ಲೇಖನ: ಡಾ. ಗೋವಿಂದ ದೇಸಾಯಿ, ಕನ್ಸಲ್ಟೆಂಟ್ ಇಂಟರ್ವೆನ್ಷನಲ್ ಪಲ್ಮನಾಲಜಿಸ್ಟ್, ಎಚ್‌ಸಿಜಿ ಆಸ್ಪತ್ರೆ, ಹುಬ್ಬಳ್ಳಿ ಸುಚಿರಾಯು.
ಹಿಂದಿನ ದಿನಗಳಲ್ಲಿ, ಚಳಿಗಾಲದ ಆರಂಭವು ತಾಜಾ ಗಾಳಿ ಮತ್ತು ಆಹ್ಲಾದಕರ ಬೆಳಗಿನ ವಾತಾ ವರಣವನ್ನು ಹೊತ್ತು ತರುತ್ತಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ತಾಪಮಾನ ಇಳಿಯು ತ್ತಿದ್ದಂತೆ, ಅನೇಕ ನಗರಗಳು ವಿಷಕಾರಿ ಬೂದು ಬಣ್ಣದ ಹೊಗೆಯ ಪರದೆಯಲ್ಲಿ ಮುಚ್ಚಿ ಹೋಗು ತ್ತವೆ. ಇದರಿಂದ ನಾವು ಉಸಿರಾಡುವ ಪ್ರತಿ ಉಸಿರೂ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.
ಹಿರಿಯ ನಾಗರಿಕರಲ್ಲಿ ಹೆಚ್ಚುತ್ತಿರುವ ಕೆಮ್ಮು ಅಥವಾ ಮಕ್ಕಳ ಆಟದ ಸಮಯಕ್ಕೆ ಬೀಳುತ್ತಿರುವ ಕಡಿವಾಣ ಇದಕ್ಕೆ ಸಾಕ್ಷಿ. ಕಣ್ಣಿಗೆ ಕಾಣುವ ಈ 'ಹೊಗೆ ಕೇವಲ ಉಸಿರಾಟದ ಕಿರಿಕಿರಿಯಲ್ಲ, ಇದೊಂದು ಪ್ರಬಲವಾದ 'ಕಾರ್ಸಿನೋಜೆನ್' (ಕ್ಯಾನ್ಸರ್ ಕಾರಕ) ಆಗಿದ್ದು, ದೇಶದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪ್ರಮಾಣವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ವಾತಾವರಣವೇ ಒಂದು 'ಗ್ಯಾಸ್ ಚೇಂಬರ್': ಇದರ ಭೌತಶಾಸ್ತ್ರವೇನು?
ಈ ಅಪಾಯವನ್ನು ಅರ್ಥಮಾಡಿಕೊಳ್ಳಲು, ಚಳಿಗಾಲದಲ್ಲಿ ಗಾಳಿ ಏಕೆ ಇಷ್ಟು ಅಪಾಯಕಾರಿ ಯಾಗುತ್ತದೆ ಎಂಬುದನ್ನು ತಿಳಿಯಬೇಕು. ಬೇಸಿಗೆಯಲ್ಲಿ ಬಿಸಿ ಗಾಳಿಯು ಮೇಲಕ್ಕೆ ಹೋಗುವು ದರಿಂದ ಮಾಲಿನ್ಯಕಾರಕಗಳು ವಾತಾವರಣದಲ್ಲಿ ಹರಡಿಹೋಗುತ್ತವೆ. ಆದರೆ ಚಳಿಗಾಲದಲ್ಲಿ 'ತಾಪಮಾನ ವಿಪರ್ಯಯ' ಎಂಬ ಪ್ರಕ್ರಿಯೆ ನಡೆಯುತ್ತದೆ. ತಂಪಾದ ಗಾಳಿಯು ಸಾಂದ್ರ ವಾಗಿರುತ್ತದೆ ಮತ್ತು ಭಾರವಾಗಿರುತ್ತದೆ. ಇದು ನೆಲದ ಮಟ್ಟದಲ್ಲೇ ಉಳಿದು, ವಾಹನಗಳ ಹೊಗೆ, ಕಟ್ಟಡ ನಿರ್ಮಾಣದ ಧೂಳು ಮತ್ತು ಕೈಗಾರಿಕೆಗಳು ಹೊರಸೂಸುವ ಹೊಗೆಯು ವಾತಾವರಣದ ಒತ್ತಡದ ಅಡಿಯಲ್ಲಿ ಸಿಲುಕಿಕೊಳ್ಳುತ್ತದೆ. ಇದು ನಗರಗಳನ್ನು ವಿಷಕಾರಿ ಗಾಳಿಯ ಸ್ಥಬ್ದ ಕೋಣೆ ಗಳನ್ನಾಗಿ ಪರಿವರ್ತಿಸುತ್ತದೆ.
