Vishwavani Health: ಸಿಹಿ ತಿಂದರೆ ಒತ್ತಡ ನಿವಾರಣೆಯಾಗುತ್ತೆ ಎನ್ನುವುದು ನಿಜವೆ? ಈ ಬಗ್ಗೆ ತಜ್ಞರು ಹೇಳುವುದೇನು?
ಸಾಮಾನ್ಯವಾಗಿ ಹೆಚ್ಚು ಒತ್ತಡವಾದಾಗ ಚಾಕೊಲೆಟ್, ಐಸ್‌ಕ್ರೀಮ್ ಅಥವಾ ಏನಾದರೂ ಒಂದು ಸಿಹಿ ಪದಾರ್ಥವನ್ನು ತಿನ್ನುವ ಹಂಬಲವಾಗುವುದು ಯಾಕೆ? ಸಿಹಿ ಎಲ್ಲರಿಗೂ ಇಷ್ಟವಾಗುವುದು ಯಾಕೆ? ಒತ್ತಡ ಕಡಿಮೆ ಮಾಡಲು ಸಿಹಿ ತಿನ್ನುವುದು ಸರಿಯೇ? ಈ ಕುರಿತು ವಿಜ್ಞಾನ ಹೇಳುವುದೇನು? ಮುಂತಾದ ವಿಚಾರಗಳ ಬಗ್ಗೆ ಮೈಸೂರು ವಿವಿಯ ಡಾ. ಸುತ್ತೂರು ಮಾಲಿನಿ ನೀಡಿರುವ ಮಾಹಿತಿ ಇಲ್ಲಿದೆ.
ಡಾ. ಸುತ್ತೂರು ಮಾಲಿನಿ -
ಬೆಂಗಳೂರು: ಇವತ್ತು ಎಲ್ಲರ ಜೀವನವೂ ಒತ್ತಡದಿಂದಲೇ ತುಂಬಿದೆ. ಇದರೊಂದಿಗೆ ನಮ್ಮ ಆಹಾರ ಕ್ರಮಗಳು, ದಿನಚರಿಯಲ್ಲೂ ಬದಲಾವಣೆಗಳಾಗಿವೆ. ಇದು ನೇರವಾಗಿ ನಮ್ಮ ಆರೋಗ್ಯದ (Health tips) ಮೇಲೆ ಪರಿಣಾಮ ಬೀರುತ್ತಿದೆ ಎನ್ನುತ್ತಾರೆ ಮೈಸೂರು ಮೈಸೂರು ವಿಶ್ವವಿದ್ಯಾಲಯದ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಸುತ್ತೂರು ಮಾಲಿನಿ (Dr. Suttur Malini). ವಿಶ್ವವಾಣಿ ಹೆಲ್ತ್ (Vishwavani Health) ಯುಟ್ಯೂಬ್ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಒತ್ತಡ ಉಂಟಾದಾಗ ಸಿಹಿ ತಿನ್ನುವ ಬಯಕೆ ಆಗುವುದು ಸಾಮಾನ್ಯ. ಯಾಕೆಂದರೆ ಒತ್ತಡ ಉಂಟಾದಾಗ ನಮ್ಮ ದೇಹಕ್ಕೆ ಅದನ್ನು ನಿವಾರಿಸಿಕೊಳ್ಳಲು ಹೆಚ್ಚಿನ ಶಕ್ತಿ ಬೇಕಾಗುತ್ತದೆ. ಇದರಿಂದ ಅದು ಬಹಳ ಬೇಗ ತೃಪ್ತಿ ಕೊಡುವ ಸಿಹಿ ತಿನಿಸುಗಳತ್ತ ಮನಸ್ಸನ್ನು ಸೆಳೆಯುತ್ತದೆ ಎಂದು ಅವರು ಹೇಳಿದರು.
