ಬೆಂಗಳೂರು: ಬೈಕ್ ಪ್ರಯಾಣದ ವೇಳೆ ಕಣ್ಣುಗಳ ಸುರಕ್ಷತೆಯನ್ನು (Eye protection) ನಾವು ಹೆಚ್ಚಾಗಿ ನಿರ್ಲಕ್ಷಿಸುತ್ತೇವೆ. ಆದರೆ, ವೇಗದ ಗಾಳಿ, ಧೂಳು ಮತ್ತು ಸೂರ್ಯನ ಕಿರಣಗಳು ದೃಷ್ಟಿಯ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಹೀಗಾಗಿ ಸವಾರರು ತಮ್ಮ ಕಣ್ಣುಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಕುರಿತು ನೇತ್ರ ಶಸ್ತ್ರಚಿಕಿತ್ಸಕರು ಪ್ರಮುಖ ಮಾಹಿತಿ ಹಂಚಿಕೊಂಡಿದ್ದಾರೆ. ರಸ್ತೆಯಲ್ಲಿ ಓಡಾಡುವಾಗ ಕಣ್ಣುಗಳಿಗೆ ನೇರವಾಗಿ ಧೂಳು, ಹೊಗೆ ಹಾಗೂ ಯುವಿ ಕಿರಣಗಳು (UV rays) ತಗಲುವುದರಿಂದ ಕಣ್ಣು ಒಣಗುವುದು ಮತ್ತು ಕಾರ್ನಿಯಾಗೆ ಗಾಯವಾಗುವಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ತಲೆಯ ರಕ್ಷಣೆಗಾಗಿ ಮಾತ್ರ ಹೆಲ್ಮೆಟ್ ಬಳಸುವ ಬದಲು, ಕಣ್ಣುಗಳಿಗೂ ಸೂಕ್ತ ರಕ್ಷಣೆ ನೀಡುವುದು ಅಗತ್ಯ ಎನ್ನುತ್ತಾರೆ ವೈದ್ಯರು.
ಸಾಮಾನ್ಯವಾಗಿ ಸವಾರರು ಕೇವಲ ದಂಡ ತಪ್ಪಿಸಿಕೊಳ್ಳಲು ಅಥವಾ ತಲೆಯ ಸುರಕ್ಷತೆಗಾಗಿ ಮಾತ್ರ ಹೆಲ್ಮೆಟ್ ಧರಿಸುತ್ತಾರೆ ಹೊರತು ಕಣ್ಣುಗಳ ರಕ್ಷಣೆಗೆ ಗಮನ ಕೊಡುವುದಿಲ್ಲ ಎಂಬುದು ನೇತ್ರ ತಜ್ಞರ ಮಾತು. ಇಂತಹ ನಿರ್ಲಕ್ಷ್ಯದಿಂದ ಕಣ್ಣು ಕೆಂಪಾಗುವುದು, ತುರಿಕೆ, ನೀರು ಸುರಿಯುವುದು ಮತ್ತು ಸೋಂಕುಗಳಂತಹ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ, ಸವಾರರು ತಮ್ಮ ಕಣ್ಣುಗಳನ್ನು ಕಾಪಾಡಿಕೊಳ್ಳಲು ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಸಾಧನಗಳನ್ನು ಬಳಸಬೇಕು.
ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದೀರಾ? ಆಹಾರ ತಜ್ಞರು ಹೇಳೋದೇನು?
