ಬೆಂಗಳೂರು, ಡಿ. 24: ಇತ್ತೀಚಿನ ದಿನದಲ್ಲಿ ಬದಲಾದ ಜೀವನ ಶೈಲಿಯು ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಪೋಷಕಾಂಶಯುಕ್ತ ಆಹಾರ ಸೇವಿಸದಿರುವುದು, ಒತ್ತಡದ ಕೆಲಸ, ನಿದ್ರೆ ಬಿಡುವುದು ಹೀಗೆ ಅನೇಕ ಕಾರಣದಿಂದ ದೇಹದ ಆರೋಗ್ಯ ಸ್ಥಿತಿ ಹದಗೆಡುತ್ತದೆ. ದೇಹದ ಒಳಗೆ ಉತ್ತಮ ಹಾರ್ಮೋನ್‌ಗಳು ಉತ್ಪತ್ತಿಯಾಗಬೇಕು ಎಂದರೆ ಸರಿಯಾದ ಆಹಾರಾಭ್ಯಾಸ ಬಹಳ ಮುಖ್ಯ. ಆಹಾರ ಸೇವನೆಯ ಸರಿಯಾದ ಕ್ರಮದಿಂದ ಈ ಹಾರ್ಮೋನ್‌ಗಳು ಕ್ರಿಯಾಶೀಲವಾಗುತ್ತದೆ ಎಂದು ವಿಶ್ವವಾಣಿ ಹೆಲ್ತ್ ಚಾನೆಲ್‌ನಲ್ಲಿ ಡಾ. ಮಾಲಿನಿ ಎಸ್. ಸುತ್ತೂರು (Dr. Malini S. Sutur) ತಿಳಿಸಿದ್ದಾರೆ. ದೇಹದ ಒಳಗಡೆ ಕೋಟಿ ಕೋಟಿ ಬ್ಯಾಕ್ಟೀರಿಯಾಗಳಿದ್ದು, ಕೆಲವು ದೇಹದ ಆರೋಗ್ಯಕ್ಕೆ ಪೂರಕವಾಗಿದ್ದರೆ ಇನ್ನು ಕೆಲವು ದೇಹದ ಒಳಗೆ ಸೋಂಕು, ಕಾಯಿಲೆಗಳಿಗೆ ಕಾರಣವಾಗುತ್ತವೆ. ಹೀಗಾಗಿ ನಮ್ಮ ಆಹಾರ ಕ್ರಮದ ಬಗ್ಗೆ ನಿಗಾ ವಹಿಸುವುದು ಮುಖ್ಯ ಎಂದು ಅವರು ಸಲಹೆ ನೀಡಿದ್ದಾರೆ.
ದೇಹದಲ್ಲಿ ಉತ್ತಮ ಬ್ಯಾಕ್ಟೀರಿಯಾ ಮತ್ತು ದೇಹಕ್ಕೆ ಹಾನಿಯಾಗುವ ಬ್ಯಾಕ್ಟೀರಿಯಾ ನಡುವೆ ಪ್ರತೀ ಪೋಷಕಾಂಶಗಳಿಗೂ ಪ್ರತಿಸ್ಪಂದಿಸುವ ಗುಣ ಇರುತ್ತದೆ. ನಮ್ಮ ದೇಹದಲ್ಲಿ ಗುಡ್ ಬ್ಯಾಕ್ಟೀರಿಯಾ ಸಂಖ್ಯೆ ಹೆಚ್ಚಾದಂತೆ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಯಾವಾಗ ದೇಹದೊಳಗೆ ಕೆಟ್ಟ ಬ್ಯಾಕ್ಟೀರಿಯಾ ಸಂಖ್ಯೆ ಹೆಚ್ಚಾಗುತ್ತದೋ ಆವಾಗ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಉತ್ತಮ ಬ್ಯಾಕ್ಟೀರಿಯಾ ಹೆಚ್ಚಾಗಲು ನಾವು ಗಮನ ಹರಿಸಬೇಕಾಗುತ್ತದೆ. ಇದರಿಂದ ಆರೋಗ್ಯಯುತ ಜೀವನ ಶೈಲಿ ನಮ್ಮದಾಗಲಿದೆ ಎಂದು ಅವರು ಹೇಳಿದ್ದಾರೆ.
