ಡಾ.ವಿನಾಯಕ ಮಾಕ ಅವರ ಒಳನೋಟಗಳು, ಕನ್ಸಲ್ಟೆಂಟ್, ಮೆಡಿಕಲ್ ಆಂಕಾಲಜಿ ವಿಭಾಗ, ರಾಮಯ್ಯ ಮೆಮೋರಿಯಲ್ ಆಸ್ಪತ್ರೆ
ಶ್ವಾಸಕೋಶದ ಕ್ಯಾನ್ಸರ್‌ನ ಚಿಕಿತ್ಸೆಯನ್ನು ಪೂರ್ಣಗೊಳಿಸುವುದು ದೊಡ್ಡ ಸಾಧನೆಯೇ ಸರಿ. ಆದರೆ, ನಿಜವಾಗಿ ಹೇಳುವುದಾದರೆ, ಇದು ಸಂಪೂರ್ಣ ಚೇತರಿಕೆಯ ಪಯಣದ ಒಂದು ಭಾಗ ಮಾತ್ರ. ಚಿಕಿತ್ಸೆ ಮುಗಿದ ನಂತರವೂ ಕ್ಯಾನ್ಸರ್ ಮತ್ತೆ ಕಾಣಿಸಿಕೊಳ್ಳುವ ಯಾವುದೇ ಸೂಚನೆಗಳ ಬಗ್ಗೆ ಗಮನವಿರಬೇಕು, ಚಿಕಿತ್ಸೆಯಿಂದ ಉಂಟಾದ ಅಡ್ಡಪರಿಣಾಮಗಳನ್ನು ನಿರ್ವಹಿಸಬೇಕು ಮತ್ತು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಮತ್ತೆ ಸುಧಾರಿಸಿಕೊಳ್ಳಬೇಕು. ಈ ಹಂತ ಬಹಳ ಮುಖ್ಯ, ಏಕೆಂದರೆ ಕ್ಯಾನ್ಸರ್‌ನಿಂದ ಬದುಕುಳಿಯುವುದು ಎಂದರೆ ಕೇವಲ ಚಿಕಿತ್ಸೆ ಪೂರ್ಣ ಗೊಳಿಸುವುದಲ್ಲ; ಚಿಕಿತ್ಸೆಯ ನಂತರವೂ ಆರೋಗ್ಯಕರವಾಗಿ ಮತ್ತು ಉತ್ತಮವಾಗಿ ಬದುಕುವು ದಾಗಿದೆ.
ಚಿಕಿತ್ಸೆಯ ನಂತರ ನಿಯಮಿತ ತಪಾಸಣೆ ಏಕೆ ಮುಖ್ಯ?
ಶ್ವಾಸಕೋಶದ ಕ್ಯಾನ್ಸರ್ ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಈ ಅಪಾಯ ಪ್ರತಿಯೊಬ್ಬ ರೋಗಿಯಲ್ಲೂ ವಿಭಿನ್ನವಾಗಿರುತ್ತದೆ. ನಿಯಮಿತ ತಪಾಸಣೆ ಮೂಲಕ ಕ್ಯಾನ್ಸರ್ ಮತ್ತೆ ಕಾಣಿಸಿ ಕೊಂಡರೆ ಅದನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಬಹುದು. ಚಿಕಿತ್ಸೆಯಿಂದ ಉಂಟಾಗಬಹು ದಾದ ತೊಂದರೆಗಳನ್ನು ಗಮನಿಸಬಹುದು ಮತ್ತು ಹೊಸ ಆರೋಗ್ಯ ಸಮಸ್ಯೆಗಳು ಗಂಭೀರ ವಾಗುವ ಮೊದಲು ಗುರುತಿಸಬಹುದು. ಫಾಲೋ-ಅಪ್ ತಪಾಸಣೆ ಕೇವಲ ಕ್ಯಾನ್ಸರ್‌ಗಾಗಿ ಮಾತ್ರ ವಲ್ಲ. ಚಿಕಿತ್ಸೆಯ ನಂತರ ದೇಹ ಹೇಗೆ ಚೇತರಿಸಿಕೊಳ್ಳುತ್ತಿದೆ ಮತ್ತು ಬದಲಾವಣೆಗಳಿಗೆ ಹೇಗೆ ಹೊಂದಿಕೊಳ್ಳುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹ ಇದು ಸಹಾಯ ಮಾಡುತ್ತದೆ.
ಬದುಕುಳಿದವರು ಯಾವ ಲಕ್ಷಣಗಳ ಬಗ್ಗೆ ಗಮನಹರಿಸಬೇಕು?
