Vishwavani Health: ತಾಯಿ ಹಾಲು ಮಕ್ಕಳಿಗೆ ಅಮೃತವೇಕೆ? ವಿಜ್ಞಾನ ಹೇಳುವುದೇನು? ಪ್ರತಿಯೊಬ್ಬ ತಾಯಿ ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ
ತಾಯಿಯ ಎದೆ ಹಾಲನ್ನು ಅಮೃತ ಎನ್ನುತ್ತೇವೆ. ಯಾಕೆಂದರೆ ಇವತ್ತಿನವರೆಗೂ ವಿಜ್ಞಾನಿಗಳಿಗೆ ಇದಕ್ಕೆ ಪೂರಕವಾದ ಆಹಾರ ಸಿದ್ಧಪಡಿಸಲು ಆಗಲೇ ಇಲ್ಲ. ಇದು ಜೀವನ ಪೂರ್ತಿ ನಾನಾ ರೀತಿಯ ಕಾಯಿಲೆಯಿಂದ ಮಗುವನ್ನು ರಕ್ಷಿಸುತ್ತದೆ ಎನ್ನುತ್ತಾರೆ ಮೈಸೂರು ವಿವಿಯ ಡಾ. ಸುತ್ತೂರು ಮಾಲಿನಿ. ತಾಯಿಯ ಎದೆ ಹಾಲಿನಲ್ಲಿರುವ ವಿಶೇಷ ಗುಣಗಳ ಬಗ್ಗೆ ಅವರು ನೀಡಿರುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಡಾ. ಸುತ್ತೂರು ಮಾಲಿನಿ -
ಬೆಂಗಳೂರು: ತಾಯಿಯ ಎದೆ ಹಾಲು (breast milk) ಎಂದರೆ ಅಮೃತ ಎನ್ನಲಾಗುತ್ತದೆ. ಯಾಕೆಂದರೆ ಇದು ನಾವು ಬದುಕಿರುವವರೆಗೆ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಯಾವ ಮಕ್ಕಳು ತಾಯಿಯ ಎದೆ ಹಾಲು ಕುಡಿದು ಬೆಳೆದಿರುತ್ತಾರೋ ಅವರಿಗೆ ಜೀವನ ಪೂರ್ತಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುವುದಿಲ್ಲ. ಯಾಕೆಂದರೆ ಇದು ಜೀವನ ಪೂರ್ತಿ ನಮ್ಮ ಆರೋಗ್ಯವನ್ನು ರಕ್ಷಿಸುತ್ತದೆ ಎನ್ನುತ್ತಾರೆ ಮೈಸೂರು ವಿಶ್ವವಿದ್ಯಾಲಯದ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಸುತ್ತೂರು ಮಾಲಿನಿ (Dr. Suttur Malini). ವಿಶ್ವವಾಣಿ ಹೆಲ್ತ್ (Vishwavani Health) ಯುಟ್ಯೂಬ್ ಚಾನೆಲ್‌ನಲ್ಲಿ ಸ್ವಾತಿ ಕೃಷ್ಣ ಆಚಾರ್ಯ ಅವರೊಂದಿಗಿನ ಸಂದರ್ಶನದಲ್ಲಿ ಅವರು ಮಾತನಾಡಿದರು.
ಇವತ್ತಿನವರೆಗೂ ವಿಜ್ಞಾನಿಗಳಿಗೆ ತಾಯಿ ಹಾಲಿಗೆ ಪೂರಕವಾದ ಆಹಾರ ತಯಾರಿಸಲು ಸಾಧ್ಯವಾಗಲಿಲ್ಲ.ಇದಕ್ಕೆ ಮುಖ್ಯ ಕಾರಣ ಇದರಲ್ಲಿರುವ ಸಾವಿರಾರು ಬಗೆಯ ಅಂಶಗಳು. ಬಗೆದಷ್ಟು ಹೊಸ ವಿಷಯಗಳು ಇದರ ಅಧ್ಯಯನದಿಂದ ತಿಳಿಯುತ್ತದೆ ಎಂದರು.
