ಬೆಂಗಳೂರು: ಇತ್ತೀಚೆಗೆ ತೂಕ ಇಳಿಸಬೇಕೆಂದು ಕೆಲವರು ಹರಸಹಾಸ ಮಾಡುವುದನ್ನು ನೀವು ನೋಡಿರಬಹುದು. ಊಟ, ತಿಂಡಿ ಬಿಟ್ಟಾದರೂ ಜಿಮ್, ವರ್ಕೌಟ್ ಕಡೆಗೆ ಗಮನ ಕೊಡುತ್ತಾರೆ. ಅದರಲ್ಲೂ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಬೇಕೇ? ಅಥವಾ ಬೆಳಗ್ಗೆ ಏನಾದರೂ ತಿಂಡಿ ಸೇವಿಸಿ ವ್ಯಾಯಾಮ ಮಾಡಬಹುದೇ? ಎನ್ನುವ ಪ್ರಶ್ನೆ ಹಲವರಲ್ಲಿದೆ. ಖಾಲಿ ಹೊಟ್ಟೆಯಲ್ಲಿ (Empty Stomach) ಕಸರತ್ತು ಮಾಡುವುದರಿಂದ ಶರೀರದಲ್ಲಿರುವ ಅನಗತ್ಯ ಕೊಬ್ಬು ಬೇಗನೆ ಕರಗಿ ತೂಕ ಇಳಿಸಬಹುದು ಎನ್ನುವ ನಂಬಿಕೆ ಹಲವರಲ್ಲಿದೆ. ಇದೀಗ ವೈದ್ಯಕೀಯ ತಜ್ಞರೊಬ್ಬರು ಈ ಬಗ್ಗೆ ಸಲಹೆ ನೀಡಿದ್ದಾರೆ.
ನೀವು ಎಂಟರಿಂದ ಹತ್ತು ಗಂಟೆಗಳ ರಾತ್ರಿಯ ಉಪವಾಸದ ನಂತರ ಎಚ್ಚರವಾದಾಗ, ಯಕೃತ್ತಿನಲ್ಲಿ ನಿಮ್ಮ ದೇಹದ ಗ್ಲೈಕೊಜೆನ್ ಅಂದ್ರೆ ಸಂಗ್ರಹಿಸಿದ ಕಾರ್ಬೋಹೈಡ್ರೇಟ್ ಗಮನಾರ್ಹವಾಗಿ ಖಾಲಿಯಾಗುತ್ತವೆ. ಸಾಮಾನ್ಯ ನಡಿಗೆ, ಹಗುರವಾದ ವಾಕಿಂಗ್ ಅಥವಾ ಯೋಗ ಮಾಡುವಾಗ ಖಾಲಿ ಹೊಟ್ಟೆಯಲ್ಲಿದ್ದರೆ ಕೊಬ್ಬು ಬೇಗನೆ ಕರಗುವುದು ಸತ್ಯ. ಹಾಗಂತ ಖಾಲಿ ಹೊಟ್ಟೆಯಲ್ಲಿ ಕಠಿಣ ಕಸರತ್ತು ಒಳ್ಳೆಯದಲ್ಲ.
ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಿದರೆ ಉಂಟಾಗುವ ತೊಂದರೆ
ಸ್ನಾಯುಗಳು ಕುಗ್ಗಬಹುದು: ಹೆಚ್ಚಿನ ತೀವ್ರತೆಯ ಕಸರತ್ತು, ಭಾರವಾದ ತೂಕ ಎತ್ತುವಿಕೆ ಅಥವಾ ಕ್ರೀಡಾ ಸಾಮರ್ಥ್ಯ ಹೆಚ್ಚಿಸುವ ತರಬೇತಿಯ ಸಂದರ್ಭದಲ್ಲಿ ದೇಹದಲ್ಲಿ ಸಾಕಷ್ಟು ಗ್ಲೈಕೊಜೆನ್ ಸಂಗ್ರಹವಿಲ್ಲದೆ ವ್ಯಾಯಾಮ ಮಾಡುವುದರಿಂದ ಗರಿಷ್ಠ ಶಕ್ತಿಯ ಉತ್ಪಾದನೆಗೆ ಅಡ್ಡಿಯಾಗಬಹುದು, ಸ್ನಾಯುಗಳ ಆಯಾಸ ವೇಗವಾಗಿ ಉಂಟಾಗಬಹುದು. ಇದರಿಂದ ಸ್ನಾಯುಗಳ ದ್ರವ್ಯರಾಶಿ ಕುಗ್ಗಬಹುದು.
ತಾಯಿ ಹಾಲು ಮಕ್ಕಳಿಗೆ ಅಮೃತವೇಕೆ? ವಿಜ್ಞಾನ ಹೇಳುವುದೇನು?
ಮಾನಸಿಕ ಹಾಗೂ ದೈಹಿಕ ಒತ್ತಡ: ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದರಿಂದ ದೇಹದಲ್ಲಿ 'ಕಾರ್ಟಿಸಾಲ್' ಎಂಬ ಒತ್ತಡದ ಹಾರ್ಮೋನ್ ಮಟ್ಟ ಹೆಚ್ಚಾಗುತ್ತದೆ. ಇದು ಅತಿಯಾದ ಆಯಾಸಕ್ಕೆ ಕಾರಣವಾಗಬಹುದು
ರಕ್ತದಲ್ಲಿ ಸಕ್ಕರೆಯ ಮಟ್ಟ ಕಡಿಮೆಯಾಗುತ್ತದೆ: ಕಡಿಮೆ ರಕ್ತದ ಸಕ್ಕರೆಯ ಮಟ್ಟದೊಂದಿಗೆ ವ್ಯಾಯಾಮ ಮಾಡುವುದರಿಂದ ತಲೆ ತಿರುಗುವಿಕೆ, ವಾಕರಿಕೆ ಅಥವಾ ಮೂರ್ಛೆ ಹೋಗುವಂತಹ ಸಮಸ್ಯೆಗಳು ಉಂಟಾಗಬಹುದು. ಬೆಳಗಿನ ಹಗುರವಾದ ನಡಿಗೆ, ಸರಳ ಯೋಗಾಸನ ಮತ್ತು ಸೈಕ್ಲಿಂಗ್ ಖಾಲಿ ಹೊಟ್ಟೆಯಲ್ಲಿ ಮಾಡಬಹುದು. ಹೆವಿ ವೇಟ್ ಲಿಫ್ಟಿಂಗ್ , ಜಿಮ್‌ನಲ್ಲಿ ತೂಕ ಎತ್ತುವುದು ಅಥವಾ ಕ್ರೀಡಾ ತರಬೇತಿಯಲ್ಲಿದ್ದರೆ, ವ್ಯಾಯಾಮಕ್ಕೆ ಮುಂಚಿತವಾಗಿ ಬಾಳೆಹಣ್ಣು, ಓಟ್ಸ್ ಅಥವಾ ಪ್ರೋಟೀನ್ ಶೇಕ್‌ನಂತಹ ಹಗುರವಾದ ಆಹಾರ ಸೇವಿಸುವುದು ದೇಹದ ಆರೋಗ್ಯಕ್ಕೆ ಉತ್ತಮ.