Health Tips: ಪ್ರತಿದಿನ ವಾಕಿಂಗ್ ಮಾಡಿದ್ರೆ ಹೃದಯಾಘಾತದ ಅಪಾಯ ಕಡಿಮೆ
ನಿಮ್ಮ ಪ್ರತಿಯೊಂದು ಹೆಜ್ಜೆಯೂ ಹೃದಯದ ಆರೋಗ್ಯವನ್ನು ಸುಧಾರಿಸುವುದಲ್ಲದೆ, ಅನೇಕ ಗಂಭೀರ ಸಮಸ್ಯೆಗಳನ್ನು ತಡೆಯುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ, ನಿಯಮಿತ ನಡಿಗೆ ಹೃದಯರಕ್ತನಾಳದ ಕಾರ್ಯವನ್ನು ಸುಧಾರಿಸುವ ಜತೆಗೆ ರಕ್ತದೊತ್ತಡವನ್ನು ಕಡಿಮೆ ಮಾಡಿ ತೂಕವನ್ನು ನಿಭಾಯಿಸುತ್ತದೆ.

walking

ನವದೆಹಲಿ: ನಡಿಗೆ (Walking) ನಾವು ಮಾಡಬಹುದಾದ ಅತಿ ಸುಲಭವಾದ ಮತ್ತು ಬಹಳಷ್ಟು ಪ್ರಯೋಜನಕರ ವ್ಯಾಯಾಮ ಎನಿಸಿಕೊಂಡಿದೆ. ನಡಿಗೆಯು ಎಲ್ಲ ವಯಸ್ಸಿನವರಿಗೂ ಮತ್ತು ಫಿಟ್‌ನೆಸ್ ಪ್ರಿಯರಿಗೂ ಸೂಕ್ತವಾಗಿದ್ದು, ಇದು ಹೃದಯದ ಆರೋಗ್ಯದ (Heart Health) ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದನ್ನು ತಜ್ಞರು ತಿಳಿಸಿದ್ದಾರೆ. ನಿಮ್ಮ ಪ್ರತಿಯೊಂದು ಹೆಜ್ಜೆಯೂ ಹೃದಯದ ಆರೋಗ್ಯವನ್ನು ಸುಧಾರಿಸುವುದಲ್ಲದೆ, ಅನೇಕ ಗಂಭೀರ ಸಮಸ್ಯೆಗಳನ್ನು ತಡೆಯುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಅಮೇರಿಕನ್ ಹಾರ್ಟ್ ಅಸೋಸಿಯೇಷನ್ (AHA) ಪ್ರಕಾರ, ನಿಯಮಿತ ನಡಿಗೆ ಹೃದಯರಕ್ತನಾಳದ ಕಾರ್ಯವನ್ನು ಸುಧಾರಿಸುವ ಜತೆಗೆ ರಕ್ತದೊತ್ತಡವನ್ನು ಕಡಿಮೆ ಮಾಡಿ ತೂಕವನ್ನು ನಿಭಾಯಿಸುವ ಮೂಲಕ ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎನ್ನುವ ಸಲಹೆ ನೀಡಿದೆ (Health Tips). ಹಾಗಾಗಿ ಹೃದ್ರೋಗದ ಅಪಾಯವನ್ನು ತಡೆಗಟ್ಟಲು ಪ್ರತಿನಿತ್ಯ ವಾಕ್ ಮಾಡುವ ಅಭ್ಯಾಸ ಮಾಡಿಕೊಳ್ಳಿ.
ದಿನಕ್ಕೆ ಎಷ್ಟು ನಡೆಯಬೇಕು?
ನೀವು ದಿನಕ್ಕೆ 45 ನಿಮಿಷಗಳ ಕಾಲ ನಡೆದರೆ ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ನೀವು ಹೆಚ್ಚು ಆಯಾಸಗೊಳ್ಳದೆ ದಿನ ನಿತ್ಯ ವಾಕ್ ಮಾಡಿದ್ರೆ ನಿಮ್ಮ ಹೃದಯದ ಆರೋಗ್ಯವು ಅತ್ಯುತ್ತಮವಾಗಿರುತ್ತದೆ. ಅದೇ ರೀತಿ ನೀವು ನಡೆಯುವಾಗ ಸುಸ್ತು ಉಸಿರಾಟದ ತೊಂದರೆ ಉಂಟಾದರೆ ಸ್ಪಲ್ಪ ಸಮಯ ಧಣಿವರಿಸಿ ನಡೆಯಬಹುದು. ವಾರದಲ್ಲಿ ಸುಮಾರು 75 ನಿಮಿಷಗಳ ಬಿರುಸಿನ ನಡಿಗೆ ಹೃದಯ ಸಂಬಂಧಿ ರೋಗ, ಪಾರ್ಶ್ವ ವಾಯು, ಕ್ಯಾನ್ಸರ್ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ಉಂಟಾಗುವ ಅವಧಿ ಪೂರ್ವ ಸಾವು ತಡೆಯಬಹುದು ಎಂದು ಅಧ್ಯಯನಗಳು ಕೂಡ ತಿಳಿಸಿದೆ.
