Tooth Brush: ನಿಮ್ಮ ಟೂತ್‌ಬ್ರಷ್‌ಗಳು ಸ್ವಚ್ಛವಾಗಿವೆಯೇ?
ಬ್ರಷ್ ಹಿಡಿಕೆ ಮತ್ತು ಬ್ರಿಸಲ್‌ಗಳ ಮೇಲೆ ನೂರಾರು ಬಗೆಯ ಬ್ಯಾಕ್ಟೀರಿಯಗಳು ಬೆಳೆಯುತ್ತವೆ ಎಂಬುದನ್ನು ಅಧ್ಯಯನಗಳು ತೋರಿಸಿವೆ. ಹಾಗೆಂದು ಈ ಸಾಮಾನ್ಯ ಬ್ಯಾಕ್ಟೀರಿಯಗಳನ್ನು ಮಟ್ಟಹಾಕುವ ಶಕ್ತಿ ನಮ್ಮ ದೇಹಕ್ಕೆ ಮಾಮೂಲಾಗಿಯೇ ಇರುತ್ತದೆ. ಆದರೂ ಕೆಲವೊಮ್ಮೆ ಬ್ರಷ್ ಮುಖೇನವಾಗಿಯೇ ಸೋಂಕುಗಳು ಒಬ್ಬರಿಂದೊಬ್ಬರಿಗೆ ಅಂಟುವುದಕ್ಕೆ ಸಾಧ್ಯವಿದೆ.ಸ್ಯಾನಿಟೈಸ್ ಮಾಡುವುದಕ್ಕೆ ಮೈಕ್ರೋವೇವ್ ಅಥವಾ ಡಿಷ್‌ವಾಷರ್‌ಗೆ ಹಾಕುವಂಥ ಆಯ್ಕೆಗಳು ಅಷ್ಟೇನೂ ಸೂಕ್ತವಲ್ಲ. ಹಾಗಾದರೆ ಇದಕ್ಕೆ ಬದಲಿ ಮಾರ್ಗಗಳೇನು?
ನವ ದೆಹಲಿ: ನಾವೆಲ್ಲ ನಿತ್ಯವೂ ಹಲ್ಲುಜ್ಜುತ್ತೇವೆ. ಯಾಕೆ ಎಂದು ಕೇಳಿದರೆ, ಬಾಯಿಯ ಸ್ವಚ್ಛತೆಗೆ ಎಂಬ ಉತ್ತರ ಬರುವುದು ನಿಶ್ಚಿತ. ಆದರೆ ಬಾಯಿಯ ಸ್ವಚ್ಛತೆಗೆ ಬಳಸುವ ಬ್ರಷ್‌ಗಳನ್ನು (Toothbrush) ನಾವು ಸ್ವಚ್ಛ ಮಾಡುತ್ತೇವೆಯೇ? ದಿನಕ್ಕೆರಡು ಬಾರಿ ಬ್ರಷ್ ಮಾಡಿದ ನಂತರ ತೊಳೆದೇ ಇಡುತ್ತೇವಲ್ಲ ಎಂಬ ಸಮಝಾಯಿಶಿ ಬರಬಹುದು. ಅದಷ್ಟು ಮಾಡಿದರೆ ಸಾಕೇ? ಬಾಯಿಯ ಸ್ವಚ್ಛತೆಗೆಂದು ಬಳಸುವ ವಸ್ತುವೇ ಶುಚಿಯಾಗಿ ಇಲ್ಲದಿದ್ದರೆ, ಅದರಿಂದ ಹಲ್ಲುಜ್ಜುವುದು ಇನ್ನಷ್ಟು ಸಮಸ್ಯೆಗಳನ್ನು ತರಬಾರದೇಕೆ? ಹಾಗಾದರೆ ನಮ್ಮ ಟೂತ್‌ಬ್ರಷ್‌ಗಳನ್ನು ಸ್ವಚ್ಛ ಮಾಡುವುದು ಹೇಗೆ?
