ಲೇಖಕರು: ಡಾ. ಶ್ರೀಜಾ ಕರಣ್, ಕನ್ಸಲ್ಟೆಂಟ್ – ಫರ್ಟಿಲಿಟಿ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಬರ್ತ್ ರೈಟ್ ಬೈ ರೇನ್ಬೋ ಹಾಸ್ಪಿಟಲ್
ತಾಯ್ತನದ ಕನಸು ಹೊತ್ತು ಹೆಜ್ಜೆ ಇಡುವಾಗ, ಅನೇಕರು ಅಂಡೋತ್ಪತ್ತಿಯ ಸಮಯ, ಹಾರ್ಮೋನ್ ಮಟ್ಟ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಆದರೆ, ಒಬ್ಬ ವೈದ್ಯೆಯಾಗಿ ನಾನು ನನ್ನ ರೋಗಿಗಳಿಗೆ ಆಗಾಗ್ಗೆ ಹೇಳುವ ಒಂದು ಮುಖ್ಯ ವಿಚಾರ ವೆಂದರೆ, ಸಂತಾನೋತ್ಪತ್ತಿ ಆರೋಗ್ಯವು ನಮ್ಮ ಒಟ್ಟಾರೆ ಹೃದಯ ಮತ್ತು ರಕ್ತನಾಳಗಳ ಆರೋಗ್ಯದೊಂದಿಗೆ ಆಳವಾದ ನಂಟನ್ನು ಹೊಂದಿದೆ.
ಫಲವತ್ತತೆ ಚಿಕಿತ್ಸೆಗಳು ಲಕ್ಷಾಂತರ ಕುಟುಂಬಗಳ ಮಗುವಿನ ಕನಸನ್ನು ನನಸು ಮಾಡಿವೆ. ಆದರೂ, ಈ ಚಿಕಿತ್ಸೆಯನ್ನು ಆರಂಭಿಸುವ ಮುನ್ನ ರಕ್ತನಾಳಗಳಿಗೆ ಸಂಬಂಧಿಸಿದ ಅಪಾಯಗಳನ್ನು, ವಿಶೇಷವಾಗಿ ಪಾರ್ಶ್ವವಾಯುವಿನ ಅಪಾಯವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಗರ್ಭಧಾರಣೆಗೆ ಮೊದಲಿನ ಆರೈಕೆಯಲ್ಲಿ ಇದು ಅತ್ಯಂತ ಮಹತ್ವದ ಅಂಶವಾಗಿದ್ದರೂ, ಅನೇಕ ಬಾರಿ ಇದನ್ನು ಕಡೆಗಣಿಸಲಾಗುತ್ತದೆ.
ಮೆದುಳಿನ ಒಂದು ಭಾಗಕ್ಕೆ ರಕ್ತದ ಹರಿವು ಅಡಚಣೆಯಾದಾಗ ಪಾರ್ಶ್ವವಾಯು ಸಂಭವಿಸುತ್ತದೆ. ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿ ಹರಿವು ನಿಂತಾಗ ಬರುವ ಪಾರ್ಶ್ವವಾಯುವನ್ನು 'ಇಸ್ಕೀಮಿಕ್ ಸ್ಟ್ರೋಕ್' ಎಂದೂ, ರಕ್ತನಾಳ ಒಡೆದು ರಕ್ತಸ್ರಾವವಾದಾಗ ಬರುವ ಪಾರ್ಶ್ವವಾಯುವನ್ನು 'ಹೆಮರೇಜಿಕ್ ಸ್ಟ್ರೋಕ್' ಎಂದೂ ಕರೆಯಲಾಗುತ್ತದೆ.
