ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಬಿಯರ್‌ ಕುಡಿದರೆ ಹೊಟ್ಟೆ ಬರೋದು ನಿಜನಾ? ಆರೋಗ್ಯಕ್ಕೆ ಇದೆಷ್ಟು ಹಾನಿಕಾರಕ?

ಮನದಲ್ಲಿರುವ ಭಾವ ಯಾವುದೇ ಇರಲಿ, ಅವೆಲ್ಲಕ್ಕೂ ಕೈಯಲ್ಲಿರುವ ಗ್ಲಾಸೇ ಮದ್ದು ಎಂದು ನಂಬಿದವರಿದ್ದಾರೆ. ಅಂದರೆ ಬೇಸರ, ಖುಷಿ, ಶೋಕ, ಉತ್ಸಾಹ, ಮುರಿದೋದ ಮನಸ್ಸು, ಆಫೀಸಿನ ಪ್ರಮೋಶನ್ನು ಮುಂತಾದ ಎಲ್ಲವಕ್ಕೂ ಇದೊಂದೇ ಪಥ್ಯ.ಆದರೆ ಬಿಯರ್‌ ಕುಡಿಯುವುದರಿಂದ ಹೊಟ್ಟೆಯ ಬೊಜ್ಜಿನ ಜೊತೆಗೆ ಆರೋಗ್ಯದ(Health Tips) ಸಮಸ್ಯೆ ಕಾಡುತ್ತದೆಯಂತೆ. ಇಷ್ಟಕ್ಕೂ ಬಿಯರ್‌ ಕುಡಿಯುವುದರಿಂದ ತೂಕ ಹೆಚ್ಚುವುದು ನಿಜವೇ?

ಬಿಯರ್‌ ಕೈಯಲ್ಲಿ ಹಿಡಿದು ʻಚಿಯರ್ಸ್‌ʼ ಹೇಳುವವರ ಸಂಖ್ಯೆ ಆಗಸದಲ್ಲಿನ ಚುಕ್ಕಿಗಳಂತೆ… ಎಣಿಸಲಾಗದು. ಮನದಲ್ಲಿರುವ ಭಾವ ಯಾವುದೇ ಇರಲಿ, ಅವೆಲ್ಲಕ್ಕೂ ಕೈಯಲ್ಲಿರುವ ಗ್ಲಾಸೇ ಮದ್ದು ಎಂದು ನಂಬಿದವರಿದ್ದಾರೆ. ಅಂದರೆ ಬೇಸರ, ಖುಷಿ, ಶೋಕ, ಉತ್ಸಾಹ, ಮುರಿದೋದ ಮನಸ್ಸು, ಆಫೀಸಿನ ಪ್ರಮೋಶನ್ನು ಮುಂತಾದ ಎಲ್ಲವಕ್ಕೂ ಇದೊಂದೇ ಪಥ್ಯ. ಬಿಯರನ್ನು ʻನಂಬಿ ಕೆಟ್ಟವರಿಲ್ಲʼ ಎಂಬುದು ಇವರ ನಿಷ್ಠೆಗೆ ಸಾಕ್ಷಿ. ಆದರೂ ತಂತಮ್ಮ ʻಹೊಟ್ಟೆಪಾಡನ್ನುʼ ನೋಡಿಕೊಳ್ಳಬೇಡವೇ? ಬೇಡವೆಂದರೂ ಹೊರಗಿಣುಕಿ ಎಲ್ಲರೆದುರು ಮರ್ಯಾದೆಯನ್ನು ಹರಾಜಾಕುವ ʻಬಿಯರ್‌ ಬೆಲ್ಲಿʼಗಳಿಗೆ ಏನು ಮದ್ದು ಮಾಡುವುದು? ಇಷ್ಟಕ್ಕೂ ಬಿಯರ್‌ ಕುಡಿಯುವುದರಿಂದ ತೂಕ ಹೆಚ್ಚುವುದು ನಿಜವೇ?

ಏನಿದು ಬಿಯರ್‌?

