ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಕಲ್ಲಂಗಡಿಯೆಂಬ ರಸಭರಿತ ಹಣ್ಣಿನ ಸತ್ವಗಳು ಗೊತ್ತೇ?

ಬಿಸಿಲಿನಲ್ಲಿ ದಣಿದು ಬಂದಾಗ ಕೆಂಪುಕೆಂಪಾದ, ತಣ್ಣನೆಯ, ರಸಭರಿತ ಕಲ್ಲಂಗಡಿ ಹಣ್ಣುಗಳನ್ನು ಯಾರಾದರೂ ಕೈಗಿತ್ತರೆ? ಹಣ್ಣು ಕೊಟ್ಟವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳಿಗಾಗುವಷ್ಟು ಆಶೀರ್ವದಿಸುತ್ತೇವೆ! ಕಣ್ಣಿಗೆ ಆಕರ್ಷಕವಾದ, ತಿನ್ನುವುದಕ್ಕೆ ಗರಿಗರಿಯಾದರೂ ರಸಭರಿತವಾದ ಅಪ್ಪಟ ಬೇಸಿಗೆಯ ಹಣ್ಣು. ಈ ಹಣ್ಣು ತಿನ್ನುವುದರ ಲಾಭಗಳೇನು ಗೊತ್ತೇ?..

ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಒಳಿತೇನು?.

Profile Pushpa Kumari Apr 25, 2025 7:00 AM

ನವದೆಹಲಿ: ಬಾಯಾರಿದವರಿಗೆ ನೀರು, ಹಸಿದವರಿಗೆ ಅನ್ನ ಕಂಡಾಗ ಆದಷ್ಟೇ ಖುಷಿ, ಬಿಸಿಲಲ್ಲಿ ದಣಿದವರಿಗೆ ಕಲ್ಲಂಗಡಿ ಕಂಡಾಗ ಆಗಬಹುದು. ಕಲ್ಲಂಗಡಿಯ ಮಹಿಮೆಯೇ ಅಂಥಾದ್ದು. ಹಾಗೆಂದೇ ಬಿಸಿಲಿನಲ್ಲಿ ದಣಿದು ಬಂದಾಗ ಕೆಂಪುಕೆಂಪಾದ, ತಣ್ಣನೆಯ, ರಸಭರಿತ ಕಲ್ಲಂಗಡಿ (Watermelon) ಹಣ್ಣುಗಳನ್ನು ಯಾರಾದರೂ ಕೈಗಿತ್ತರೆ? ಹಣ್ಣು ಕೊಟ್ಟವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳಿಗಾಗುವಷ್ಟು ಆಶೀರ್ವದಿಸುತ್ತೇವೆ! ಕಣ್ಣಿಗೆ ಆಕರ್ಷಕವಾದ, ತಿನ್ನುವುದಕ್ಕೆ ಗರಿಗರಿಯಾದರೂ ರಸಭರಿತವಾದ ಅಪ್ಪಟ ಬೇಸಿಗೆಯ ಹಣ್ಣು. ಈ ಹಣ್ಣು ತಿನ್ನುವುದರ ಲಾಭಗಳೇನು ಗೊತ್ತೇ?

