ಕಣ್ಣಿನ ತಪಾಸಣೆ ಮಾಡಿಸದೆ ಹಳೆಯ ಕನ್ನಡಕವನ್ನೇ ಬಳಸುತ್ತಿದ್ದೀರಾ? ಎಚ್ಚರ!
Eye Health: ಎಷ್ಟು ದಿನಗಳಿಗೊಮ್ಮೆ ಕಣ್ಣಿನ ತಪಾಸಣೆ ಮಾಡಿಸಿ, ಕನ್ನಡಕ ಸರಿ ಇದೆಯೇ ಎಂದು ನೋಡುತ್ತೀರಿ? ಹೊಸ ಫ್ರೇಮ್ ಹಾಕಿಸಬೇಕಾದರೆ, ಯಾವುದೋ ಕಡೆ ಲೆನ್ಸ್ ಆಫರ್ ಇದ್ದಾಗ… ಹೀಗಿದ್ದೆಲ್ಲ ಉತ್ತರ ಬರಬಹುದು. ಆದರೆ ವರ್ಷಾನುಗಟ್ಟಲೆ ಕಣ್ಣಿನ ತಪಾಸಣೆ ಮಾಡಿಸದೆ ಹಳೆಯ ಕನ್ನಡಕವನ್ನೇ ಹಾಕುತ್ತಿದ್ದರೆ ಸಮಸ್ಯೆಗಳಾಗಬಹುದು ಎಂಬುದು ಗೊತ್ತೇ?
ಇಂಟರ್ ನೆಟ್ ಚಿತ್ರ -
ನವದೆಹಲಿ: ನಿಮ್ಮ ಕಣ್ಣಿಗೆ ಸುಲೋಚನ ಬೇಕೆ? ಯಾರವಳು ಎಂದು ಯೋಚಿಸಬೇಡಿ. ಕಣ್ಣಿಗೆ ಕನ್ನಡಕ (Eye Spect) ಅಗತ್ಯವೇ ಎಂದು ಕೇಳಿದ್ದು. ಹೌದಾದರೆ ಎಷ್ಟು ದಿನಗಳಿಗೊಮ್ಮೆ ಕಣ್ಣಿನ ತಪಾಸಣೆ ಮಾಡಿಸಿ, ಕನ್ನಡಕ ಸರಿ ಇದೆಯೇ ಎಂದು ನೋಡುತ್ತೀರಿ? ಹೊಸ ಫ್ರೇಮ್ ಹಾಕಿಸ ಬೇಕಾದರೆ, ಯಾವುದೋ ಕಡೆ ಲೆನ್ಸ್ ಆಫರ್ ಇದ್ದಾಗ ಹೀಗಿದ್ದೆಲ್ಲ ಉತ್ತರ ಬರಬಹುದು. ಆದರೆ ವರ್ಷಾನುಗಟ್ಟಲೆ ಕಣ್ಣಿನ ತಪಾಸಣೆ ಮಾಡಿಸದೆ ಹಳೆಯ ಕನ್ನಡಕವನ್ನೇ ಹಾಕುತ್ತಿದ್ದರೆ ಸಮಸ್ಯೆಗಳಾಗಬಹುದು ಎಂಬುದು ಗೊತ್ತೇ?
ನಮ್ಮ ಕಣ್ಣಿನ ಪವರ್ ಬದಲಾಗುವುದಕ್ಕೆ ಹಲವಾರು ಕಾರಣಗಳು ಇರಬಹುದು. ವಯಸ್ಸಿನ ಕಾರಣಕ್ಕೆ, ಯಾವುದೋ ರೋಗದ ಕಾರಣಕ್ಕೆ, ಅತಿಯಾಗಿ ಸ್ಕ್ರೀನ್ ನೋಡುವ ವಿಷಯವಾಗಿ, ಆಹಾರದಲ್ಲಿ ಸತ್ವಗಳ ಕೊರತೆಯಾಗಿ- ಹೀಗೆ ಬಹಳಷ್ಟು ಕಾರಣಗಳು ಇರಬಹುದು. ಹಾಗಾಗಿ ನಿಯಮಿತವಾಗಿ ಕಣ್ನುಗಳ ತಪಾಸಣೆ ಮಾಡಿಸಿ, ಕನ್ನಡಕದ ಪವರ್ ಸರಿ ಇದೆಯೇ ಎಂಬುದನ್ನು ವೈದ್ಯರಿಂದ ಖಚಿತಪಡಿಸಿಕೊಳ್ಳುವುದು ಅಗತ್ಯ. ಆದರೆ ಕಣ್ಣಿನ ಅಗತ್ಯಗಳು ಬದಲಾಗಿವೆ ಎಂಬುದು ನಮಗೆ ತಿಳಿಯುವುದು ಹೇಗೆ?
