Health Tips: ಅಂಜೂರ: ಪೋಷಕಾಂಶಗಳ ಆಗರ! ಇದರ ಆರೋಗ್ಯ ಲಾಭಗಳ ಬಗ್ಗೆ ನಮಗೆ ಗೊತ್ತಾ?
ತಿನ್ನುವುದಕ್ಕೆ ಸಿಹಿಯಾದ, ಮಾನವನ ಚರಿತ್ರೆಯಲ್ಲಿ ತನ್ನದೂ ದೀರ್ಘ ಇತಿಹಾಸ ಹೊಂದಿರುವ ಪುಟ್ಟ ಹಣ್ಣಿದು- ಹೆಸರು ಅಂಜೂರ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಸಕಲ ಗುಣಗಣ ಮಣಿ, ಪೌಷ್ಟಿ ಕಾಂಶದ ಖನಿ. ಕ್ರಿಸ್ತಪೂರ್ವದ ದಿನಗಳಲ್ಲಿ ಈಜಿಪ್ಟ್‌ನ ಪ್ರಖ್ಯಾತ ರಾಣಿಯಾಗಿದ್ದ ಕ್ಲಿಯೋ ಪಾತ್ರ ಸಹ ಅಂಜೂರ ತಿನ್ನುತ್ತಿದ್ದಳೆಂದು ಪ್ರತೀತಿ. ಇಷ್ಟು ದೀರ್ಘ ಚರಿತ್ರೆಯನ್ನು ಹೊಂದಿದೆ ಈ ಹಣ್ಣು ಎಂದಾದರೆ ಏನಿದರ ಮಹಿಮೆ?


ನವದೆಹಲಿ: ಸಾವಿರಾರು ಸಣ್ಣ ಬೀಜದಂಥ ಸಂರಚನೆಗಳಿರುವ, ತಿನ್ನುವುದಕ್ಕೆ ಸಿಹಿಯಾದ, ಮಾನವನ ಚರಿತ್ರೆಯಲ್ಲಿ ತನ್ನದೂ ದೀರ್ಘ ಇತಿಹಾಸ ಹೊಂದಿರುವ ಪುಟ್ಟ ಹಣ್ಣಿದು- ಹೆಸರು ಅಂಜೂರ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಸಕಲ ಗುಣಗಣ ಮಣಿ, ಪೌಷ್ಟಿ ಕಾಂಶದ ಖನಿ. ಕ್ರಿಸ್ತಪೂರ್ವದ ದಿನಗಳಲ್ಲಿ ಈಜಿಪ್ಟ್‌ನ ಪ್ರಖ್ಯಾತ ರಾಣಿಯಾಗಿದ್ದ ಕ್ಲಿಯೋಪಾತ್ರ ಸಹ ಅಂಜೂರ (Fig fruit) ತಿನ್ನುತ್ತಿದ್ದಳೆಂದು ಪ್ರತೀತಿ. ಇಷ್ಟು ದೀರ್ಘ ಚರಿತ್ರೆಯನ್ನು ಹೊಂದಿದೆ ಈ ಹಣ್ಣು ಎಂದಾದರೆ ಏನಿದರ ಮಹಿಮೆ? ಇಲ್ಲಿದೆ ಉತ್ತರ-
ತೂಕ ನಿರ್ವಹಣೆ: ಈ ಹಣೆಪಟ್ಟಿಯೊಂದು ಇದ್ದರೆ ಯಾರಿಗೆ ಯಾವ ಆಹಾರವನ್ನಾದರೂ ತಿನ್ನಿ ಸಬಹುದು ಎಂಬುದು ಹಳೆಯ ವರಸೆ. ಅಂಜೂರದ ವಿಷಯದಲ್ಲಿ ಹಾಗಲ್ಲ; ತೂಕ ನಿಯಂತ್ರಿ ಸುವಲ್ಲಿ ಒಳ್ಳೆಯ ಪರಿಣಾಮ ಬೀರುವುದು ನಿಜ, ಜೊತೆಗೆ ಉಳಿದ ಪಥ್ಯ-ವ್ಯಾಯಾಮಗಳೂ ಜಾರಿ ಇದ್ದಲ್ಲಿ. ನಾರಿನಂಶ ಹೇರಳವಾಗಿದ್ದು ಸಿಹಿಯೂ ಇರುವುದರಿಂದ, ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಭಾವನೆ ಕೊಡುತ್ತವೆ ಈ ಹಣ್ಣುಗಳು. ತೂಕ ಇಳಿಸುವುದಕ್ಕೆ ಮಾತ್ರವಲ್ಲ, ತೂಕ ಹೆಚ್ಚಿ ಸುವಲ್ಲಿಯೂ ಇದರ ಫಲಿತಾಂಶ ಉತ್ತಮವಾಗಿದೆ. ಇದಕ್ಕಾಗಿ ಹೆಚ್ಚಿನ ಪ್ರಮಾಣದ ಹಣ್ಣು ಗಳನ್ನು ಹಾಲಿನೊಂದಿಗೆ ದಿನವೂ ಸೇವಿಸಬೇಕು.