ಬಿಯರ್‌ ಎಂದರೆ ಆಲ್ಕೋಹಾಲ್‌ ಅಲ್ಲವೇ ಅಲ್ಲ ಎಂದು ಯಾರಾದರೂ ನಂಬಿಸಲು ಯತ್ನಿಸಿದರೆ, ಯಾವುದಕ್ಕೂ ಇರಲಿ ಈ ವಿಷಯ ನಿಮ್ಮಲ್ಲಿ! ಗೋಧಿ, ಬಾರ್ಲಿ ಮುಂತಾದ ಧಾನ್ಯಗಳಿಂದ ಸಿದ್ಧವಾಗುವ ಆಲ್ಕೋಹಾಲ್‌ ಇರುವಂಥ ಪೇಯವಿದು. ಮೊದಲಿಗೆ ಈ ಧಾನ್ಯಗಳನ್ನು ಹುರಿದು ಒಡೆದುಕೊಳ್ಳಲಾಗುತ್ತದೆ. ಅದನ್ನು ನೀರಿನಲ್ಲಿ ನೆನೆಸಿಟ್ಟು, ಅದರ ನೈಸರ್ಗಿಕ ಸಕ್ಕರೆಯಂಶವನ್ನು ಬೇರ್ಪಡಿಸಿ, ಸಂಸ್ಕರಿಸಿ, ಯೀಸ್ಟ್‌ ಸೇರಿಸಿ ಬಿಯರ್‌ ಸಿದ್ಧ ಮಾಡಲಾಗುತ್ತದೆ.

ಈ ಪ್ರಕ್ರಿಯೆಯಲ್ಲಿ ಆಲ್ಕೋಹಾಲ್‌ ಎಲ್ಲಿದೆ?

ಇದಿಷ್ಟು ಬಿಯರ್‌ನ ಪ್ರವರ. ಇದನ್ನು ಕುಡಿದರೆ ಡೊಳ್ಳು ಹೊಟ್ಟೆ ಗುಂಡಂದಿರಾಗುವುದು ಹೌದೇ? ಅರೆ! ಇದೇನು ಸುಮ್ಮನೆ ಹೇಳುವುದಲ್ಲ… ಕುಡಿದು ತಲೆ ಬೆಳ್ಳಗಾದವರ ಅನುಭವದ ಮಾತುಗಳಿವು. ಆಲ್ಕೋಹಾಲ್‌ ಪೇಯಗಳ ಕ್ಯಾಲರಿಗಳು ಹೆಚ್ಚು. ಅವೆಲ್ಲ ಶರೀರಕ್ಕೆ ಬೇಕಾಗುವಂಥ ಸತ್ವಗಳಲ್ಲದೆ, ಖಾಲಿ ಕ್ಯಾಲರಿಗಳು. ಇದರ ಸಮಸ್ಯೆಯೆಂದರೆ ಹೊಟ್ಟೆ ತುಂಬುವುದಿಲ್ಲ. ಅಂದರೆ ದೇಹಕ್ಕೆ ಕ್ಯಾಲರಿಗಳು ಹೋಗಿದ್ದು ಹೌದು, ಆದರೆ ಹೊಟ್ಟೆ ಹಸಿದೇ ಇರುತ್ತದೆ. ಹಾಗಾಗಿ ಈಗ ಕುಡಿದಿದ್ದು ಸಾಲದೆಂಬಂತೆ ಮತ್ತಷ್ಟು ತಿನ್ನುವುದು ಅನಿವಾರ್ಯ. ಜೊತೆಗೆ, ಈ ಪೇಯಗಳ ಜೊತೆಗೆ ತಿನ್ನುವುದೆಲ್ಲ, ಜಿಡ್ಡು ಮತ್ತು ಉಪ್ಪಿನ ತಿನಿಸುಗಳು. ಇವೆಲ್ಲವುಗಳ ಪರಿಣಾಮವೆಂದರೆ, ಅಗತ್ಯಕ್ಕಿಂತ ಅತಿ ಹೆಚ್ಚಿನ ಕ್ಯಾಲರಿ ಒಳಗೆ ಹೋಗುವುದು. ಜೊತೆಗೆ, ದೇಹದಲ್ಲಿ ಕೊಬ್ಬು ಕರಗಿಸುವ ಪ್ರಯತ್ನದಲ್ಲಿ ಇದ್ದವರಿಗೆ ಹಿನ್ನಡೆಯಾಗುವುದು. ನೋಡಿ, ಪಾನಪ್ರಿಯರ ಜೀವನಾನುಭವ ಸುಳ್ಳೇನಲ್ಲವಲ್ಲ!