ಇದನ್ನೂ ಓದಿ: Health Tips: ನಾವು ತಿನ್ನುವ ಹಣ್ಣುಗಳಿಂದ ಕ್ಯಾನ್ಸರ್ ಅಪಾಯ ತಡೆಯಬಹುದೇ? ವೈದ್ಯರು ಹೇಳಿದ್ದೇನು?
ಇಲ್ಲಿನ ಪ್ರಾಥಮಿಕ ಸಮಸ್ಯೆ 'ಪಾರ್ಟಿಕ್ಯುಲೇಟ್ ಮ್ಯಾಟರ್ 2.5' (PM 2.5). ಇವು ಸೂಜಿಮೊನೆಯಲ್ಲಿ ಸಾವಿರಾರು ಕಣಗಳನ್ನು ಹಿಡಿಸಬಲ್ಲಷ್ಟು ಸೂಕ್ಷ್ಮವಾದ ಕಣಗಳು. ಸಾಮಾನ್ಯ ಧೂಳು ಮೂಗು ಅಥವಾ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡರೆ, ಈ PM 2.5 ಕಣಗಳು ದೇಹದ ನೈಸರ್ಗಿಕ ರಕ್ಷಣಾ ವ್ಯವಸ್ಥೆಯನ್ನು ಭೇದಿಸಿ, ನೇರವಾಗಿ ಶ್ವಾಸಕೋಶದ ಆಳಕ್ಕೆ ಇಳಿಯುತ್ತವೆ. ಇವು ಆಮ್ಲಜನಕ ವಿನಿಮಯಕ್ಕೆ ಕಾರಣವಾಗುವ ಶ್ವಾಸಕೋಶದ ಅತೀ ಚಿಕ್ಕ ಭಾಗವಾದ 'ಅಲ್ವಿಯೋಲಿ'ಗಳಲ್ಲಿ (Alveoli) ಶೇಖರಣೆಯಾಗುತ್ತವೆ.
ಉರಿಯೂತದಿಂದ ಆನುವಂಶಿಕ ರೂಪಾಂತರದವರೆಗೆ
ಈ ಹೊಗೆಯನ್ನು ಉಸಿರಾಡುವುದರಿಂದ ಕ್ಯಾನ್ಸರ್ ಬರುವ ಪ್ರಕ್ರಿಯೆಯು ಕೇವಲ ಯಾಂತ್ರಿಕವಲ್ಲ, ಇದೊಂದು ಜೈವಿಕ ಪ್ರಕ್ರಿಯೆ. ವಿಷಕಾರಿ ಕಣಗಳು ಶ್ವಾಸಕೋಶದ ಅಂಗಾಂಶಗಳಲ್ಲಿ ನೆಲೆಗೊಂಡಾಗ, ದೇಹವು ಅವುಗಳನ್ನು 'ಆಕ್ರಮಣಕಾರರು' ಎಂದು ಪರಿಗಣಿಸುತ್ತದೆ. ಇದು ದೇಹದಲ್ಲಿ ದೀರ್ಘ ಕಾಲದ ಉರಿಯೂತಕ್ಕೆ ಕಾರಣವಾಗುತ್ತದೆ. ನಿರಂತರವಾದ ಈ ಹೋರಾಟವು ಕಾಲಕ್ರಮೇಣ ಕೋಶಗಳ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಬೊಟ್ಟು ಮಾಡಿದ ಸಂಶೋಧನೆಯ ಪ್ರಕಾರ, ದೀರ್ಘಕಾಲದ ಮಾಲಿನ್ಯದ ಸಂಪರ್ಕವು ಆನುವಂಶಿಕ ರೂಪಾಂತರಗಳಿಗೆ ಪ್ರಚೋದಕ ವಾಗಿ ಕಾರ್ಯನಿರ್ವಹಿಸುತ್ತದೆ. ಈ ಕಣಗಳಲ್ಲಿರುವ ಭಾರ ಲೋಹಗಳು ಮತ್ತು ರಾಸಾಯನಿಕಗಳು ಶ್ವಾಸಕೋಶದ ಕೋಶಗಳ ಡಿಎನ್‌ಎ ಹಾನಿ ಮಾಡುತ್ತವೆ. ಭಾರತೀಯ ಜನಸಂಖ್ಯೆಯಲ್ಲಿ ಇದು ಹೆಚ್ಚು ಕಳವಳಕಾರಿಯಾಗಿದೆ. ಏಕೆಂದರೆ ನಮ್ಮಲ್ಲಿ 'ಇಜಿಎಫ್‌ಆರ್' (EGFR - Epidermal Growth Factor Receptor) ರೂಪಾಂತರಗಳ ಹರಡುವಿಕೆ ಹೆಚ್ಚಿದೆ. ಪರಿಸರದ ಒತ್ತಡದಿಂದಾಗಿ ಈ ರೂಪಾಂ ತರಗಳು ಸಕ್ರಿಯಗೊಳ್ಳುತ್ತವೆ, ಇದರಿಂದಾಗಿ ಧೂಮಪಾನ ಮಾಡದವರಲ್ಲಿಯೂ ಕೋಶಗಳು ಅನಿಯಂತ್ರಿತವಾಗಿ ವಿಭಜನೆಯಾಗಿ ಕ್ಯಾನ್ಸರ್‌ಗೆ ದಾರಿ ಮಾಡಿಕೊಡುತ್ತವೆ.
ಬದಲಾಗುತ್ತಿರುವ ರೋಗಿಗಳ ಚಿತ್ರಣ
ಒಂದು ಕಾಲದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಕೇವಲ ದೀರ್ಘಕಾಲದ ಧೂಮಪಾನಿಗಳಿಗೆ ಸೀಮಿತ ವಾಗಿತ್ತು. ಆದರೆ ಚಳಿಗಾಲದ ದಟ್ಟ ಹೊಗೆ ಈ ಅಪಾಯವನ್ನು ಸಾರ್ವತ್ರಿಕಗೊಳಿಸಿದೆ. ಇಂದು ಚಳಿಗಾಲದಲ್ಲಿ ಮೆಟ್ರೋ ನಗರದ ಹೊರಗಿನ ಗಾಳಿಯನ್ನು ಉಸಿರಾಡುವ ಪ್ರತಿಯೊಬ್ಬರೂ ಮೂಲ ಭೂತವಾಗಿ 'ಪ್ಯಾಸಿವ್ ಸ್ಮೋಕರ್' ಆಗಿರುತ್ತಾರೆ.
ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮದ ದತ್ತಾಂಶವು ರೋಗಿಗಳ ಪ್ರೊಫೈಲ್ ಬದಲಾಗು ತ್ತಿರುವುದನ್ನು ಸೂಚಿಸುತ್ತದೆ. ಮಹಿಳೆಯರು ಮತ್ತು ಧೂಮಪಾನ ಮಾಡದವರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ. ಅಸ್ತಮಾ ಅಥವಾ ಸಿಒಪಿಡಿ (COPD) ಯಂತಹ ಪೂರ್ವ ಅಸ್ತಿತ್ವ ದಲ್ಲಿರುವ ಕಾಯಿಲೆಗಳನ್ನು ಹೊಂದಿರುವವರಿಗೆ ಈ ಅಪಾಯ ಇನ್ನೂ ಹೆಚ್ಚು. ಚಳಿಗಾಲದ ನಿರಂತರ ಕೆಮ್ಮು ಕೇವಲ ಋತುಮಾನದ ಅಲರ್ಜಿಯಲ್ಲ; ಅದು 'ಸೆಲ್ಯುಲಾರ್ ಡಿಸ್ಟ್ರೆಸ್'ನ (Cellular Distress - ಕೋಶಗಳ ಸಂಕಷ್ಟ) ಎಚ್ಚರಿಕೆಯ ಗಂಟೆಯಾಗಿರಬಹುದು.
