ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Health Tips: ಹಬ್ಬದ ಖಾದ್ಯಗಳ ನೋಡಿ ಸೋಲದಿರಲಿ ಮನಸ್ಸು; ಜೋಪಾನವಾಗಿರಲಿ ಆರೋಗ್ಯ

Health Tips: ಉಳಿದ ದಿನಗಳಲ್ಲಿ ಆಹಾರದಲ್ಲಿ ಎಷ್ಟೇ ಶಿಸ್ತು ಪಾಲಿಸಿದರೂ ಸಾಲು ಸಾಲು ಹಬ್ಬಗಳು ಬಂದಾಗ ಬಗೆ ಬಗೆಯ ಖಾದ್ಯಗಳನ್ನು ನೋಡಿ ಡಯಟ್ ಪ್ಲ್ಯಾನ್ ಮರೆತೇ ಹೋಗುತ್ತದೆ. ಹೀಗಾಗಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಅಂತಹ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಆರೋಗ್ಯ ಕಾಳಜಿ ವಹಿಸಬೇಕು ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ಹಬ್ಬಗಳ ಸಾಲಿನಲ್ಲಿ ಜೀರ್ಣಾಂಗಗಳ ಕಾಳಜಿ ಹೇಗೆ?

ಸಂಗ್ರಹ ಚಿತ್ರ -

ಬೆಂಗಳೂರು: ಹಬ್ಬಗಳ ಸಾಲಿನಲ್ಲಿ (festival season) ದೇವರ ಪೂಜೆಯಷ್ಟೇ ಮುಖ್ಯವಾದ್ದು ಹೊಟ್ಟೆ ಪೂಜೆ. ಸಂಪ್ರದಾಯ, ಪದ್ಧತಿ, ಆಚರಣೆ ಮುಂತಾದ ಹಲವು ಹೆಸರುಗಳಲ್ಲಿ ದೇವರ ಮುಂದೆ ಥರಾವರಿ ಭಕ್ಷ್ಯಗಳ ನೈವೇದ್ಯ ಇರಿಸಿದ ಮೇಲೆ ಅದಷ್ಟೂ ಪ್ರಸಾದವನ್ನು ನಾವೇ ತಿನ್ನಬೇಡವೇ? ಪೂಜೆಯಾದ ಮೇಲೆ ದೇವರಲ್ಲೇನೂ ವ್ಯತ್ಯಾಸ ಆಗುವುದಿಲ್ಲ, ಆದರೆ ಹೊಟ್ಟೆ? ಅಜೀರ್ಣ, ಆಸಿಡಿಟಿ, ಹೊಟ್ಟೆಯುಬ್ಬರ, ಎದೆಯುರಿ, ಹುಳಿತೇಗು, ಎಲ್ಲಾ ಪೂಜೆಗಳೂ ಸಾಕು ಎಂಬಷ್ಟಾಗುತ್ತದೆ. ಈ ಹಬ್ಬಗಳ ಸಾಲು ಮುಗಿದ ಮೇಲೂ ಈ ಅವಸ್ಥೆ ಮುಂದುವರಿದರೇನು ಮಾಡುವುದು? ಒಮ್ಮೆ ಮಾಯವಾದ ಸಮಸ್ಯೆ ತಿರುಗಿ ಬಂದರೆ? ಹಬ್ಬಗಳ ಭರಾಟೆಯಲ್ಲಿ ಜೀರ್ಣಾಂಗಗಳ ಆರೋಗ್ಯ (Digestive Health) ರಕ್ಷಣೆಗೆ (festival season diet) ಏನು ಮಾಡಬೇಕು?

