ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health tips: ಹಲ್ಲು ಮೂಡುತ್ತಿರುವ ಪಾಪುವಿನ ತಲ್ಲಣಗಳೇನು?

Health tips: ಹಲ್ಲು ಬರುವುದು ಶಿಶುತನದ ಮಹತ್ವದ ಮೈಲಿಗಲ್ಲುಗಳಲ್ಲಿ ಒಂದು. ಇದು ಆರು ತಿಂಗಳಿಗೇ ಆರಂಭವಾಗಬಹುದು ಅಥವಾ ಒಂದೂವರೆ ವರ್ಷದಷ್ಟು ನಿಧಾನಕ್ಕೂ ಪ್ರಾರಂಭ ಆಗಬಹುದು. ಮೊದಲಿಗೆ ಮುಂದಿನ ಅಥವಾ ಬಾಚಿ ಹಲ್ಲುಗಳು ಹೊರಗೆ ಬರುತ್ತವೆ. ಕೆಲವು ಮಕ್ಕಳಿಗೆ ಮೇಲಿನ ಸಾಲಿನವು ಮೊದಲಿಗೆ ಬಂದರೆ, ಕೆಲವರಿಗೆ ಕೆಳಗಿನ ಸಾಲಿನ ಹಲ್ಲುಗಳು ಮೊದಲು ಮೊಳೆಯುತ್ತವೆ.

ಹಲ್ಲು ಮೂಡುತ್ತಿರುವ ಪಾಪುವಿನ ತಲ್ಲಣಗಳೇನು?

Profile Rakshita Karkera Mar 28, 2025 7:00 AM

ಎಳೆಕೂಸುಗಳ ಬಾಯಲ್ಲಿ ಬಿಳಿಯ ಮುತ್ತಿನಂಥ ಹಲ್ಲುಗಳು ಮೊಳೆಯುವುದು, ಶಿಶುತನದ ಮಹತ್ವದ ಘಟ್ಟಗಳಲ್ಲಿ ಒಂದು. ಆದರೆ ಈ ದಿನಗಳಲ್ಲಿ ಪುಟಾಣಿಗಳು ಒಂದಿಷ್ಟು ಕಿರಿಕಿರಿ ಮತ್ತು ನೋವಿಗೆ ತುತ್ತಾಗುವುದು ಸಹಜ ಪ್ರಕ್ರಿಯೆ. ಆದಾಗ್ಯೂ ಹೆತ್ತವರಿಗೆ ಈ ದಿನಗಳು ಆತಂಕ, ಗೊಂದಲಗಳನ್ನು ತರಬಲ್ಲವು(Health tips). ಅದರಲ್ಲೂ ಮೊದಲ ಮಗುವಿನ ಸಂದರ್ಭದಲ್ಲಿ ಹೆತ್ತವರಿಗೆ ತಮ್ಮ ಕೂಸೇಕೆ ಅಳುತ್ತಿದೆ, ಆರೋಗ್ಯದ ವ್ಯತ್ಯಾಸಗಳು ಯಾಕಾಗಿ ಆಗುತ್ತಿವೆ ಎಂಬುದು ಅರ್ಥವಾಗದೆ ತಳಮಳಿಸುತ್ತಾರೆ. ಮಗುವಿನ ಬೆಳವಣಿಗೆಯ ಈ ಹಂತದಲ್ಲಿ ಪಾಲಕರು ತಿಳಿದಿರಬೇಕಾದ ಮಾಹಿತಿಗಳೇನು?

ಹಲ್ಲು ಬರುವುದು ಶಿಶುತನದ ಮಹತ್ವದ ಮೈಲಿಗಲ್ಲುಗಳಲ್ಲಿ ಒಂದು. ಇದು ಆರು ತಿಂಗಳಿಗೇ ಆರಂಭವಾಗಬಹುದು ಅಥವಾ ಒಂದೂವರೆ ವರ್ಷದಷ್ಟು ನಿಧಾನಕ್ಕೂ ಪ್ರಾರಂಭ ಆಗಬಹುದು. ಮೊದಲಿಗೆ ಮುಂದಿನ ಅಥವಾ ಬಾಚಿ ಹಲ್ಲುಗಳು ಹೊರಗೆ ಬರುತ್ತವೆ. ಕೆಲವು ಮಕ್ಕಳಿಗೆ ಮೇಲಿನ ಸಾಲಿನವು ಮೊದಲಿಗೆ ಬಂದರೆ, ಕೆಲವರಿಗೆ ಕೆಳಗಿನ ಸಾಲಿನ ಹಲ್ಲುಗಳು ಮೊದಲು ಮೊಳೆಯುತ್ತವೆ. ಆನಂತರ ಕ್ರಮೇಣವಾಗಿ ಕೋರೆ ಹಲ್ಲುಗಳು ಮತ್ತು ದವಡೆ ಹಲ್ಲುಗಳು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಮೂರು ವರ್ಷಗಳ ಹೊತ್ತಿಗೆ ೨೦ ಹಲ್ಲುಗಳು ಮಕ್ಕಳ ಬಾಯನ್ನು ತುಂಬಿರುತ್ತವೆ. ಕೆಲವರಿಗೆ ತಡವೂ ಆಗಬಹುದು.