ತೂಕ ಇಳಿಕೆ: ತಿನ್ನುವುದಕ್ಕೆ ಸಿಹಿ ಎನಿಸುವ ಈ ಹಣ್ಣು, ಒಂದು ಸರ್ವಿಂಗ್‌ನಲ್ಲಿ ೬.೨ ಗ್ರಾಂನಷ್ಟು ಸಕ್ಕರೆಯನ್ನು ಮಾತ್ರವೇ ದೇಹಕ್ಕೆ ನೀಡುತ್ತದೆ. ಮಾತ್ರವಲ್ಲ, ಇದರಲ್ಲಿರುವ ಅಪಾರ ಪ್ರಮಾಣದ ನೀರು ಮತ್ತು ನಾರಿನ ಅಂಶಗಳು ಬಹುಬೇಗನೆ ಹೊಟ್ಟೆ ತುಂಬಿಸುತ್ತವೆ ಮತ್ತು ದೀರ್ಘಕಾಲದವರೆಗೆ ತುಂಬಿಸಿಯೇ ಇಡುತ್ತವೆ. ಕುತೂಹಲದ ಅಂಶವೆಂದರೆ, ಇದನ್ನು ತಿಂದಾಗ ಎಷ್ಟು ಕ್ಯಾಲರಿ ಹೊಟ್ಟೆ ಸೇರುತ್ತದೊ ಅದಕ್ಕಿಂತ ಹೆಚ್ಚಿನ ಕ್ಯಾಲರಿಗಳು ಅದನ್ನು ಜೀರ್ಣ ಮಾಡುವುದಕ್ಕೆ ಬೇಕು. ಇದನ್ನು ನೆಗೆಟಿವ್‌ ಕ್ಯಾಲರಿ ಆಹಾರ ಎನ್ನುತ್ತಾರೆ. ಹಾಗಾಗಿ ತೂಕ ಇಳಿಕೆಗೆ ಇದು ಸೂಕ್ತ.ಆದರೆ ಒಂದು ವಿಷಯದಲ್ಲಿ ಎಚ್ಚರ ಬೇಕು. ಬೆಳಗಿನ ತಿಂಡಿಯ ಜೊತೆಗೆ ಅಥವಾ ಮಧ್ಯಾಹ್ನದ ಊಟದ ಸಂಗಡ ಅಥವಾ ಇವೆರಡರ ನಡುವೆ ಬಾಯಾಡುವುದಕ್ಕೆ ಯೋಗ್ಯವಾದ ಹಣ್ಣು ಇದು. ರಾತ್ರಿಯ ಹೊತ್ತು ಕಲ್ಲಂಗಡಿ ಹಣ್ಣು ತಿಂದರೆ, ಅಸಿಡಿಟಿ ಹೆಚ್ಚಾಗಿ ಹೊಟ್ಟೆ ಬುಡಮೇಲು ಆದೀತು, ಜೋಕೆ.

ರೋಗನಿರೋಧಕತೆ: ವಿಟಮಿನ್‌ ಸಿ ಹೆಚ್ಚಿನ ಪ್ರಮಾಣದಲ್ಲಿದೆ ಈ ಹಣ್ಣಿನಲ್ಲಿ. ಹಾಗಾಗಿ ರೋಗಗಳ ವಿರುದ್ಧ ಹೋರಾಡುವುದಕ್ಕೆ ಮತ್ತು ಗಾಯಗಳನ್ನು ಗುಣ ಪಡಿಸುವುದಕ್ಕೆ ಈ ಹಣ್ಣು ಸೂಕ್ತ. ಇದರಲ್ಲಿರುವ ವಿಟಮಿನ್‌ ಎ ಮತ್ತು ಬೀಟಾ ಕ್ಯಾರೊಟೀನ್ ಸತ್ವವು ತ್ವಚೆ ಮತ್ತು ಕೂದಲುಗಳನ್ನು ಕಾಂತಿಯುತವಾಗಿ ಇರಿಸುತ್ತದೆ.

ಹೃದಯದ ಮಿತ್ರ: ಕಲ್ಲಂಗಡಿ ಹಣ್ಣಿನಲ್ಲಿರುವ ಲೈಕೋಪೇನ್‌ ಸತ್ವವು ರಕ್ತದೊತ್ತಡ ನಿಯಂತ್ರಿಸಲು ಮತ್ತು ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ನೆರವಾಗುತ್ತದೆ ಎನ್ನುತ್ತವೆ ಅಧ್ಯಯನಗಳು. ಇದರಲ್ಲಿರುವ ಸಿಟ್ರುಲಿನ್‌ ಎಂಬ ಅಮೈನೊ ಆಮ್ಲವು ನೈಟ್ರಿಕ್‌ ಆಮ್ಲವನ್ನು ಬಿಡುಗಡೆ ಮಾಡಿ, ರಕ್ತದ ಒತ್ತಡ ಹೆಚ್ಚದಂತೆ ತಡೆಯುತ್ತದೆ. ಹಾಗಾಗಿ ಇದು ಹೃದಯದ ಆರೋಗ್ಯಕ್ಕೆ ಪೂರಕ ವಾದ ಹಣ್ಣು. ಮಾತ್ರವಲ್ಲ, ಕೊಲೆಸ್ಟ್ರಾಲ್‌ ಹೆಚ್ಚುವುದರಿಂದ ಉಂಟಾಗುವ ಆಕ್ಸಿಡೇಟಿವ್‌ ಸ್ಟ್ರೆಸ್‌ ಕಡಿಮೆ ಮಾಡುತ್ತದೆ. ಅಂದರೆ, ದೇಹದಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಮುಕ್ತ ಕಣಗಳ ನಡುವಿನ ಅಸಮತೋಲನವನ್ನು ತಡೆಯುವಲ್ಲಿ ನೆರವಾಗುತ್ತದೆ.