ಹಬ್ಬ ಮುಗಿದರೂ ನಮ್ಮ ಬದುಕಿನ ಒತ್ತಡಗಳು ಮುಗಿಯುವುದಿಲ್ಲ. ಬೆಳಗಿನ ತಿಂಡಿಗೆ ಸಮಯವಿಲ್ಲ; ಮಧ್ಯಾಹ್ನಕ್ಕೆ ತಿಂದಿದ್ದು ಸುಖವಿಲ್ಲ; ರಾತ್ರಿಯ ಊಟ ತಡವಾಯಿತು; ಆಫೀಸಿನಲ್ಲಿ ತಲೆಬಿಸಿ ಮುಗಿಯುವುದಿಲ್ಲ- ಇಂಥವೆಲ್ಲ ಹಬ್ಬದ ನಂತರವೂ ಇದ್ದೇ ಇರುತ್ತವಲ್ಲ. ಹಾಗಾಗಿ ಬದುಕಿನ ಏರುಪೇರುಗಳೆಲ್ಲ ನೇರವಾಗಿ ಪರಿಣಾಮ ಬೀರುವುದು ನಮ್ಮ ಜೀರ್ಣಾಂಗಗಳ ಮೇಲೆ. ಹೊಟ್ಟೆ ಹದಗೆಟ್ಟರೆ ಬದುಕೂ ಹದಗೆಡುವುದು ಈ ಕಾರಣಕ್ಕೆ. ಆಸಿಡಿಟಿಯ ಮಾತ್ರೆಗಳೆಲ್ಲ ತಾತ್ಕಾಲಿಕವಾಗಿ ಪರಿಹಾರ ನೀಡುತ್ತವೆಯೇ ಹೊರತು, ಸಮಸ್ಯೆಯನ್ನು ನಿವಾರಿಸುವುದಿಲ್ಲ. ಇದಕ್ಕೇನು ಪರಿಹಾರ?

Health Tips: ಬೆಳೆಯುವ ಮಕ್ಕಳ ಮೂಳೆಗಳ ಆರೈಕೆ ಹೇಗೆ?

ಏಕೆ ಮುಖ್ಯ?

ನಮ್ಮ ಜೀರ್ಣಾಂಗಗಳ ಆರೋಗ್ಯ ಏಕೆ ಮುಖ್ಯ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳೋಣ. ತಿಂದಿದ್ದನ್ನು ಚೂರ್ಣಿಸುವುದು ಮಾತ್ರವೇ ಈ ಅಂಗಗಳ ಕೆಲಸವಲ್ಲ, ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿ, ಮೆದುಳಿನ ಆರೋಗ್ಯ ರಕ್ಷಿಸಿ, ಚೋದಕಗಳ ಕೆಲಸವನ್ನು ಸರಿಯಾಗಿರಿಸಿ, ನಮ್ಮ ಚಯಾಪಚಯವನ್ನು ಚುರುಕಾಗಿಸುವವರೆಗೆ ಬಹಳಷ್ಟು ಕೆಲಸಗಳಿಗೆ ನಮ್ಮ ಜೀರ್ಣಾಂಗಗಳ ಪಾಲಿಗೆ. ಹಾಗಾಗಿ ನಾವೇನು ತಿನ್ನುತ್ತೇವೆ ಎನ್ನುವುದು ಬಹಳ ಮುಖ್ಯವಾಗುತ್ತದೆ.

ಆಹಾರ

ಹಬ್ಬಗಳ ಹೆಸರಿನಲ್ಲಿ ಬೇಕಾಬಿಟ್ಟಿ ತಿನ್ನುವಾಗಲೂ, ಆಹಾರದಲ್ಲಿ ಸಾಕಷ್ಟು ನಾರು-ನೀರು ಇರುವಂತೆ ನೋಡಿಕೊಳ್ಳಿ. ಇದರಿಂದ ತಿಂದಿದ್ದು ಜೀರ್ಣವಾಗಿ, ಖಾಲಿಯೂ ಆಗುತ್ತದೆ. ಇದಕ್ಕಾಗಿ ಸಾಕಷ್ಟು ಹಣ್ಣು-ತರಕಾರಿಗಳು, ಇಡೀ ಧಾನ್ಯಗಳು, ಕಾಯಿ-ಬೀಜಗಳಿರಲಿ ಆಹಾರದಲ್ಲಿ. ಬರೀ ಸಿಹಿ ಮತ್ತು ಕರಿದ ತಿಂಡಿಗಳು ಜೀರ್ಣಾಂಗದ ಸಮತೋಲನವನ್ನು ಹಾಳು ಮಾಡಬಲ್ಲವು.

