ಭೂಮಿ ನಂಬಿ ದುಡಿಯುವ ರೈತನಿಂದ ದೇಶ ಕಾಯೋ ಸೈನಿಕನವರೆಗೆ; ʻಮಹಾಕಾಳಿ ಪುತ್ರʼ ಟೈಟಲ್ ಲಾಂಚ್
ʻಮಹಾಕಾಳಿ ಪುತ್ರʼ ಸಿನಿಮಾದ ಮೂಲಕ ಹೊಸ ಪ್ರತಿಭೆ ಗಿರೀಶ್ ಎಸ್.ಎಂ. ಸ್ಯಾಂಡಲ್‌ವುಡ್‌ಗೆ ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ರೈತ ಮತ್ತು ಸೈನಿಕರ ನಡುವಿನ ಅವಿನಾಭಾವ ಸಂಬಂಧವನ್ನು ಸಾರುವ ಈ ಚಿತ್ರವು, ಮಣ್ಣಿನ ಮಗನ ಸಂಘರ್ಷ ಮತ್ತು ಸಾಧನೆಯ ಕಥೆಯನ್ನು ಹೊಂದಿದೆಯಂತೆ.
-
ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿರುವ ಹೊಸ ಪ್ರತಿಭೆ ಗಿರೀಶ್ ಎಸ್. ಎಂ. ಅವರು ಮೊದಲ ಚಿತ್ರವನ್ನು ಘೋಷಣೆ ಮಾಡಿದ್ದಾರೆ. ತಮ್ಮ ಸಿನಿಮಾಕ್ಕೆ ಮಹಾಕಾಳಿ ಪುತ್ರ ಎಂದು ಹೆಸರಿಡಲಾಗಿದ್ದು, ಇದರ ನಿರ್ದೇಶನ ಕೂಡ ಅವರದ್ದೇ. ಜೊತೆಗೆ ತಿರುಪತಿ ತಿರುಮಲ ಪ್ರೊಡಕ್ಷನ್ಸ್ ಮೂಲಕ ಈ ಸಿನಿಮಾವನ್ನು ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಈಚೆಗೆ ಈ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ನಡೆದಿದೆ.
ನಿರ್ದೇಶಕರು ಹೇಳೋದೇನು?
"ಮೂಲತಃ ನಾನೊಬ್ಬ ರೈತ. ಈಗ ನಾನೇ ರೈತರ ಬಗ್ಗೆ ಸಿನಿಮಾ ಮಾಡಲು ಬಂದಿದ್ದೇನೆ. ಇದು ನನ್ನ ಮೊದಲ ಸಿನಿಮಾ. ಮಹಾಕಾಳಿ ಪುತ್ರ ಎಂದರೆ ದೈವದ ಆರಾಧಕ, ರೈತರು ಪ್ರತಿದಿನ ದೇವಿಯ ಪೂಜೆ ಮಾಡಿಕೊಂಡೇ ತಮ್ಮ ಕಾಯಕಕ್ಕೆ ಹೊರಡುತ್ತಿದ್ದರು. ಆ ರೈತನನ್ನು ದೇವಿ ಪುತ್ರ ಅಂತ ಚಿತ್ರದಲ್ಲಿ ತೋರಿಸಿದ್ದೇವೆ. ರೈತರ ಬಗ್ಗೆ ಒಂದೊಳ್ಳೆಯ ಮೆಸೇಜ್ ಇಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದೇವೆ. ಹಿಂದಿನ ಕಾಲದಲ್ಲಿ ರೈತರು ಪ್ರಾಮಾಣಿಕವಾಗಿ ನಿಯತ್ತಿನಿಂದ ದುಡಿದು ಇಡೀ ದೇಶಕ್ಕೆ ಅನ್ನ ಹಾಕಿದ್ದರು. ಇವತ್ತು ಆ ರೈತನಿಗೆ ಸಮಾಜದಿಂದ ಸಿಗಬೇಕಾದ ಗೌರವ, ಬೆಲೆ ಸಿಗ್ತಿಲ್ಲ" ಎಂದು ಹೇಳುತ್ತಾರೆ ಗಿರೀಶ್.