ನೋಡಿ ತಿಳಿ!: ಕನ್ನಡಕದ ಮೂಲಕವೂ ದೃಶ್ಯಗಳು ಮೊದಲಿನಷ್ಟು ನಿಖರವಾಗಿ ಗೋಚರಿಸುತ್ತಿಲ್ಲ ಎನ್ನುವುದು ಮೊದಲ ಸೂಚನೆ. ಈ ಹಿಂದೆ ಕನ್ನಡದ ಹೊಸದಾಗಿ ಬಂದಾಗ ಲೋಕವೆಲ್ಲ ಹೇಗೆ ಸ್ಪಷ್ಟವಾಗಿ ಕಾಣಿಸುತ್ತಿತ್ತೋ ಈಗೀಗ ಹಾಗಿಲ್ಲ, ಕೊಂಚ ಮಸುಕಾಗಿದೆ ಎನಿಸಬಹುದು. ಓದುವಾಗ ಅಕ್ಷರಗಳು ಅಸ್ಪಷ್ಟವಾಗುವುದು, ಡ್ರೈವ್ ಮಾಡುವಾಗ ದೂರದ ಬೋರ್ಡ್‌ಗಳು ಕಾಣದಿರುವುದು, ಮೊಬೈಲ್ ನೋಡುವಾಗ ಪದೇಪದೇ ಪರದೆಯನ್ನು ಹಿಗ್ಗಿಸುವಂತಾಗುವುದು- ಇಂಥವನ್ನು ಗಮನಿಸಿ. ಈ ಲಕ್ಷಣಗಳಿದ್ದರೆ ಕಣ್ಣಿನ ತಪಾಸಣೆಯನ್ನೊಮ್ಮೆ ಮಾಡಿಸಿ.
ತಲೆನೋವು: ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವವರು ನೀವಾದರೆ ಆಗಾಗ ತಲೆನೋವು ಬರುವುದು, ಓದುವ, ಚಿತ್ರ ಬರೆಯುವ ಅಥವಾ ಯಾವುದೇ ಕುಶಲಕಲೆಗಳ ಕೆಲಸದಲ್ಲಿ ಏಕಾಗ್ರತೆ ಸಾಧಿಸಲು ಆಗದಿರುವುದು, ಕಣ್ಣಿನ ಮೇಲೆ ಒತ್ತಡ ಹೆಚ್ಚಿದಂತೆ ಅನಿಸುವುದು- ಇವೆಲ್ಲ ಕಣ್ಣಿನ ತಪಾಸಣೆ ಅಗತ್ಯ ಎನ್ನುವುದನ್ನು ಸೂಚಿಸುವ ಚಿಹ್ನೆಗಳು.
ವಯಸ್ಸು: ಸಾಮಾನ್ಯವಾಗಿ ಪ್ರಾಯ 40 ಕಳೆದ ಮೇಲೆ ಹತ್ತಿರದ ವಸ್ತುಗಳನ್ನು ನೋಡಲು ಕಷ್ಟವಾಗುವಂತೆ ʻಪ್ರೆಸ್ಬಯೋಪಿಯʼ ತೊಂದರೆ ಅಮರಿಕೊಳ್ಳುತ್ತದೆ. ಅಂದರೆ ಹತ್ತಿರ ವಸ್ತುಗಳ ಮೇಲೆ ದೃಷ್ಟಿ ಕೇಂದ್ರೀಕರಿಸಲು ಕಣ್ಣಿಗೆ ತೊಂದರೆಯಾಗುತ್ತದೆ. ಹಾಗಾಗಿ ಸಣ್ಣ ಅಕ್ಷರಗಳನ್ನು ಓದಲು ಕಷ್ಟಪಡುವ ಸ್ಥಿತಿ ಉಂಟಾಗುತ್ತದೆ. ಹೊಲಿಗೆ, ಕಸೂತಿ ಇಂಥ ಯಾವುದೇ ಸೂಕ್ಷ್ಮ ಕೆಲಸಗಳನ್ನು ಮಾಡುವಾಗಲೂ ತಲೆನೋವು, ಕಣ್ಣಿನಲ್ಲಿ ಒತ್ತಡ ಹೆಚ್ಚಿದಂತೆ ಭಾಸವಾಗುವುದು- ಇವೆಲ್ಲ ಕಣ್ಣಿನ ತಪಾಸಣೆ ಅಗತ್ಯ ಎನ್ನುವುದನ್ನು ಸೂಚಿಸುವ ಅಂಶಗಳು.