ತಿನ್ನುವ ಸಮಯ

ದಿನವಿಡೀ ಉಪವಾಸ ಮಾಡಿ, ರಾತ್ರಿ ಭೂರಿ ಭೋಜನ ಮಾಡಿದರೆ, ಅದನ್ನು ನಮ್ಮ ಜೀರ್ಣಾಂಗಗಳು ಇಷ್ಟ ಪಡುವುದಿಲ್ಲ. ಆಸಿಡಿಟಿ ಮತ್ತು ಅಜೀರ್ಣ ಗಂಟಿಕ್ಕಿಕೊಳ್ಳುತ್ತದೆ. ಒಂದೊಮ್ಮೆ ದಿನವಿಡೀ ಉಪವಾಸ ಮಾಡಿದರೆ, ರಾತ್ರಿ ಊಟ ಪೂರ್ಣ ಸಾತ್ವಿಕ ಮತ್ತು ಸತ್ವಯುತವಾಗಿರಲಿ. ಅದನ್ನೂ ತೀರಾ ತಡವಾಗಿ ತಿನ್ನಬೇಡಿ, ಸೂರ್ಯಾಸ್ತದ ಸಮಯಕ್ಕೆ ತಿನ್ನಿ. ಆಗ ತಿಂದಿದ್ದು ಪಚನವಾಗಲು ಅವಕಾಶ ಆಗುತ್ತದೆ. ದಿನವಿಡೀ ಸಾಕಷ್ಟು ನೀರು ಕುಡಿಯಿರಿ.

ವೈದ್ಯರಾಗಬೇಡಿ

ನಿಮ್ಮ ಆರೋಗ್ಯದ ವೈದ್ಯರು ನೀವೇ ಎಂದು ಭಾವಿಸಿದ್ದರೆ ಅದನ್ನು ತಿದ್ದಿಕೊಳ್ಳುವ ಸಮಯವಿದು. ಯಾವ ರೋಗಕ್ಕೆ ಯಾವ ಮದ್ದು ಎಂಬುದನ್ನು ನೀವೇ ನಿರ್ಧರಿಸಿ ಮಾತ್ರೆ ನುಂಗುವ ಬದಲು, ನಿಮ್ಮ ಭರವಸೆಯ ವೈದ್ಯರನ್ನೊಮ್ಮೆ ಕಾಣಿ. ಸಿಕ್ಕಾಪಟ್ಟೆ ಆಸಿಡಿಟಿಯ ಮಾತ್ರೆಗಳನ್ನು ನುಂಗುವುದು, ಪ್ರತಿಜೈವಿಕಗಳನ್ನು ಸೇವಿಸುವುದು- ಇಂಥವೆಲ್ಲ ಇನ್ನಷ್ಟು ಸಮಸ್ಯೆಗಳಿಗೆ ರಹದಾರಿ ಕಲ್ಪಿಸಬಲ್ಲವು.

Skincare Tips: ನಿಮ್ಮದು ಕೊಂಚ ಬಿಸಿಲಿಗೂ ಕೆಂಪಗಾಗುವ ಸೂಕ್ಷ್ಮ ಚರ್ಮವೇ? ಇದರ ಆರೈಕೆ ತಿಳಿದಿರಲಿ

ಡಿಟಾಕ್ಸ್‌ ಬೇಕೇ?

ಹಬ್ಬದ ನಂತರ ಡಿಟಾಕ್ಸ್‌ ಪೇಯಗಳು, ತಿನಿಸುಗಳ ಭರಾಟೆ ಆರಂಭವಾಗುತ್ತದೆ. ಇವೆಲ್ಲಾ ನಿಜಕ್ಕೂ ಬೇಕೇ? ಆರೋಗ್ಯ ಪರಿಣಿತರ ಪ್ರಕಾರ, ಅಂಥ ಯಾವ ಸರ್ಕಸ್ಸುಗಳ ಅಗತ್ಯವಿಲ್ಲ. ಇದಕ್ಕಾಗಿ ದುಬಾರಿ ಬೆಲೆಯ ಬಾಟಲಿಗಳು, ಮಾತ್ರೆಗಳನ್ನು ತಂದು ನುಂಗುವ ಅವಶ್ಯಕತೆಯಿಲ್ಲ. ಬದಲಿಗೆ, ಆಹಾರದಲ್ಲಿ ಸಾಕಷ್ಟು ನಾರು, ನೀರು ಇರುವಂತೆ ನೋಡಿಕೊಳ್ಳಿ. ನಿದ್ದೆ, ವ್ಯಾಯಾಮಕ್ಕೆ ಕೊರತೆ ಮಾಡಬೇಡಿ. ಒತ್ತಡ ಕಡಿಮೆ ಮಾಡುವ ಮಾರ್ಗಗಳನ್ನು ಕಂಡುಕೊಳ್ಳಿ. ಬದುಕಿಗೆ ಇದಕ್ಕಿಂತ ದೊಡ್ಡ ಡಿಟಾಕ್ಸ್‌ ಬೇರೊಂದಿಲ್ಲ.