ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hair Care: ಪ್ರಸವದ ನಂತರ ಕೂದಲು ಉದುರುವುದನ್ನು ತಡೆಯುವುದು ಹೇಗೆ?

Hair Care After Delivery: ನವಜಾತ ಶಿಶುಗಳ ಅಮ್ಮಂದಿರಿಗೆ ಇರುವಂಥ ಹಲವು ಸವಾಲುಗಳ ಪೈಕಿ ಕೂದಲು ಉದುರುವುದೂ ಒಂದು. ಇದಕ್ಕಾಗಿ ಎಷ್ಟೋ ಮಂದಿ ಬಾಣಂತಿಯರು ಬಯೋಟಿನ್‌ ಪೂರಕಗಳ ಮೊರೆ ಹೋಗುತ್ತಾರೆ. ಇದರಲ್ಲಿ ತಪ್ಪೇನಿಲ್ಲ, ಕೂದಲಿನ ಆರೈಕೆಯಲ್ಲಿ ಬಯೋಟಿನ್‌ ಮಹತ್ವದ ಪಾತ್ರ ವಹಿಸುತ್ತದೆ. ಕೂದಲಿನ ಆರೈಕೆ ಹೇಗೆ ಮಾಡಬೇಕು? ಇಲ್ಲಿದೆ ಮಾಹಿತಿ

ಹೆರಿಗೆ ನಂತರದ ಕೂದಲಿನ ಆರೈಕೆ ಏನು?

Profile Vishakha Bhat Apr 13, 2025 7:05 AM

ಬೆಂಗಳೂರು: ನವಜಾತ ಶಿಶುಗಳ ಅಮ್ಮಂದಿರಿಗೆ ಇರುವಂಥ ಹಲವು ಸವಾಲುಗಳ ಪೈಕಿ ಕೂದಲು ಉದುರುವುದೂ (Hair Care) ಒಂದು. ಗರ್ಭಾವಸ್ಥೆಯಲ್ಲಿ ಚೋದಕಗಳ ಪ್ರಭಾವದಿಂದ ದೇಹದಲ್ಲಿ ಎಲ್ಲವೂ ಬೆಳವಣಿಗೆಯ ಸ್ಥಿತಿಯಲ್ಲಿ ಇರುವುದರಿಂದ, ಕೂದಲು ಉದುರುವುದು ನಿಂತೇ ಹೋಯ್ತೆನ್ನುವಷ್ಟು ವಿರಳವಾಗಿರುತ್ತದೆ. ಆದರೆ ಪ್ರಸವದ ನಂತರ ಆರೆಂಟು ವಾರಗಳಲ್ಲಿ ಚೋದಕಗಳೆಲ್ಲ ತಮ್ಮ ಸಾಮಾನ್ಯ ಸ್ಥಿತಿಗೆ ಮರಳುವ ಹೊತ್ತಿಗೆ ಕೂದಲು ಹೆದರಿಕೆ ಹುಟ್ಟಿಸುವಷ್ಟು ಉದುರಲು ಪ್ರಾರಂಭಿಸುತ್ತದೆ. ಹೀಗೆಯೇ ಮುಂದುವರಿದರೆ ಇನ್ನೊಂದಾರು ತಿಂಗಳಿಗೆ ತಮ್ಮ ತಲೆ ಸಂಪೂರ್ಣ ಬೋಳಾಗಬಹುದೇ ಎನ್ನುವಷ್ಟು ಕೂದಲು ಉದುರುತ್ತಿರುತ್ತವೆ. ಇದನ್ನು ಹೇಗೆ ತಡೆಯಬಹುದು?