ಇದನ್ನೂ ಓದಿ: Health Tips: ಹಬ್ಬದ ಖಾದ್ಯಗಳ ನೋಡಿ ಸೋಲದಿರಲಿ ಮನಸ್ಸು; ಜೋಪಾನವಾಗಿರಲಿ ಆರೋಗ್ಯ
ಸಹಜ ಗರ್ಭಧಾರಣೆಯ ಸಮಯದಲ್ಲಿ, ಹೆರಿಗೆಯ ಹೊತ್ತಿನಲ್ಲಿ ಅತಿಯಾದ ರಕ್ತಸ್ರಾವವನ್ನು ತಡೆಯಲು ಪ್ರಕೃತಿದತ್ತವಾಗಿ ದೇಹದ ರಕ್ತವು ಬೇಗನೆ ಹೆಪ್ಪುಗಟ್ಟುವ ಗುಣವನ್ನು ಬೆಳೆಸಿಕೊಳ್ಳುತ್ತದೆ. ಇದರಿಂದ ಸಹಜವಾಗಿಯೇ ರಕ್ತ ಹೆಪ್ಪುಗಟ್ಟುವ ಅಪಾಯ ಕೊಂಚ ಹೆಚ್ಚಿರುತ್ತದೆ. ಇದೇ ರೀತಿ, ಇನ್ ವಿಟ್ರೋ ಫರ್ಟಿಲೈಸೇಶನ್ (ಐವಿಎಫ್) ಅಥವಾ 'ಕಂಟ್ರೋಲ್ಡ್ ಓವೇರಿಯನ್ ಹೈಪರ್ ಸ್ಟಿಮ್ಯುಲೇಶನ್'ನಂತಹ ಚಿಕಿತ್ಸೆಗಳಲ್ಲಿ, ಅಂಡಾಣುಗಳ ಬೆಳವಣಿಗೆಯನ್ನು ಉತ್ತೇಜಿಸಲು ಈಸ್ಟ್ರೋಜನ್ನಂತಹ ಹಾರ್ಮೋನ್ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗುತ್ತದೆ. ದೇಹದಲ್ಲಿ ಈಸ್ಟ್ರೋಜನ್ ಮಟ್ಟ ಹೆಚ್ಚಾದಾಗಲೂ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚಾಗುತ್ತದೆ. ಆದ್ದರಿಂದ, ಯಾವುದೇ ಫಲವತ್ತತೆ ಚಿಕಿತ್ಸೆಯನ್ನು ಪ್ರಾರಂಭಿಸುವ ಮೊದಲು, ರೋಗಿಗೆ ಈಗಾಗಲೇ ಇರುವ ರಕ್ತನಾಳಗಳ ಸಮಸ್ಯೆಯನ್ನು ಗುರುತಿಸುವುದು ಅತ್ಯಂತ ಮುಖ್ಯ.
ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸುವ ಕೆಲವು ಪ್ರಮುಖ ಆರೋಗ್ಯ ಸಮಸ್ಯೆಗಳೆಂದರೆ: ದೀರ್ಘಕಾಲದ ಅಧಿಕ ರಕ್ತದೊತ್ತಡ (ಬಿಪಿ), ಅಧಿಕ ಕೊಲೆಸ್ಟ್ರಾಲ್, ಮಧುಮೇಹ, ಕಣ್ಣಿಗೆ ಬೆಳಕಿನ ಮಿಂಚುಗಳು ಕಾಣಿಸಿಕೊಳ್ಳುವಂತಹ ಲಕ್ಷಣಗಳಿರುವ ಮೈಗ್ರೇನ್, ಧೂಮಪಾನ ಮತ್ತು ತಾಯಿಯ ಹೆಚ್ಚಿನ ವಯಸ್ಸು. ಇವುಗಳ ಜೊತೆಗೆ, ರಕ್ತ ಸುಲಭವಾಗಿ ಹೆಪ್ಪುಗಟ್ಟುವಂತೆ ಮಾಡುವ 'ಆಂಟಿ ಫಾಸ್ಫೋಲಿಪಿಡ್ ಸಿಂಡ್ರೋಮ್' ಅಥವಾ 'ಫ್ಯಾಕ್ಟರ್ V ಲೈಡೆನ್'ನಂತಹ ಆನುವಂಶಿಕ ರಕ್ತದ ಸಮಸ್ಯೆಗಳು ಸಹ ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸುತ್ತವೆ.
