Health tips: ತೂಕ ಇಳಿಸಬೇಕೇ? ಇಲ್ಲಿವೆ ರುಚಿಯಾದ ಚಟ್ನಿಗಳು!
ತೂಕ ಇಳಿಸುವ ಮಂತ್ರವನ್ನೇ ಈಗ ಲೋಕವೆಲ್ಲ ಜಪಿಸುತ್ತಿರುವ ಹೊತ್ತಿನಲ್ಲಿ, ʻವೆಯ್ಟ್‌ಲಾಸ್ ರೆಸಿಪಿʼ ಎನ್ನುತ್ತಾ ಉಪ್ಪು-ಖಾರವಿಲ್ಲದ, ಬೋಳು ಆಹಾರವನ್ನು ಮುಂದಿಟ್ಟರೆ ಹೇಗೆ? ತೂಕ ಇಳಿಸುವ ಕೆಲಸ ಮೂರು ದಿನಕ್ಕೆ ಮುಕ್ತಾಯ ವಾಗುತ್ತದೆ. ಬದಲಿಗೆ, ತೂಕ ಇಳಿಸಿಕೊಳ್ಳಲು ರುಚಿಕರ ಅಡುಗೆಗಳನ್ನು ಚಪ್ಪರಿಸುವಂತಾದರೆ…? ಇಲ್ಲಿವೆ ಅಂಥ ಕೆಲವು ಆಯ್ಕೆಗಳು.
ನವದೆಹಲಿ: ಭಾರತೀಯ ಅಡುಗೆಗಳಲ್ಲಿ ತರಹೇವಾರಿ ಚಟ್ನಿಗಳಿಗೆ (Chutney Recipes) ಪ್ರಾಶಸ್ತ್ಯವಿದೆ. ಊಟದ ತಟ್ಟೆಯಲ್ಲಿ ಒಂದೆರಡು ಬಗೆಯ ಚಟ್ನಿಗಳಿದ್ದರೆ, ಮತ್ತೆ ಸದ್ದಿಲ್ಲದೆ ಊಟ ಮುಗಿಯುತ್ತದೆ. ಊಟ ರುಚಿಸುವುದಕ್ಕೆ ವ್ಯಂಜನಗಳು ಬೇಡವೇ? ಈ ಚಟ್ನಿಗಳನ್ನು ರುಚಿ ಕಟ್ಟಾಗಿಯೂ, ಸತ್ವಯುತವಾಗಿಯೂ, ಕಡಿಮೆ ಕ್ಯಾಲರಿಗಳಲ್ಲೂ ಮಾಡಬಹುದು. ತೂಕ ಇಳಿಸುವ ಮಂತ್ರವನ್ನೇ ಈಗ ಲೋಕವೆಲ್ಲ ಜಪಿಸುತ್ತಿರುವ ಹೊತ್ತಿನಲ್ಲಿ, ʻವೆಯ್ಟ್‌ಲಾಸ್ ರೆಸಿಪಿʼ ಎನ್ನುತ್ತಾ ಉಪ್ಪು-ಖಾರವಿಲ್ಲದ, ಬೋಳು ಆಹಾರವನ್ನು ಮುಂದಿಟ್ಟರೆ ಹೇಗೆ? ತೂಕ ಇಳಿಸುವ ಕೆಲಸ ಮೂರು ದಿನಕ್ಕೆ ಮುಕ್ತಾಯವಾಗುತ್ತದೆ. ಬದಲಿಗೆ, ತೂಕ ಇಳಿಸಿ ಕೊಳ್ಳಲು ರುಚಿಕರ ಅಡುಗೆಗಳನ್ನು ಚಪ್ಪರಿಸುವಂತಾದರೆ…? ಇಲ್ಲಿವೆ ಅಂಥ ಕೆಲವು ಆಯ್ಕೆಗಳು(Health Tips).
