ಬೆಂಗಳೂರು: ಉದ್ಯೋಗಕ್ಕಾಗಿ ದಿನವೂ ಹತ್ತಾರು ಕಿ.ಮೀ. ದೂರ ಅಥವಾ ಗಂಟೆಗಟ್ಟಲೆ ಪ್ರಯಾಣಿಸುವುದು ನಗರ ಜೀವನದ ಬೇರ್ಪಡಿಸಲಾಗದ ಭಾಗ. ಹತ್ತಿಪ್ಪತ್ತು ನಿಮಿಷಗಳಲ್ಲಿ ನಿಮ್ಮ ಕೆಲಸದ ಸ್ಥಳವನ್ನು ತಲುಪುತ್ತೀರಿ ಎಂದಾದರೆ ನಿಮ್ಮಷ್ಟು ಭಾಗ್ಯವಂತರು ಇನ್ನೊಬ್ಬರಿಲ್ಲ. ಆದರೆ ಎಲ್ಲರಿಗೂ ಈ ಸೌಲಭ್ಯ ದೊರೆಯಬೇಕಲ್ಲ. ಬೈಕ್, ಕಾರ್, ಬಸ್, ಆಟೋ, ರೈಲು, ಮೆಟ್ರೊ- ಹೀಗೆ ಬದುಕುತ್ತಿರುವ (Health Tips) ಶಹರ ದೊಡ್ಡದಾದಷ್ಟೂ ಪ್ರಯಾಣ ಕಠಿಣ ಮತ್ತು ಉದ್ದವಾಗುವ ಸಾಧ್ಯತೆ ಅಧಿಕ. ಬೆನ್ನಲ್ಲೊಂದು ಲ್ಯಾಪ್‌ಟಾಪ್, ಕೈಯಲ್ಲೊಂದು ಊಟದ ಬ್ಯಾಗು ಅಥವಾ ಇನ್ನೇನೊ ಚೀಲ ಹಿಡಿದುಕೊಂಡು ಸಿಕ್ಕಲ್ಲಿ ಕುಳಿತುಕೊಂಡು, ಸಿಗದಿದ್ದರೆ ನಿಂತುಕೊಂಡು, ನೇತಾಡಿಕೊಂಡು ಓಡಾಡುವುದು ಮಾಮೂಲಿ ದಿನಚರಿ. ಆದರೆ ಇದರಿಂದ ನಮ್ಮ ಬೆನ್ನು, ಕುತ್ತಿಗೆ, ಸೊಂಟ ಮತ್ತು ಮೊಣಕಾಲುಗಳ ಆರೋಗ್ಯದ ಗತಿಯೇನು?
ಕೇವಲ ದಿನವೂ ಪ್ರಯಾಣ ಮಾಡಿದ್ದಕ್ಕೆ ಬೆನ್ನು, ಕುತ್ತಿಗೆಗಳು ಜಖಂ ಆಗುವುದಿಲ್ಲ. ಪ್ರಯಾಣಿ ಸುವಾಗಿನ ಅವೈಜ್ಞಾನಿಕ ಭಂಗಿಗಳು, ಕೆಟ್ಟ ರಸ್ತೆಗಳ ಕೃಪೆಯಿಂದಾಗುವ ಓಲಾಟಗಳು, ಭಾರದ ಬ್ಯಾಗುಗಳು, ಪ್ರಯಾಣವು ತಂದಿಡುವ ಮಾನಸಿಕ ಒತ್ತಡ- ಇಂಥ ಹತ್ತಾರು ಕಾರಣಗಳಿಂದ ಸಂದು ಮತ್ತು ಸ್ನಾಯುಗಳು ಮುಷ್ಕರ ಹೂಡಲಾರಂಭಿಸುತ್ತವೆ. ದಿನಕ್ಕೆ 50 ನಿಮಿಷಗಳಿಗಿಂತ ಹೆಚ್ಚು ಸಮಯ ಪ್ರಯಾಣಿಸುತ್ತೀರಿ ಎಂದಾದರೆ ದೇಹದ ಸ್ನಾಯು-ಕೀಲುಗಳ ಮೇಲೆ ಅಧಿಕ ಒತ್ತಡ ಬೀಳುವುದು ನಿಶ್ಚಿತ. ಇಂಥ ಪರಿಸ್ಥಿತಿಯಿಂದ ದೂರ ಇರುವುದಕ್ಕೆ ಕೆಲವು ಮುನ್ನೆಚ್ಚರಿಕೆಗಳು ನಮಗೆ ನೆರವಾಗಬಹುದು. ಏನವು?