ಡಾ. ಸುತ್ತೂರು ಮಾಲಿನಿ ಜತೆಗಿನ ಸಂದರ್ಶನ ಇಲ್ಲಿದೆ:
ಸಿಹಿ ತಿನ್ನುವ ಬಯಕೆಯಾಗುವುದು ಕೇವಲ ಹಂಬಲ, ಆಸೆಯಲ್ಲ. ಇದರಲ್ಲಿ ಹಾರ್ಮೋನ್, ಮೆದುಳು, ಕರುಳಿನ ಬ್ಯಾಕ್ಟೀರಿಯಾಗಳ ಪಾತ್ರವೂ ಇದೆ. ಹಿಂದಿನ ಕಾಲದಲ್ಲಿ ಸಿಹಿ ಎಂದರೆ ಕೇವಲ ಪಾಯಸವಾಗಿತ್ತು. ಆದರೆ ಇವತ್ತು ಸಿಹಿಯಲ್ಲಿ ಸಾವಿರಾರು ಬಗೆಯ ಖಾದ್ಯಗಳಿವೆ. ಶುಭ ಸಮಾರಂಭಗಳಿಗೆ ಹೋದರೆ ಕನಿಷ್ಠ 2- 3 ಬಗೆಯ ಸಿಹಿ ತಿನ್ನಲು ಸಿಗುತ್ತದೆ ಎಂದು ಅವರು ಹೇಳಿದರು.
ಚಾಕೊಲೆಟ್, ಐಸ್‌ಕ್ರೀಮ್ ಎನ್ನುವುದು ಕೇವಲ ಮಕ್ಕಳನ್ನು ಮಾತ್ರವಲ್ಲ ವಯಸ್ಸಾದವರನ್ನು ಕೂಡ ಸೆಳೆಯುತ್ತದೆ. ಸಿಹಿಯಲ್ಲಿರುವ ಗ್ಲೋಕೋಸ್ ಅಂಶ ರಕ್ತಕ್ಕೆ ಸೇರಿಕೊಂಡು ಬಹಳ ಬೇಗನೆ ಮೆದುಳಿನ ಬೇರೆಬೇರೆ ಭಾಗಗಳನ್ನು ತಲುಪುತ್ತದೆ. ಇದರಿಂದ ರಿವಾರ್ಡಿಂಗ್ ಹಾರ್ಮೋನ್ ಡೊಕೋಮೈನ್ ಬಿಡುಗಡೆಯಾಗುತ್ತದೆ. ಒಂದು ಬಾರಿ ಡೊಕೋಮೈನ್ ಬಿಡುಗಡೆಯಾದರೆ ತೃಪ್ತಿ ಆಗಿದೆ ಎಂದರ್ಥ. ಆದರೆ ಇದರೊಂದಿಗೆ ಕ್ರೆಪ್ ಜೆನ್ ಜಿನ್ ಬಿಡುಗಡೆಯಾಗುತ್ತದೆ. ಇದು ದೇಹದಲ್ಲಿ ಗ್ಲೋಕೋಸ್ ರೋಲೋಕಾಸ್ಟರ್ ಉಂಟು ಮಾಡುತ್ತದೆ. ಇದರಿಂದ ಸಿಹಿ ತಿನ್ನುವ ಬಯಕೆ ಮತ್ತಷ್ಟು ಹೆಚ್ಚಾಗುತ್ತದೆ ಎನ್ನುತ್ತಾರೆ ಅವರು.
ಆರೋಗ್ಯಕ್ಕೆ ಹಾಳು ಎಂದು ಗೊತ್ತಿದ್ದರೂ ಪಿಜ್ಜಾ, ಬರ್ಗರ್ ಸೇವಿಸೋದ್ಯಾಕೆ?
ಸಾಮಾನ್ಯವಾಗಿ ಒತ್ತಡ ನಿವಾರಣೆಗೆ ಸಿಹಿ ಖಾದ್ಯಗಳ ಸೇವನೆ ಮಾಡುವುದು ಅತ್ಯಂತ ಕೆಟ್ಟ ನಿಯಮ ಪಾಲನೆಯಾಗಿದೆ. ಇದು ಮದ್ಯಪಾನ, ಧೂಮಪಾನದಂತೆ ಅಪಾಯಕಾರಿಯಾಗಿದೆ. ಇದರಿಂದ ಜೀವನದ ಸಮಸ್ಯೆ ನಿವಾರಣೆಯಾಗುವುದಿಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಹೆಚ್ಚು ಸಿಹಿ ತಿನ್ನುವುದರಿಂದ ಆಹಾರ ತಿಂದ ಮೇಲೆ ತೃಪ್ತಿಯನ್ನು ಕೊಡುವ ಲೆಪ್ಟಿನ್ ಗ್ರೆಲಿನ್ ಹಾರ್ಮೋನ್ ನ ರೇಶಿಯೋ ದಲ್ಲಿ ವ್ಯತ್ಯಾಸಗಳಾಗುತ್ತದೆ. ಹೀಗಾಗಿ ನಮಗೆ ಎಷ್ಟೇ ಆಹಾರ ತಿಂದರೂ ಅದು ತೃಪ್ತಿಯನ್ನು ಕೊಡುವುದಿಲ್ಲ. ಇದರ ಅರ್ಥ ದೇಹದಲ್ಲಿ ಲೆಪ್ಟಿನ್ ಗ್ರೆಲಿನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದಾಗಿದೆ ಎಂದರು.