ಮಕ್ಕಳಲ್ಲಿ ಹೇಗೆ?: ದೊಡ್ಡವರಿಗೆ ತಮಗಾಗುವ ತೊಂದರೆಯನ್ನು ಹೇಳಿಕೊಳ್ಳುವುದು ದೊಡ್ಡದಲ್ಲ. ಆದರೆ ಮಕ್ಕಳಿಗೆ ತಮ್ಮ ಅವಸ್ಥೆಯನ್ನು ಹೇಳುವುದಕ್ಕೆ ತಿಳಿಯುವುದಿಲ್ಲ. ಹಾಗಾಗಿ ಮಕ್ಕಳು ಮೊಬೈಲ್ ಅಥವಾ ಪುಸ್ತಕವನ್ನು ಮುಖದ ಹತ್ತಿರ ಹಿಡಿದು ಓದುವುದು, ಹತ್ತಿರದಿಂದ ಟಿವಿ ನೋಡುವುದು, ಬರೆಯುವಾಗ ಮೊದಲಿಗಿಂತ ಹೆಚ್ಚು ತಪ್ಪು ಮಾಡುವುದು, ಶಾಲೆಯಲ್ಲಿ ಬೋರ್ಡ್ ಕಾಣಿಸದಿರುವುದು, ತಲೆನೋವೆಂದು ಹೇಳುವುದು- ಇಂಥ ಎಲ್ಲ ಸಂದರ್ಭಗಳಲ್ಲೂ ಪೋಷಕರು ಹೆಚ್ಚಿನ ಗಮನ ನೀಡುವುದು ಅಗತ್ಯ. ವೈದ್ಯರಲ್ಲಿ ತಪಾಸಣೆಗೆ ಕರೆದೊಯ್ಯುವುದು ಒಳ್ಳೆಯದು.
ಹಳೆಯದೇ?: ನೀವು ಉಪಯೋಗಿಸುತ್ತಿರುವ ಕನ್ನಡಕ ಹಳೆದೆಂಬ ಮಾತ್ರಕ್ಕೆ, ಫ್ರೇಮ್‌ನ ಫ್ಯಾಷನ್ ಈಗಿಲ್ಲ ಎನ್ನುವ ಮಾತ್ರಕ್ಕೆ ಕನ್ನಡಕ ಬದಲಿಸಬೇಕೆಂಬ ನಿಯಮವಿಲ್ಲ. ಎಲ್ಲಿಯೋ ಉಚಿತವಾಗಿ ದೊರೆಯುತ್ತಿರುವ ಕನ್ನಡಕಗಳನ್ನು ಉಪಯೋಗಿಸುವಾಗ, ನಿಮ್ಮ ದೃಷ್ಟಿಗದು ಹೊಂದುತ್ತದೆಯೇ ಎನ್ನುವುದನ್ನು ಖಚಿತ ಮಾಡಿಕೊಳ್ಳಿ. ಆದರೆ ಕನ್ನಡಕದ ಮೂಲಕ ನೋಡಲು ತೊಂದರೆ ಯಾಗುತ್ತಿದೆ ಎಂದಾದರೆ ತಪಾಸಣೆ ಅಗತ್ಯ. ಕನ್ನಡಕ ನಿಮಗೆ ನಿತ್ಯದ ಕೆಲಸಕ್ಕೆಲ್ಲ ಅಗತ್ಯ ಎಂದಾದರೆ ನಿಯಮಿತವಾದ ತಪಾಸಣೆಯೂ ಬೇಕು.