ಬೆಂಗಳೂರು: ಆಧುನಿಕ ಜೀವನಶೈಲಿಯಲ್ಲಿ ನಾವು ವೆರೈಟಿ ರುಚಿಗೆ ಮರುಳಾಗಿ ವಿಭಿನ್ನ ಆಹಾರಗಳನ್ನು ಬೆರೆಸಿ ತಿನ್ನುವುದನ್ನು ರೂಢಿಸಿಕೊಂಡಿದ್ದೇವೆ. ಆದರೆ, ಆಯುರ್ವೇದ ಶಾಸ್ತ್ರದ ಪ್ರಕಾರ, ಕೆಲವು ಆಹಾರ ಪದಾರ್ಥಗಳನ್ನು ಒಟ್ಟಿಗೆ ಸೇವಿಸುವುದು ದೇಹದಲ್ಲಿ ವಿಷಕಾರಿ ಅಂಶಗಳನ್ನು ಉತ್ಪತ್ತಿ ಮಾಡುತ್ತದೆ. ಆಯುರ್ವೇದದಲ್ಲಿ ಇದನ್ನು ವಿರುದ್ಧ ಆಹಾರ (Compatible Food) ಎಂದು ಕರೆಯಲಾಗುತ್ತದೆ. ಇವುಗಳ ನಿರಂತರ ಸೇವನೆಯಿಂದ ಜೀರ್ಣಕ್ರಿಯೆ ತೊಂದರೆ, ಚರ್ಮ ರೋಗಗಳು ಹಾಗೂ ದೀರ್ಘಕಾಲದ ಅನಾರೋಗ್ಯ ಸಮಸ್ಯೆಗಳು ಕಾಡಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಆಯುರ್ವೇದದ ಪ್ರಕಾರ ನಾವು ಮುಖ್ಯವಾಗಿ ಒಟ್ಟಿಗೆ ಸೇವಿಸಬಾರದ ಆ 5 ಅಪಾಯಕಾರಿ ಆಹಾರ ಕಾಂಬಿನೇಷನ್ಗಳು ಇಲ್ಲಿವೆ.
ಹಾಲು ಮತ್ತು ಮೀನು
ಇದು ಅತ್ಯಂತ ಅಪಾಯಕಾರಿ ವಿರುದ್ಧ ಆಹಾರಗಳಲ್ಲಿ ಒಂದಾಗಿದೆ. ಹಾಲು ತಂಪು ಗುಣವನ್ನು ಹೊಂದಿದ್ದರೆ, ಮೀನು ಉಷ್ಣ ಗುಣವನ್ನು ಹೊಂದಿದೆ. ಈ ಎರಡನ್ನೂ ಒಟ್ಟಿಗೆ ಅಥವಾ ಒಂದರ ಬೆನ್ನಲ್ಲೇ ಮತ್ತೊಂದನ್ನು ಸೇವಿಸುವುದರಿಂದ ರಕ್ತ ಹೆಪ್ಪುಗಟ್ಟುವಿಕೆ, ರಕ್ತ ಸಂಚಾರದಲ್ಲಿ ಏರುಪೇರು ಹಾಗೂ ಚರ್ಮದ ಮೇಲೆ ಬಿಳಿ ಮಚ್ಚೆಗಳಾಗುವ ಸಾಧ್ಯತೆ ಇರುತ್ತದೆ.
ಹಾಲು ಮತ್ತು ಹುಳಿ ಹಣ್ಣುಗಳು
ಬಹಳಷ್ಟು ಜನ ಮುಂಜಾನೆ ಬನಾನಾ ಶೇಕ್ ಅಥವಾ ಮ್ಯಾಂಗೋ ಶೇಕ್ ಕುಡಿಯಲು ಇಷ್ಟಪಡುತ್ತಾರೆ. ಆದರೆ ಆಯುರ್ವೇದದ ಪ್ರಕಾರ, ಹಾಲಿನೊಂದಿಗೆ ಬಾಳೆಹಣ್ಣು, ಸ್ಟ್ರಾಬೆರಿ, ಲಿಂಬೆ, ಅಥವಾ ಕಿತ್ತಳೆ ಹಣ್ಣುಗಳನ್ನು ಬೆರೆಸಬಾರದು. ಹುಳಿ ಮತ್ತು ಹಾಲು ಒಟ್ಟಿಗೆ ಸೇರಿದಾಗ ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚಾಗಿ, ಜೀರ್ಣಕ್ರಿಯೆ ಸಂಪೂರ್ಣವಾಗಿ ಮಂದಗತಿಯಾಗುತ್ತದೆ. ಇದು ನೆಗಡಿ, ಕೆಮ್ಮು ಮತ್ತು ಅಲರ್ಜಿಗೂ ಕಾರಣವಾಗಬಹುದು.