ಬ್ಯಾಕ್ಟೀರಿಯಗಳ ಆಡುಂಬೊಲ!: ನಮ್ಮ ಬಾಯಿ ಎಂದರೆ ಬ್ಯಾಕ್ಟೀರಿಯಗಳ ಆಡುಂಬೊಲ ಇದ್ದಂತೆ. ಹಲ್ಲು, ಒಸಡು, ನಾಲಗೆ ಮತ್ತು ಬಾಯಿಯ ಒಳಭಾಗಗಳಲ್ಲಿ ಆಹಾರದ ಕಣಗಳು, ಲಾಲಾ ರಸ, ಸಕ್ಕರೆಯಂಶ, ಹುಳಿ ಆಮ್ಲೀಯತೆ ಮುಂತಾದ ಒಂದಕ್ಕೊಂದು ಸಂಬಂಧವಿಲ್ಲದ ಏನೇನೋ ವಸ್ತುಗಳು ಅಂಟಿಕೊಂಡಿರುತ್ತವೆ. ಇವೆಲ್ಲವೂ ತರಹೇವಾರಿ ಸೂಕ್ಷ್ಮಾಣು ಜೀವಿಗಳನ್ನು ಆಕರ್ಷಿಸುತ್ತವೆ. ಇವುಗಳನ್ನು ಸ್ವಚ್ಛ ಮಾಡುವುದಕ್ಕೆ ನಾವು ಟೂತ್‌ಪೇಸ್ಟ್ ಬಳಸುತ್ತೇವೆ. ಆ ಪೇಸ್ಟ್ ಉಜ್ಜುವುದಕ್ಕೆ ನಮಗೆ ಬ್ರಷ್ ಬೇಕು. ಬಾಯಿಯ ಕೊಳೆಯನ್ನೆಲ್ಲ ತಿಕ್ಕಿ ತೊಳೆದ ಮೇಲೆ ಎಷ್ಟು ನೀರಿನಿಂದ ಉಜ್ಜಿ ತೊಳೆದರೂ, ಬ್ರಷ್‌ನಲ್ಲಿರುವ ಸೂಕ್ಷ್ಮಾಣುಗಳು ಪೂರ್ಣ ಹೋಗುವುದಿಲ್ಲ.
ಬ್ರಷ್ ಹಿಡಿಕೆ ಮತ್ತು ಬ್ರಿಸಲ್‌ಗಳ ಮೇಲೆ ನೂರಾರು ಬಗೆಯ ಬ್ಯಾಕ್ಟೀರಿಯಗಳು ಬೆಳೆಯುತ್ತವೆ ಎಂಬುದನ್ನು ಅಧ್ಯಯನಗಳು ತೋರಿಸಿವೆ. ಹಾಗೆಂದು ಈ ಸಾಮಾನ್ಯ ಬ್ಯಾಕ್ಟೀರಿಯಗಳನ್ನು ಮಟ್ಟಹಾಕುವ ಶಕ್ತಿ ನಮ್ಮ ದೇಹಕ್ಕೆ ಮಾಮೂಲಾಗಿಯೇ ಇರುತ್ತದೆ. ಆದರೂ ಕೆಲವೊಮ್ಮೆ ಬ್ರಷ್ ಮುಖೇನವಾಗಿಯೇ ಸೋಂಕುಗಳು ಒಬ್ಬರಿಂದೊಬ್ಬರಿಗೆ ಅಂಟುವುದಕ್ಕೆ ಸಾಧ್ಯವಿದೆ. ಸ್ಯಾನಿಟೈಸ್ ಮಾಡುವುದಕ್ಕೆ ಮೈಕ್ರೋವೇವ್ ಅಥವಾ ಡಿಷ್‌ವಾಷರ್‌ಗೆ ಹಾಕುವಂಥ ಆಯ್ಕೆಗಳು ಅಷ್ಟೇನೂ ಸೂಕ್ತವಲ್ಲ. ಈ ಉಪಕರಣಗಳು ಸೂಸುವ ಶಾಖದಿಂದಾಗಿ ಬ್ರಷ್‌ನ ಪ್ಲಾಸ್ಟಿಕ್ ಹಾಳಾಗಬಹುದು. ಯುವಿ ಕ್ಲೀನರ್‌ಗಳು ಪರಿಣಾಮಕಾರಿಯಾಗಿ ಸ್ವಚ್ಛ ಮಾಡುವುದು ಹೌದಾದರೂ, ಆ ಉಪಕರಣವನ್ನು ಖರೀದಿಸುವುದು ತುಟ್ಟಿ ಎನಿಸಬಹುದು. ಹಾಗಾದರೆ ಇದಕ್ಕೆ ಬದಲಿ ಮಾರ್ಗಗಳೇನು?