ಫುಲ್-ಫೇಸ್ ಹೆಲ್ಮೆಟ್ ಬಳಸುವುದು ಉತ್ತಮ
ಬೈಕ್ ಸವಾರಿ ಮಾಡುವಾಗ ಅರ್ಧ ಮುಖ ಮುಚ್ಚುವ ಹೆಲ್ಮೆಟ್ಗಳಿಗಿಂತ ಪೂರ್ಣ ಮುಖವನ್ನು ಆವರಿಸುವ ಫುಲ್-ಫೇಸ್ ಹೆಲ್ಮೆಟ್ ಧರಿಸುವುದು ಕಣ್ಣುಗಳ ರಕ್ಷಣೆಗೆ ಅತ್ಯಂತ ಸುರಕ್ಷಿತ ಆಯ್ಕೆ ಎಂದು ನೇತ್ರ ತಜ್ಞರು ಹೇಳುತ್ತಾರೆ. ಹಾಫ್-ಫೇಸ್ ಹೆಲ್ಮೆಟ್ಗಳಲ್ಲಿ ಕೆಳಭಾಗದಿಂದ ಧೂಳು, ಕಲ್ಲುಗಳು ಹಾಗೂ ತೀವ್ರವಾದ ಗಾಳಿ ನೇರವಾಗಿ ಕಣ್ಣುಗಳಿಗೆ ಬಡಿಯುವ ಸಾಧ್ಯತೆ ಹೆಚ್ಚಿರುತ್ತದೆ. ಪೂರ್ಣ ಮುಖ ಕವರ್ ಮಾಡುವ ಹೆಲ್ಮೆಟ್ ಮತ್ತು ಗಟ್ಟಿಮುಟ್ಟಾದ ವೈಸರ್ ಕಣ್ಣುಗಳ ಸುತ್ತಲೂ ರಕ್ಷಣಾ ಕವಚದಂತೆ ಕೆಲಸ ಮಾಡಿ ಗಾಳಿ, ಹೊಗೆ, ಕೀಟಗಳು ಹಾಗೂ ಸಣ್ಣ ಕಲ್ಲುಗಳಿಂದ ರಕ್ಷಿಸುತ್ತದೆ. ಅಪಘಾತದ ವೇಳೆ ಮುಖ ಮತ್ತು ಕಣ್ಣಿನ ಮೂಳೆಗಳಿಗೂ ರಕ್ಷಣೆ ನೀಡುತ್ತದೆ.
ಅಲ್ಲದೆ, ಹೆಲ್ಮೆಟ್ ವೈಸರ್ ಅನ್ನು ತೆರೆದಿಟ್ಟು ಸವಾರಿ ಮಾಡುವುದರಿಂದ ಕಣ್ಣುಗಳು ಒಣಗುವುದು, ಕೆಂಪಾಗುವುದು ಮತ್ತು ಕಾರ್ನಿಯಾಗೆ ಗಾಯವಾಗುವ ಅಪಾಯವಿರುತ್ತದೆ. ಹೀಗಾಗಿ, ಕಡಿಮೆ ವೇಗದಲ್ಲಿ ಸಾಗುವಾಗಲೂ ಗೀರುಗಳಿಲ್ಲದ, ಸ್ಪಷ್ಟವಾಗಿ ಕಾಣುವ ವೈಸರ್ ಬಳಸಬೇಕು. ಮಳೆ ಅಥವಾ ರಾತ್ರಿ ವೇಳೆ ಬಣ್ಣದ ವೈಸರ್ ಬದಲಿಗೆ ಪಾರದರ್ಶಕ ವೈಸರ್ ಧರಿಸುವುದರಿಂದ ದೃಷ್ಟಿ ಸ್ಪಷ್ಟವಾಗಿರುತ್ತದೆ.
ಸನ್ಗ್ಲಾಸ್ ಆಯ್ಕೆ ಹೇಗಿರಬೇಕು?
ಹಗಲು ವೇಳೆ ತೀವ್ರ ಬಿಸಿಲಿನಲ್ಲಿ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುವಾಗ ಸೂರ್ಯನ ಹಾನಿಕಾರಕ ಯುವಿ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಗುಣಮಟ್ಟದ ಸನ್ಗ್ಲಾಸ್ ಧರಿಸುವುದು ಉತ್ತಮ. ಈ ವೇಳೆ ಗಾಜಿನ ಲೆನ್ಸ್ ಬದಲಿಗೆ ಒಡೆಯದ ಗುಣವಿರುವ ಪಾಲಿಕಾರ್ಬೊನೇಟ್ ಲೆನ್ಸ್ಗಳಿರುವ ಸನ್ಗ್ಲಾಸ್ ಆಯ್ಕೆ ಮಾಡಿಕೊಳ್ಳಬೇಕು. ಅಪಘಾತದ ಸಂದರ್ಭದಲ್ಲಿ ಗಾಜಿನ ಲೆನ್ಸ್ ಒಡೆದು ಕಣ್ಣಿಗೆ ಚುಚ್ಚುವ ಅಪಾಯವಿರುತ್ತದೆ. ಕಣ್ಣುಗಳ ಸುತ್ತಲೂ ಚೆನ್ನಾಗಿ ಆವರಿಸುವ ವಿನ್ಯಾಸದ ಸನ್ಗ್ಲಾಸ್ ಧರಿಸುವುದರಿಂದ ಪಕ್ಕದಿಂದ ಗಾಳಿ ಮತ್ತು ಧೂಳು ಕಣ್ಣಿಗೆ ನುಗ್ಗುವುದನ್ನು ತಡೆಯಬಹುದು.