ಭಾರ ಬೇಡ: ದಿನವೂ ಪ್ರಯಾಣ ಮಾಡುವವರು ನೀವಾದರೆ, ಲ್ಯಾಪ್‌ಟಾಪ್ ಬ್ಯಾಗು ಅಥವಾ ಇನ್ನಾವುದೇ ಚೀಲಗಳನ್ನು ಭಾರ ಮಾಡಿಕೊಳ್ಳಬೇಡಿ. ನಿಮ್ಮ ಹೆಗಲಿಗೆ ಚೀಲಗಳನ್ನು ಯಾವುದೇ ರೀತಿಯಲ್ಲಿ ಹಾಕಿಕೊಂಡರೂ ನಿತ್ಯವೂ ಒಂದೇ ರೀತಿಯಲ್ಲಿ ಭಾರ ಬೀಳುವ ಭಾಗಗಳು ಹೆಚ್ಚು ಹಾನಿಗೆ ಒಳಗಾಗುತ್ತವೆ. ಬ್ಯಾಕ್‌ಪ್ಯಾಕ್ ಉಪಯೋಗಿಸುವಿರಾದರೆ, ಎರಡೂ ಭುಜಗಳಿಗೆ ದೃಢವಾಗಿ ಹಾಕಿಕೊಳ್ಳಿ. ಒಂದೇ ಭುಜಕ್ಕೆ ತಗುಲಿಸಿಕೊಳ್ಳುವುದು, ಹೆಗಲಿಗೆ ನೇತಾಡಿಸುವುದು- ಇಂಥವೆಲ್ಲ ಸಮಸ್ಯೆಯನ್ನು ದ್ವಿಗುಣಗೊಳಿಸುತ್ತವೆ.
ಕುಡಿಯುವ ನೀರಿನಿಂದಲೇ ಶುಗರ್ ಬರುತ್ತಾ? ಏನಂತಾರೆ ತಜ್ಞರು ?
ದ್ವಿಚಕ್ರಿಗಳೇ?: ದಿನವೂ ಗಂಟೆಗಟ್ಟಲೆ ದ್ವಿಚಕ್ರ ವಾಹನ ಚಲಾಯಿಸುವವರೇ ನೀವು? ಬೇರೆ ಆಯ್ಕೆಗಳಿವೆಯೇ ನೋಡಿ. ಧಾವಂತದ ಬದುಕಿನಲ್ಲಿ, ಹುಚ್ಚುಗಟ್ಟಿಸುವ ಟ್ರಾಫಿಕ್‌ನಲ್ಲಿ ಬೈಕ್ ಓಡಿಸುವುದೇ ಜಾಣತನ ಎನಿಸಿದರೆ ಸಹಜ. ಆದರೆ ನಿಮ್ಮ ಎತ್ತರಕ್ಕೆ ನಿಮ್ಮ ಬೈಕ್ ಹೊಂದುತ್ತಿಲ್ಲ, ರಸ್ತೆಗಳು ಗುಂಡಿಯಿಂದ ಕೂಡಿದ್ದರೆ, ಟ್ರಾಫಿಕ್‌ನಲ್ಲಿ ಸಾವಿರಾರು ಬಾರಿ ಕ್ಲಚ್, ಬ್ರೇಕ್ ಒತ್ತುತ್ತಲೇ ಇರಬೇಕು- ಇಂಥವೆಲ್ಲ ಅವಸ್ಥೆಗಳು ಕೆಲವೇ ವರ್ಷಗಳಲ್ಲಿ ಬೆನ್ನಿನ ಆರೋಗ್ಯವನ್ನು ಪಾತಾಳಕ್ಕೆ ಇಳಿಸಬಲ್ಲವು.
