Summer Tips: ಬೇಸಿಗೆ ತಂಪಾಗಿಸಿಕೊಳ್ಳಲು ಇರಲಿ ಪುದೀನಾ..!
ಬಿಸಿ ಚಹಾ, ಖಾರದ ಪಲಾವ್, ಚಟ್ನಿಗಳಿಗಷ್ಟೇ ಅಲ್ಲ, ತಂಪಾದ ಸ್ಮೂದಿ, ಸಲಾಡ್, ಮಜ್ಜಿಗೆ, ಫ್ರೂಟ್ ಬೌಲ್ ಮುಂತಾದ ಹಲವು ಆಹಾರಗಳ ರುಚಿಯನ್ನು ಪುದೀನಾ ಹೆಚ್ಚಿಸಬಲ್ಲದು. ಇನ್ನು ಬೇಸಿಗೆಯ ಬಿಸಿಯನ್ನು ಪುದೀನಾ ಸೊಪ್ಪಿನ ನೆರವಿನಿಂದ ತಂಪಾಗಿ ಸಿಕೊಳ್ಳಬಹುದು. ಬೇಸಿಗೆಯಲ್ಲಿ ತಂಪಾದ ಮಜ್ಜಿಗೆಗೆ ಪುದೀನಾ ಹಾಕಿ ಕುಡಿದರೆ… ಅಡಿಯಿಂದ ಮುಡಿಯವರೆಗೆ ತಣ್ಣನೆಯ ಅನುಭವವಾಗುವುದಿಲ್ಲವೇ? ಏನು ಈ ಮೂಲಿಕೆಯ ಸತ್ವಗಳು?

mint leaves

ನವದೆಹಲಿ: ಘಮಘಮಿಸುವ ಪುದೀನಾ (Mint Leaves) ಎಲೆಗಳನ್ನು ರುಚಿಕಟ್ಟಾದ ಅಡುಗೆಗೆ ಮಾತ್ರವಲ್ಲ, ಹಲವಾರು ಔಷಧಿಗಳಿಗೂ ಉಪಯೋಗಿಸಲಾಗುತ್ತದೆ. ಬಿಸಿ ಚಹಾ, ಖಾರದ ಪಲಾವ್, ಚಟ್ನಿಗಳಿಗಷ್ಟೇ ಅಲ್ಲ, ತಂಪಾದ ಸ್ಮೂದಿ, ಸಲಾಡ್, ಮಜ್ಜಿಗೆ, ಫ್ರೂಟ್ ಬೌಲ್ ಮುಂತಾದ ಹಲವು ಆಹಾರಗಳ ರುಚಿಯನ್ನು ಪುದೀನಾ ಹೆಚ್ಚಿಸಬಲ್ಲದು. ಅಂದರೆ ಬೇಸಿಗೆಯ ಬಿಸಿಯನ್ನು ಪುದೀನಾ ಸೊಪ್ಪಿನ ನೆರವಿನಿಂದ ತಂಪಾಗಿಸಿಕೊಳ್ಳಬಹುದು. ಬೇಸಿಗೆಯಲ್ಲಿ ತಂಪಾದ ಮಜ್ಜಿಗೆಗೆ ಪುದೀನಾ ಹಾಕಿ ಕುಡಿದರೆ… ಅಡಿಯಿಂದ ಮುಡಿಯವರೆಗೆ ತಣ್ಣನೆಯ ಅನುಭವವಾಗುವುದಿಲ್ಲವೇ? ಏನು ಈ ಮೂಲಿಕೆಯ ಸತ್ವಗಳು?