ಸಕ್ಕರೆಯನ್ನು ತಿನ್ನುವ ಹಂಬಲ ಕೇವಲ ಆಸೆಯಲ್ಲ. ಇದು ದೇಹದಲ್ಲಿ ಬ್ಯಾಕ್ಟೀರಿಯಾಗಳ ವೈವಿಧ್ಯತೆಯಲ್ಲೂ ಕೂಡ ವ್ಯತ್ಯಾಸ ಉಂಟು ಮಾಡುತ್ತದೆ. ಇದು ನೇರವಾಗಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಇನ್ನು ಸಿಹಿಯಲ್ಲಿ ಅಮೈನೋ ಆಸಿಡ್ ಸೆರೋಟಿನ್ ಹಾರ್ಮೋನ್ ಬಿಡುಗಡೆಗೆ ಕಾರಣವಾಗುತ್ತದೆ. ಇದು ಮೂಡ್ ಹಾರ್ಮೋನ್ ಆಗಿರುವುದರಿಂದ ನಮಗೆ ಸಿಹಿ ತಿಂದಾಗ ಒತ್ತಡ ನಿವಾರಣೆಯಾಗುತ್ತದೆ. ಆದರೆ ಇದು ಸಮಸ್ಯೆಗಳಿಗೆ ಪರಿಹಾರವಲ್ಲ ಎಂದರು.
ಜೀರ್ಣಕ್ರಿಯೆ ಹೆಚ್ಚಿಸಲು ಯಾವೆಲ್ಲ ಆಹಾರ ಸೇವಿಸಬೇಕು? ಕಾಂಬಿನೇಷನ್ ಹೇಗಿರಬೇಕು?
ದೇಹ ಬದಲಾದ ವಾತಾವರಣಕ್ಕೆ ಹೊಂದಿಕೊಳ್ಳಲು ಮಾರ್ಗಗಳನ್ನು ಹುಡುಕುತ್ತದೆ. ಅಪರೂಪಕ್ಕೆ ಸಿಹಿ ತಿಂದರೆ ಪರ್ವಾಗಿಲ್ಲ. ಆದರೆ ಪ್ರತಿ ದಿನ ಸಿಹಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೀಗಾಗಿ ಸಿಹಿ ತಿನ್ನುವ ಮೊದಲು ಯೋಚನೆ ಮಾಡಬೇಕು. ಸಿಹಿ ತಿನ್ನುವ ಬಯಕೆ ಉಂಟಾದಾಗ ಮನೆಯಲ್ಲೇ ಹೆಸರು ಬೆಳೆ, ಗಸೆಗಸೆ ಪಾಯಸ ಮಾಡಿ ತಿನ್ನಬಹುದು. ಇದರೊಂದಿಗೆ ಹಣ್ಣು, ಸೊಪ್ಪು, ತರಕಾರಿ ಹೆಚ್ಚು ಸೇವಿಸಬೇಕು. ನಿದ್ರೆ ಚೆನ್ನಾಗಿ ಇರಬೇಕು, ನೀರು ಕುಡಿಯಬೇಕು, ವ್ಯಾಯಾಮ ಮಾಡಬೇಕು. ಇದರಿಂದ ಅತಿಯಾಗಿ ಸಿಹಿ ತಿನ್ನಬೇಕು ಎನ್ನುವ ಬಯಕೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು ಎನ್ನುತ್ತಾರೆ ಡಾ. ಸುತ್ತೂರು ಮಾಲಿನಿ.