ಪುದೀನಾ-ಕೊತ್ತಂಬರಿ ಚಟ್ನಿ: ಈ ಎರಡೂ ಸೊಪ್ಪುಗಳು ತಾಜಾ ಇದ್ದಷ್ಟೂ ರುಚಿ, ಘಮ ಹೆಚ್ಚು. ಜೊತೆಗೆ ಶುಂಠಿ ಮತ್ತು ಹಸಿಮೆಣಸಿನ ಘಾಟೂ ಸೇರಿದರೆ, ತಿಂದ ತೃಪ್ತಿ ತಾನೇತಾನಾಗಿ ನಾಲಿಗೆಯಲ್ಲಿ ಮೂಡಬೇಕು. ಪುದೀನಾ ಸೊಪ್ಪಿಗಿರುವ ಪಚನಕಾರಿ ಗುಣಗಳು ಜೀರ್ಣಾಂಗಗಳನ್ನು ಚುರುಕು ಮಾಡುತ್ತವೆ. ಹೊಟ್ಟೆಯುಬ್ಬರ, ಅಜೀರ್ಣವನ್ನು ಹೋಗಲಾಡಿ ಸುತ್ತವೆ. ಕೊತ್ತಂಬರಿಯ ಗುಣಗಳೇ ಅನನ್ಯ. ಕೊಲೆಸ್ಟ್ರಾಲ್ ಕಡಿಮೆ ಮಾಡುವ ಸಾಮರ್ಥ್ಯದಿಂದ ಹಿಡಿದು, ಸೋಂಕುಗಳೊಂದಿಗೆ ಹೋರಾಡುವ ಗುಣಗಳು ಇದಕ್ಕಿವೆ. ಶುಂಠಿಗೆ ದೇಹದ ಚಯಾಪಚಯವನ್ನು ಹೆಚ್ಚಿಸುವ ತಾಕತ್ತಿದೆ. ಇವೆಲ್ಲವೂ ಒಟ್ಟಾಗಿ, ತಿಂದ ಆಹಾರವನ್ನು ಸಂಪೂರ್ಣ ಪಚನ ಮಾಡಿ, ಚಯಾಪಚಯವನ್ನು ಹೆಚ್ಚಿಸಿ, ಕ್ಯಾಲರಿ ಕರಗಿಸಿ, ದೇಹ ಸ್ವಾಸ್ಥ್ಯವನ್ನು ವೃದ್ಧಿಸುತ್ತವೆ.
ಟೊಮೆಟೊ ಚಟ್ನಿ: ಕೊಂಚ ಹುಳಿ-ಸಿಹಿಯಾದ, ರಸನೆಯನ್ನು ಉತ್ತೇಜಿಸುವ ಈ ಚಟ್ನಿಯ ಗುಣಗಳೂ ಅಷ್ಟೇ ವಿಶಿಷ್ಟ. ಟೊಮೆಟೊ ಜೊತೆಗೆ ಹಾಕಲಾಗುವ ಬೆಳ್ಳುಳ್ಳಿ, ಒಣ ಮೆಣಸು ಮತ್ತು ಕೊತ್ತಂಬರಿ ಬೀಜಗಳಿಗೆ ಪಾಚಕ ಶಕ್ತಿಯನ್ನು ಉತ್ತೇಜಿಸುವ ಸಾಮರ್ಥ್ಯವೂ ಇದೆ. ಟೊಮೆಟೊದಲ್ಲಿ ವಿಫುಲವಾಗಿರುವ ನಾರಿನಂಶವು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಹೆಚ್ಚಿನ ಸಮಯದವರೆಗೆ ಹಸಿವಾಗದಂತೆ ಕಾಪಾಡುತ್ತದೆ. ಟೊಮೆಟೊದ ಕ್ಯಾಲರಿ ಕಡಿಮೆಯಾದರೂ ಉತ್ಕರ್ಷಣ ನಿರೋಧಕಗಳು ಸಾಕಷ್ಟಿವೆ. ಇದರಿಂದ ದೇಹದ ಚಯಾಪಚಯವನ್ನು ಹೆಚ್ಚಿಸಬಹುದು. ಈ ಎಲ್ಲ ಕಾರಣಗಳಿಂದ ತೂಕ ಇಳಿಸುವ ಉದ್ದೇಶ ಹೊಂದಿದವರು ಸವಿಯಬಹುದಾದ ವ್ಯಂಜನವಿದು.
ಕಾಯಿ ಚಟ್ನಿ: ಸುಮ್ಮನೆ ತೆಂಗಿನಕಾಯಿ ರುಬ್ಬಿ ಚಟ್ನಿ ಮಾಡಿದ್ದನ್ನು ತಿಂದರೆ ತೂಕ ಇಳಿಸುವುದು ಹೇಗೆ ಎಂಬುದು ಸಹಜ ಪ್ರಶ್ನೆ. ಈ ಚಟ್ನಿಗೆ ಕಾಯಿಯ ಜೊತೆಗೆ ಧಾರಾಳವಾಗಿ ಕರಿಬೇವಿನ ಸೊಪ್ಪನ್ನು ಸೇರಿಸುವುದು ಮುಖ್ಯ. ಅದರಲ್ಲೂ ಬೆಳಗಿನ ತಿಂಡಿಯ ಸಮಯಕ್ಕೆ ಈ ಚಟ್ನಿ ಸೂಕ್ತ. ಕಾರಣ, ಹಸಿದ ಹೊಟ್ಟೆಗೆ ಆರೋಗ್ಯಕರ ಕೊಬ್ಬನ್ನು ನೀಡುವುದರಿಂದ, ದೇಹದಲ್ಲಿನ ಕೊಬ್ಬು ಕರಗುತ್ತದೆ ಎನ್ನುತ್ತಾರೆ ಆಹಾರ ತಜ್ಞರು. ಜೊತೆಗಿರುವ ಕರಿಬೇವಿನ ಎಲೆಗಳು ಶರೀರದ ಚಯಾಪಚಯವನ್ನು ಚುರುಕು ಮಾಡುತ್ತವೆ. ಆದರೆ ಚಟ್ನಿ ರುಚಿಯಾದ ಕಾರಣ ನೀಡಿ ಇನ್ನೊಂದಿಡ್ಲಿ ಹೆಚ್ಚಾಗಿ ಹೊಟ್ಟೆಗಿಳಿಯಬಾರದಷ್ಟೆ.
