Health Tips :ಆತುರಾತುರವಾಗಿ ತಿನ್ನುತ್ತೀರಾ? ಹಾಗಾದ್ರೆ ಈ ಆರೋಗ್ಯ ಸಮಸ್ಯೆಯ ಬಗ್ಗೆ ಎಚ್ಚರ ವಹಿಸಿ!
ತಿನ್ನುವ ಕ್ರಮಕ್ಕೂ ಆರೋಗ್ಯಕ್ಕೂ ಸಂಬಂಧ ಉಂಟೇ? ಖಂಡಿತಾ ಹೌದು ಹಾಗಾದ್ರೆ ಈ ಆರೋಗ್ಯ ಸಮಸ್ಯೆಯ ಬಗ್ಗೆ ಎಚ್ಚರ ವಹಿಸಿ! ನಾವು ಆತು ರಾತುರವಾಗಿ ತಿನ್ನುವುದರಿಂದ ಹಲವು ರೀತಿಯ ಸಮಸ್ಯೆಗಳು ಕಾಡಲಿದೆ. ಸತ್ವಗಳು ಸರಿಯಾಗಿ ವಿಘಟನೆ ಗೊಳ್ಳದೆ ಹೊಟ್ಟೆ ಉಬ್ಬರಿಸುತ್ತದೆ, ಅಜೀರ್ಣ ಕಾಡುತ್ತದೆ. ಜೊಲ್ಲು ರಸದಲ್ಲಿ ಇರುವಂಥ ಪಚನಕಾರಿ ಕಿಣ್ವಗಳ ಸಹವಾಸ ಆಹಾರಗಳಿಗೆ ದೊರೆಯದೆ ಆಗುವ ಸಮಸ್ಯೆಯಿದು.
ನವದೆಹಲಿ: ʻಊಟಕ್ಕೆ ಕುಳಿತಾಗ ಯಮನೂ ಕಾಯುತ್ತಾನೆʼ ಎನ್ನುವುದೊಂದು ಹಳೆಯ ಗಾದೆ. ಅಂದರೆ ಜೀವ ತೆಗೆಯಲು ಬಂದ ಯಮನಾದರೂ ಊಟ ಮುಗಿಯುವವರೆಗೆ ಕಾಯುತ್ತಾನೆ, ಹಾಗಾಗಿ ಗಬಗಬ ತಿನ್ನದೆ ನಿಧಾನವಾಗಿ ಆಗಲಿ ಊಟ ಎನ್ನುವುದು ಇದರ ಸಾರ. ಯಾಕೆ ಬಂತು ಈ ಮಾತು? ಜಗತ್ತಿನ ಬಹಳಷ್ಟು ಪರಂಪರೆಗಳಲ್ಲಿ ಊಟಕ್ಕೊಂದು ಶೈಲಿಯಿದೆ, ಲಯವಿದೆ(Health Tips). ಸಿಕ್ಕಿದ್ದನ್ನು ಸಿಕ್ಕಿದಂತೆ ಮುಕ್ಕುವ ಕ್ರಮ ಯಾವುದೇ ಸಂಸ್ಕೃತಿಗಳಲ್ಲಿ ಇಲ್ಲ. ಹೊತ್ತಿಂದ ಹೊತ್ತಿಗೆ ಸರಿಯಾಗಿ ಕುಳಿತು, ಸಾವಧಾನವಾಗಿ ಅಗಿದು, ಆಸ್ವಾದಿಸಿ ತಿನ್ನುವುದನ್ನು ಜಗತ್ತಿನ ಎಲ್ಲ ಸಂಸ್ಕೃತಿಗಳು ಮಾನ್ಯ ಮಾಡುತ್ತವೆ. ಆದರೀಗೇನಾಗಿದೆ?