ಇದಕ್ಕಾಗಿ ಎಷ್ಟೋ ಮಂದಿ ಬಾಣಂತಿಯರು ಬಯೋಟಿನ್‌ ಪೂರಕಗಳ ಮೊರೆ ಹೋಗುತ್ತಾರೆ. ಇದರಲ್ಲಿ ತಪ್ಪೇನಿಲ್ಲ, ಕೂದಲಿನ ಆರೈಕೆಯಲ್ಲಿ ಬಯೋಟಿನ್‌ ಮಹತ್ವದ ಪಾತ್ರ ವಹಿಸುತ್ತದೆ. ಆದರೆ ಕೇವಲ ಬಯೋಟಿನ್‌ ಮಾತ್ರವೇ ನೀಡಿದರೆ ಕೂದಲಿಗೆ ಸಾಕಾಗುವುದಿಲ್ಲ. ಈ ದಿನಗಳಲ್ಲಿ ತಾಯಿಯ ದೇಹಕ್ಕೆ ಒಂದಕ್ಕಿಂತ ಹೆಚ್ಚು ಸತ್ವಗಳ ಕೊರತೆ ಎದುರಾಗುವುದು ಸಾಮಾನ್ಯ. ಕಬ್ಬಿಣ, ವಿಟಮಿನ್‌ ಡಿ, ಒಮೇಗಾ ೩ ಕೊಬ್ಬಿನಾಮ್ಲ… ಹೀಗೆ ಅಗತ್ಯವಾದ ಪೋಷಕಾಂಶಗಳು ದೇಹದಲ್ಲಿ ಕಡಿಮೆಯಾದಾಗ ಕೂದಲು ಉದುರುವುದು ಇನ್ನಷ್ಟು ಹೆಚ್ಚುತ್ತದೆ. ಹಾಗಾದರೆ ಬಾಣಂತಿಯ ಆರೈಕೆಯಲ್ಲಿ ಇರಲೇಬೇಕಾದ ಸತ್ವಗಳು ಯಾವುವು? ಇದರಿಂದ ಕೂದಲು ಉದುರುವುದನ್ನು ತಡೆಯಬಹುದೇ ಅಥವಾ ಕಡಿಮೆ ಮಾಡಬಹುದೇ?

ಪ್ರೊಟೀನ್‌: ದೇಹದಲ್ಲಿ ಈಗಾಗಿರುವ ಗಾಯಗಳನ್ನು ಮತ್ತು ಏರುಪೇರುಗಳನ್ನು ದುರಸ್ತಿ ಮಾಡುವುದಕ್ಕೆ ಬೇಕಾಗಿರುವ ಅತಿ ಮಹತ್ವದ ಪೋಷಕಾಂಶವಿದು. ಇದಲ್ಲದೆ, ಮಗುವಿನ ಬೆಳವಣಿಗೆಗೆ ಸಹ ಇದು ಅಗತ್ಯ. ಹಾಗಾಗಿ ಸಾಮಾನ್ಯರಿಗೆ ಬೇಕಾಗುವಂತೆ ಪ್ರತಿ ಕೆಜಿ ದೇಹದ ತೂಕಕ್ಕೆ ಒಂದು ಗ್ರಾಂ ಪ್ರೊಟೀನ್‌ ಎನ್ನುವ ಬದಲು, ಹೊಸ ಅಮ್ಮನಿಗೆ ಒಂದೂವರೆ ಗ್ರಾಂ ಪ್ರೊಟೀನ್‌ ಎಂದೇ ಲೆಕ್ಕ ಹಾಕಬೇಕು. ಇದರಿಂದ ಗರ್ಭಾವಸ್ಥೆಯಲ್ಲಿ ಹಾಕಿದ್ದ ಹೆಚ್ಚುವರಿ ತೂಕ ಇಳಿಸಲು, ಸಡಿಲವಾಗಿರುವ ಸ್ನಾಯುಗಳನ್ನು ಬಿಗಿ ಮಾಡಲು, ಶಿಶು ಸುಪುಷ್ಟವಾಗಿ ಬೆಳೆಯಲು ಅನುಕೂಲವಾಗುತ್ತದೆ. ಕೂದಲು ಉದುರುವುದನ್ನಂತೂ ದೊಡ್ಡ ಮಟ್ಟಕ್ಕೆ ತಡೆಯಬಹುದು.

ವಿಟಮಿನ್‌ ಡಿ: ಗರ್ಭಿಣಿಯಾಗಿದ್ದಾಗ ಡಿ ಜೀವಸತ್ವ ಸಾಕಷ್ಟು ದೊರೆತಿದ್ದರೆ ಈ ಹಂತದಲ್ಲಿ ಕ್ಷಿಪ್ರವಾಗಿ ಕೊರತೆ ಕಾಣದಿರಬಹುದು. ಆದರೂ ದಿನದ ಕೆಲಕಾಲ ಬಾಣಂತಿಯರು ಬಿಸಿಲಿಗೆ ಒಡ್ಡಿಕೊಳ್ಳುವುದು ಅಗತ್ಯ. ಹಾಗಿಲ್ಲದಿದ್ದರೆ ಡಿ ಜೀವಸತ್ವದ ಕೊರತೆಯಾಗಿ, ಕೂದಲು ಉದುರುವುದಕ್ಕೆ ಇದೂ ಕಾರಣವಾಗಬಹುದು. ವಿಟಮಿನ್‌ ಡಿ ತೀರಾ ಕಡಿಮೆಯಿದ್ದರೆ ಪೂರಕಗಳೂ ಬೇಕಾಗಬಹುದು. ಆಗ ವೈದ್ಯರ ಸಲಹೆ ಬೇಕಾಗುತ್ತದೆ.

