ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಬೇಸಿಗೆಯಲ್ಲಿ ಯಾವ ಬಗೆಯ ಚರ್ಮದ ಆರೈಕೆ ಹೇಗಿರಬೇಕು?

Health Tips: ಎಲ್ಲರಿಗೂ ಸರಿಹೋಗುವಂಥ ಒಂದು ಉಪಾಯವನ್ನು ಹೇಳುವುದಕ್ಕೆ ಸಾಧ್ಯವಿಲ್ಲ. ಕಾರಣ, ಒಂದೊಂದು ಬಗೆಯ ಚರ್ಮಕ್ಕೆ ಒಂದೊಂದು ಕ್ರಮ ಸೂಕ್ತ ಎನಿಸುತ್ತದೆ. ಒಣ ತ್ವಚೆ, ಎಣ್ಣೆ ಚರ್ಮ, ಸೂಕ್ಷ್ಮ ಚರ್ಮ ಮುಂತಾದ ಹಲವು ಬಗೆಯ ಚರ್ಮಗಳಿಗೆ ಪ್ರತ್ಯೇಕ ಬಗೆಯ ಉಪಚಾರವೇ ಬೇಕಾಗುತ್ತದೆ. ಏನವು ಮತ್ತು ಹೇಗೆ ಮಾಡುವುದು?

ಬೇಸಿಗೆಯಲ್ಲಿ ಯಾವ ಬಗೆಯ ಚರ್ಮದ ಆರೈಕೆ ಹೇಗಿರಬೇಕು?

Profile Rakshita Karkera Mar 29, 2025 6:30 AM

ಬೆಂಗಳೂರು: ಚರ್ಮದ ಆರೈಕೆಯಲ್ಲಿ ಎಲ್ಲಾ ಋತುಗಳೂ ತಮ್ಮದೇ ಆದ ಸವಾಲುಗಳನ್ನು ಒಡ್ಡುತ್ತವೆ. ಚಳಿಗಾಲದಲ್ಲಿ ಚರ್ಮ ಒಣಗಿದಂತಾಗಿ ಅತಿಶುಷ್ಕತೆಯನ್ನು ನಿಭಾಯಿಸುವುದು ಕಷ್ಟ ಎನಿಸಿದರೆ, ಬೇಸಿಗೆಯಲ್ಲಿ ತೇವ ಕಳೆದುಕೊಂಡೊ ಅಥವಾ ಬೆವರಿ ಎಣ್ಣೆ ಸೂಸುತ್ತಲೋ ಇರುವ ಚರ್ಮವನ್ನು ನಿಭಾಯಿಸುವುದು ಕಡುಕಷ್ಟ ಎನಿಸುತ್ತದೆ. ಅದರಲ್ಲೂ ಬೇಸಿಗೆ ತೀವ್ರವಾದಂತೆ, ಈಗಾಗಲೇ ಇರುವ ತ್ವಚೆಯ ತೊಂದರೆಗಳನ್ನು ಹೆಚ್ಚಿಸುವುದು ಮಾತ್ರವಲ್ಲ, ಇನ್ನಷ್ಟನ್ನು ಸೇರಿಸಬಹುದು(Health Tips). ಹಾಗಾದರೆ ಬೇಸಿಗೆಯಲ್ಲಿ ಯಾವ ರೀತಿಯ ಚರ್ಮ ಇರುವವರು ಎಂಥಾ ಕಾಳಜಿಯ ಕ್ರಮವನ್ನು ಅಳವಡಿಸಿಕೊಳ್ಳಬೇಕು?

ಎಲ್ಲರಿಗೂ ಸರಿಹೋಗುವಂಥ ಒಂದು ಉಪಾಯವನ್ನು ಹೇಳುವುದಕ್ಕೆ ಸಾಧ್ಯವಿಲ್ಲ. ಕಾರಣ, ಒಂದೊಂದು ಬಗೆಯ ಚರ್ಮಕ್ಕೆ ಒಂದೊಂದು ಕ್ರಮ ಸೂಕ್ತ ಎನಿಸುತ್ತದೆ. ಒಣ ತ್ವಚೆ, ಎಣ್ಣೆ ಚರ್ಮ, ಸೂಕ್ಷ್ಮ ಚರ್ಮ ಮುಂತಾದ ಹಲವು ಬಗೆಯ ಚರ್ಮಗಳಿಗೆ ಪ್ರತ್ಯೇಕ ಬಗೆಯ ಉಪಚಾರವೇ ಬೇಕಾಗುತ್ತದೆ. ಏನವು ಮತ್ತು ಹೇಗೆ ಮಾಡುವುದು?