ಫೈಟೊಈಸ್ಟ್ರೋಜೆನ್‌:

ಬಿಯರ್‌ನ ರುಚಿ ಹೆಚ್ಚಿಸುವುದಕ್ಕೆ ಹಾಪ್‌ ಗಿಡದ ಹೂವುಗಳನ್ನು ಬಳಸಲಾಗುತ್ತದೆ. ಈ ಹೂವುಗಳಿಗೆ ವಿಭಿನ್ನ ಕಹಿ ರುಚಿಯೊಂದಿದ್ದು, ಬಿಯರ್‌ನ ರುಚಿ ಹತ್ತಿಸುವ ಕಹಿಗೆ ಇದೇ ಕಾರಣ. ಇದರ ರುಚಿ ಹೆಚ್ಚಿಸಲು ಸಾಕಷ್ಟು ಸಿಹಿಯನ್ನು ಸೇರಿಸುವುದರಿಂದ, ಈ ಕಹಿ ರುಚಿಯನ್ನೂ ಇದಕ್ಕೆ ಸೇರಿಸಲಾಗುತ್ತದೆ. ಈ ಹಾಪ್‌ ಹೂವುಗಳಲ್ಲಿ ಫೈಟೊ ಈಸ್ಟ್ರೋಜೆನ್‌ಗಳು ಹೇರಳವಾಗಿವೆ. ಅಂದರೆ, ಸ್ತ್ರೀ ಹಾರ್ಮೋನುಗಳಾದ ಈಸ್ಟ್ರೋಜೆನ್‌ಗಳಂತೆ ವರ್ತಿಸುವ, ಆದರೆ ಅದಲ್ಲದ ಅಂಶಗಳಿವು. ಇದರಲ್ಲಿರುವ ಗಮ್ಮತ್ತೇನೆಂದರೆ, ಪುರುಷರ ಹಾರ್ಮೋನುಗಳನ್ನು ಏರುಪೇರು ಮಾಡುವ ಈ ಫೈಟೊ ಈಸ್ಟ್ರೋಜೆನ್‌ಗಳು, ಹೊಟ್ಟೆಯ ಸುತ್ತಳತೆಯನ್ನು ಹಿಗ್ಗಿಸುತ್ತಾ ಹೋಗುತ್ತವೆ. ಅಲ್ಲಿಗೆ ತಪ್ಪು ಕುಡಿಯುವವರದ್ದಲ್ಲ, ಫೈಟೊಈಸ್ಟ್ರೋಜೆನ್‌ದು!

ಈ ಸುದ್ದಿಯನ್ನೂ ಓದಿ:Health Tips: ಜೀರ್ಣಾಂಗ ಆರೋಗ್ಯ ದಿನ: ಹೊಟ್ಟೆ ಕೆಡಿಸಿಕೊಳ್ಳಬೇಡಿ

ಹಾಗಾಗಿ, ಬಿಯರ್‌ ಕುಡಿಯುವುದು ಕೇವಲ ಹೊಟ್ಟೆಯ ಸುತ್ತಳತೆಯನ್ನು ಹೆಚ್ಚಿಸುವುದಷ್ಟೇ ಅಲ್ಲ, ದೇಹದ ಒಟ್ಟಾರೆ ತೂಕವನ್ನೂ ಏರಿಸುತ್ತದೆ. ಇದರಿಂದ ಹೃದಯದ ತೊಂದರೆಗಳು, ಯಕೃತ್ತಿನ ಸಮಸ್ಯೆಗಳು, ರಕ್ತದೊತ್ತಡ, ಮಧುಮೇಹ, ಟ್ರೈಗ್ಲಿಸರೈಡ್‌ ಹೆಚ್ಚಳ ಮುಂತಾದ ಹತ್ತಾರು ಸಮಸ್ಯೆಗಳು ಅಮರಿಕೊಳ್ಳುತ್ತವೆ. ಪಾನಪ್ರಿಯರಿಗೆ ಯಾವ ರೋಗ ಆದೀತು ಎಂಬುದನ್ನು ಆಯ್ದುಕೊಳ್ಳುವುದಕ್ಕೂ ದಾರಿಯಿಲ್ಲ. ಇರುವ ದಾರಿಯೆಂದರೆ, ಇಂಥವನ್ನೆಲ್ಲ ಮಿತಗೊಳಿಸುವುದು.