ಡಾ. ಸುತ್ತೂರು ಮಾಲಿನಿ ಅವರೊಂದಿಗಿನ ಸಂದರ್ಶನ ಇಲ್ಲಿದೆ:
ಹುಟ್ಟಿದ ಮಗುವಿನ ಸಂರಕ್ಷಣೆಯಲ್ಲಿ ತಾಯಿ ಹಾಲು ಮಹತ್ವದ ಪಾತ್ರವಹಿಸುತ್ತದೆ. ಎಳೆಯ ಮಗುವಿನ ಸಂಪೂರ್ಣ ನರಕೋಶ ಬೆಳವಣಿಗೆ ಆಗಬೇಕಾದರೆ ಅದಕ್ಕೆ ಪೂರಕವಾದ ಕೊಬ್ಬು ಬೇಕು. ಅದಕ್ಕಾಗಿ ತಾಯಿಯ ಹಾಲು ಅತ್ಯವಶ್ಯಕ. ತಾಯಿಯ ಹಾಲು ಇಲ್ಲದೇ ಇದ್ದಾಗ ಮಾತ್ರ ಪೂರಕ ಆಹಾರವನ್ನು ಕೊಡಬಹುದು. ಆದರೆ ಇದು ಪರ್ಯಾಯವಲ್ಲ ಎಂದು ತಿಳಿಸಿದರು.
ಹುಟ್ಟಿದ ಮಗುವಿಗೆ ಆರು ತಿಂಗಳ ಕಾಲ ಕೇವಲ ತಾಯಿಯ ಹಾಲು ಮಾತ್ರ ಕೊಡಬೇಕು. ಆರು ತಿಂಗಳ ಬಳಿಕವೇ ಪೂರಕ ಆಹಾರ ಕೊಡಲು ಪ್ರಾರಂಭಿಸಬಹುದು. ಯಾಕೆಂದರೆ ಮಗುವಿನ ಕರುಳಿಗೆ ನೀರು ಸೇರಿದಂತೆ ಇತರ ಆಹಾರವನ್ನು ಜೀರ್ಣ ಮಾಡಿಕೊಳ್ಳುವ ಶಕ್ತಿ ಇರುವುದಿಲ್ಲ ಎಂದರು.
ಸಿಹಿ ತಿಂದರೆ ಒತ್ತಡ ನಿವಾರಣೆಯಾಗುತ್ತೆ ಎನ್ನುವುದು ನಿಜವೆ?
ತಾಯಿಯ ಹಾಲಿನಲ್ಲಿ ನಾನಾ ಬಗೆಯ ಪ್ರೊಟೀನ್ ಗಳಿವೆ. ಇದು ಮಗುವಿನ ಬೆಳವಣಿಗೆಗೆ ಅತ್ಯವಶ್ಯಕವಾಗಿ ಬೇಕಾಗಿರುವ ಅಂಶಗಳು. ಇದು ಮಗುವಿಗೆ ವೈರಸ್, ಬ್ಯಾಕ್ಟೀರಿಯಾಗಳಿಂದ ರಕ್ಷಣೆಯನ್ನು ಒದಗಿಸುತ್ತದೆ. ಇನ್ನು ತಾಯಿ ಹಾಲಿನಲ್ಲಿರುವ ಕಾರ್ಬೋಹೈಡ್ರೇಟ್ ಇದರಲ್ಲಿರುವ ಡಿಹೆಚ್ ಎ, ಎಆರ್ ಎ ಅಂಶಗಳು ಮೆದುಳಿನ ಬೆಳವಣಿಗೆಗೆ ಪೂರಕವಾಗಿ ಬೇಕಾಗಿರುತ್ತದೆ. ಇದು ಮೆದುಳಿನಲ್ಲಿರುವ ಸಂಪರ್ಕ ಜಾಲವನ್ನು ಚೆನ್ನಾಗಿ ಬೆಳೆಸುತ್ತದೆ. ಎಲ್ಲಾ ಸಿಗ್ನಲ್ ಗಳು ಬಹಳ ಬೇಗನೆ ಮೂವ್ ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದರು.
ಇದರೊಂದಿಗೆ ತಾಯಿ ಹಾಲಿನಲ್ಲಿರುವ ಲ್ಯಾಕ್ಟೊಸ್, ಹೆಚ್ ಎಂ ಒ ಎಸ್ ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಈ ಮೂಲಕ ಕರಳಿನ ಶಕ್ತಿ ವರ್ಧನೆಗೆ ಸಹಾಯ ಮಾಡುತ್ತದೆ. ತಾಯಿಯ ಹಾಲಿನಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುವ ಅಂಶಗಳು ಕೂಡ ಇದೆ. ಇದು ದೇಹವನ್ನು ಪ್ರವೇಶಿಸುವ ವೈರಸ್, ಬ್ಯಾಕ್ಟೀರಿಯಾವನ್ನು ನಾಶ ಮಾಡುತ್ತದೆ ಎಂದರು ಅವರು.