ಸಿನಿಮಾಗಳು ಕನ್ನಡ ಸಾಹಿತ್ಯ-ಸಂಸ್ಕೃತಿಯ ಬೇರುಗಳಿಂದ ದೂರ ಆಗಿವೆ: ಕೆ.ವಿ. ಪ್ರಭಾಕರ್
"ಮಣ್ಣನ್ನು ನಂಬಿ ದುಡಿಯುವ ರೈತನಿಂದ ಹಿಡಿದು ದೇಶ ಕಾಯುವ ಸೈನಿಕನಿಗೆ ಈ ಕಥೆಯಲ್ಲಿ ಲಿಂಕ್ ಕೊಟ್ಟಿದ್ದೇವೆ. ಅದು ಹೇಗೆ ಎಂಬುದನ್ನು ತೆರೆಮೇಲೆ ನೋಡಿ. ರೈತರು ಆಗ ಈಗಲೂ ವ್ಯವಸಾಯ ಮಾಡ್ತಿದ್ದಾರೆ. ಆದರೆ ಶೈಲಿ ಬದಲಾಗಿದೆ. ಎತ್ತುಗಳನ್ನು ವ್ಯವಸಾಯಕ್ಕೋಸ್ಕರ ಸಾಕಿ, ನಂತರ ಅವನ್ನು ರೇಸ್‌ಗೂ ಬಳಸಬಹುದು ಅಂತ ತೋರಿಸಿದ್ದೇವೆ. ನಮ್ಮ ಚಿತ್ರದಲ್ಲೂ ರೇಸ್ ಇರುತ್ತದೆ. ಆರಂಭದಿಂದ ಕೊನೆವರೆಗೂ ಸಿನಿಮಾ ಹೊಸದಾಗಿ ಕಾಣಬೇಕು ಅಂತ ಪ್ರಯತ್ನಿಸುತ್ತಿದ್ದೇವೆ. ರೈತರ ಬಗ್ಗೆ ಈವರೆಗೆ ಬಂದ ಎಲ್ಲಾ ಸಿನಿಮಾಗಳಿಗಿಂತ ಇದರಲ್ಲಿ ಬೇರೆಯದೇ ಕಥೆ ಇರುತ್ತದೆ. ಮಣ್ಣಿನ ಬೆಲೆ ಏನು ಅಂತ ತೋರಿಸ್ತಿದ್ದೇವೆ" ಎನ್ನುತ್ತಾರೆ ಗಿರೀಶ್.
ಮಾರ್ಚ್ 15ರಿಂದ ಶೂಟಿಂಗ್ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಇದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಬೇರೆಬೇರೆ ಭಾಷೆಯ ಕಲಾವಿದರೂ ಸಹ ಈ ಚಿತ್ರದಲ್ಲಿ ನಟಿಸುತ್ತಾರಂತೆ. ಈ ಚಿತ್ರಕ್ಕೆ ಗಿರೀಶ್ ಗೌಡ ಎಂಬುವವರು ಚಿತ್ರಕಥೆಯನ್ನು ಬರೆದಿದ್ದಾರೆ. ದಸರಾ ವೇಳೆಗೆ ಈ ಸಿನಿಮಾವನ್ನು ರಿಲೀಸ್ ಮಾಡುವ ಪ್ಲ್ಯಾನ್ ಇದೆಯಂತೆ. ಶಿವಮೊಗ್ಗದಲ್ಲಿ ನಡೆಯುವ ಜಾತ್ರೆಯೊಂದನ್ನು ರಿಯಲ್ ಆಗಿ ಶೂಟ್ ಮಾಡುವುದಕ್ಕೆ ಪ್ಲ್ಯಾನ್ ಮಾಡಿಕೊಂಡಿದೆಯಂತೆ ಚಿತ್ರತಂಡ. ಈ ಸಿನಿಮಾದಲ್ಲಿ ಒಂದೇ ಹಾಡಿದ್ದು, ಅದನ್ನು ರಾಹುಲ್ ವಸ್ತಾರ ಕಂಪೋಸ್ ಮಾಡಲಿದ್ದಾರೆ. ಕೀರ್ತನ್ ಪೂಜಾರಿ ಛಾಯಾಗ್ರಹಣ ಮಾಡಲಿದ್ದಾರೆ.