ಮಲಬದ್ಧತೆ ನಿವಾರಣೆ: ಉತ್ತಮ ಪ್ರಮಾಣದಲ್ಲಿ ಕರಗದಿರುವಂಥ ನಾರಿನಂಶ ಇರುವ ಈ ಹಣ್ಣು ಗಳು ಮಲಬದ್ಧತೆ ನಿವಾರಣೆಗೆ ನೆರವಾಗುತ್ತವೆ. ಮೂರು-ನಾಲ್ಕು ಅಂಜೂರಗಳನ್ನು ಚೆನ್ನಾಗಿ ಅಗಿದು ತಿಂದು, ಬೆಚ್ಚಗಿನ ನೀರನ್ನು ಕುಡಿದರೆ ಸಾಕು, ಹೊಟ್ಟೆ ಸಂತೋಷವಾಗಿರುತ್ತದೆ. ಪೈಲ್ಸ್ ಲಕ್ಷಣಗಳನ್ನು ಕಡಿಮೆ ಮಾಡುವಲ್ಲೂ ಇದು ಸಹಕಾರಿ ಎನ್ನಲಾಗಿದೆ.
ಹೃದ್ರೋಗಕ್ಕೆ ತಡೆ: ದೇಹದಲ್ಲಿ ಟ್ರೈಗ್ಲಿಸರೈಡ್ ಹೆಚ್ಚಿದಂತೆ ಹೃದ್ರೋಗಗಳ ಸಂಭವ ಹೆಚ್ಚುತ್ತದೆ. ಆದರೆ ಅಂಜೂರದಲ್ಲಿರುವ ಫೀನಾಲ್‌ಗಳು, ಒಮೇಗಾ- 3 ಮತ್ತು 6 ಫ್ಯಾಟಿ ಆಮ್ಲಗಳು ಟ್ರೈಗ್ಲಿ ಸರೈಡ್ ಪ್ರಮಾಣವನ್ನು ತಗ್ಗಿಸಬಲ್ಲವು. ಇದಲ್ಲದೆ, ಅಂಜೂರದಲ್ಲಿರುವ ಪೆಕ್ಟಿನ್ ಎಂಬ ಕರಗಬಲ್ಲ ನಾರು, ದೇಹದಲ್ಲಿರುವ ಅಧಿಕ ಕೊಲೆಸ್ಟ್ರಾಲ್ ಅಂಶವನ್ನು ಗುಡಿಸಿ ಹಾಕುತ್ತದೆ. ಇದರಿಂದ ನಮ್ಮ ಹೃದಯಾರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಕ್ಯಾನ್ಸರ್ ನಿರೋಧಕ: ದೇಹದಲ್ಲಿ ಅಂಡಲೆಯುತ್ತ ಉರಿಯೂತ ಸೃಷ್ಟಿಸುವಂಥ ಮುಕ್ತ ಕಣಗಳನ್ನು ನಿರ್ಬಂಧಿಸುವಲ್ಲಿ ಅಂಜೂರ ಪರಿಣಾಮಕಾರಿ. ಮಹಿಳೆಯರಲ್ಲಿ ಋತುಬಂಧದ ನಂತರ ಕುಸಿಯುವ ಹಾರ್ಮೋನುಗಳ ಮಟ್ಟವನ್ನು ಕಾಯ್ದುಕೊಳ್ಳಲೂ ಇವು ನೆರವಾಗುತ್ತದೆ. ಹಾಗಾಗಿ ಕೋಲನ್ ಮತ್ತು ಸ್ತನ ಕ್ಯಾನ್ಸರ್ ನಿರೋಧಿಸುವಲ್ಲಿ ಉತ್ತಮ ಕೆಲಸ ಮಾಡುತ್ತದೆ.