ಬಿಸಿನೀರು: ನಲ್ಲಿಯಲ್ಲಿ ಚೆನ್ನಾಗಿ ಬಿಸಿ ನೀರು ಬರುತ್ತದೆಂದಾದರೆ, ಬ್ರಷ್ ಬಳಸುವ ಮೊದಲು ಮತ್ತು ನಂತರ ಬ್ರಷ್‌ಗೆ ಬಿಸಿನೀರು ಹಾಯಿಸಬಹುದು. ಹೀಗೆ ಬಿಸಿನೀರಿಗೆ ಬ್ರಷ್ ಒಡ್ಡಿದಾಗ ಉಗಿ ಹಾಯುವಂತೆ ಇರಬೇಕು. ದಿನವೂ ಇದನ್ನು ಮಾಡುವುದರಿಂದ ಹಲ್ಲುಜ್ಜುವ ಈ ಪುಟ್ಟ ಉಪಕರಣವನ್ನು ಸಾಕಷ್ಟು ಶುಚಿಯಾಗಿಯೇ ಇರಿಸಿಕೊಳ್ಳಲು ಸಾಧ್ಯವಿದೆ. ಆದರೆ ಮಗ್‌ನಲ್ಲಿ ಬಿಸಿನೀರು ಇರಿಸಿಕೊಂಡು, ಅದರಲ್ಲಿ ಬ್ರಷ್ ಅದ್ದಿಡಬೇಡಿ, ನಲ್ಲಿಯಲ್ಲಿನ ಹರಿಯುವ ನೀರೇ ಇದಕ್ಕೆ ಅಗತ್ಯ.
ಮೌತ್‌ವಾಷ್: ಬಿಸಿನೀರು ನಲ್ಲಿಯ ಸೌಲಭ್ಯ ಲಭ್ಯವಿಲ್ಲ ಎಂದಾದರೆ, ಅನ್ಯ ಮಾರ್ಗಗಳಿವೆ. ಬ್ಯಾಕ್ಟೀರಿಯಾ ನಿರೋಧಕ ಮೌತ್‌ವಾಷ್‌ನಿಂದ ಶುಚಿಗೊಳಿಸಬಹುದು. ಒಂದು ಸಣ್ಣ ಕಪ್‌ನಲ್ಲಿ ಬ್ರಿಸಲ್ ಮುಳುಗುವಷ್ಟು ಮೌತ್‌ವಾಷ್ ಇರಿಸಿಕೊಂಡು, ಅದರಲ್ಲಿ ಸುಮಾರು ಎರಡು ನಿಮಿಷಗಳ ಕಾಲ ಬ್ರಷ್ ಮುಳುಗಿಸಿಡಿ. ನಂತರ ಸ್ವಚ್ಛವಾಗಿ ತೊಳೆದಿರಿಸಿಕೊಳ್ಳಿ. ಇದನ್ನು ಬೇಕಾದಾಗ ಮಾಡಿಕೊಳ್ಳಬಹುದು. ಇದನ್ನು ಪ್ರತಿ ದಿನ ಮಾಡಿದರೆ, ಬ್ರಷ್ ಬೇಗನೇ ಹಾಳಾದೀತು.
ಅದಲ್ಲದೆ ಇನ್ನೊಂದು ಮಾರ್ಗವೂ ಇದೆ. ಕೃತಕ ಹಲ್ಲುಗಳನ್ನು ಅಥವಾ ಡೆಂಚರ್‌ಗಳನ್ನು ಸ್ವಚ್ಛಗೊಳಿಸುವ ದ್ರಾವಣವನ್ನು ಬಳಸಿ ಬ್ರಷ್ ಸ್ವಚ್ಛ ಮಾಡಬಹುದು. ಈ ದ್ರಾವಣಗಳನ್ನೂ ಬ್ಯಾಕ್ಟೀರಿಯ ನಿರೋಧಕ ರಾಸಾಯನಿಕಗಳಿಂದಲೇ ಸಿದ್ಧಪಡಿಸಲಾಗುತ್ತದೆ. ಮೌತ್‌ವಾಷ್ ಬಳಸುವ ಪ್ರಕ್ರಿಯೆಯಂತೆ, ಇದರಲ್ಲೂ ಎರಡು ನಿಮಿಷಗಳವರೆಗೆ ಬ್ರಷ್ ಅದ್ದಿರಿಸಿ ನಂತರ ಚೆನ್ನಾಗಿ ತೊಳೆದಿರಿಸಿಕೊಳ್ಳಿ.