ಜೇನುತುಪ್ಪ ಮತ್ತು ಬಿಸಿ ನೀರು/ತುಪ್ಪ
ಜೇನುತುಪ್ಪವನ್ನು ಎಂದಿಗೂ ಬಿಸಿ ಮಾಡಬಾರದು ಅಥವಾ ಅತಿಯಾದ ಬಿಸಿ ನೀರಿಗೆ ಹಾಕಿ ಕುಡಿಯಬಾರದು. ಜೇನುತುಪ್ಪವನ್ನು ಕಾಯಿಸಿದಾಗ ಅದು ತನ್ನ ನೈಸರ್ಗಿಕ ಗುಣವನ್ನು ಕಳೆದುಕೊಂಡು ವಿಷವಾಗಿ ಬದಲಾಗುತ್ತದೆ. ಹಾಗೆಯೇ, ಸಮಾನ ಪ್ರಮಾಣದಲ್ಲಿ ಜೇನುತುಪ್ಪ ಮತ್ತು ತುಪ್ಪವನ್ನು ಒಟ್ಟಿಗೆ ಬೆರೆಸಿ ತಿನ್ನುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ.
ಹೃದಯದ ಬಡಿತ ತಪ್ಪದಿರಲಿ, ಆರೋಗ್ಯದ ಹೆಜ್ಜೆ ನಿಲ್ಲದಿರಲಿ: ವಿಶ್ವ ಹೃದಯ ದಿನ: ಆರೋಗ್ಯಕರ ಜೀವನಶೈಲಿಗೆ ಒತ್ತು
ಮೊಸರು ಮತ್ತು ಕಲ್ಲಂಗಡಿ ಹಣ್ಣು
ಮೊಸರು ಮತ್ತು ಕಲ್ಲಂಗಡಿ ಹಣ್ಣು ಎರಡೂ ದೇಹವನ್ನು ತಂಪುಗೊಳಿಸುತ್ತವೆಯಾದರೂ, ಇವುಗಳನ್ನು ಒಟ್ಟಿಗೆ ಸೇವಿಸಬಾರದು. ಕಲ್ಲಂಗಡಿ ಹಣ್ಣು ಬೇಗನೆ ಜೀರ್ಣವಾಗುತ್ತದೆ, ಆದರೆ ಮೊಸರು ಜೀರ್ಣವಾಗಲು ಹೆಚ್ಚು ಸಮಯ ಬೇಕು. ಇವೆರಡರ ಕಾಂಬಿನೇಷನ್ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಮತ್ತು ವಾಂತಿಗೆ ದಾರಿ ಮಾಡಿಕೊಡಬಹುದು.
ಮೂಲಂಗಿ ಮತ್ತು ಹಾಲು
ನೀವು ಊಟದಲ್ಲಿ ಮೂಲಂಗಿ ಸಲಾಡ್ ಅಥವಾ ಮೂಲಂಗಿ ಪಲ್ಯ ಸೇವಿಸಿದ್ದರೆ, ಅದರ ಬೆನ್ನಲ್ಲೇ ಹಾಲು ಅಥವಾ ಹಾಲಿನ ಉತ್ಪನ್ನಗಳನ್ನು ಸೇವಿಸಬೇಡಿ. ಮೂಲಂಗಿ ತಿಂದ ತಕ್ಷಣ ಹಾಲು ಕುಡಿಯುವುದರಿಂದ ಹೊಟ್ಟೆಯಲ್ಲಿ ತೀವ್ರ ಉರಿ ಕಾಣಿಸಿಕೊಳ್ಳಬಹುದು ಮತ್ತು ಚರ್ಮದ ಕಾಯಿಲೆಗಳು ಬರಬಹುದು.