ಇದರ ಜೊತೆಗೆ, ಈ ಚಿಕಿತ್ಸೆಗೆ ಸಂಬಂಧಿಸಿದ ಮತ್ತೊಂದು ಗಂಭೀರ ಸಮಸ್ಯೆಯೆಂದರೆ ತೀವ್ರವಾದ 'ಓವೇರಿಯನ್ ಹೈಪರ್ಸ್ಟಿಮ್ಯುಲೇಶನ್ ಸಿಂಡ್ರೋಮ್' (Severe OHSS). ಈ ಸ್ಥಿತಿಯಲ್ಲಿ, ರಕ್ತನಾಳಗಳ ಒಳಗಿರುವ ದ್ರವವು ಹೊರಗೆ ಸೋರಿಕೆಯಾಗುತ್ತದೆ. ಇದರಿಂದ ರಕ್ತದಲ್ಲಿನ ದ್ರವದ ಪ್ರಮಾಣ ಕಡಿಮೆಯಾಗಿ, ರಕ್ತವು ಹೆಚ್ಚು ದಪ್ಪವಾಗುತ್ತದೆ. ಈ ಬದಲಾವಣೆಯು ರಕ್ತ ಹೆಪ್ಪುಗಟ್ಟು ವಿಕೆ ಮತ್ತು ತನ್ಮೂಲಕ ಪಾರ್ಶ್ವವಾಯು ಉಂಟಾಗುವ ಅಪಾಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ.
ಚಿಕಿತ್ಸೆಯನ್ನು ಪ್ರಾರಂಭಿಸುವ ಮೊದಲು ಅಥವಾ ಚಿಕಿತ್ಸೆ ನಡೆಯುತ್ತಿರುವಾಗ, ಪಾರ್ಶ್ವ ವಾಯುವಿನ ಆರಂಭಿಕ ಲಕ್ಷಣಗಳನ್ನು ಗುರುತಿಸುವುದು ಅತ್ಯಂತ ಮುಖ್ಯ. ತಕ್ಷಣವೇ ವೈದ್ಯಕೀಯ ನೆರವು ಪಡೆದರೆ ಮೆದುಳಿಗೆ ಆಗುವ ದೀರ್ಘಕಾಲದ ಹಾನಿಯನ್ನು ತಡೆಯಬಹುದು. ಹೀಗಾಗಿ, ಈ ಕೆಳಗಿನ ಲಕ್ಷಣಗಳ ಬಗ್ಗೆ ಎಚ್ಚರವಿರಲಿ:
ಹಠಾತ್ತನೆ ದೇಹದ ಸಮತೋಲನ ಕಳೆದುಕೊಳ್ಳುವುದು.
* ದೃಷ್ಟಿಯಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳುವುದು.
* ಮುಖದ ಒಂದು ಭಾಗ ವಕ್ರವಾಗುವುದು (ಜೋತು ಬೀಳುವುದು).
* ಕೈ-ಕಾಲುಗಳಲ್ಲಿ (ತೋಳಿನಲ್ಲಿ) ದೌರ್ಬಲ್ಯ ಉಂಟಾಗುವುದು.
* ಮಾತನಾಡಲು ತೊಂದರೆಯಾಗುವುದು ಅಥವಾ ತೊದಲುವುದು.
* ಹಠಾತ್ತನೆ ಅಸಹನೀಯವಾದ ತಲೆನೋವು ಕಾಣಿಸಿಕೊಳ್ಳುವುದು.
