ದೆಹಲಿ: ಅಡುಗೆ ಮನೆಯಲ್ಲಿ ಹೆಚ್ಚಾಗಿ ಬಳಸುವ ಆಹಾರ ಪದಾರ್ಥಗಳಲ್ಲಿ ಬೆಳ್ಳುಳ್ಳಿ (Garlic Benefits) ಕೂಡ ಒಂದು. ಕೇವಲ ಅಡುಗೆಯ ರುಚಿ ಹೆಚ್ಚುಮಾಡುವುದಲ್ಲದೆ ಬೆಳ್ಳುಳ್ಳಿಯನ್ನು ಹಿಂದಿನ ಕಾಲದಿಂದಲೂ ಔಷಧೀಯ ಗುಣಗಳಿಗಾಗಿ ಬಳಸಲಾಗುತ್ತಿದೆ. ಇದರಲ್ಲಿರುವ 'ಆಲಿಸಿನ್' ಎಂಬ ಸಂಯುಕ್ತವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಸೋಂಕುಗಳ ವಿರುದ್ಧ ಹೋರಾಡಿ ಯಾವುದೇ ರೋಗ ಬರದಂತೆ ತಡೆಯುತ್ತದೆ. ಇದರಿಂದ ಸಿಗುವ ಹಲವು ಆರೋಗ್ಯ ಪ್ರಯೋಜನಗಳ ಬಗ್ಗೆ ತಜ್ಞರೊಬ್ಬರು ಮಾಹಿತಿ ನೀಡಿದ್ದಾರೆ.
ರೋಗನಿರೋಧಕ ಶಕ್ತಿ ಹೆಚ್ಚು ಮಾಡುತ್ತದೆ
ಬೆಳ್ಳುಳ್ಳಿಯಲ್ಲಿ ಆ್ಯಂಟಿಟಿಆಕ್ಸಿಡೆಂಟ್ ಪ್ರಮಾಣಗಳು ಅಧಿಕವಾಗಿದೆ. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ವಿರುದ್ಧ ಹೋರಾಡಿ ಸೋಂಕುಗಳಿಂದ ದೇಹವನ್ನು ರಕ್ಷಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವ ಮತ್ತು ಚೈತನ್ಯವನ್ನು ಹೆಚ್ಚಿಸುವ ಔಷಧವಾಗಿ ಕಾರ್ಯನಿರ್ವಹಿಸುತ್ತದೆ.
ಹೃದಯದ ಆರೋಗ್ಯ ಕಾಪಾಡುತ್ತದೆ
ಬೆಳ್ಳುಳ್ಳಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ರಕ್ತಸಂಚಾರವನ್ನು ಸರಾಗವಾಗಿ ಇರಿಸುತ್ತದೆ. ಇದರಿಂದ ಅಧಿಕ ರಕ್ತದೊತ್ತಡ ಹಾಗೂ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು. ಅದೇ ರೀತಿ ಇದರ ಸೇವನೆಯೂ ರಕ್ತದಲ್ಲಿರುವ ಹಾನಿಕಾರಕ ಕಲ್ಮಶಗಳು ಮತ್ತು ವಿಷಕಾರಿ ಅಂಶಗಳು ದೇಹದಿಂದ ಹೊರಹೋಗುವಂತೆ ಮಾಡುತ್ತದೆ.
ಅಗ್ಗವಾಗಿ ಸಿಗುವ ಸೀಬೆ ಹಣ್ಣಿನ ಆರೋಗ್ಯ ಲಾಭದ ಬಗ್ಗೆ ನಿಮಗೆ ಗೊತ್ತೆ?
ಜೀರ್ಣಕ್ರಿಯೆಗೆ ಸಹಕಾರಿ
ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರದಿಂದ ಬಳಲುತ್ತಿದ್ದರೆ ಬೆಳ್ಳುಳ್ಳಿಯನ್ನು ಸೇವಿಸಬಹುದು. ಇದು ಆಮ್ಲೀಯತೆಯನ್ನು ತಡೆದು ಹೊಟ್ಟೆ ಉಬ್ಬುವುದನ್ನು ನಿವಾರಿಸುತ್ತದೆ. ಬೆಳಗಿನ ಉಪಾಹಾರಕ್ಕೆ ಮೊದಲು ಬೆಳ್ಳುಳ್ಳಿ ಸೇವಿಸುವುದರಿಂದ ದಿನವಿಡೀ ಸುಗಮ ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ
ಬೆಳ್ಳುಳ್ಳಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ, ಇದು ಮಧುಮೇಹ ಇದ್ದವರಿಗ ಪ್ರಯೋಜನಕಾರಿಯಾಗಿದೆ. ಇದರ ಸಲ್ಫರ್ ಸಂಯುಕ್ತಗಳು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸಿ ಗ್ಲೂಕೋಸ್ ಚಯಾಪಚಯವನ್ನು ಸುಧಾರಿಸುತ್ತದೆ,
ತೂಕ ಇಳಿಕೆಗೆ ಸಹಕಾರಿ
ಬೆಳಗ್ಗೆ ಹಸಿ ಬೆಳ್ಳುಳ್ಳಿ ಸೇವಿಸುವುದರಿಂದ ದೇಹದ ಕೊಬ್ಬು ಕರಗುತ್ತದೆ. ಅಲ್ಲದೆ, ಇದು ಪದೇ ಪದೆ ಹಸಿವಾಗುವುದನ್ನು ತಡೆಯುತ್ತದೆ. 1ರಿಂದ 2 ಹಸಿ ಬೆಳ್ಳುಳ್ಳಿ ಎಸಳುಗಳನ್ನು ಲಘುವಾಗಿ ಜಜ್ಜಿ, ಉಗುರು ಬೆಚ್ಚಗಿನ ನೀರಿನೊಂದಿಗೆ ನುಂಗಬಹುದು. ಬೆಳ್ಳುಳ್ಳಿಯ ಖಾರ ತಡೆಯಲು ಜೇನುತುಪ್ಪ ಸೇರಿಸಿ ಸೇವಿಸಬಹುದು. ಆದರೆ ಅತೀಯಾಗಿ ಸೇವಿಸುವುದು ಒಳಿತಲ್ಲ.