ಚಳಿಗಾಲದಲ್ಲಿ ತ್ವಚೆ ಆರೈಕೆ ಹೇಗಿರಬೇಕು? ಒಣ ಚರ್ಮದ ಸಮಸ್ಯೆಗೆ ಪರಿಹಾರವೇನು?
ಕಾಂಟ್ಯಾಕ್ಟ್ ಲೆನ್ಸ್ ಬಳಸುವಾಗ ಎಚ್ಚರ
ಬೈಕ್ ಸವಾರರು ಪ್ರತಿದಿನ ಕಾಂಟ್ಯಾಕ್ಟ್ ಲೆನ್ಸ್ ಬಳಕೆ ಮಾಡುವುದು ಅಷ್ಟು ಸುಲಭವಲ್ಲ ಹಾಗೂ ಪ್ರಾಯೋಗಿಕವೂ ಅಲ್ಲ. ಏಕೆಂದರೆ, ಸವಾರಿ ವೇಳೆ ಬೀಸುವ ವೇಗದ ಗಾಳಿ ಮತ್ತು ಧೂಳಿನಿಂದ ಕಣ್ಣು ಬೇಗನೆ ಒಣಗಿ ಲೆನ್ಸ್ ಕಿರಿಕಿರಿ ಉಂಟುಮಾಡುವ ಸಾಧ್ಯತೆ ಇದೆ. ಆದರೂ, ಕೆಲವು ಅಗತ್ಯ ಸಂದರ್ಭಗಳಲ್ಲಿ ಕಾಂಟ್ಯಾಕ್ಟ್ ಲೆನ್ಸ್ ಬಳಸಲೇಬೇಕಾದರೆ ಹೆಚ್ಚಿನ ಎಚ್ಚರಿಕೆ ವಹಿಸುವುದು ಉತ್ತಮ. ಅಂತಹ ಸಮಯದಲ್ಲಿ ಹೆಲ್ಮೆಟ್ ವೈಸರ್ ಅನ್ನು ಸಂಪೂರ್ಣವಾಗಿ ಮುಚ್ಚಿರುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಕಣ್ಣು ಒಣಗದಂತೆ ತಡೆಯಲು ವೈದ್ಯರ ಸಲಹೆಯಂತೆ ಲೂಬ್ರಿಕೇಟಿಂಗ್ ಐ ಡ್ರಾಪ್ಸ್ ಬಳಸುವುದು ಸುರಕ್ಷಿತ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಕಣ್ಣಿಗೆ ಧೂಳು ಬಿದ್ದರೆ ಏನು ಮಾಡಬಾರದು?
ಬೈಕ್ ಚಲಾಯಿಸುವಾಗ ಕಣ್ಣಿಗೆ ಧೂಳು ಅಥವಾ ಕೀಟ ಬಿದ್ದರೆ ತಕ್ಷಣ ಬೈಕ್ ನಿಲ್ಲಿಸಬೇಕು. ಯಾವುದೇ ಕಾರಣಕ್ಕೂ ಕಣ್ಣನ್ನು ಕೈಯಿಂದ ಉಜ್ಜಬಾರದು, ಇದರಿಂದ ಕಣ್ಣಿನ ಮೇಲ್ಪದರಕ್ಕೆ ಗಂಭೀರ ಗಾಯವಾಗಬಹುದು. ಬದಲಾಗಿ, ಶುದ್ಧ ನೀರಿನಿಂದ ಕಣ್ಣನ್ನು ತೊಳೆಯಬೇಕು. ಕಣ್ಣು ನೋವು, ಮಂಜು ಕವಿದಂತೆ ಕಾಣುವುದು ಅಥವಾ ನೀರು ಸುರಿಯುವುದು ಮುಂದುವರಿದರೆ ತಕ್ಷಣ ನೇತ್ರ ತಜ್ಞರನ್ನು ಸಂಪರ್ಕಿಸುವುದು ಒಳ್ಳೆಯದು.