Healthy Tips: ಏರುತ್ತಿರುವ ಬಿಸಿಲಿನಲ್ಲಿ ದೇಹಕ್ಕೆ ನೀರುಣಿಸುವುದು ಹೇಗೆ?
ದಿನವೂ ನೀರು ಕುಡಿಯುವುದಕ್ಕೆ ಒಂದು ನಿಯಮಿತವಾದ ಕ್ರಮವನ್ನು ರೂಢಿಸಿಕೊಳ್ಳಿ. ಉದಾ, ಬೆಳಗ್ಗೆ ಏಳುತ್ತಿದ್ದಂತೆ ಒಂದು ದೊಡ್ಡ ಗ್ಲಾಸ್ ನೀರು, ಬೆಳಗಿನ ತಿಂಡಿಯಾದ ಸ್ವಲ್ಪ ಹೊತ್ತಿನ ನಂತರ ಇನ್ನೊಂದು ಗ್ಲಾಸ್ ನೀರು… ಹೀಗೆ ನಿಮ್ಮದೇ ಕ್ರಮವನ್ನು ರೂಢಿಸಿಕೊಳ್ಳಿ. ಪ್ರತಿ ತಾಸಿಗೆ ನೀರಿನ ಅಲರಾಂ ಇರಿಸುವುದು ಸಹ ಉಪಯುಕ್ತ.


ಬೆಂಗಳೂರು: ಬೇಸಿಗೆಯ ಪ್ರತಾಪ ಹೆಚ್ಚುತ್ತಿರುವಂತೆ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳುವ ಸವಾಲು ಸಹ ಹೆಚ್ಚುತ್ತದೆ. ನೀರಿನಂಶ ಕಡಿಮೆಯಾದರೆ ಎರಗುವ ಆಪತ್ತುಗಳಿಂದ ತಪ್ಪಿಸಿಕೊಳ್ಳಲು, ಅಂದರೆ ನಿರ್ಜಲೀಕರಣದ ಅಪಾಯದಿಂದ ತಪ್ಪಿಸಿಕೊಳ್ಳಲು ದಿನವಿಡೀ ನೀರು ಕುಡಿಯುತ್ತಲೇ ಇರುವುದೂ ಸಾಧ್ಯವಿಲ್ಲವಷ್ಟೇ. ಹಾಗಾದರೆ ಬೇಸಿಗೆಯ ತಾಪದಿಂದ ಕಾಪಾಡಿಕೊಂಡು, ದೇಹಕ್ಕೆ ನೀರುಣಿಸುತ್ತಿರುವುದು ಹೇಗೆ? ಸೆಕೆಗೆ ಬಳಲದಂತೆ ಶರೀರವನ್ನು ರಕ್ಷಿಸಿಕೊಂಡು, ಶಕ್ತಿಗುಂದದಂತೆ ಇರುವುದು ಹೇಗೆ?
ಕ್ರಮವಿರಲಿ: ದಿನವೂ ನೀರು ಕುಡಿಯುವುದಕ್ಕೆ ಒಂದು ನಿಯಮಿತವಾದ ಕ್ರಮವನ್ನು ರೂಢಿಸಿಕೊಳ್ಳಿ. ಉದಾ, ಬೆಳಗ್ಗೆ ಏಳುತ್ತಿದ್ದಂತೆ ಒಂದು ದೊಡ್ಡ ಗ್ಲಾಸ್ ನೀರು, ಬೆಳಗಿನ ತಿಂಡಿಯಾದ ಸ್ವಲ್ಪ ಹೊತ್ತಿನ ನಂತರ ಇನ್ನೊಂದು ಗ್ಲಾಸ್ ನೀರು… ಹೀಗೆ ನಿಮ್ಮದೇ ಕ್ರಮವನ್ನು ರೂಢಿಸಿಕೊಳ್ಳಿ. ಪ್ರತಿ ತಾಸಿಗೆ ನೀರಿನ ಅಲರಾಂ ಇರಿಸುವುದು ಸಹ ಉಪಯುಕ್ತ. ಆಗ ದೇಹಕ್ಕೆ ನೀರುಣಿಸುವುದು ಸುಲಭವಾಗುತ್ತದೆ. ನೀರು ಕುಡಿಯುವುದಕ್ಕೆ ಬಾಯಾರಿಕೆ ಆಗಲೆಂದು ಕಾಯಬೇಡಿ.