ಇವುಗಳಲ್ಲಿ ಯಾವುದೇ ಲಕ್ಷಣಗಳು ಕಂಡುಬಂದರೂ, ಅದು ಕೇವಲ ಔಷಧಿಗಳ ಅಡ್ಡಪರಿಣಾಮ ವಿರಬಹುದು ಎಂದು ಭಾವಿಸಿ ನಿರ್ಲಕ್ಷ್ಯ ಮಾಡಬಾರದು.
ಚಿಕಿತ್ಸೆ ಪ್ರಾರಂಭಿಸುವ ಮುನ್ನವೇ ವೈದ್ಯರು ರೋಗಿಯ ಒಟ್ಟಾರೆ ಆರೋಗ್ಯದ ಸಮಗ್ರ ತಪಾಸಣೆ ನಡೆಸುತ್ತಾರೆ. ರೋಗಿಯ ವೈಯಕ್ತಿಕ ಮತ್ತು ಕುಟುಂಬದ ಆರೋಗ್ಯ ಹಿನ್ನೆಲೆ, ರಕ್ತ ಹೆಪ್ಪುಗಟ್ಟು ವಿಕೆಯ ಇತಿಹಾಸ ಮತ್ತು ರಕ್ತದೊತ್ತಡವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಾರೆ. ಅಗತ್ಯವಿದ್ದರೆ, ರಕ್ತವು ಬೇಗನೆ ಹೆಪ್ಪುಗಟ್ಟುವ ಅಪಾಯವನ್ನು ಅಳೆಯಲು ನಿರ್ದಿಷ್ಟ ರಕ್ತ ಪರೀಕ್ಷೆಗಳನ್ನೂ ಸೂಚಿಸುತ್ತಾರೆ. ಈ ವರದಿಗಳ ಆಧಾರದ ಮೇಲೆ, ತಜ್ಞ ವೈದ್ಯರು ಚಿಕಿತ್ಸಾ ವಿಧಾನವನ್ನು ಮಾರ್ಪಾಡು ಮಾಡಬಹುದು. ಉದಾಹರಣೆಗೆ, ಹಾರ್ಮೋನ್ಗಳ ಬಳಕೆಯ ಪ್ರಮಾಣವನ್ನು ಕಡಿಮೆ ಮಾಡಬಹುದು ಅಥವಾ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಕಡಿಮೆ ಪ್ರಮಾಣದ ಆಸ್ಪಿರಿನ್ ಅಥವಾ ಹೆಪಾರಿನ್ನಂತಹ ಔಷಧಿಗಳನ್ನು ನೀಡಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಗರ್ಭಧಾರಣೆಗೆ ಮುನ್ನ ಈ ರೀತಿಯ ಕಟ್ಟುನಿಟ್ಟಿನ ಆರೋಗ್ಯ ತಪಾಸಣೆ ನಡೆಸುವ ಉದ್ದೇಶವು, ಫಲವತ್ತತೆ ಚಿಕಿತ್ಸೆ ಪಡೆಯುವವರನ್ನು ನಿರುತ್ಸಾಹಗೊಳಿಸಲು ಅಥವಾ ಹೆದರಿಸುವುದಕ್ಕಾಗಿ ಅಲ್ಲ. ಬದಲಾಗಿ, ಅವರಿಗೆ ಅತ್ಯಂತ ಸುರಕ್ಷಿತವಾದ ಚಿಕಿತ್ಸೆಯನ್ನು ನೀಡುವುದಾಗಿದೆ. ಇದು ಕೇವಲ ನಿಮ್ಮ ಇಂದಿನ ಆರೋಗ್ಯವನ್ನಷ್ಟೇ ಅಲ್ಲದೆ, ಭವಿಷ್ಯದ ನಿಮ್ಮ ಕುಟುಂಬದ ಆರೋಗ್ಯ ಮತ್ತು ಸುರಕ್ಷತೆಯನ್ನೂ ಕಾಪಾಡುತ್ತದೆ.