ಚಿಕಿತ್ಸೆಯ ನಂತರ ಸಾಮಾನ್ಯ ದಣಿವಿನಂತೆ ಕಂಡರೂ, ಈ ಕೆಳಗಿನ ಲಕ್ಷಣಗಳನ್ನು ನಿರ್ಲಕ್ಷಿಸಬಾರದು:
- ಕಡಿಮೆಯಾಗದ ಅಥವಾ ಹೆಚ್ಚಾಗುತ್ತಿರುವ ಕೆಮ್ಮು
- ಉಸಿರಾಟದ ತೊಂದರೆ
- ಎದೆ ನೋವು
- ಯಾವುದೇ ಪ್ರಯತ್ನವಿಲ್ಲದೆ ತೂಕ ಕಡಿಮೆಯಾಗುವುದು
- ಕೆಮ್ಮುವಾಗ ರಕ್ತ ಬರುವುದು
- ಸಾಮಾನ್ಯಕ್ಕಿಂತ ಹೆಚ್ಚು ದಣಿವು ಅಥವಾ ಶಕ್ತಿ ಕುಂದಿದ ಅನುಭವ
ಇದನ್ನೂ ಓದಿ: Vishwavani Health: ಸಿಹಿ ತಿಂದರೆ ಒತ್ತಡ ನಿವಾರಣೆಯಾಗುತ್ತೆ ಎನ್ನುವುದು ನಿಜವೆ? ಈ ಬಗ್ಗೆ ತಜ್ಞರು ಹೇಳುವುದೇನು?
ಈ ಕೆಲವು ಲಕ್ಷಣಗಳು ಚಿಕಿತ್ಸೆಯ ಪರಿಣಾಮವಾಗಿರಬಹುದು. ಆದರೆ, ಕೆಲವು ಲಕ್ಷಣಗಳಿಗೆ ಸೂಕ್ತ ವೈದ್ಯಕೀಯ ತಪಾಸಣೆ ಅಗತ್ಯವಾಗಬಹುದು.
ಚೇತರಿಕೆಯ ಮತ್ತೊಂದು ಪ್ರಮುಖ ಅಂಶವೆಂದರೆ ಮಾನಸಿಕ ಆರೋಗ್ಯ. ಕ್ಯಾನ್ಸರ್ ಮತ್ತೆ ಬರುತ್ತದೆ ಎಂಬ ಭಯ, ಸ್ಕ್ಯಾನ್‌ಗಳ ಫಲಿತಾಂಶಗಳು ಸಾಮಾನ್ಯವಾಗಿದ್ದರೂ ಉಳಿಯಬಹುದು. ಪ್ರತಿಯೊಂದು ಫಾಲೋ-ಅಪ್ ಸ್ಕ್ಯಾನ್‌ಗೂ ಮುನ್ನ ಆತಂಕವಾಗುವುದು ಸಾಮಾನ್ಯ. ತಮ್ಮ ಆರೋಗ್ಯದ ಬಗ್ಗೆ ಮತ್ತೆ ಆತ್ಮವಿಶ್ವಾಸ ಮೂಡಿಸಿಕೊಳ್ಳಲು ಅನೇಕ ರೋಗಿಗಳಿಗೆ ಸೂಕ್ತ ಮಾನಸಿಕ ಬೆಂಬಲದ ಅಗತ್ಯವಿರುತ್ತದೆ.
ಚಿಕಿತ್ಸೆಯ ನಂತರ ಆರೈಕೆಯಲ್ಲಿ ಏನು ಬದಲಾವಣೆಯಾಗುತ್ತದೆ?
ಆರೈಕೆಯ ವಿಧಾನವು ಕ್ಯಾನ್ಸರ್‌ನ ವಿಧ ಮತ್ತು ಹಂತ, ಪಡೆದ ಚಿಕಿತ್ಸೆ ಹಾಗೂ ರೋಗಿಯ ಒಟ್ಟಾರೆ ಆರೋಗ್ಯವನ್ನು ಅವಲಂಬಿಸಿರುತ್ತದೆ. ನಿಯಮಿತ ತಪಾಸಣೆ ಮತ್ತು ಸ್ಕ್ಯಾನ್‌ಗಳ ಜೊತೆಗೆ ದೈಹಿಕ ಪುನರ್ವಸತಿ, ಪೌಷ್ಟಿಕ ಆಹಾರ, ದೈಹಿಕ ಚಟುವಟಿಕೆ, ಉತ್ತಮ ನಿದ್ರೆ ಮತ್ತು ಇತರ ಆರೋಗ್ಯ ಸಮಸ್ಯೆಗಳ ನಿರ್ವಹಣೆಯೂ ಮುಖ್ಯವಾಗುತ್ತದೆ.
ಶ್ವಾಸಕೋಶದ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗಳಿಗೆ ಉಸಿರಾಟದ ವ್ಯಾಯಾಮಗಳು ಮತ್ತು ದೈಹಿಕ ಪುನರ್ವಸತಿ ದೈನಂದಿನ ಜೀವನದಲ್ಲಿ ಗಮನಾರ್ಹ ಬದಲಾವಣೆ ತರಬಹುದು. ಟಾರ್ಗೆಟೆಡ್ ಥೆರಪಿ ಅಥವಾ ಇಮ್ಯುನೋಥೆರಪಿ ಪಡೆಯುತ್ತಿರುವ ರೋಗಿಗಳಲ್ಲಿ, ಚಿಕಿತ್ಸೆ ಅಧಿಕೃತವಾಗಿ ಮುಗಿದ ನಂತರವೂ ಕಾಣಿಸಿಕೊಳ್ಳಬಹುದಾದ ಅಡ್ಡಪರಿಣಾಮಗಳ ಬಗ್ಗೆ ವೈದ್ಯರು ಎಚ್ಚರಿಕೆಯಿಂದ ಗಮನಹರಿಸುತ್ತಾರೆ.