ಹಳೆಯ ಆ ಎಲ್ಲ ಕ್ರಮಗಳನ್ನು ಹಿಂದಿಕ್ಕಿ ನಾವು ಮುಂದುವರಿದಿದ್ದೇವೆ. ಕೂತು, ನಿಂತು, ಓಡಾಡುತ್ತಾ, ಮಲಗಿಕೊಂಡು- ಹೀಗೆ ಯಾವುದೇ ಭಂಗಿಯಲ್ಲಿ ತಿನ್ನುವುದು ನಮಗೆ ಬಾಹಿರವಲ್ಲ. ಸ್ಥಳ ಯಾವುದೇ ಆದರೂ ನಮಗದು ಲೆಕ್ಕಕ್ಕಿಲ್ಲ. ತಿನ್ನುವ ಸಮಯವೂ ಗಡಿಯಾರವನ್ನು ಮೀರಿದ್ದು. ಇನ್ನು ತಿನ್ನುವ ಆಹಾರವೇನು ಎಂಬುದಂತೂ ದೇವರಿಗೇ ಪ್ರೀತಿ! ಇಷ್ಟಾದ ಮೇಲೆ ಈಗ ಯಮ ಯಾವುದಕ್ಕೂ ಕಾಯದೆ, ಯಾರೆಂದರೆ ಅವರನ್ನು ಹೊತ್ತೊಯ್ಯುತ್ತಿದ್ದಾನೆ ಅನ್ನುವುದು ಖಂಡಿತಕ್ಕೂ ಚೇಷ್ಟೆಯಲ್ಲ. ಹಾಗಾದರೆ ತಿನ್ನುವ ಕ್ರಮಕ್ಕೂ ಆರೋಗ್ಯಕ್ಕೂ ಸಂಬಂಧ ಉಂಟೇ?
ಏನು ನಂಟು?: ನಂಟು ಖಂಡಿತವಾಗಿಯೂ ಉಂಟು ಎನ್ನುತ್ತಾರೆ ಆಹಾರ ವಿಜ್ಞಾನಿಗಳು. ಆತುರಾತುರವಾಗಿ ತಿನ್ನುವುದು, ಹಸಿವೆ ಹೆಚ್ಚಾದಾಗ ಮುಕ್ಕುವುದು, ಸಮಯವಿಲ್ಲ ಎಂಬ ನೆವದಿಂದ ಅಗಿಯದೆಯೇ ಹೊಟ್ಟೆಗಿಳಿಸುವುದು- ತಿನ್ನುವುದೇ ಹೀಗೆ ಎಂಬಷ್ಟು ಸಾಮಾನ್ಯ ಇವೆಲ್ಲ. ಇಂದು ಅಕ್ಷರಶಃ ಹತ್ತಾರು ನಿಮಿಷಗಳಲ್ಲಿ ಊಟ ಮುಗಿದಿರುತ್ತದೆ, ತಿಂಡಿಯಾದರೆ ಇನ್ನೊಂದೆರಡು ನಿಮಿಷ ಕಡಿಮೆ. ಇದರಿಂದ ನಮ್ಮ ಜೀರ್ಣಕ್ರಿಯೆ ಮತ್ತು ಚಯಾಪಚಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ತಿಳಿದಿದ್ದೇವೆಯೇ ನಾವು? ಆತುರದಲ್ಲಿ ಬಾಯಿಗೆ ತುರುಕಿಕೊಂಡು ಓಡುವುದರಿಂದ ಸಮಯ ಉಳಿಯಬಹುದು, ಆದರೆ ಆರೋಗ್ಯ ಉಳಿಯಲು ಸಾಧ್ಯವಿಲ್ಲ. ಏನು ಹಾಗೆಂದರೆ?
