತ, ಪಿತ್ತ ಮತ್ತು ಕಫದೋಷಗಳನ್ನು ಹೆಚ್ಚಿಸಿ ಸಂಧಿವಾತ, ನರಬಲಹೀನತೆ, ಸ್ಥೂಲತೆ, ಮಧುಮೇಹ, ಹೃದಯದ ತೊಂದರೆ, ರಕ್ತದೊತ್ತಡ ಮತ್ತು ಅಕಾಲಿಕ ಕ್ಷಯಕ್ಕೆ ಕಾರಣವಾಗುತ್ತದೆ. ಆಧುನಿಕ ವೈದ್ಯಕೀಯದ ದೃಷ್ಟಿಯಲ್ಲಿ, ನಿಯಮಿತ ವ್ಯಾಯಾಮವು ನಮ್ಮ ಕ್ರೋಮೋಸೋಮ್‌ಗಳ ತುದಿಯಲ್ಲಿರುವ 'ಟೆಲೋಮಿಯರ್ಸ್' ಉದ್ದವನ್ನು ಕಾಪಾಡುವ ಮೂಲಕ ವಯಸ್ಸಾಗುವ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ ಮತ್ತು ದೇಹಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ.

ಆರೋಗ್ಯಪೂರ್ಣ ದೀರ್ಘಾಯುಷ್ಯ ಎಂದರೆ ಕೇವಲ ಬದುಕಿರುವುದಲ್ಲ, ಅದು ಚೈತನ್ಯ ದೊಂದಿಗೆ ಬದುಕುವುದು. “ಸರ್ವಮನ್ಯತ್ ಪರಿತ್ಯಜ್ಯ ಶರೀರಮನುಪಾಲಯೇತ್” ಎನ್ನುವ ಚರಕಸಂಹಿತೆಯ ಉಕ್ತಿಯಂತೆ ನಮ್ಮ ಶರೀರವನ್ನು ಕಾಪಾಡಿಕೋಳ್ಳುವ ಪ್ರತಿಯೊಂದು ಪಥವನ್ನು ನಾವು ಪಾಲಿಸಬೇಕು. ನಮ್ಮ ದೇಹವು ನಾವು ವಾಸಿಸುವ ಏಕೈಕ ಶಾಶ್ವತ ಮನೆ, ಅದನ್ನು ಇಂದಿನ ನಮ್ಮ ಶಿಸ್ತಿನ ಆಯ್ಕೆಗಳಿಂದ ಸುಂದರವಾಗಿ ಇಟ್ಟುಕೊಳ್ಳ ಬೇಕು. ಆರೋಗ್ಯವು ಆಕಸ್ಮಿಕವಾಗಿ ಸಿಗುವುದಿಲ್ಲ, ಅದು ಪ್ರತಿದಿನ ನಾವು ತೆಗೆದುಕೊಳ್ಳುವ ಜಾಗೃತ ನಿರ್ಧಾರಗಳ ಫಲಿತಾಂಶ. ಸರಿಯಾದ ಆಹಾರ, ನಿದ್ರೆ, ವ್ಯಾಯಾಮ ಮತ್ತು ಮನಃಶಾಂತಿ ಇವೇ ದೀರ್ಘಾಯುಷ್ಯದ ನಿಜವಾದ ಔಷಧಿಗಳು.

ಡಾ. ಯೋಗೀಶ ಆಚಾರ್ಯ

ಸಹ ಪ್ರಾಧ್ಯಾಪಕರು, ಸ್ವಸ್ಥವೃತ್ತ ವಿಭಾಗ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಕುತ್ಪಾಡಿ ಉಡುಪಿ