ಬೆಂಗಳೂರು, ಡಿ. 20: ಇತ್ತೀಚೆಗೆ Eggozನಂತಹ ಕೆಲವು ಮೊಟ್ಟೆ ಬ್ರ್ಯಾಂಡ್‌ಗಳಲ್ಲಿ ಹಾನಿಕಾರಕ ರಾಸಾಯನಿಕಗಳಿವೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಲ್ಲಿ ಹರಿದಾಡಿತ್ತು. ಹಾಗಾದ್ರೆ ಮೊಟ್ಟೆ ಸೇವನೆ ಮಾಡುವುದು ಬೇಕಾ ಬೇಡ್ವಾ ಎನ್ನುವ ಪ್ರಶ್ನೆಗೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ಆಹಾರ ತಜ್ಞೆ ಡಾ. ಸುನಿತಾ ಎನ್. ಉತ್ತರಿಸಿದ್ದಾರೆ (Health Tips). ನಾರುಯುಕ್ತ ಆಹಾರಗಳೊಂದಿಗೆ ಮೊಟ್ಟೆಯನ್ನು ಮಿತವಾಗಿ ಸೇವಿಸೋದ್ರಿಂದ ಆರೋಗ್ಯವು ಸುರಕ್ಷಿತ. ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುವ ಮಾಹಿತಿಗಳನ್ನು ಕಂಡು ಭಯ ಪಡುವುದಕ್ಕಿಂತ ಸಮತೋಲಿತ ಆಹಾರ, ಉತ್ತಮ ಜೀವನಶೈಲಿ ಮತ್ತು ಸಕಾರಾತ್ಮಕ ಮನಸ್ಥಿತಿ ಬೆಳೆಸಿಕೊಳ್ಳುವುದು ಮುಖ್ಯ ಎನ್ನುತ್ತಾರೆ ಅವರು.
ಕೋಳಿ ಸಾಕಾಣಿಕೆಯಲ್ಲಿ ರೋಗಗಳನ್ನು ತಡೆಗಟ್ಟಲು ಮತ್ತು ಮೊಟ್ಟೆಯ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ 'ನೈಟ್ರೋಫ್ಯೂರಾನ್' (Nitrofuran)ನಂತಹ ಔಷಧಿಗಳನ್ನು ಬಳಸಲಾಗುತ್ತದೆ. ಇವುಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿದೆ ಎಂದು ಸಂಶೋಧನೆಗಳು ಹೇಳುತ್ತವೆ ಆದ್ರೆ ಸರಿಯಾದ ಆಹಾರ ಕ್ರಮದ ಮೂಲಕ ನಾವು ಈ ಅಪಾಯದಿಂದ ದೂರ ಉಳಿಯಬಹುದು ಎಂದು ಡಾ. ಸುನಿತಾ ವಿವರಿಸಿದರು.
ಸಮತೋಲಿತ ಆಹಾರ ಕ್ರಮ
ಮೊಟ್ಟೆಗಳನ್ನು ನೇರವಾಗಿ ಸೇವಿಸುವ ಬದಲು ನಾರುಯುಕ್ತ ತರಕಾರಿಗಳೊಂದಿಗೆ ಸೇವಿಸುವುದರಿಂದ ಎದುರಾಗಲಿರುವ ಹಾನಿಯನ್ನು ಕ್ರಮೇಣ ತಡೆಗಟ್ಟಬಹುದು. ಉದಾಹರಣೆಗೆ ಮೊಟ್ಟೆಯನ್ನು ಆಮ್ಲೆಟ್ ಅಥವಾ ಸಲಾಡ್ ರೂಪದಲ್ಲಿ ತರಕಾರಿಗಳೊಂದಿಗೆ ಸೇವಿಸಿದಾಗ ತರಕಾರಿಗಳಲ್ಲಿರುವ ಆ್ಯಂಟಿ-ಆಕ್ಸಿಡೆಂಟ್‌ಗಳು ದೇಹದ ಡಿಎನ್ಎ (DNA) ಮೇಲೆ ಪರಿಣಾಮ ಬೀರಬಹುದಾದ ಹಾನಿಕಾರಕ ಫ್ರೀ ರಾಡಿಕಲ್‌ಗಳನ್ನು ತಟಸ್ಥಗೊಳಿಸುತ್ತವೆ ಎಂದು ತಜ್ಞರು ಮಾಹಿತಿ ಹಂಚಿಕೊಂಡರು.
ಒಂದು ಮೊಟ್ಟೆಯಲ್ಲಿ ಎಷ್ಟು ಪ್ರೊಟೀನ್ ದೊರೆಯುತ್ತದೆ?
