ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಒಂದು ಕಪ್ ಕಾಫಿ ಕುಡಿಯದಿದ್ದರೆ ಅವರ ಅಂದಿನ ದಿನವೇ ಶುರುವಾಗುವುದಿಲ್ಲ! ಕಾಫಿ ಕುಡಿಯುವುದು ಆರೋಗ್ಯಕ್ಕೆ ಉತ್ತಮ ಎನಿಸಿಕೊಂಡರೂ ಮತ್ತೊಂದೆಡೆ, ಕೆಫೀನ್ ಸೇವನೆಯು ಕೆಲವು ಜನರಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಕಾಫಿಯನ್ನು ಮಿತವಾಗಿ ಸೇವಿಸುವುದು ಅತ್ಯಗತ್ಯ. ನಿಮ್ಮ ದೇಹದ ಮೇಲೆ ಕಾಫಿ ಕೆಟ್ಟ ಪರಿಣಾಮ ಬೀರಲು ಮತ್ತೊಂದು ಕಾರಣವೆಂದರೆ ನೀವು ಕಾಫಿ ಕುಡಿಯುವ ಸಮಯ. ಹಾಗಾಗಿ ಆರೋಗ್ಯಕ್ಕೆ ಪ್ರಯೋಜನವನ್ನು ಪಡೆಯಲು ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯಬೇಕು ಎಂಬುದನ್ನು ತಜ್ಞರಿಂದ ತಿಳಿಯಿರಿ.
ಕಾಫಿ ಕುಡಿಯಲು ಉತ್ತಮ ಸಮಯವನ್ನು ತಿಳಿಯಿರಿ
ಬೆಳಗಿನ ಸಮಯ: ಇತ್ತೀಚಿನ ಅಧ್ಯಯನವು ಬೆಳಿಗ್ಗೆ ಸಮಯವು ಕಾಫಿ ಕುಡಿಯಲು ಉತ್ತಮ ಸಮಯ ಎಂದು ಬಹಿರಂಗಪಡಿಸಿದೆ. ಸಂಶೋಧನೆಯ ಪ್ರಕಾರ, ಬೆಳಿಗ್ಗೆ ಕಾಫಿ ಕುಡಿಯುವ ಜನರಲ್ಲಿ ಹೃದ್ರೋಗದ ಸಮಸ್ಯೆ ಕಡಿಮೆ ಎಂದು ತೋರಿಸಿದೆ.
ಬೆಳಗ್ಗಿನ ಸಮಯದಲ್ಲಿ ನಿಮ್ಮ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಮಟ್ಟ ಹೆಚ್ಚಾಗಿರುತ್ತದೆ. ಆ ಸಮಯದಲ್ಲಿ ಕಾಫಿ ಕುಡಿಯುವುದರಿಂದ ಅದರ ಪರಿಣಾಮವನ್ನು ಕಡಿಮೆ ಮಾಡಬಹುದು. ಆದ್ದರಿಂದ, ಹಿಂದಿನ ಕೆಲವು ಅಧ್ಯಯನಗಳು ಪ್ರಕಾರ ನಿಮ್ಮ ಕಾರ್ಟಿಸೋಲ್ ಮಟ್ಟವು ಕಡಿಮೆ ಮಾಡಲು ಬೆಳಿಗ್ಗೆ ಕುಡಿಯುವುದು ಉತ್ತಮ ಎನ್ನಲಾಗಿದೆ.
ಆದರೆ ಎಚ್ಚರವಾದ ಮೊದಲ 30-60 ನಿಮಿಷಗಳಲ್ಲಿ, ಕಾರ್ಟಿಸೋಲ್ ಮಟ್ಟ ಸಮತೋಲನದಲ್ಲಿರುತ್ತದೆ. ಹಾಗಾಗಿ ನೀವು ತಕ್ಷಣ ಕಾಫಿ ಕುಡಿಯುವುದು ಅದರ ಸಮತೋಲನದಲ್ಲಿ ಸಮಸ್ಯೆಯನ್ನುಂಟುಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ.
ವ್ಯಾಯಾಮಕ್ಕೂ ಮೊದಲು: ಕಾಫಿಯನ್ನು ವ್ಯಾಯಾಮಕ್ಕೂ ಮೊದಲು ಸೇವಿಸಬಹುದು. ಅಂದರೆ ವ್ಯಾಯಾಮ ಮಾಡುವ 30 ರಿಂದ 60 ನಿಮಿಷಗಳ ಮೊದಲು ಕಾಫಿ ಕುಡಿಯಬಹುದು. ಕಾಫಿ ವ್ಯಾಯಾಮದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಮತ್ತು ವ್ಯಾಯಾಮದಿಂದಾಗುವ ಆಯಾಸವನ್ನು ಕಡಿಮೆ ಮಾಡುತ್ತದೆ ಮತ್ತು ಸ್ನಾಯುಗಳ ಬಲವನ್ನು ಸುಧಾರಿಸುತ್ತದೆ ಎಂದು ಕೆಲವು ಅಧ್ಯಯನಗಳು ಎತ್ತಿ ತೋರಿಸಿವೆ.
ಊಟದ ನಂತರ: ಊಟದ ನಂತರ ಸುಮಾರು 30 ನಿಮಿಷಗಳ ನಂತರ ಕಾಫಿಯನ್ನು ಸವಿಯಬಹುದು. ಇದು ನಿಮ್ಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Health Tips: ಕಾಫಿ ಲವರ್ಸ್ ಇಲ್ಕೇಳಿ; ತಪ್ಪಿಯೂ ಕಾಫಿ ಜತೆ ಈ 5 ಆಹಾರ ಪದಾರ್ಥ ಸೇವಿಸಬೇಡಿ
ಕಾಫಿಯನ್ನು ಯಾವಾಗ ತಪ್ಪಿಸಬೇಕು: ಸಂಜೆ ಅಥವಾ ರಾತ್ರಿಯಲ್ಲಿ ಕೆಫೀನ್ ಸೇವನೆಯಿಂದ ದೂರವಿರುವುದು ಉತ್ತಮ. ಕೆಫೀನ್ ನಿಮ್ಮ ನಿದ್ರೆಗೆ ಭಂಗ ತರಬಹುದು ಮತ್ತು ಕೆಲವು ವ್ಯಕ್ತಿಗಳಲ್ಲಿ ಆತಂಕವನ್ನು ಹೆಚ್ಚಿಸಬಹುದು. ಆದ್ದರಿಂದ, ಉತ್ತಮ ನಿದ್ರೆಗಾಗಿ ಸಂಜೆ ಮತ್ತು ರಾತ್ರಿ ಕಾಫಿ ಕುಡಿಯುವುದನ್ನು ತಪ್ಪಿಸಿ.