ಪ್ರಾರಂಭ ಎಲ್ಲಿ?: ನಮ್ಮ ದೇಹದಲ್ಲಿ ಪಚನಕ್ರಿಯೆ ಪ್ರಾರಂಭವಾಗುವುದು ಎಲ್ಲಿ ಎಂದು ಕೇಳಿದರೆ, ಹೊಟ್ಟೆಯಲ್ಲಿ ಎಂಬ ಉತ್ತರ ಬಂದೀತು. ಆದರೆ ಅದರ ಪ್ರಾರಂಭ ಬಾಯಲ್ಲಿ. ಆಹಾರವು ಲಾಲಾ ರಸದೊಂದಿಗೆ ಸೇರಿ, ಅದನ್ನು ಚೆನ್ನಾಗಿ ಅಗಿದಾಗಲೇ ಸತ್ವಗಳ ವಿಘಟನೆ ಆರಂಭ ಆಗಿರುತ್ತದೆ. ಪಿಷ್ಟಗಳ ಪರಿವರ್ತನೆಗೆ ಬೇಕಾದ ಅಮೈಲೇಸ್‌ನಂಥ ಕಿಣ್ವಗಳು ನಮ್ಮ ಜೊಲ್ಲು ರಸದಲ್ಲೇ ಇರುವುದು. ಆಹಾರ ನುಚ್ಚುನುರಿಯಾಗುವ ಕ್ರಿಯೆಯೂ ಜೀರ್ಣಾಂಗಗಳ ಕೆಲಸವನ್ನು ಸಾಕಷ್ಟು ಹಗುರ ಮಾಡುತ್ತದೆ. ಹಾಗಾಗಿ ಬಾಯಲ್ಲಿ ಅದಷ್ಟೂ ಹೊತ್ತು ಆಹಾರವು ಇರಬೇಕಾದ್ದು ಅಗತ್ಯ.
ಆಹಾರದ ತುಣುಕುಗಳು ದೊಡ್ಡದಾಗಿದ್ದರೆ ಏನು ಸಮಸ್ಯೆ? ಗಂಟಲಲ್ಲಿ ಇಳಿಯುವುದಿಲ್ಲವೇ? ಹಾಗಾದರೆ ಚಟ್ನಿಯನ್ನೆಲ್ಲ ನೇರವಾಗಿ ನುಂಗ ಬಹುದೇ? ಸರಿಯಾಗಿ ಅಗಿಯದೆಯೆ ದೊಡ್ಡದಾಗಿ ಇರುವ ಆಹಾರ ಕಣಗಳನ್ನು ನುಂಗಿದರೆ, ಗಂಟಲಲ್ಲಿ ಇಳಿದೀತು. ಆದರೆ ಆಹಾರದ ಕಣಗಳು ದೊಡ್ಡದಾಗಿದ್ದಷ್ಟೂ ಸತ್ವಗಳು ಸರಿಯಾಗಿ ವಿಘಟನೆಗೊಳ್ಳದೆ ಹೊಟ್ಟೆ ಉಬ್ಬರಿಸುತ್ತದೆ, ಅಜೀರ್ಣ ಕಾಡುತ್ತದೆ. ಜೊಲ್ಲು ರಸದಲ್ಲಿ ಇರುವಂಥ ಪಚನಕಾರಿ ಕಿಣ್ವಗಳ ಸಹವಾಸ ಆಹಾರಗಳಿಗೆ ದೊರೆಯದೆ ಆಗುವ ಸಮಸ್ಯೆಯಿದು. ಮಾತ್ರವಲ್ಲ, ಈ ದೊಡ್ಡ ಕಣಗಳನ್ನು ಜೀರ್ಣ ಮಾಡುವುದಕ್ಕೆ ಜಠರ ಮತ್ತು ಕರುಳು ಹೆಚ್ಚು ಶ್ರಮ ಹಾಕಬೇಕು. ಇದಕ್ಕೂ ಅಡ್ಡ ಪರಿಣಾಮಗಳಿವೆ.