ಮಧುಮೇಹಕ್ಕೆ ತಡೆ: ಅಂಜೂರದ ಹಣ್ಣುಗಳು ಮಾತ್ರವಲ್ಲ, ಎಲೆಗೂ ಔಷಧೀಯ ಗುಣಗಳಿವೆ. ಪೊಟಾಶಿಯಂ ಅಧಿಕವಾಗಿರುವ ಈ ಎಲೆಗಳು ದೇಹದಲ್ಲಿ ಸಕ್ಕರೆ ಪ್ರಮಾಣಕ್ಕೆ ಕಡಿವಾಣ ಹಾಕು ವಲ್ಲಿ ಗಣನೀಯ ಪಾತ್ರ ವಹಿಸುತ್ತವೆ. ಇದರ ಸೇವನೆಯಿಂದ ಹೆಚ್ಚಿನ ಸರ್ಕಸ್ಸಿಲ್ಲದೆ ನಮ್ಮ ಯಕೃತ್ತನ್ನು ಡಿಟಾಕ್ಸ್ ಮಾಡಬಹುದು.
ಇದನ್ನು ಓದಿ:Health Tips: ಆಕಳಿಕೆ ಅತಿಯಾದರೆ ತೊಂದರೆಯೇ?
ಅನೀಮಿಯ ಮುಕ್ತ: ರಕ್ತಹೀನತೆ ತಡೆಯುವಲ್ಲಿ ಅಂಜೂರ ಮಹತ್ವದ ಕೆಲಸ ಮಾಡಬಲ್ಲದು. ನಿಯಮಿತವಾಗಿ ಅಂಜೂರ ಸೇವಿಸುವವರು ಅನೀಮಿಯದಿಂದ ದೂರ ಇರಬಹುದು ಎನ್ನುತ್ತದೆ ಆಹಾರ ವಿಜ್ಞಾನ. ಇದರಲ್ಲಿರುವ ಅತ್ಯಧಿಕ ಕಬ್ಬಿಣದಂಶ ದೇಹದಲ್ಲಿನ ಹಿಮೋಗ್ಲೋಬಿನ್ ಮಟ್ಟ ಇಳಿಯದಂತೆ ಕಾಪಾಡುತ್ತದೆ.
ಮೂಳೆಗಳ ಆರೋಗ್ಯ: ಈ ಪುಟ್ಟ ಹಣ್ಣಿನಲ್ಲಿರುವ ಕ್ಯಾಲ್ಸಿಯಂ, ಪೊಟಾಶಿಯಂ, ಮೆಗ್ನೀಶಿಯಂ ಖನಿಜಗಳು, ಮೂಳೆಗಳ ಸಾಂದ್ರತೆ ಹೆಚ್ಚಿಸಿ, ಪೊಳ್ಳಾಗದಂತೆ ಕಾಪಾಡುತ್ತವೆ. ಅತಿಯಾದ ಉಪ್ಪಿನಂಶ ಸೇವನೆಯಿಂದ ಶರೀರದಿಂದ ಕ್ಯಾಲ್ಸಿಯಂ ಸೋರಿ ಹೋಗುವುದನ್ನು ತಡೆಯುತ್ತದೆ. ವಯಸ್ಸಾಗುತ್ತಿದ್ದಂತೆ ದುರ್ಬಲವಾಗುವ ಮೂಳೆಗಳ ರಕ್ಷಣೆಗೆ ಇದರ ಸೇವನೆ ಸಹಕಾರಿಯಾದೀತು.
ಕೂದಲು-ಚರ್ಮ ರಕ್ಷಣೆ: ಕ್ಯಾಲ್ಸಿಯಂ, ಪೊಟಾಶಿಯಂ, ಮೆಗ್ನೀಶಿಯಂ, ಕಬ್ಬಿಣ, ಎ ಮತ್ತು ಸಿ ಜೀವಸತ್ವಗಳ ಗೋದಾಮಿನಂತಿದೆ ಅಂಜೂರ. ಹಾಗಾಗಿ ನಮ್ಮ ಕೂದಲು, ಚರ್ಮ, ಕಣ್ಣುಗಳ ರಕ್ಷಣೆಗೆ ಇವುಗಳ ನಿಯಮಿತ ಸೇವನೆಯೇ ಸಾಕು. ನಯವಾದ ಕೂದಲ, ನುಣುಪು ಚರ್ಮದ, ಹೊಳಪುಗಣ್ಣಿನವರು ನೀವಾಗಬಹುದು. ಇಷ್ಟು ಕಾರಣಗಳು ಸಾಲದೇ ದಿನಾ ಅಂಜೂರ ತಿನ್ನುವುದಕ್ಕೆ?