ಎಣ್ಣೆ ಚರ್ಮ: ಈಗಾಗಲೇ ಎಣ್ಣೆ ಸುರಿಯುತ್ತಿರುವ ಮುಖಗಳು ಬೇಸಿಗೆಯಲ್ಲಿ ಎಣ್ಣೆ ಬಾಣಲೆಯಂತಾದರೆ ಅಚ್ಚರಿಯಿಲ್ಲ. ಇದರಿಂದಾಗಿಯೇ ಮುಖದಲ್ಲಿ ಮೊಡವೆ ಕಾಟ ಹೆಚ್ಚಬಹುದು. ತೀರಾ ಎಣ್ಣೆ ಸುರಿಯುತ್ತಿದ್ದು, ಯಾವುದೋ ಸಮಾರಂಭಕ್ಕೆ ಹೋಗಬೇಕಿದ್ದರೆ, ಪೇಪರ್‌ ಟವೆಲ್‌ ಅಥವಾ ಬ್ಲಾಟಿಂಗ್‌ ಪೇಪರ್‌ನಿಂದ ಮುಖದಲ್ಲಿ ಹೆಚ್ಚು ಎಣ್ಣೆಯಿರುವ ಭಾಗವನ್ನು ಲಘುವಾಗಿ ಒತ್ತಿ. ಇದರಿಂದ ಹೆಚ್ಚುವರಿ ಎಣ್ಣೆ ಈ ಕಾಗದಕ್ಕೆ ಹೀರಲ್ಪಡುತ್ತದೆ.

ಉಪಚಾರ: ಜೆಲ್‌ ರೀತಿಯ ಮೃದುವಾದ ಕ್ಲೆನ್ಸರ್‌ ಬಳಸಿ. ಹೆಚ್ಚು ತೈಲದಂಶ ಇಲ್ಲದಂಥ ಜೆಲ್‌ ಅಥವಾ ನೀರಿನಂಥ ಲಘುವಾದ ಮಾಯಿಶ್ಚರೈಸರ್‌ ಸಾಕು. ಜೆಲ್‌ ಇಲ್ಲವೇ ಮಿನರಲ್‌ ಬೇಸ್‌ ಇರುವ ಪರಿಮಳರಹಿತವಾದ ಸನ್‌ಸ್ಕ್ರೀನ್‌ ಇರಲಿ. ವಾರಕ್ಕೆರಡು ಬಾರಿ ಕ್ಲೇ ಮಾಸ್ಕ್‌ ಮುಖಕ್ಕೆ ಬಳಸುವುದರಿಂದ ಹೆಚ್ಚುವರಿ ಎಣ್ಣೆಯನ್ನು ತೆಗೆಯಬಹುದು. ಆಹಾರದಲ್ಲೂ ಅತಿಯಾದ ಜಿಡ್ಡಿನಂಶವನ್ನು ಕಡಿಮೆ ಮಾಡಿ.

ಒಣ ಚರ್ಮ: ಈಗಾಗಲೇ ಶುಷ್ಕವಾಗಿರುವ ಚರ್ಮವು ನಿರ್ಜಲೀಕರಣಕ್ಕೆ ತುತ್ತಾದರೆ ಇನ್ನಷ್ಟು ಒಣಗಿ ಸುಕ್ಕಾಗಿ ಬಿಡುತ್ತದೆ. ಇದರಿಂದ ಮುಖದಲ್ಲಿ ನೆರಿಗೆಗಳೂ ಕಾಣಬಹುದು. ಮನೆಯಲ್ಲೇ ಇರುವಾಗ ಅಲೋವೇರಾ ಜೆಲ್‌ಗಳನ್ನು ಧಾರಾಳವಾಗಿ ಕೂದಲು ಮತ್ತು ಮುಖಕ್ಕೆ ಬಳಸಿ. ಇದು ಚರ್ಮವನ್ನು ತಂಪಾಗಿರಿಸಿ, ತೇವಾಂಶವನ್ನೂ ಹೆಚ್ಚಿಸುತ್ತದೆ.

ಉಪಚಾರ: ಕ್ರೀಮ್‌ ಅಥವಾ ಫೋಮ್ ಬೇಸ್‌ ಇರುವಂಥ‌ ಮೃದುವಾದ ಕ್ಲೆನ್ಸರ್‌ ಬಳಸಿ. ಗ್ಲಿಸರಿನ್‌, ಸೆರಮೈಡ್‌ಗಳನ್ನು ಹೊಂದಿದ, ಜಿಡ್ಡು ಸಹಿತವಾದ ಮಾಯಿಶ್ಚರೈಸರ್‌ಗಳು ಇಂಥ ಚರ್ಮಕ್ಕೆ ಬೇಕು. ಸನ್‌ಸ್ಕ್ರೀನ್‌ ಬಳಸುವಾಗಲೂ ನಯಾಸಿನಮೈಡ್‌ ಇಲ್ಲವೇ ಹ್ಯಾಲುರೋನಿಕ್‌ ಆಮ್ಲ ಇರುವಂಥವನ್ನು ಆಯ್ಕೆ ಮಾಡಿ. ಫೇಸ್‌ ಮಾಸ್ಕ್‌ ಬದಲಿಗೆ ಫೇಸ್‌ ಮಿಸ್ಟ್‌ ಬಳಸಲು ಸಾಧ್ಯವೇ ನೋಡಿ.