ಸತ್ವಗಳು: ಹಲವು ರೀತಿಯ ಖನಿಜಗಳು ಮತ್ತು ಜೀವಸತ್ವಗಳಿಂದ ಪುದೀನಾ ಸಮೃದ್ಧವಾಗಿದೆ. ವಿಟಮಿನ್ ಎ ಮತ್ತು ಸಿ, ಕ್ಯಾಲ್ಶಿಯಂ, ಮೆಗ್ನೀಶಿಯಂ, ಕಬ್ಬಿಣ, ಪೊಟಾಶಿಯಂ, ಮ್ಯಾಂಗನೀಸ್‌ನಂಥ ಖನಿಜಗಳು ಇದರಲ್ಲಿ ಹೇರಳವಾಗಿವೆ. ಈ ಸತ್ವಗಳು ಜೀರ್ಣಾಂಗಗಳ ಕ್ಷಮತೆಯನ್ನು ಹೆಚ್ಚಿಸುತ್ತವೆ ಮತ್ತು ಮೆದುಳನ್ನು ಚುರುಕಾಗಿಸುತ್ತವೆ. ಜೊತೆಗೆ ಇದರಲ್ಲಿನ ಉತ್ಕರ್ಷಣ ನಿರೋಧಕಗಳು ದೇಹದಲ್ಲಿನ ಮುಕ್ತಕಣಗಳನ್ನು ನಿರ್ಬಂಧಿಸಿ, ಮಾರಕ ರೋಗಗಳ ಭೀತಿಯನ್ನು ದೂರ ಮಾಡುತ್ತವೆ.
ನಾರು: ಉಳಿದೆಲ್ಲ ಹಸಿರು ಸೊಪ್ಪುಗಳಲ್ಲಿ ಇರುವಂತೆ ಇದರಲ್ಲೂ ನಾರಿನಂಶ ಯಥೇಚ್ಛವಾಗಿದೆ. ತೂಕ ಇಳಿಸುವವರಿಗೆ ಪುದೀನಾ ಚಹಾ, ಪುದೀನಾ ಮಜ್ಜಿಗೆಯಂಥ ಪೇಯಗಳು ಆರೋಗ್ಯಕರ ಆಯ್ಕೆಗಳು. ಮಧುಮೇಹಿಗಳಿಗೆ ಸಹ ನಾರುಭರಿತ ಆಹಾರ ಸೇವನೆಯಿಂದ ಅನುಕೂಲವಿದ್ದು, ಪುದೀನಾ ಚಟ್ಣಿಯಂಥವು ಎಲ್ಲರಿಗೂ ಆರೋಗ್ಯಕರ ಎನಿಸಿವೆ. ಬೇಸಿಗೆಯಲ್ಲಿ ಸಲಾಡ್‌ಗಳಿಗೆ ಇದನ್ನು ಸೇರಿಸುವುದರಿಂದ ರುಚಿಯನ್ನು ಸಹ ಹೆಚ್ಚಿಸಬಹುದು.
ಒತ್ತಡ ನಿವಾರಣೆ: ಇದರಲ್ಲಿರುವ ಘಮ ಒತ್ತಡ ನಿವಾರಣೆಗೆ ಬಹಳ ಉಪಯುಕ್ತ. ಆತಂಕ, ಮಾನಸಿಕ ಒತ್ತಡ ಹೆಚ್ಚಿದಾಗ ಇದರ ಗಾಢ ಪರಿಮಳದಿಂದ ಅದನ್ನು ಶಮನ ಮಾಡುವಂಥ ಕ್ರಮ ಕೆಲವು ಪರಂಪರಾಗತ ಚಿಕಿತ್ಸಾ ಕ್ರಮದಲ್ಲಿದೆ. ಬಿಸಿಯಾದ ಮಿಂಟ್ ಅಥವಾ ಪೆಪ್ಪರ್‌ಮಿಂಟ್ ಚಹಾ ಹೀರುವುದು, ಅವುಗಳ ತೈಲಗಳನ್ನು ಆಘ್ರಾಣಿಸುವುದು ಹೆಚ್ಚಾಗಿ ಬಳಕೆಯಲ್ಲಿದೆ. ಮೈಗ್ರೇನ್‌ನಂಥ ಸಮಸ್ಯೆಗಳಲ್ಲಿ ಪೆಪ್ಪರ್‌ಮಿಂಟ್ ತೈಲವನ್ನು ಹಣೆಗೆ ಲೇಪಿಸಿಕೊಳ್ಳುವುದು ಉಪಯುಕ್ತ.