ಬೆರಕೆ ಪೇಯಗಳು!: ಹೀಗೆಲ್ಲ ಅಚ್ಚ ಕನ್ನಡದಲ್ಲಿ ಹೇಳಿದರೆ ಯಾರಿಗೂ ಅರ್ಥವಾಗುವುದಿಲ್ಲ! ಇನ್ಫ್ಯೂಶನ್ ವಾಟರ್ ಎನ್ನುತ್ತಿದ್ದಂತೆ ಕಣ್ಣರಳುತ್ತದೆ. ಬೆಸಿಲ್, ಬೆರ್ರಿಗಳು, ಅನಾನಸ್, ಪುದೀನಾ ಮುಂತಾದ ತರಹೇವಾರಿ ಪರಿಮಳಭರಿತ ಹಣ್ಣುಗಳು, ಸೊಪ್ಪುಗಳನ್ನೆಲ್ಲ ನೀರಿಗೆ ಬೆರೆಸಿಟ್ಟುಕೊಂಡು ಕುಡಿಯುವುದು. ಇದನ್ನು ದೊಡ್ಡದೊಂದು ಪಾತ್ರೆಗೆ ಹಾಕಿಟ್ಟುಕೊಂಡು ದಿನವಿಡೀ ಸ್ವಲ್ಪವೇ ಗುಟುಕರಿಸುತ್ತಿರಬಹುದು. ಇದರಿಂದ ಆರೋಗ್ಯದ ಲಾಭಗಳು ಬಹಳಷ್ಟಿವೆ.
ನೀರನ್ನು ತಿನ್ನಿ!: ಅಂದರೆ ಐಸ್‌ಕ್ಯೂಬ್ ತಿನ್ನುವುದೆಂದು ಭಾವಿಸಬೇಡಿ. ನೀರಿರುವಂಥ ಆಹಾರಗಳನ್ನು ತಿನ್ನುವುದೂ ಈ ಕೆಲಸಕ್ಕೆ ಸಹಾಯ ಮಾಡುತ್ತದೆ. ಅಂದರೆ ಸೆಲರಿ, ಲೆಟೂಸ್, ಸೌತೇಕಾಯಿ, ಟೊಮೇಟೊ ಮುಂತಾದ ನೀರಿನಂಶವಿರುವ ತರಕಾರಿಗಳನ್ನು ಬಳಸಿ ಸಲಾಡ್ ತಯಾರಿಸಿ. ಮಾತ್ರವಲ್ಲ, ಕಲ್ಲಂಗಡಿ, ಪಪ್ಪಾಯ, ಕರಬೂಜ, ಕಿತ್ತಳೆ, ಪೀಚ್, ಕಿವಿ ಮುಂತಾದ ರಸಭರಿತ ಹಣ್ಣುಗಳಿಂದ ಫ್ರೂಟ್ ಸಲಾಡ್ ಸಹ ಮಾಡಿಕೊಳ್ಳಬಹುದು. ಇವೆಲ್ಲವೂ ದೇಹದ ಎಲೆಕ್ಟ್ರೋಲೈಟ್ ಸಮತೋಲನದಲ್ಲಿ ಇರಿಸಲು ಸಹ ನೆರವಾಗುತ್ತವೆ.