ವಿಡಿಯೊ ನೋಡಿ:
ದೇಹದಲ್ಲಿ ಉತ್ತಮ ಬ್ಯಾಕ್ಟೀರಿಯಾ ಸಂಖ್ಯೆ ಹೆಚ್ಚಾಗಲು ಪ್ರೋ ಬಯಾಟಿಕ್ಸ್ ಆಹಾರ ಸೇವಿಸಬೇಕು. ಪ್ರೋ ಬಯಾಟಿಕ್ಸ್ ಆಹಾರದಲ್ಲಿ ಮಜ್ಜಿಗೆ, ಮೊಸರು, ಇಡ್ಲಿ, ದೋಸೆ, ಉಪ್ಪಿನಕಾಯಿ, ದೋಕ್ಲಾ, ರಾಗಿ ಗಂಜಿ, ಮೊಸರನ್ನ ಇವುಗಳನ್ನು ಹೆಚ್ಚಾಗಿ ಸೇವಿಸಬೇಕು. ಇದರಿಂದ ದೇಹದಲ್ಲಿ ಸರೊಟಮಿನ್ ಎಂಬ ಗುಡ್ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಜತೆಗೆ ದೇಹದಲ್ಲಿ ಉತ್ತಮ ಬ್ಯಾಕ್ಟೀರಿಯಾ ಪ್ರಮಾಣ ಅಧಿಕವಾಗಲಿದೆ ಎಂದು ಅವರು ಸಲಹೆ ನೀಡಿದ್ದಾರೆ.
ಖಾಸಗಿ ಅಂಗಗಳ ಕೂದಲು ತೆಗೆಯಬಹುದೇ? ತಜ್ಞರು ಹೇಳುವುದೇನು?
ನಮ್ಮ ಆಹಾರದ ಕ್ರಮವು ನಮ್ಮ ವರ್ತನೆ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ. ದೊಡ್ಡ ದೊಡ್ಡ ಮೀಟಿಂಗ್ ಇರುವಾಗ, ಪರೀಕ್ಷೆ ಸಂದರ್ಭದಲ್ಲಿ ಪ್ರೋ ಬಯಾಟಿಕ್ಸ್‌ಯುಕ್ತ ಆಹಾರ ಸೇವಿಸುದರಿಂದ ಮನಸ್ಸು ಕಾಮ್ ಆಗಿ ಇರಲಿದೆ. ನಿಮ್ಮ ವರ್ತನೆ ಶಾಂತವಾಗಿರುತ್ತದೆ. ಜಾಸ್ತಿ ಖಾರ ಸೇವಿಸುವವರು, ಮಸಾಲೆಯುಕ್ತ ಆಹಾರವನ್ನು ಅತಿಯಾಗಿ ಸೇವಿಸುವವರಿಗೆ ಕೋಪ ಜಾಸ್ತಿ ಎಂದು ಅವರು ತಿಳಿಸಿದ್ದಾರೆ.
ಮಾಂಸಾಹಾರ ಸೇವಿಸುವುದು ಉತ್ತಮವೇ. ಅದರಿಂದ ಪ್ರೋಟಿನ್, ನ್ಯೂಟ್ರಿಶಿಯನ್ ಸಹ ಸಿಗುತ್ತದೆ. ಆದರೆ ಬೆಳಗ್ಗೆ, ಮಧ್ಯಾಹ್ನ ಸಂಜೆ ಎಲ್ಲ ಕಾಲಕ್ಕೂ ಅತಿಯಾಗಿ ಮಾಂಸಾಹಾರ ಸೇವಿಸುವುದು ಅಷ್ಟು ಉತ್ತಮವಲ್ಲ. ಇದರಿಂದ ಅಜೀರ್ಣ, ಆ್ಯಸಿಡಿಟಿ ಸಮಸ್ಯೆ ಕಂಡುಬರುವ ಸಾಧ್ಯತೆ ಇದೆ. ಹೀಗಾಗಿ ನಿಯಮಿತವಾಗಿ ಮಜ್ಜಿಗೆ, ಮೊಸರನ್ನ ಇತ್ಯಾದಿ ಪ್ರೋ ಬಯೋಟಿಕ್ ಆಹಾರ ಸೇವಿಸುವುದನ್ನು ರೂಢಿಸಬೇಕು. ಇದರಿಂದ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ ಎಂದು ಡಾ. ಮಾಲಿನಿ ಸಲಹೆ ನೀಡಿದ್ದಾರೆ.