ಕಬ್ಬಿಣ: ಗರ್ಭಿಣಿಯಿದ್ದಾಗ ಕಬ್ಬಿಣಾಂಶದ ಮಾತ್ರೆಗಳನ್ನು ಸೇವಿಸಿದ್ದರೂ, ಪ್ರಸವಾನಂತರದ ರಕ್ತಸ್ರಾವದಿಂದಾಗಿ ಕಬ್ಬಿಣಾಂಶದ ಕೊರತೆ ಕಾಡುವ ಸಂಭವ ಹೆಚ್ಚು. ಜೊತೆಗೆ ದೀರ್ಘ ಕಾಲ ನಿದ್ದೆಗೆಡುವುದು ಈ ಕೊರತೆಯನ್ನು ಇನ್ನಷ್ಟು ತೀವ್ರವಾಗಿಸಬಹುದು. ಹಾಗಾಗಿ ಕಬ್ಬಿಣಾಂಶದ ಕೊರತೆಯಿದ್ದರೆ ಅದನ್ನು ಕೂದಲುಗಳು ಖಂಡಿತವಾಗಿಯೂ ಹೇಳುತ್ತವೆ. ಸೊಪ್ಪು, ಬೀಟ್‌ರೂಟ್‌, ಕಾಳುಗಳು ಮುಂತಾದವು ಆಹಾರದಲ್ಲಿ ಸಾಕಷ್ಟಿರಲಿ

ಈ ಸುದ್ದಿಯನ್ನೂ ಓದಿ: Hair Care: ಕೂದಲಿನ ಆರೋಗ್ಯಕ್ಕೆ ಈರುಳ್ಳಿ ರಸ ಎಷ್ಟು ಪ್ರಯೋಜನಕಾರಿ ಗೊತ್ತಾ?

ಜಿಂಕ್‌: ತಲೆ ಚರ್ಮದ ಆರೋಗ್ಯ ರಕ್ಷಣೆಯ ಜೊತೆಗೆ ಕೂದಲಿನ ಬೆಳವಣಿಗೆಗೂ ಸತು ಎಂಬುದು ಬೇಕಾದ ಸತ್ವ. ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೂ ಇದು ಅಗತ್ಯವಾದ ಪೋಷಕಸತ್ವ. ಹಾಗಾಗಿ ಕಾಯಿ-ಬೀಜಗಳನ್ನು ಆಹಾರದಲ್ಲಿ ಕ್ರಮೇಣ ಸೇರಿಸಿಕೊಳ್ಳಿ. ಬಾಣಂತಿಯಲ್ಲಿ ಕೂದಲು ಉದುರುವುದು ಘನವಾದ ಸಮಸ್ಯೆಯಲ್ಲ ಎಂದು ಕಡೆಗಣಿಸಬೇಡಿ. ಇದರರ್ಥ ದೇಹಕ್ಕೆ ಬೇಕಾದ ಸತ್ವಗಳ ಕೊರತೆಯಿದೆ ಮತ್ತು ಬಾಣಂತಿಯ ಆಹಾರದಲ್ಲಿ ಸರಿಯಾದ ಪ್ರಮಾಣದಲ್ಲಿ ಪೋಷಕಾಂಶಗಳ ಅಗತ್ಯವಿದೆ. ಈ ಕುರಿತಾಗಿ ಹೆಚ್ಚಿನ ಗಮನ ನೀಡಿದಲ್ಲಿ ಬಾಣಂತಿಯರಲ್ಲಿ ತಲೆಗೂದಲು ಸಿಕ್ಕಾಪಟ್ಟೆ ಉದುರುವುದನ್ನು ಕಡಿಮೆ ಮಾಡಬಹುದು.