ನಾಯಿ ಕಡಿತಕ್ಕೆ ಪ್ರಥಮ ಚಿಕಿತ್ಸೆ: ರೇಬೀಸ್ ತಡೆಗಟ್ಟಲು ಈ ಮಾರ್ಗಸೂಚಿ ಪಾಲಿಸಿ
First Aid For Dog Bites: ನಾಯಿಯಿಂದ ಕಚ್ಚಿಸಿಕೊಂಡರೆ ರೇಬೀಸ್ ಬರುತ್ತದೆ ಎನ್ನುವುದು ನಮಗೆಲ್ಲ ತಿಳಿದೇ ಇದೆ. ನಾಯಿ ಕಚ್ಚಿದರೆ ಅಥವಾ ಉಗುರಿನಿಂದ ಗೀರಿದರೆ ರೇಬೀಸ್ ಬರುವ ಅಪಾಯ ಹೆಚ್ಚು. ಅದಕ್ಕೆ ರೇಬೀಸ್ ನಿರೋಧಕ ಲಸಿಕೆ ತೆಗೆದುಕೊಳ್ಳಬೇಕು ಎಂದು ತಜ್ಞರು ಸೂಚಿಸಿಸುತ್ತಾರೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಜ. 6: ಕಳೆದ ಕೆಲವು ವರ್ಷಗಳಲ್ಲಿ ಭಾರತದಾದ್ಯಂತ ನಾಯಿ ಕಡಿತ (Dog bite) ಪ್ರಕರಣದಲ್ಲಿ ಗಣನೀಯವಾಗಿ ಹೆಚ್ಚಳವಾಗಿವೆ. ವಿಶೇಷವಾಗಿ ಬೀದಿ ನಾಯಿಗಳಿಂದ ಈ ಸಮಸ್ಯೆ ಹೆಚ್ಚಾಗುತ್ತಿದ್ದು, ಇದೊಂದು ದೊಡ್ಡ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. 2024ರಲ್ಲಿ 37 ಲಕ್ಷಕ್ಕೂ ಹೆಚ್ಚು ನಾಯಿ ಕಡಿತದ ಪ್ರಕರಣ ವರದಿಯಾಗಿದೆ. ಶಂಕಿತ ರೇಬೀಸ್‌ನಿಂದ 54 ಸಾವು ಸಂಭವಿಸಿದೆ. ವಿಶ್ವ ಆರೋಗ್ಯ ಸಂಸ್ಥೆ (WHO)ಯ ಪ್ರಕಾರ, ಜಗತ್ತಿನ ಒಟ್ಟು ರೇಬೀಸ್ ಸಾವುಗಳಲ್ಲಿ ಶೇ. 36ರಷ್ಟು ಭಾರತದಲ್ಲೇ ಸಂಭವಿಸುತ್ತವೆ ಎನ್ನಲಾಗಿದೆ.
ಇತ್ತೀಚೆಗೆ ದೆಹಲಿ ಸರ್ಕಾರ ರೇಬೀಸ್ ಅನ್ನು ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ 'ಅಧಿಸೂಚಿತ ರೋಗ' ಎಂದು ಘೋಷಿಸಲು ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ. ಈ ನೀತಿ ಜಾರಿಯಾದಲ್ಲಿ, ಎಲ್ಲ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳು ಶಂಕಿತ ಮತ್ತು ದೃಢಪಟ್ಟ ರೇಬೀಸ್ ಪ್ರಕರಣಗಳನ್ನು ತಕ್ಷಣವೇ ಸಂಬಂಧಿತ ಆರೋಗ್ಯ ಅಧಿಕಾರಿಗಳಿಗೆ ವರದಿ ಮಾಡುವುದು ಕಡ್ಡಾಯವಾಗಲಿದೆ.
ನಾಯಿ ಕಚ್ಚುವಿಕೆಯು ರೇಬೀಸ್ (Rabies), ಸೆಪ್ಸಿಸ್ (Sepsis) ಮತ್ತು ಮೆನಿಂಜೈಟಿಸ್ (Meningitis) ನಂತಹ ಗಂಭೀರ ಹಾಗೂ ಮಾರಕ ಕಾಯಿಲೆಗಳಿಗೆ ಕಾರಣವಾಗಬಹುದು. ಸಂಭವನೀಯ ಅಪಾಯ ತಪ್ಪಿಸಲು ನಾಯಿ ಕಚ್ಚಿದ ತಕ್ಷಣ ಸರಿಯಾದ ರೀತಿಯಲ್ಲಿ ಕ್ರಮ ಕೈಗೊಳ್ಳುವುದು ಅಗತ್ಯ (First Aid For Dog Bites).