ಇರಿಸಿಕೊಳ್ಳುವುದು ಹೇಗೆ?: ಒಂದೇ ಕಪ್ ಹೋಲ್ಡರ್‌ನಲ್ಲಿ ರಾಶಿಗಟ್ಟಲೆ ಟೂತ್‌ಬ್ರಷ್ ಇರಿಸಿಕೊಳ್ಳಬೇಡಿ. ಇದರಿಂದ ಒಂದಕ್ಕೊಂದು ಬ್ರಿಸಲ್‌ಗಳು ಉಜ್ಜಿದಂತಾಗಿ ಬ್ಯಾಕ್ಟೀರಿಯಗಳು ವರ್ಗಾವಣೆಯಾಗುತ್ತವೆ. ಹಾಗಾಗಿ ಕಪ್‌ನಲ್ಲಿ ಬ್ರಷ್‌ಗಳು ವಿರಳವಾಗಿ ಇರುವಂತೆ ನೋಡಿಕೊಳ್ಳಿ. ಬಳಸದೆ ಉಳಿದ ಬ್ರಷ್‌ಗಳಿದ್ದರೆ ಅವನ್ನು ಬಿಸಾಡಿ. ಬ್ರಷ್‌ಗಳನ್ನು ಎಂದಿಗೂ ಟಾಯ್ಲೆಟ್ ಸಮೀಪದಲ್ಲಿ ಇರಿಸಬೇಡಿ. ಇದರಿಂದ ಅಗಣಿತ ಬ್ಯಾಕ್ಟೀರಿಯಗಳು ಬ್ರಷ್‌ಗೆ ಅಂಟಿಕೊಳ್ಳುತ್ತವೆ. ಸಾಧ್ಯವಾದಷ್ಟೂ ಮುಚ್ಚಿದ ಬಾಗಿಲಿರುವ ಜಾಗಗಳಲ್ಲಿ ಇರಿಸಿ.
ಇದನ್ನು ಓದಿ: Health Tips: ನೀರು ಕುಡಿದ ಕೂಡಲೇ ಈ ತೊಂದರೆ ಕಾಣಿಸ್ತಿದ್ಯಾ? ಕಿಡ್ನಿ ಸಮಸ್ಯೆ ಇವೆ ಎನ್ನುವ ಲಕ್ಷಣಗಳಿವು!
ಯಾವಾಗ ಎಸೆಯಬೇಕು?: ಸಾಮಾನ್ಯವಾಗಿ ೩-೪ ತಿಂಗಳು ಮಾತ್ರವೇ ಅವುಗಳ ಆಯಸ್ಸು ಎನ್ನುತ್ತಾರೆ ದಂತ ತಜ್ಞರು. ಅದಲ್ಲದೆ, ಆ ಬ್ರಿಸಲ್‌ಗಳು ಹಿಗ್ಗಿ ಆಕಾರಗೆಟ್ಟಿದ್ದರೆ, ಅಂಥವುಗಳಿಂದ ಹಲ್ಲು ಸ್ವಚ್ಛವಾಗುವುದಿಲ್ಲ. ಸೋಂಕು ಜ್ವರಗಳು, ಗಂಟಲು ನೋವು ಮುಂತಾದವು ಬಂದಿದ್ದರೆ, ಆಗಲೂ ಬ್ರಷ್‌ಗಳನ್ನು ಬದಲಾಯಿಸುವುದು ಸೂಕ್ತ. ಸೋಂಕಿತರ ಬ್ರಷ್‌ಗಳನ್ನು ಬೇರೆಯಾಗಿ ಇರಿಸದೆ ಒಂದೇ ಕಪ್‌ನಲ್ಲಿ ಇರಿಸಿದ್ದರೆ, ಮನೆಯ ಎಲ್ಲರೂ ಬ್ರಷ್ ಬದಲಾಯಿಸುವುದು ಒಳ್ಳೆಯದು. ಬೇರೆ ಯಾರಾದರೂ ಆಕಸ್ಮಿಕವಾಗಿ ನಿಮ್ಮ ಬ್ರಷ್ ಬಳಸಿದ್ದರೆ ಆಗಲೂ ಅದನ್ನು ಬದಲಾಯಿಸಿ.