ಸೇಬು ಮತ್ತು ಚಕ್ಕೆಯ ಚಟ್ನಿ: ಸಿಹಿ ಮತ್ತು ಘಾಟು ಘಮದ ರುಚಿಕರ ಚಟ್ನಿಯಿದು. ಸೇಬಿನ ರುಚಿ ಬಾಯಲ್ಲಿನ ಲಾಲಾ ರಸವನ್ನು ಹೆಚ್ಚಿಸಿದರೆ, ಚಕ್ಕೆಯ ಉಷ್ಣತೆ ಸಂತೃಪ್ತಿಯನ್ನು ಹೆಚ್ಚಿಸುತ್ತದೆ. ಸೇಬಿನ ನೀರು ಮತ್ತು ನಾರಿನ ಅಂಶಗಳು ಹೊಟ್ಟೆಯನ್ನು ಭರ್ತಿ ಮಾಡಿದರೆ, ಚಯಾಪಚಯವನ್ನು ಹೆಚ್ಚಿಸುವುದಕ್ಕೆ ಚಕ್ಕೆ ಇದ್ದೇಇದೆ. ಜೊತೆಗೆ, ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಭಾಯಿಸಲು ದಾಲ್ಚಿನ್ನಿಯ ಅಂಶಗಳು ನೆರವಾಗುತ್ತವೆ. ಕೃತಕ ಸಿಹಿಯನ್ನು ಸೇರಿಸದೆಯೇ, ಸಿಹಿ ಚಟ್ನಿಯ ಮೂಲಕ ಬಾಯಿ ಸಿಹಿ ಮಾಡಿಕೊಳ್ಳುವ ಉತ್ತಮ ಉಪಾಯವಿದು.
ಶುಂಠಿ-ಗಜ್ಜರಿ ಚಟ್ನಿ: ಕ್ಯಾರೆಟ್ ಎಂದರೆ ಹಲ್ವಾ ಮಾಡಿಯೇ ತಿನ್ನಬೇಕೆಂದಿಲ್ಲ. ಶುಂಠಿ ಜೊತೆಗಿನ ಜುಂಜುಂ ಎನ್ನುವ ಚಟ್ನಿಯೂ ಬಾಯಲ್ಲಿ ನೀರು ತರಿಸುವಂಥದ್ದು. ಕ್ಯಾರೆಟ್‌ನಲ್ಲಿ ಕ್ಯಾಲರಿ ಕಡಿಮೆ, ಸತ್ವಗಳು ಹೆಚ್ಚು. ನಾರೂ ಸಾಕಷ್ಟಿದೆ. ಹಾಗಾಗಿ ತಿಂದ ಮೇಲೂ ಹಸಿವನ್ನು ಮುಂದೂಡಬಲ್ಲದು. ಶುಂಠಿ ದೇಹದ ಉಷ್ಣತೆಯನ್ನು ಹೆಚ್ಚಿಸುವ ಮೂಲಕ, ಚಯಾಪಚಯಕ್ಕೂ ಬಿಸಿ ತಾಗಿಸುತ್ತದೆ. ಇದರಿಂದ ಹೆಚ್ಚಿನ ಕ್ಯಾಲರಿ ಕರಗಿಸಲು ಅನುಕೂಲವಾಗುತ್ತದೆ.
ಇದನ್ನು ಓದಿ: Health Tips: ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಈ ಆಹಾರ ಕ್ರಮ ಪಾಲಿಸಿ
ಇಂಥ ರುಚಿಕರ ವ್ಯಂಜನಗಳ ಮೂಲಕ ತೂಕ ಇಳಿಸುವ ಆಯ್ಕೆಯನ್ನು ಮುಂದಿಟ್ಟರೆ? ನಿಜಕ್ಕೂ ತೂಕ ಇಳಿಸುವ ಪಾಕಗಳೆಂದರೆ ರುಚಿ ಇಲ್ಲದವೇ ಆಗಿರಬೇಕೆಂಬ ನಿಯಮವೇನಿಲ್ಲ. ರುಚಿಯಾದ ಅಡುಗೆಗಳ ಮೂಲಕವೂ ತೂಕ ಇಳಿಸುವ ಕೆಲಸಕ್ಕೆ ಮುಂದಾಗಬಹುದು. ಹಾಗೆಂದು ಜೊತೆಗಿನ ಅನ್ನವೋ ದೋಸೆಯೋ ಚಪಾತಿಯೊ ದಿನಕ್ಕಿಂತ ಹೆಚ್ಚು ಹೊಟ್ಟೆಗಿಳಿಯದಂತೆ ಜಾಗ್ರತೆ ಮಾಡಬೇಕಷ್ಟೆ!