ಬೆಂಗಳೂರಿನಲ್ಲಿ 6 ತಿಂಗಳಲ್ಲಿ ರೇಬಿಸ್‌ನಿಂದ 17 ಜನರ ಸಾವು
ಹಾಗಾದರೆ ನಾಯಿ ಕಚ್ಚಿದರೆ ಏನು ಮಾಡಬೇಕು ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಶಾಂತವಾಗಿರಿ
ನಾಯಿ ಕಚ್ಚಿದಾಗ ಸಾಧ್ಯವಾದಷ್ಟು ಶಾಂತವಾಗಿದ್ದು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ. ನಾಯಿ ಕೋಪಗೊಂಡಿದ್ದರೆ ಅಥವಾ ಆಕ್ರಮಣಕಾರಿ ವರ್ತನೆ ತೋರುತ್ತಿದ್ದರೆ, ಅದರಿಂದ ದೂರವಿರಿ. ಹೆಚ್ಚಿನ ಗಾಯವಾಗದಂತೆ ಸುರಕ್ಷಿತ ಸ್ಥಳಕ್ಕೆ ತೆರಳಿ.
ಗಾಯವನ್ನು ತೊಳೆಯಿರಿ
ಇದು ಅತ್ಯಂತ ಪ್ರಮುಖ ಹಾಗೂ ಮೊದಲ ಹಂತ. ಗಾಯವಾದ ಜಾಗವನ್ನು ತಕ್ಷಣವೇ ಸಾಬೂನು ಮತ್ತು ಶುದ್ಧ ನೀರಿನಿಂದ ಕನಿಷ್ಠ 5–10 ನಿಮಿಷಗಳ ಕಾಲ ತೊಳೆಯಿರಿ. ಇದರಿಂದ ನಾಯಿ ಜೊಲ್ಲು ಮತ್ತು ಕಸ ಹೋಗಿ ಸೋಂಕಿನ ಅಪಾಯ ಕಡಿಮೆಯಾಗುತ್ತದೆ.
ರಕ್ತಸ್ರಾವವನ್ನು ನಿಯಂತ್ರಿಸಿ
ಗಾಯದಿಂದ ರಕ್ತ ಬರುತ್ತಿದ್ದರೆ, ಸ್ವಚ್ಛವಾದ ಬಟ್ಟೆ ಅಥವಾ ಬ್ಯಾಂಡೇಜ್‌ನಿಂದ ಸುತ್ತಿ. ಕೆಲವು ನಿಮಿಷಗಳಾದರೂ ರಕ್ತ ನಿಲ್ಲದಿದ್ದರೆ ತಕ್ಷಣ ಸಮೀಪದ ಆರೋಗ್ಯ ಕೇಂದ್ರ ಅಥವಾ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಿತಿ.
ಸೋಂಕು ನಿವಾರಕ ಬಳಸಿ
ಗಾಯವನ್ನು ತೊಳೆಯಿದ ನಂತರ ಲಭ್ಯವಿದ್ದರೆ ಪೊವಿಡೋನ್–ಐಯೋಡಿನ್ ಅಥವಾ 70% ಆಲ್ಕೋಹಾಲ್ ಹೊಂದಿರುವ ಆ್ಯಂಟಿಸೆಪ್ಟಿಕ್ ಕ್ರಿಮ್ ಹಚ್ಚಿ. ಇದು ಸೋಂಕು ತಡೆಯಲು ಸಹಾಯ ಮಾಡುತ್ತದೆ.
ಬಿಗಿಯಾಗಿ ಮುಚ್ಚಬೇಡಿ
ಆರಂಭದಲ್ಲೇ ಗಾಯವನ್ನು ಬಿಗಿಯಾದ ಬ್ಯಾಂಡೇಜ್‌ನಿಂದ ಮುಚ್ಚಬೇಡಿ ಅಥವಾ ಹೊಲಿಗೆ ಹಾಕಿಸಬೇಡಿ. ಇದರಿಂದ ವೈರಸ್ ಒಳಗೆ ಉಳಿಯುವ ಸಾಧ್ಯತೆ ಇದೆ. ನಾಯಿ ಕಚಿದ 24 ಗಂಟೆಯೊಳಗೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಉತ್ತಮ. ಸಾಮಾನ್ಯವಾಗಿ ವೈದ್ಯರು ನಾಯಿ ಕಡಿತಕ್ಕೆ ರೇಬೀಸ್ ಲಸಿಕೆ (ARV), ರೇಬೀಸ್ ಇಮ್ಯುನೋಗ್ಲೋಬ್ಯುಲಿನ್ (RIG), ಟೆಟನಸ್ ಟಾಕ್ಸಾಯ್ಡ್ ಹಾಗೂ ಆ್ಯಂಟಿಬಯೋಟಿಕ್ಸ್‌ಗಳನ್ನು ನೀಡುತ್ತಾರೆ.
ನಾಯಿ ಕಚ್ಚಿದ ತಕ್ಷಣ ಈ ಕ್ರಮಗಳನ್ನು ಅನುಸರಿಸುವುದರಿಂದ ಗಂಭೀರ ಸಮಸ್ಯೆಗಳನ್ನು ಕಡಿಮೆ ಮಾಡಬಹುದು ಮತ್ತು ಗಾಯವನ್ನು ಸರಿಯಾಗಿ ಗುಣಪಡಿಸಬಹುದು ಎನ್ನುತ್ತಾರೆ ತಜ್ಞರು.