ಲಕ್ಷಣಗಳೇನು?

ಈ ಲಕ್ಷಣಗಳು ಎಲ್ಲ ಪಾಪಚ್ಚಿಗಳಿಗೆ ಒಂದೇ ರೀತಿ ಇರಬೇಕೆಂದಿಲ್ಲ. ಕೆಲವು ಮಕ್ಕಳಿಗೆ ತಿಂಗಳೊಪ್ಪತ್ತಿನಲ್ಲಿ ಲಕ್ಷಣಗಳು ಕಡಿಮೆಯಾದರೆ, ಹಲವರಿಗೆ ಎಷ್ಟೋ ತಿಂಗಳವರೆಗೆ ಈ ಲಕ್ಷಣಗಳು ಕಾಡಿಸಬಹುದು. ಒಂದಿಷ್ಟು ಅಳು, ಹಠ ಜ್ಷರಗಳಲ್ಲಿ ಕೆಲವರಿಗೆ ಮುಗಿದರೆ, ಇನ್ನು ಕೆಲವರಿಗೆ ಮತ್ತಷ್ಟು ತೊಂದರೆಗಳು ಕಾಣಬಹುದು.

  • ಒಸಡು ಕೆಂಪಾಗಿ ಊತ ಬರುವುದರಿಂದ ಮಗು ಅತಿಯಾಗಿ ಜೊಲ್ಲು ಸುರಿಸಬಹುದು.
  • ಒಸಡಿನ ನೋವು, ಕಿರಿಕಿರಿಯಿಂದಾಗಿ ಅಳು, ಹಠ, ರಚ್ಚೆ ಹಿಡಿಯುವುದು ಹೆಚ್ಚಬಹುದು
  • ಸಿಕ್ಕಿದ್ದೆಲ್ಲಾ ಕಚ್ಚುವುದು, ಜಗಿಯುವುದು ಸಾಮಾನ್ಯ
  • ಅಲ್ಪಸೊಲ್ಪ ಜ್ವರವೂ ಸಾಮಾನ್ಯ. ಆದರೆ ಜ್ವರ ಸುಡುತ್ತಿದ್ದರೆ ವೈದ್ಯರಲ್ಲಿ ತೋರಿಸಿ, ಸಲಹೆ ಪಡೆಯಿರಿ.
  • ನಿದ್ದೆ ಸರಿಯಾಗಿ ಮಾಡದಿರಬಹುದು.

ತಪ್ಪುಕಲ್ಪನೆಗಳು

ಮಕ್ಕಳಿಗೆ ಹಲ್ಲು ಬರುವುದು ಸಾಮಾನ್ಯವಾದ ಬೆಳವಣಿಗೆಯ ಮೈಲಿಗಲ್ಲೇ ಆದರೂ ಇದರ ಹಿಂದೆ ಬಹಳಷ್ಟು ತಪ್ಪು ಕಲ್ಪನೆಗಳಿವೆ. ಉದಾ, ಒಸಡಿನಿಂದ ಹಲ್ಲು ಹೊರಗೆ ಬರುವುದು ಮಕ್ಕಳಿಗೆ ಅತಿಯಾಗಿ ನೋವು ತರುತ್ತದೆ ಎನ್ನುವುದು ಪೂರ್ಣ ಸತ್ಯವಲ್ಲ. ಕೆಲವು ಮಕ್ಕಳಿಗಷ್ಟೇ ಅದು ಯಾತನಾಮಯ. ಹೆಚ್ಚಿನ ಮಕ್ಕಳಿಗೆ ಇದು ಚೂರುಪಾರು ನೋವು ತರಬಹುದು. ಕೆಲವರಿಗಂತೂ ನೋವೇ ಇಲ್ಲದಿರಬಹುದು.