ಮಿತವಾದ ಸೇವನೆ
ದಿನಕ್ಕೆ ಒಂದು ಅಥವಾ ಎರಡು ಮೊಟ್ಟೆಗಳನ್ನು ತರಕಾರಿಗಳೊಂದಿಗೆ ತಿನ್ನುವುದು ಆರೋಗ್ಯಕ್ಕೆ ಸುರಕ್ಷಿತ. ಆದರೆ ಇಂದಿನ ದಿನಗಳಲ್ಲಿ ಫಿಟ್ನೆಸ್ ಬಗೆಗೆ ಹೆಚ್ಚು ಉತ್ಸಾಹ ಹೊಂದಿರುವವರು ದಿನಕ್ಕೆ 5ರಿಂದ 6 ಮೊಟ್ಟೆಯ ಬಿಳಿ ಭಾಗವನ್ನು ಸೇವಿಸುವುದು ಅಪಾಯಕಾರಿ ಎಂದು ಅವರು ಎಚ್ಚರಿಸಿದರು.
ಪರ್ಯಾಯ ಪ್ರೋಟೀನ್ ಆಹಾರ ಸೇವನೆ
ಮೊಟ್ಟೆ ತಿಂದರೆ ಆರೋಗ್ಯ ಸಮಸ್ಯೆ ಉಂಟಾಗಬಹುದು ಎಂಬ ಆತಂಕ ಹೊಂದಿರುವವರು ಅದಕ್ಕೆ ಪರ್ಯಾಯ ಪ್ರೋಟೀನ್ ಮೂಲಗಳನ್ನು ಬಳಸಹಬುದು. ಉದಾಹರಣೆಗೆ ಮೀನು, ಇದರಲ್ಲಿ ಹೃದಯದ ಆರೋಗ್ಯಕ್ಕೆ ಪೂರಕವಾದ ಒಮೆಗಾ ಕೊಬ್ಬಿನ ಆಮ್ಲಗಳಿವೆ, ಸೋಯಾಬೀನ್, ಬೇಳೆಕಾಳುಗಳು, ಮೊಳಕೆ ಬರಿಸಿದ ಕಾಳುಗಳು, ಬಾದಾಮಿ, ಅಕ್ರೋಟ್ ಮತ್ತು ಗೋಡಂಬಿ. ಮೊಳಕೆ ಕಾಳುಗಳಲ್ಲಿ ನಾರು ಮತ್ತು ವಿಟಮಿನ್ ಸಿ ಹೇರಳವಾಗಿದ್ದು, ಇವು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿವೆ ಎಂದು ಹೇಳಿದರು.
ಪೌಷ್ಟಿಕಾಂಶದ ಪ್ರಯೋಜನಗಳು
ಇತ್ತೀಚಿನ ವಿವಾದಗಳ ಹೊರತಾಗಿ ನೋಡುವುದಾದರೆ ಮೊಟ್ಟೆ ಅತ್ಯಂತ ಪೌಷ್ಟಿಕಾಂಶವುಳ್ಳ ಆಹಾರ. ಮೊಟ್ಟೆಯಲ್ಲಿ ಅಗತ್ಯವಾದ ಅಮೈನೋ ಆಸಿಡ್‌ಗಳು, ವಿಟಮಿನ್ D ಮತ್ತು B12 ಸಮೃದ್ಧವಾಗಿವೆ. ಇಂದಿನ ಅನೇಕ ವಯಸ್ಕರಲ್ಲಿ ಈ ಪೋಷಕಾಂಶಗಳ ಕೊರತೆ ಹೆಚ್ಚಾಗಿದ್ದು, ಮೊಟ್ಟೆ ಸೇವನೆಯು ಈ ಕೊರತೆಯನ್ನು ನೀಗಿಸಲು ಸಹಾಯ ಮಾಡುತ್ತದೆ. ಹೀಗಾಗಿ ಉತ್ತಮ ಮೊಟ್ಟೆಯನ್ನು ಖರೀದಿಸಿ ಸೇವಿಸಿ ಒಳಿತು ಎಂದು ತಿಳಿಸಿದರು.
ಚಳಿಗಾಲದ ಸೋಂಕಿಗೆ ಮನೆಮದ್ದು ಬೇಕೆ?
ಮನಸ್ಥಿತಿ ಮತ್ತು ಆರೋಗ್ಯ
ಮೊಟ್ಟೆ ತಿಂದರೆ ಕ್ಯಾನ್ಸರ್ ಬರುತ್ತದೆ ಎಂದು ಅತಿಯಾಗಿ ಚಿಂತಿಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಉತ್ತಮ ಜೀವನಶೈಲಿ, ದೈಹಿಕ ಚಟುವಟಿಕೆ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಂಡಾಗ ಆಹಾರವು ರೋಗಕ್ಕೆ ಕಾರಣವಾಗುವುದಿಲ್ಲ ಎಂದು ಡಾ. ಸುನೀತಾ ವಿವರಿಸಿದರು.