ದೃಷ್ಟಿಗೂ ಲಾಭ: ವಯೋ ಸಹಜವಾಗಿ ಬರಬಹುದಾದಂಥ ದೃಷ್ಟಿದೋಷ ಮತ್ತು ಕುರುಡುತನವನ್ನು ತಡೆಯುವ ಸಾಮರ್ಥ್ಯ ಲೈಕೋಪೇನ್‌ಗೆ ಇದೆ ಎನ್ನುತ್ತಾರೆ ತಜ್ಞರು. ಲೈಕೋಪೇನ್‌ ಹೇರಳವಾಗಿರುವ ಕಲ್ಲಂಗಡಿ ಹಣ್ಣಿನ ಸೇವನೆಯಿಂದ ದೃಷ್ಟಿಗೂ ಲಾಭ, ಹಲವು ರೀತಿಯಲ್ಲಿ ಕಾಡುವ ಉರಿಯೂತವನ್ನೂ ತಗ್ಗಿಸಬಹುದು.

ಚರ್ಮಕ್ಕೆ ಕಾಂತಿ: ತ್ವಚೆಗೆ ಒಳ್ಳೆಯ ಟೋನರ್‌ ಮತ್ತು ಕ್ಲೆನ್ಸರ್ ರೀತಿಯಲ್ಲಿ ಕಲ್ಲಂಗಡಿ ಕೆಲಸ ಮಾಡುತ್ತದೆ.‌ ಇದರಲ್ಲಿರುವ ವಿಟಮಿನ್‌ ಸಿ ಮತ್ತು ಎ ತತ್ವಗಳು ಚರ್ಮದಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ತೆಗೆದು, ಮೊಡವೆಗಳನ್ನು ನಿವಾರಿಸಿ, ಚರ್ಮಕ್ಕೆ ಕಾಂತಿ ನೀಡುತ್ತದೆ. ಹಾಗಾಗಿ ತಿನ್ನುವುದಕ್ಕೆ ಮಾತ್ರವಲ್ಲ, ಉಳಿದ ಹಣ್ಣುಗಳಂತೆಯೇ ಫೇಸ್‌ಪ್ಯಾಕ್‌ಗೆ ಸಹ ಇದನ್ನು ಪರಿಣಾಮಕಾರಿಯಾಗಿ ಬಳಸಬಹುದು.

ಇದನ್ನು ಓದಿ: Healthy Food: ಹಸಿ ತರಕಾರಿ ಅಥವಾ ಬೇಯಿಸಿದ ತರಕಾರಿ! ಯಾವುದು ಆರೋಗ್ಯಕ್ಕೆ ಉತ್ತಮ?

ಒಸಡಿನ ರಕ್ಷಣೆ: ಒಸಡುಗಳನ್ನು ಕಾಪಾಡುವುದಕ್ಕೆ ಇದರಲ್ಲಿರುವ ವಿಟಮಿನ್‌ ಸಿ ನೆರವಾಗುತ್ತದೆ. ಒಸಡು ಮತ್ತು ಹಲ್ಲುಗಳ ಮೇಲೆ ಪ್ಲೇಕ್‌ ಕಟ್ಟಿಕೊಳ್ಳದಂತೆ ತಡೆಯುವಲ್ಲಿಯೂ ಇದು ಪರಿಣಾಮಕಾರಿ. ಹಲ್ಲುಗಳು ಬೆಳ್ಳಗೆ ಹೊಳೆಯುವಂತೆ ಮಾಡಿ, ತುಟಿಗಳು ಒಣಗದಂತೆ ತಡೆಯುತ್ತದೆ.ಇಷ್ಟೇ ಅಲ್ಲ!: ಈ ಹಣ್ಣಿನ ಉಪಕಾರಿ ಗುಣಗಳಂತೆಯೇ ಇದರ ಬೀಜ ಮತ್ತು ಸಿಪ್ಪೆಯೂ ಪ್ರಯೋಜನಕಾರಿ. ಕುಂಬಳಕಾಯಿ ಬೀಜದಂತೆಯೇ ಹಲವು ಸದ್ಗುಣಗಳು ಕಲ್ಲಂಗಡಿ ಬೀಜಗಳಲ್ಲಿಯೂ ಇದ್ದು, ಇದನ್ನು ಒಣಗಿಸಿಟ್ಟುಕೊಂಡು ಆಹಾರದಲ್ಲಿ ಬಳಸಬಹುದು. ಸಿಪ್ಪೆಯನ್ನೂ ಪಲ್ಯ ಮಾಡಿ ಸೇವಿಸುವವರಿದ್ದಾರೆ. ಈ ಬೇಸಿಗೆಯಲ್ಲಿ ಕಲ್ಲಂಗಡಿ ತಂದು, ತಿಂದು ತಣಿಯಿರಿ.