ಬೆಂಗಳೂರು,ಮಾ.20: ಬೇಸಗೆ ಕಾಲ ಆರಂಭವಾಗಿದೆ. ಈ ಸಮಯದಲ್ಲಿ ದೇಹದ ತಾಪಮಾನ ಕಾಪಾಡಿಕೊಳ್ಳುವುದು ಕೂಡ ಪ್ರಮುಖವಾಗುತ್ತದೆ. ಹಾಗಾಗಿ ನಮ್ಮ ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡಲು ಸರಿಯಾದ ಪ್ರಮಾಣದ ನೀರನ್ನು ಕುಡಿಯಬೇಕಾಗುತ್ತದೆ. ಇಂದು ಸಾಮಾನ್ಯವಾಗಿ ಬಾಯಾರಿಕೆ ಅಂದಾಗ ಫ್ರಿಜ್‌ನ ನೀರನ್ನೇ ಹೆಚ್ಚಾಗಿ ಕುಡಿಯುತ್ತಾರೆ. ಆದರೆ ಪ್ರಿಜ್ ನೀರು ಸೇವನೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ. ಹಾಗಾದರೆ ಇದಕ್ಕೇನು ಪರ್ಯಾಯ? ಹೆಚ್ಚು ಚಿಂತಿಸಬೇಡಿ. ನಿಮ್ಮ ಕಣ್ಣಮುಂದೆಯೇ ಇದೆ ಆಯ್ಕೆ. ಅದುವೆ ಮಣ್ಣಿನ ಮಡಕೆ (Matka Water). ಹೌದು, ಮಡಕೆಯ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಕೂಡ ಹಲವು ರೀರಿಯ ಲಾಭಗಳಿವೆ (Health Tips).
ನೈಸರ್ಗಿಕವಾಗಿ ತಂಪಾಗಿರಿಸುತ್ತದೆ
ಮಣ್ಣಿನ ಮಡಕೆಗಳು ಯಾವುದೇ ವಿದ್ಯುತ್ ಇಲ್ಲದೆ ನೀರನ್ನು ನೈಸರ್ಗಿಕವಾಗಿ ತಂಪಾಗಿರಿಸುತ್ತದೆ. ರೆಫ್ರಿಜರೇಟರ್‌ನಲ್ಲಿ ಇರಿಸಿದ ನೀರು ಕೃತಕವಾಗಿ ತಂಪಾಗುತ್ತದೆ. ಇದರಲ್ಲಿರುವ ನೀರಿನ ತಾಪಮಾನ ಹಠಾತ್ ಆಗಿ ಕಡಿಮೆಯಾಗುವ ಕಾರಣ ಗಂಟಲನ್ನು ಕೆರಳಿಸುವ ಸಾಧ್ಯತೆ ಇದೆ. ಆದರೆ ಮಡಕೆಯ ನೀರು ಅಡ್ಡ ಪರಿಣಾಮಗಳಿಲ್ಲದೆ ತಂಪು ನೀಡುತ್ತದೆ.
pH ಮಟ್ಟವನ್ನು ಸಮತೋಲನಗೊಳಿಸುತ್ತದೆ
ನೀರು ನಿರ್ದಿಷ್ಟ pH ಮಟ್ಟವನ್ನು ಹೊಂದಿದ್ದು ಅದು ತೀವ್ರ ಶಾಖಕ್ಕೆ ಒಡ್ಡಿಕೊಂಡಾಗ ಬದಲಾವಣೆ ಆಗುತ್ತದೆ. ಇದನ್ನು ಸಮತೋಲನಗೊಳಿಸಲು, ಮಟ್ಕಾದಲ್ಲಿ ನೀರನ್ನು ಸಂಗ್ರಹಿಸಬೇಕು. ಜೇಡಿಮಣ್ಣಿನ ಕ್ಷಾರೀಯ ಸ್ವಭಾವವು ನೀರಿನಲ್ಲಿ ಆಮ್ಲೀಯತೆಯನ್ನು ತಟಸ್ಥಗೊಳ್ಳುವಂತೆ ಮಾಡುತ್ತದೆ.