ಚೇತರಿಕೆಯಲ್ಲಿ ರೋಗಿಯ ಪಾತ್ರವೇನು?
ಚಿಕಿತ್ಸೆಯ ನಂತರ ರೋಗಿಗಳು ಕೇವಲ ಆರೈಕೆಯನ್ನು ಪಡೆಯುವುದರಿಂದ ತಮ್ಮ ಆರೋಗ್ಯದ ಆರೈಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಹಂತಕ್ಕೆ ಸಾಗುತ್ತಾರೆ. ತಂಬಾಕಿನಿಂದ ದೂರವಿರುವುದು, ಸಾಧ್ಯವಾದಷ್ಟು ದೈಹಿಕವಾಗಿ ಸಕ್ರಿಯವಾಗಿರುವುದು, ಎಲ್ಲಾ ಫಾಲೋ-ಅಪ್ ತಪಾಸಣೆಗಳಿಗೆ ಹಾಜರಾಗುವುದು ಮತ್ತು ಹೊಸ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರಿಗೆ ತಿಳಿಸುವುದು ಇದರಲ್ಲಿ ಸೇರಿದೆ. ಈ ಸಣ್ಣ ಹೆಜ್ಜೆಗಳು ಕಾಲಕ್ರಮೇಣ ದೊಡ್ಡ ಬದಲಾವಣೆಯನ್ನು ತರಬಹುದು.
ಚಿಕಿತ್ಸೆಯ ನಂತರದ ಬದುಕುಳಿಯುವಿಕೆಯ ಆರೈಕೆ (Survivorship) ಎಲ್ಲಿ ಬರುತ್ತದೆ?
ಚಿಕಿತ್ಸೆಯ ಕೊನೆಯಲ್ಲಿ ಮಾತ್ರವಲ್ಲ, ಚಿಕಿತ್ಸೆಯ ಆರಂಭದಿಂದಲೇ Survivorship ಕುರಿತು ಚರ್ಚೆ ನಡೆಯಬೇಕು. ಯಾವ ಲಕ್ಷಣಗಳ ಬಗ್ಗೆ ಗಮನಹರಿಸಬೇಕು, ಯಾವಾಗ ತಪಾಸಣೆಗೆ ಮರಳಬೇಕು, ಯಾವ ಲಕ್ಷಣಗಳಿಗೆ ತುರ್ತು ವೈದ್ಯಕೀಯ ಗಮನ ಅಗತ್ಯ ಮತ್ತು ಯಾವುದೇ ಸಮಸ್ಯೆ ಕಂಡು ಬಂದರೆ ಯಾರನ್ನು ಸಂಪರ್ಕಿಸಬೇಕು ಎಂಬುದನ್ನು ಪ್ರತಿಯೊಬ್ಬ ರೋಗಿಯೂ ತಿಳಿದುಕೊಳ್ಳುವ ಹಕ್ಕು ಹೊಂದಿದ್ದಾರೆ.
ಶ್ವಾಸಕೋಶದ ಕ್ಯಾನ್ಸರ್‌ನಿಂದ ಬದುಕುಳಿಯುವುದು ಸಣ್ಣ ಸಾಧನೆಯಲ್ಲ; ಅದು ದೊಡ್ಡ ಗೆಲುವು. ಆದರೆ ಉತ್ತಮ ಕ್ಯಾನ್ಸರ್ ಆರೈಕೆ ಎಂದರೆ ರೋಗವನ್ನು ದೂರವಿಡುವುದರಲ್ಲೇ ಕೊನೆಗೊಳ್ಳ ಬಾರದು. ಬದುಕುಳಿದವರು ತಮ್ಮ ಶಕ್ತಿ ಮತ್ತು ದೈಹಿಕ ಸಾಮರ್ಥ್ಯವನ್ನು ಮರಳಿ ಪಡೆಯಲು, ಚಿಕಿತ್ಸೆಯ ನಂತರ ಉಳಿದಿರುವ ಪರಿಣಾಮಗಳನ್ನು ನಿರ್ವಹಿಸಲು ಮತ್ತು ಕ್ಯಾನ್ಸರ್ ಮತ್ತೆ ಬರುವ ಭಯವು ಅವರ ಜೀವನವನ್ನು ಆವರಿಸದಂತೆ ತಮ್ಮ ಸಹಜ ಜೀವನಕ್ಕೆ ಮರಳಲು ಸಹಾಯ ಮಾಡುವುದು ನಿಜವಾದ ಗುರಿಯಾಗಬೇಕು.