ಕ್ಷಮತೆ ಹೆಚ್ಚಳ: ಭೂರಿ ಭೋಜನದ ನಂತರ ಹೊಟ್ಟೆ ಭಾರವೆನಿಸುತ್ತಿದೆಯೇ? ಒಂದಿಷ್ಟು ಪುದೀನಾ ಎಲೆಗಳನ್ನು ಜಗಿಯಬಹುದು. ಹೊಟ್ಟೆ ಉಬ್ಬರಿಸಿದ್ದರೆ, ಪುದೀನಾ ಚಹಾ ಅಥವಾ ಕಷಾಯ ಹೀರಬಹುದು. ಇದರಲ್ಲಿರುವ ಜೀರ್ಣಕಾರಿ ಕಿಣ್ವಗಳು ನಮ್ಮ ಜೀರ್ಣಾಂಗಗಳನ್ನ ಚುರುಕುಗೊಳಿಸಿ, ಅಜೀರ್ಣ, ಹೊಟ್ಟೆಯುಬ್ಬರದಂಥ ತೊಂದರೆಗಳನ್ನು ನಿವಾರಿಸುತ್ತವೆ.
ಇದನ್ನು ಓದಿ: Health Tips: ಪ್ರತಿದಿನ ವಾಕಿಂಗ್ ಮಾಡಿದ್ರೆ ಹೃದಯಾಘಾತದ ಅಪಾಯ ಕಡಿಮೆ
ಮಧುಮೇಹಿಗಳಿಗೆ: ಪುದೀನಾದಲ್ಲಿರುವ ಫ್ಲೆವನಾಯ್ಡ್‌ಗಳು ಮತ್ತು ರೋಸ್ಮರಿನಿಕ್ ಆಮ್ಲವು ಉತ್ತಮ ಉತ್ಕರ್ಷಣ ನಿರೋಧಕಗಳಾಗಿವೆ. ದೇಹದಲ್ಲಿನ ಇನ್‌ಸುಲಿನ್ ಪ್ರತಿರೋಧಕತೆ ಕಡಿಮೆ ಮಾಡುವ ಸಾಧ್ಯತೆ ಈ ಅಂಶಗಳಿಗಿದೆ. ಆಹಾರ ಸೇವನೆಯ ನಂತರ ಮಧುಮೇಹಿಗಳಿಗೆ ಆಗಬಹುದಾದ ಗ್ಲೂಕೋಸ್ ಏರಿಳಿತವನ್ನು ನಿಯಂತ್ರಿಸಲು ಇದು ನೆರವಾಗುತ್ತದೆ. ವಿಟಮಿನ್ ಸಿ ಸಹ ಇರುವುದರಿಂದ ಉರಿಯೂತ ಶಮನಕ್ಕೆ ಈ ಎಲ್ಲ ಸತ್ವಗಳು ನೆರವು ನೀಡುತ್ತವೆ. ಮಧುಮೇಹಿಗಳಿಗೆ ಪೂರಕವಾದ ಅಂಶಗಳು ಇವೆಲ್ಲ.
ಎಚ್ಚರ ಬೇಕು: ಪುದೀನಾ ಒಳ್ಳೆಯದೆಂಬ ಕಾರಣಕ್ಕೆ ಸಿಕ್ಕಾಪಟ್ಟೆ ತಿನ್ನುವುದು ಸಹ ತೊಂದರೆಗಳನ್ನು ತಂದೀತು, ಜೋಕೆ. ಆಸಿಡಿಟಿಯಂಥ ತೊಂದರೆಗಳು ಈಗಾಗಲೇ ಇದ್ದರೆ, ಪುದೀನಾ ಸೇವನೆಗೆ ಮಿತಿ ಬೇಕಾಗುತ್ತದೆ. ಅದಿಲ್ಲದಿದ್ದರೆ, ಎದೆಯುರಿ, ಹುಳಿತೇಗಿನಂಥ ತೊಂದರೆಗಳು ಕಾಣಬಹುದು. ರುಚಿಗೆ ತಕ್ಕಷ್ಟೇ ಇದನ್ನು ಬಳಸಿದರೆ ಬೇಸಿಗೆಯಲ್ಲಿ ಹಲವು ರೀತಿಯ ಪ್ರಯೋಜನಗಳನ್ನು ಪಡೆದು ತಂಪಾಗಿರಬಹುದು.