ಮುನ್ನೆಚ್ಚರಿಕೆ ಕ್ರಮಗಳು: ಶ್ವಾಸಕೋಶದ ರಕ್ಷಣೆ
ನಿಯಮಗಳ ಜಾರಿ ಮತ್ತು ಕೈಗಾರಿಕಾ ಮಟ್ಟದ ಬದಲಾವಣೆಗಳು ದೊಡ್ಡ ಪರಿಹಾರವಾಗಿದ್ದರೂ, ಕುಟುಂಬಗಳು ತಕ್ಷಣದ 'ಮೈಕ್ರೋ-ಲೆವೆಲ್' ತಂತ್ರಗಳನ್ನು ಅಳವಡಿಸಿಕೊಳ್ಳಬೇಕು. ಮನೆಯೊಳಗಿನ ಗಾಳಿಯೂ ಸುರಕ್ಷಿತವಲ್ಲ ಎಂಬುದನ್ನು ನಾವು ಮೊದಲು ಒಪ್ಪಿಕೊಳ್ಳಬೇಕು. ಮಲಗುವ ಕೋಣೆ ಗಳಲ್ಲಿ 'ಹೆಪಾ' (HEPA - High Efficiency Particulate Air) ಫಿಲ್ಟರ್‌ಗಳನ್ನು ಬಳಸುವುದರಿಂದ ನಿದ್ರೆಯ ಸಮಯದಲ್ಲಿ ಶ್ವಾಸಕೋಶಕ್ಕೆ ಚೇತರಿಸಿಕೊಳ್ಳಲು ಸಮಯ ಸಿಗುತ್ತದೆ.
ಹೊರಾಂಗಣ ಚಟುವಟಿಕೆಗಳಿಗೆ ಸಮಯದ ಬದಲಾವಣೆ ಅಗತ್ಯ. ಮುಂಜಾನೆ ವಾಯುವಿಹಾರ ಆರೋಗ್ಯಕರ ಎಂದು ಪರಿಗಣಿಸಲಾಗಿದ್ದರೂ, ಚಳಿಗಾಲದಲ್ಲಿ ಇದು ಅತ್ಯಂತ ಅಪಾಯಕಾರಿ. ಏಕೆಂದರೆ ಈ ಸಮಯದಲ್ಲಿ ಸ್ಮಾಗ್ ಪದರವು ತೀರಾ ಕೆಳಮಟ್ಟದಲ್ಲಿ ಮತ್ತು ಸಾಂದ್ರವಾಗಿರುತ್ತದೆ. ಬಿಸಿಲು ಬಂದ ನಂತರ, ಅಂದರೆ ಮಧ್ಯಾಹ್ನದ ವೇಳೆಗೆ ದೈಹಿಕ ಚಟುವಟಿಕೆಗಳನ್ನು ನಡೆಸುವುದು ಸೂಕ್ತ. ಇನ್ನು ಆಹಾರದಲ್ಲಿ ಆಂಟಿಆಕ್ಸಿಡೆಂಟ್‌ಗಳು , ಅರಿಶಿನ, ಶುಂಠಿ ಮತ್ತು ಸಿಟ್ರಸ್ ಹಣ್ಣುಗಳ ಸೇವನೆಯು ಮಾಲಿನ್ಯದಿಂದ ಉಂಟಾಗುವ ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ.
ಭಯ ಬೇಡ, ಎಚ್ಚರಿಕೆ ಇರಲಿ
ಚಳಿಗಾಲದ ಬೂದು ಆಕಾಶವು ಒಂದು ಸವಾಲಾಗಿದ್ದರೂ, ನಾವು ಅಸಹಾಯಕರಲ್ಲ. 'ಸಾದಾ ಕೆಮ್ಮು' ಎಂದು ನಿರ್ಲಕ್ಷಿಸದೆ, ಆರಂಭಿಕ ಹಂತದಲ್ಲೇ ವೈದ್ಯಕೀಯ ಸಲಹೆ ಪಡೆಯುವ ಮೂಲಕ ಮತ್ತು ಮನೆಯಲ್ಲಿ ಸಣ್ಣಪುಟ್ಟ ರಕ್ಷಣಾತ್ಮಕ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನಾವು ದೊಡ್ಡ ಅಪಾಯವನ್ನು ತಡೆಯಬಹುದು. ಈ ಋತುವಿನಲ್ಲಿ ಮನೆಯ ಒಳಗಿನ ನಮ್ಮ ಕಾಳಜಿಯೇ ನಮ್ಮ ಆರೋಗ್ಯದ ರಕ್ಷಾಕವಚವಾಗಲಿ.