ಆಸಿಡಿಟಿಯ ಮೂಲ: ಈ ದೊಡ್ಡ ಕಣಗಳನ್ನು ಕರಗಿಸುವುದಕ್ಕೆ ನಮ್ಮ ಜಠರವು ಹೆಚ್ಚಿಗೆ ಆಮ್ಲವನ್ನು ಉತ್ಪಾದನೆ ಮಾಡಬೇಕು. ಅದಿಲ್ಲದಿದ್ದ ಅಜೀರ್ಣ ಖಂಡಿತ. ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚುವುದರ ಪರಿಣಾಮ ನಮ್ಮೆಲ್ಲರಿಗೂ ತಿಳಿದಿದೆ. ಆಸಿಡಿಟಿ, ಎದೆಯುರಿ, ಹುಳಿತೇಗು ಮುಂತಾದ ಎಲ್ಲಾ ವಿಕಾರಗಳಿಗೂ ಇದು ಮೂಲವಾಗಬಲ್ಲದು. ಇದಿಷ್ಟಕ್ಕೇ ಮುಗಿ ಯಲಿಲ್ಲ. ಊಟಕ್ಕೆ ೨೦ ನಿಮಿಷಗಳು ಅಗತ್ಯ ಎನ್ನುವುದಕ್ಕೂ ಕಾರಣವಿದೆ. ನಮ್ಮ ಜೀರ್ಣಾಂಗಗಳಿಗೂ ಮೆದುಳಿಗೂ ನೇರ ಸಂಬಂಧವಿದೆ. ಈ ಸಂಬಂಧ ತಪ್ಪಿದರೆ ಏನಾಗುತ್ತದೆ?
ಇದನ್ನು ಓದಿ:Health tips: ತೂಕ ಇಳಿಸಬೇಕೇ? ಇಲ್ಲಿವೆ ರುಚಿಯಾದ ಚಟ್ನಿಗಳು!
ಹೊಟ್ಟೆ ತುಂಬಿದೆ ಎಂಬ ಸೂಚನೆ ದೊರೆಯುವುದಕ್ಕೆ ಇವೆರಡೂ ಒಟ್ಟಿಗೆ ಕೆಲಸ ಮಾಡುವುದು ಅಗತ್ಯ. ಹೊಟ್ಟೆ ತುಂಬಿದೆ ಎಂಬುದು ತಿಳಿಯುವುದಕ್ಕೆ ಲೆಪ್ಟಿನ್ ಎಂಬ ಚೋದಕ ಸ್ರವಿಸಬೇಕು. ಈ ಚೋದಕ ಕೆಲಸ ಮಾಡಲು ಕನಿಷ್ಠ ೨೦ ನಿಮಿಷಗಳಾದರೂ ಸಮಯ ಬೇಕು. ಅತಿ ಕಡಿಮೆ ಸಮಯದಲ್ಲಿ ಒಂದೇ ಸಮನೆ ಮುಕ್ಕಿದರೆ, ತಿಂದ ಆಹಾರದ ಪ್ರಮಾಣ ಸಿಕ್ಕಾಪಟ್ಟೆ ಆದರೂ ಹೊಟ್ಟೆ ತುಂಬಿದ ಸೂಚನೆಯೇ ಬರುವುದಿಲ್ಲ ಮೆದುಳಿನಿಂದ. ಆಗ ಮತ್ತೆ ತಿನ್ನುತ್ತಲೇ ಇರುತ್ತೇವೆ. ಅಜೀರ್ಣ, ಆಸಿಡಿಟಿ, ಚಯಾಪಚಯ ಹಾಳು, ತೂಕ ಇಳಿಸಲು ಸಾಧ್ಯವೇ ಇಲ್ಲ, ಡಯಾಬಿಟೀಸ್ ಕಾಡುತ್ತಿದೆ… ಈ ಸರಣಿ ಮುಂದುವರಿಯುತ್ತದೆ. ಹಾಗಾಗಿಯೇ ತಿನ್ನುವಾಗ ಆಸ್ವಾದಿಸಿ, ಅವಸರಿಸಬೇಡಿ, ಕನಿಷ್ಠ ೨೦ ನಿಮಿಷಗಳಾದರೂ ತೆಗೆದುಕೊಳ್ಳಿ ಎನ್ನುವುದು.