ಹೇಗೆ ಪ್ರಯಾಣಿಸುತ್ತೀರಿ?: ನಿಮಗೆ ದಿನವೂ ಕ್ಯಾಬ್ ಅಗತ್ಯವೇ? ಬಸ್ಸಲ್ಲಿ ಓಡಾಡುವವರೇ? ಒಂದೇ ರೀತಿಯಲ್ಲದೆ ಹಲವು ಬಗೆಯಲ್ಲಿ ಪ್ರಯಾಣಿಸುವವರೇ? ಹಾಗಿದ್ದರೆ ಬಸ್ಸು, ಕಾರುಗಳಲ್ಲಿ ಹಿಂದಿನ ಸೀಟುಗಳ ಬದಲಿಗೆ ಮುಂದೆ ಕುಳಿತುಕೊಳ್ಳಲು ಸಾಧ್ಯವೇ ಪ್ರಯತ್ನಿಸಿ. ಹಿಂದಿನ ಸೀಟುಗಳಲ್ಲಿ ರಸ್ತೆಯ ಕಂಪನ ಅನುಭವಕ್ಕೆ ಬರುವುದು ಹೆಚ್ಚು. ದೇಹದ ಮೇಲೆ ಅದರ ಪರಿಣಾಮವೂ ಅಧಿಕ. ನೀವೇ ಕಾರು ಓಡಿಸುವವರಾದರೆ, ನಿಮ್ಮ ಆಸನದ ಭಂಗಿಯನ್ನು ಸಮರ್ಪಕವಾಗಿ ಇರಿಸಿಕೊಳ್ಳಿ.
ಮೆಟ್ರೋ ಇದೆಯೇ?: ನಿಮ್ಮ ಪ್ರಯಾಣದ ಹೆಚ್ಚಿನ ಭಾಗವನ್ನು ಮೆಟ್ರೋ ಅಥವಾ ರೈಲು ಪ್ರಯಾಣದಲ್ಲಿ ಕಳೆಯಬಹುದು ಎಂದಾದರೆ, ನಿಶ್ಚಿತವಾಗಿ ಅದನ್ನೇ ಆಯ್ದುಕೊಳ್ಳಿ. ಯಾವುದೇ ಹಳ್ಳ-ಕಾಲುವೆ-ಗುಂಡಿ-ತಿಟ್ಟುಗಳ ಗೋಜಿಲ್ಲದಂತೆ, ಕ್ಷಣಕ್ಕೊಮ್ಮೆ ಬ್ರೇಕ್ ಹಾಕಿ ನಿಲ್ಲಿಸದಂತೆ, ಅರ್ಧ ತಾಸಿನ ಹಾದಿ ಕ್ರಮಿಸಲು ಮೂರು ತಾಸಾಗದಂತೆ ಸುರಕ್ಷಿತವಾಗಿ ಕ್ರಮಿಸುವ ಮಾರ್ಗಗಳಿವು. ದೇಹದ ಮೇಲೂ ಕಡಿಮೆ ಒತ್ತಡ ಬೀಳುವಂಥ ಸಾರಿಗೆಯಿದು. ಆದರೆ ಇದರಲ್ಲೂ ನಿಂತು ನೇತಾಡುವುದು, ಬ್ಯಾಗುಗಳನ್ನು ತೂಗಾಡಿಸಿಕೊಳ್ಳುವುದು, ಒಂದೇ ಕಾಲಿನ ಮೇಲೆ ಭಾರ ಬಿಟ್ಟು ನಿಲ್ಲುವುದು- ಇಂಥ ಅಭ್ಯಾಸಗಳು ದೇಹಕ್ಕೆ ಹಾನಿ ಮಾಡುತ್ತವೆ ಎಂಬುದು ನೆನಪಿರಲಿ.