ಅಂಥದ್ದೇ ಇನ್ನೊಂದು ನಂಬಿಕೆಯೆಂದರೆ ಈ ದಿನಗಳಲ್ಲಿ ಮಕ್ಕಳಿಗೆ ಜ್ವರ, ವಾಂತಿ, ಡಯರಿಯಾ ಬಂದೇಬರುತ್ತದೆ ಎನ್ನುವುದು. ಸಣ್ಣ ಜ್ವರ ಬಹಳಷ್ಟು ಮಕ್ಕಳಿಗೆ ಈ ದಿನಗಳಲ್ಲಿ ಬರುತ್ತದೆ. ಆದರೆ ತೀವ್ರವಾದ ಜ್ವರವಿದ್ದರೆ, ಅದಕ್ಕೆ ಬೇರೆ ಕಾರಣಗಳಿರಬಹುದು. ಶಿಶುವಿಗೆ ಸೋಂಕು ಉಂಟಾಗಿರಲೂಬಹುದು. ಹಾಗಾಗಿ ಮನದಲ್ಲಿ ಮಂಡಿಗೆ ತಿನ್ನದೆ ವೈದ್ಯರಲ್ಲಿ ಹೋಗಿ ಸಲಹೆ ಪಡೆಯಿರಿ.

ಡಯರಿಯಾ ಸಹ ಇಂಥದ್ದೇ ನಂಬಿಕೆಯನ್ನು ಹುಟ್ಟುಹಾಕಿದೆ. ಹಲ್ಲು ಬರುವುದಕ್ಕೂ ಮಕ್ಕಳ ಹೊಟ್ಟೆ ಹಾಳಾಗುವುದಕ್ಕೂ ನೇರವಾಗಿ ಯಾವುದೇ ಸಂಬಂಧವಿಲ್ಲ. ಆದರೆ ಕಂಡಿದ್ದೆಲ್ಲವನ್ನೂ ಮಕ್ಕಳು ಬಾಯಲ್ಲಿ ಹಾಕುವುದರಿಂದ ಹೊಟ್ಟೆಗೆ ಸೋಂಕಾಗುವ ಸಾಧ್ಯತೆ ಹೆಚ್ಚು. ಅದರಲ್ಲೂ ನೆಲಕ್ಕೆ ಬಿದ್ದಿದ್ದನ್ನು ಬಾಯಿಗೆ ಹಾಕುವ ಮಕ್ಕಳಲ್ಲಿ ಈ ತೊಂದರೆ ಅಧಿಕ.

ಉಪಶಮನ ಹೇಗೆ?

ಮಕ್ಕಳ ಒಸಡುಗಳಲ್ಲಿನ ಕಿರಿಕಿರಿಯನ್ನು ಕಡಿಮೆ ಮಾಡಲು ಹಲವು ಮಾರ್ಗಗಳಿವೆ. ಆದರೆ ಇಂಥ ಯಾವುದನ್ನು ಬಳಸುವಾಗಲೂ ಆಯಾ ವಸ್ತುವಿನ ಶುಚಿತ್ವದತ್ತ ಗಮನಕೊಡಿ. ಅದಿಲ್ಲದಿದ್ದರೆ ಊದುವುದು ಹೋಗಿ ಬಾರಿಸುವುದು ಬಂತು ಎನ್ನುವ ಗಾದೆಯಂತಾದೀತು.

  • ಸ್ವಚ್ಛವಾದ ಬಟ್ಟೆಯನ್ನು ನಿಮ್ಮ ಬೆರಳುಗಳಿಗೆ ಸುತ್ತಿಕೊಂಡು ಅದರಿಂದ ಲಘುವಾಗಿ ಪುಟ್ಟ ಒಸಡುಗಳನ್ನು ಮಸಾಜ್‌ ಮಾಡಿ.
  • ಮಾರುಕಟ್ಟೆಯಲ್ಲಿ ಸಿಲಿಕಾನ್‌ ಟೀದರ್‌ಗಳು ಲಭ್ಯವಿವೆ. ಉತ್ತಮ ಗುಣಮಟ್ಟದ ಟೀದರ್‌ಗಳನ್ನು ಮಕ್ಕಳಿಗೆ ಕಚ್ಚುವುದಕ್ಕೆಂದು ಕೊಡಬಹುದು
  • ಸ್ವಚ್ಛವಾದ ಹತ್ತಿಯ ಬಟ್ಟೆಯನ್ನು ನೀರಿನಲ್ಲಿ ಅದ್ದಿ ಹಿಂಡಿಕೊಳ್ಳಿ. ಇದನ್ನು ಫ್ರಿಜ್‌ನಲ್ಲಿ ಕೆಲಕಾಲ ಇರಿಸಿ, ತಂಪಾದ ಬಟ್ಟೆಯನ್ನು ಮಕ್ಕಳಿಗೆ ಕಚ್ಚುವುದಕ್ಕೆ ನೀಡಿ. ತಣ್ಣಗಿನ ಬಟ್ಟೆ ತಾಗಿ, ಒಸಡುಗಳ ನೋವು ಕಡಿಮೆಯಾಗುತ್ತದೆ.