ಇವುಗಳು ಬೇಡ: ಡೈಯುರೇಟಿಕ್‌ನಂತೆ ಕೆಲಸ ಮಾಡುವ ಪೇಯಗಳನ್ನು ದೂರ ಮಾಡಿ. ಕಾಫಿ, ಟೀ, ಆಲ್ಕೋಹಾಲ್, ಸೋಡಾನಂಥವು ಹೆಚ್ಚಿನ ಪ್ರಮಾಣದಲ್ಲಿ ಮೂತ್ರವನ್ನು ಉತ್ಪಾದನೆ ಮಾಡುತ್ತವೆ. ಈ ಮೂಲಕ ದೇಹದಲ್ಲಿರುವ ನೀರಿನಂಶವನ್ನು ಹೆಚ್ಚುವರಿಯಾಗಿ ಹೊರಗೆ ಹಾಕುತ್ತವೆ. ಇಂಥವುಗಳನ್ನು ಸೇವಿಸುವುದು ಅನಿವಾರ್ಯ ಎಂದಾದರೆ, ಅದಕ್ಕೆ ಪೂರಕವಾಗಿ ನೀರನ್ನೂ ಹೆಚ್ಚು ಕುಡಿಯಿರಿ.
ಗಮನಿಸಿ: ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತಿದೆ ಎಂದಾದರೆ, ನಮ್ಮ ಶರೀರ ಮುಂಚಿತವಾಗಿಯೇ ಕೆಲವು ಸೂಚನೆಗಳನ್ನು ನೀಡುತ್ತದೆ. ಬಾಯಿ ಆರಿದ ಅನುಭವ, ತುಟಿಗಳು ಒಣಗುವುದು, ಆಯಾಸದ ಅನುಭವ, ಮೂತ್ರದ ಬಣ್ಣ ಗಾಢವಾಗುವುದು- ಇಂಥವುಗಳನ್ನು ಗಮನಿಸಿ. ಮೂತ್ರದ ಬಣ್ಣ ತಿಳಿ ಹಳದಿ ಬಣ್ಣಕ್ಕಿಂತ ಗಾಢವಾಗದಂತೆ ಎಚ್ಚರಿಕೆ ತೆಗೆದುಕೊಳ್ಳಿ. ಹಾಗೇನಾದರೂ ಆದರೆ ತಕ್ಷಣ ಚೆನ್ನಾಗಿ ನೀರು ಕುಡಿಯಿರಿ.
ಈ ಸಂಸ್ಥೆಯನ್ನೂ ಓದಿ: Ghee Purity Test: ನೀವು ಬಳಸುತ್ತಿರುವ ತುಪ್ಪ ಪರಿಶುದ್ಧವಾಗಿದೆಯೇ? ಕಲಬೆರಕೆ ಪತ್ತೆ ಹಚ್ಚಲು ಇಲ್ಲಿದೆ ಸುಲಭ ವಿಧಾನ
ಎಲೆಕ್ಟ್ರೋಲೈಟ್‌ಗಳು: ತೀವ್ರ ಬೇಸಿಗೆಯಲ್ಲಿ ಕೆಲವೊಮ್ಮೆ ಬರೀ ನೀರು ಕುಡಿಯುವುದು ಸಾಕಾಗುವುದಿಲ್ಲ. ಅತಿಯಾಗಿ ಬೆವರುತ್ತಿದ್ದೀರಿ, ಆಯಾಸಗೊಂಡಿದ್ದೀರಿ, ಬಿಸಿಲಿನಲ್ಲಿದ್ದೀರಿ ಎಂದಾದರೆ ದೇಹಕ್ಕೆ ಲವಣಾಂಶಗಳನ್ನು ಮರುಪೂರಣ ಮಾಡುವುದು ಕಡ್ಡಾಯ. ಇದಕ್ಕಾಗಿ ಕೃತಕ ಬಣ್ಣ, ಸಿಹಿಗಳನ್ನೆಲ್ಲ ಸೇರಿಸಿದ ಪೇಯಗಳನ್ನು ಸೇವಿಸಬೇಡಿ. ಎಳನೀರು, ಒಆರ್‌ಎಸ್‌ನಂಥವು ಮಾತ್ರ ಇದಕ್ಕೆ ಸೂಕ್ತ. ಅದಲ್ಲದೆ, ಜಲ್ಜೀರಾ ಬೆರೆಸಿದ ಮಜ್ಜಿಗೆ, ನೈಸರ್ಗಿಕವಾದ ಹಣ್ಣಿನ ಪಾನಕಗಳನ್ನೂ ಬಳಸಬಹುದು.