ಗರ್ಭಾವಸ್ಥೆಯಲ್ಲಿ ಬಿಪಿ-ಶುಗರ್ ಇದ್ದರೆ ಏನು ಮಾಡಬೇಕು? ಇಲ್ಲಿದೆ ತಜ್ಞರ ಸಲಹೆ
ಜೀರ್ಣಕ್ರಿಯೆ ಹೆಚ್ಚಿಸುತ್ತದೆ
ಜೇಡಿಮಣ್ಣಿನ ಮಡಕೆಗಳಲ್ಲಿರುವ ಖನಿಜಗಳು ನೈಸರ್ಗಿಕವಾಗಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಪ್ಲಾಸ್ಟಿಕ್ ಬಾಟಲಿಯಲ್ಲಿ ಇರುವ ರಾಸಾಯನಿಕಗಳು ಮಣ್ಣಿನಲ್ಲಿ ಇರುವುದಿಲ್ಲ, ಹೀಗಾಗಿ ಇದು ಜೀರ್ಣಕ್ರಿಯೆಗೆ ಪ್ರಯೋಜನಕಾರಿ.
ಗಂಟಲಿನ ಆರೋಗ್ಯಕ್ಕೆ ಉತ್ತಮ
ಫ್ರಿಜ್‌ನಿಂದ ನೇರವಾಗಿ ತಣ್ಣಗಾದ ನೀರನ್ನು ಕುಡಿಯುವಾಗ, ಗಂಟಲು ತಾಪಮಾನಕ್ಕೆ ಒಮ್ಮೆಲೆ ಕುಸಿದು ಉಸಿರಾಟದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಮಡಕೆಯ ನೀರು ಗಂಟಲಿಗೆ ತುಂಬಾ ಮೃದುವಾಗಿಸುತ್ತದೆ.
ರುಚಿ ಮತ್ತು ತಾಜಾತನವನ್ನು ಹೆಚ್ಚಿಸುತ್ತದೆ
ಮಣ್ಣಿನ ಮಡಕೆಗಳನ್ನು ತಯಾರಿಸಲು ಬಳಸುವ ಜೇಡಿಮಣ್ಣಿನ ವಿಶಿಷ್ಟ ಗುಣಲಕ್ಷಣಗಳಿಂದಾಗಿ ಮಟ್ಕಾ ನೀರು ರುಚಿಯನ್ನು ಹೆಚ್ಚಿಸುತ್ತದೆ. ಜೇಡಿಮಣ್ಣು ಸೂಕ್ಷ್ಮವಾದ ಮಣ್ಣಿನ ಪರಿಮಳವನ್ನು ಹೊಂದಿದ್ದು ನೈಸರ್ಗಿಕವಾಗಿ ರುಚಿ ಹೆಚ್ಚಿಸುತ್ತದೆ.
ಕಲ್ಲಂಗಡಿಯೆಂಬ ರಸಭರಿತ ಹಣ್ಣಿನ ಸತ್ವಗಳು ಗೊತ್ತೇ?
ಪರಿಸರ ಸ್ನೇಹಿ ಆಯ್ಕೆ
ಪ್ಲಾಸ್ಟಿಕ್ ಬಾಟಲಿಗಳನ್ನು ಕಡಿಮೆ ಮಾಡುವ ಮೂಲಕ ನಾವು ಪರಿಸರವನ್ನು ರಕ್ಷಿಸಬಹುದು. ಮಣ್ಣಿನ ಮಡಕೆಗಳು ಸಂಪೂರ್ಣವಾಗಿ ನೈಸರ್ಗಿಕವಾಗಿದ್ದು ಯಾವುದೇ ವಿದ್ಯುತ್ ಬಳಸದೆ ನೀರನ್ನು ತಂಪಾಗಿ ಇರಿಸುತ್ತದೆ.