ಮಿಶ್ರ ತ್ವಚೆ: ಒಂದಿಷ್ಟು ಭಾಗ ಒಣಗಿದಂತಾಗಿ, ಒಂದಿಷ್ಟು ಭಾಗದಲ್ಲಿ ಎಣ್ಣೆ ಹೆಚ್ಚುವುದರಿಂದ, ಸಮನಾಗಿ ಹೊಂದಾಣಿಕೆ ಮಾಡುವುದು ಸವಾಲೆನಿಸುತ್ತದೆ. ಒಂದಕ್ಕಿಂತ ಹೆಚ್ಚಿನ ಬಗೆಯ ಉಪಚಾರವನ್ನು ಈ ರೀತಿಯ ತ್ವಚೆ ಬೇಡುತ್ತದೆ. ಇಡೀ ಮುಖಕ್ಕೆ ಒಂದೇ ಸಮನಾಗಿ ಪ್ರಸಾದನಗಳನ್ನು ಬಳಕೆ ಮಾಡುವುದೂ ಸವಾಲಾಗಬಹುದು.

ಉಪಚಾರ: ಹೆಚ್ಚಿನ ಎಣ್ಣೆಯಂಶವಿರುವ ಟಿ-ಝೋನ್‌ನಲ್ಲಿ (ಹಣೆ ಮತ್ತು ಮೂಗಿನ ಭಾಗ) ಜೆಲ್‌ ಮೂಲದ ಕ್ಲೆನ್ಸರ್‌ ಬಳಸಿ. ಈ ಭಾಗಗಳಿಗೆ ಜೆಲ್‌ ರೀತಿಯ ಮಾಯಿಶ್ಚರೈಸರ್‌ ಬಳಸಿದರೆ, ಮುಖದ ಉಳಿದ ಭಾಗಗಳಿಗೆ ಸ್ವಲ್ಪ ಜಿಡ್ಡಿರುವಂಥವು ಬೇಕಾಗುತ್ತದೆ. ಆದರೆ ಸನ್‌ಸ್ಕ್ರೀನ್‌ ಬಳಸುವಾಗ ಜೆಲ್‌ ಮಾದರಿಯದ್ದು ಬಳಸಿ. ನಯಸಿನಮೈಡ್‌ ಅಥವಾ ಹ್ಯಾಲುರೋನಿಕ್‌ ಆಮ್ಲದ ಸೀರಂ ಉಪಯೋಗಿಸುವುದು ಉತ್ತಮ. ವಾರಕ್ಕೊಮ್ಮೆ ಮುಖದ ಟಿ-ಝೋನ್‌ನಲ್ಲಿ ಕ್ಲೇ ಫೇಸ್‌ ಮಾಸ್ಕ್‌ ಬಳಸಿ.

ಈ ಸುದ್ದಿಯನ್ನೂ ಓದಿ: Best Cooking Oil: ಉತ್ತಮ ಆರೋಗ್ಯಕ್ಕೆ ಯಾವ ಅಡುಗೆ ಎಣ್ಣೆ ಬೆಸ್ಟ್?

ಸೂಕ್ಷ್ಮ ಚರ್ಮ: ಬೇಸಿಗೆಯಲ್ಲಿ ಈ ಚರ್ಮ ಕೆಂಪಾಗಿ, ದದ್ದುಗಳೆದ್ದು ಕಿರಿಕಿರಿಯಾಗಿ ಬಿಡುತ್ತದೆ. ಹಾಗಾಗಿ ಅತಿಯಾಗಿ ರಾಸಾಯನಿಕ ಉತ್ಪನ್ನಗಳ ಬದಲು ಆದಷ್ಟೂ ನೈಸರ್ಗಿಕ ಉತ್ಪನ್ನಗಳನ್ನು ಬಳಸುವುದಕ್ಕೆ ಆದ್ಯತೆ ನೀಡಿ. ಚೆನ್ನಾಗಿ ನೀರು ಕುಡಿಯಿರಿ.

ಉಪಚಾರ: ಜೆಲ್‌, ಫೋಮ್‌ ಕ್ಲೆನ್ಸರ್‌ಗಳು ಬೇಡ. ಮೃದುವಾದ ಪರಿಮಳರಹಿತವಾದ ಕ್ಲೆನ್ಸರ್‌ ಬಳಸಿ. ಸೆರಮೈಡ್‌ಗಳು ಇಲ್ಲವೇ ಓಟ್‌ ಅಂಶಗಳಿರುವ ಮಾಯಿಶ್ಚರೈಸರ್‌ಗೆ ಆದ್ಯತೆ ನೀಡಿ. ಪ್ರಾಕೃತಿಕ ಉತ್ಪನ್ನಗಳ ಅಂಶವಿರುವ ಸನ್‌ಸ್ಕ್ರೀನ್‌ ಬಳಕೆಯನ್ನು ಮೊದಲಿಗೆ ಪರೀಕ್ಷಿಸಿ ನೋಡಿಕೊಳ್ಳಿ. ಮುಖಕ್ಕೆ ತಂಪಾದ ಬಟ್ಟೆಯಿಂದ ಒತ್ತಿಕೊಳ್ಳಿ. ಮೇಕಪ್‌ ಅಗತ್ಯವಿದ್ದರೆ ಮಾತ್ರವೇ ಬಳಸಿ.