ತಾಯಿಯ ಹಾಲಿನ ಮೂಲಕ ಹಾರ್ಮೋನ್ ಗಳು ಮಗುವಿಗೆ ಹೋಗುತ್ತದೆ. ಇದರಲ್ಲಿ ಲೆಪ್ಟಿನ್, ಗ್ರೆಲಿನ್, ಅಡಿಪೊಲೆಪ್ಟಿನ್ ಗಳಿದ್ದು, ಮಕ್ಕಳಿಗೆ ಇದು ಆಹಾರ ಸೇವನೆ ಬಳಿಕ ಸಿಗುವ ಸಂತೃಪ್ತಿಯನ್ನು ಒದಗಿಸುತ್ತದೆ. ಲ್ಯಾಕ್ಟೊಫೆರಿನ್ ಪ್ರೊಟೀನ್ ಎನ್ನುವುದು ಮಗುವಿಗೆ ನಾನಾ ರೀತಿಯ ಸೋಂಕುಗಳಿಂದ ರಕ್ಷಣೆಯನ್ನು ಒದಗಿಸುತ್ತದೆ ಎಂದು ಅವರು ತಿಳಿಸಿದರು.
ಮಕ್ಕಳ ಬೆಳವಣಿಗೆ ತುಂಬಾ ವೇಗವಾಗಿ ನಡೆಯಲು ತಾಯಿ ಹಾಲಿನಲ್ಲಿರುವ ಪೂರಕ ಅಂಶಗಳೇ ಕಾರಣ. ಇದಕ್ಕಾಗಿಯೇ ತಾಯಿಯ ಹಾಲು ಮಗುವಿಗೆ ಮೊದಲ ಚುಚ್ಚು ಮದ್ದು ಇದ್ದಂತೆ ಎನ್ನಲಾಗುತ್ತದೆ. ಅದರಲ್ಲಿ ಐಜಿಎ ಹೆಚ್ಚು ಇರುತ್ತದೆ. ಆದ್ದರಿಂದ ಮೊದಲ ಐದು ದಿನದ ಹಾಲನ್ನು ಮಗುವಿಗೆ ಚಿನ್ನದ ಹಾಲು ಎನ್ನುತ್ತೇವೆ ಎಂದು ಅವರು ಹೇಳಿದರು.
ಮಗುವಿಗೆ ಉತ್ತಮ ಗುಣಮಟ್ಟದ ಹಾಲು ಸಿಗಬೇಕಾದರೆ ತಾಯಿ ಕೂಡ ಆರೋಗ್ಯವಾಗಿರಬೇಕು. ಇದಕ್ಕಾಗಿ ತಾಯಿ ಆದಷ್ಟು ಸೊಪ್ಪು, ತರಕಾರಿ, ಹಣ್ಣುಗಳು, ಮೊಳಕೆ ಕಾಳುಗಳು, ಧಾನ್ಯಗಳನ್ನು ಸೇವಿಸಬೇಕು. ತಾಯಿ ಆರೋಗ್ಯವಾಗಿದ್ದರೆ ಮಗುವಿಗೆ ಮೂರು ವರ್ಷದವರೆಗೂ ಎದೆ ಹಾಲುಣಿಸಬಹುದು. ತಾಯಿ ಹಾಲು ಚೆನ್ನಾಗಿ ಕುಡಿದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಮಾತ್ರವಲ್ಲ ಒತ್ತಡ ನಿರ್ವಹಣೆ ಕೂಡ ಚೆನ್ನಾಗಿ ನಿಭಾಯಿಸಲು ಸಾಧ್ಯವಾಗುವ ಶಕ್ತಿಯನ್ನು ಮೆದುಳು ಪಡೆಯುತ್ತದೆ ಎಂದರು ಅವರು.
ಮೊಬೈಲ್ ಸ್ಕ್ರೋಲ್ ಮಾಡುತ್ತ ಆಹಾರ ಸೇವಿಸುವ ಅಭ್ಯಾಸ ನಿಮಗಿದ್ಯಾ?
ಮಗುವಿಗೆ ಎದೆ ಹಾಲು ನೀಡುವುದರಿಂದ ತಾಯಿಗೂ ಹಲವಾರು ಪ್ರಯೋಜನಗಳಿವೆ. ಇದು ಗರ್ಭಧಾರಣೆ ವೇಳೆ ತಾಯಿಯ ದೇಹದಲ್ಲಾಗುವ ಬದಲಾವಣೆಗಳನ್ನು ಸರಿ ಪಡಿಸಲು ಸಹಾಯ ಮಾಡುತ್ತದೆ. ಇದರಿಂದ ತಾಯಿ ಮತ್ತು ಮಗುವಿನ ಬಾಂಧವ್ಯ ಉತ್ತಮವಾಗುತ್ತದೆ ಎಂದು ಡಾ. ಸುತ್ತೂರು ಮಾಲಿನಿ ತಿಳಿಸಿದರು.