ಈ ಉಪಯೋಗವೆಲ್ಲ ಇದೆ
ನಡಿಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ: ಹೃದಯ ಸ್ನಾಯುಗಳನ್ನು ಬಲಪಡಿಸಲು ಮತ್ತು ಕೊಲೆಸ್ಟ್ರಾಲ್ ಹಾಗೂ ರಕ್ತದಲ್ಲಿನ ಸಕ್ಕರೆಯಂತಹ ಪ್ರಮುಖ ಅಪಾಯಕಾರಿ ಅಂಶಗಳನ್ನು ನಿಯಂತ್ರಿಸಲು ನಡಿಗೆಯು ಅತ್ಯಂತ ಪರಿಣಾಮಕಾರಿ. ಇದು ದೇಹದಾದ್ಯಂತ ರಕ್ತದ ಹರಿವನ್ನು ಹೆಚ್ಚಿಸಿ ಹೃದಯ ಮತ್ತು ಇತರ ಅಂಗಗಳಿಗೆ ಆಮ್ಲಜನಕವನ್ನು ಹೆಚ್ಚು ಪರಿಣಾಮಕಾರಿಯಾಗಿ ತಲುಪಿಸುತ್ತದೆ. ಹಾಗಾಗಿ ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಿ ಹೃದಯ ರಕ್ತನಾಳದ ಕಾರ್ಯ ಕ್ಷಮತೆಯನ್ನು ಸುಧಾರಿಸುತ್ತದೆ.
ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ: ಅಧಿಕ ತೂಕವು ಹೃದ್ರೋಗಕ್ಕೆ ಪ್ರಮುಖ ಕಾರಣವಾಗಿದ್ದು, ನಡಿಗೆಯು ಕ್ಯಾಲೊರಿಗಳನ್ನು ಕಡಿಮೆ ಮಾಡಿ ದೇಹದ ಕೊಬ್ಬನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಜಿಮ್ ವರ್ಕೌಟ್‌ಗಿಂತಲೂ ನಡಿಗೆಯ ಮೂಲಕ ಕ್ಯಾಲೊರಿಗಳನ್ನು ಪರಿಣಾಮಕಾರಿಯಾಗಿ ಕರಗಿಸಬಹುದು. ಹಾಗಾಗಿ ಪ್ರತಿ ದಿನ 30 ನಿಮಿಷಗಳ ಚುರುಕಾದ ನಡಿಗೆ ದೀರ್ಘಾವಧಿಯ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.
ಮಾನಸಿಕ ಆರೋಗ್ಯಕ್ಕೆ ಉತ್ತಮ: ಮಾನಸಿಕ ಆರೋಗ್ಯವು ಹೃದಯದ ಮೇಲೆ ನೇರ ಪರಿಣಾಮ ಬೀರುತ್ತದೆ. ನಿಯಮಿತವಾಗಿ ನಡಿಗೆ ಮಾಡುವ ಜನರು ಸಾಮಾನ್ಯವಾಗಿ ಸಂತಸದಿಂದ ಇರುತ್ತಾರೆ. ಹೆಚ್ಚು ಆಶಾವಾದಿಗಳಾಗಿರುವುದಲ್ಲದೆ ಕಡಿಮೆ ಒತ್ತಡ ಹೊಂದಿರುತ್ತಾರೆ. ಹಾಗಾಗಿ ನಡಿಗೆಯು ದೇಹದ ನೈಸರ್ಗಿಕ ಒತ್ತಡ ನಿವಾರಕಗಳಾದ ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡಿ ಸುಧಾರಿತ ಮನಸ್ಥಿತಿಯನ್ನು ತರಲು ಸಹಾಯ ಮಾಡುತ್ತದೆ.
ಹೃದಯ ಸ್ನಾಯುವನ್ನು ಬಲಪಡಿಸುತ್ತದೆ: ನಡಿಗೆಯು ಹೃದಯದ ಸ್ನಾಯುವನ್ನು ಬಲಪಡಿಸುತ್ತದೆ. ನಿತ್ಯವೂ ನಡೆದರ ಇದರಿಂದ ಹೃದಯವು ಬಲವಾಗಲು ಮತ್ತು ರಕ್ತ ಸಂಚಾರವು ಸುಧಾರಣೆಯಾಗಿ, ರಕ್ತದೊತ್ತಡ ಕಡಿಮೆ ಆಗುತ್ತದೆ. ಇದರ ಜತೆ ಹೃದಯದ ಕಾಯಿಲೆ, ಪಾರ್ಶ್ವವಾಯು ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವು ಕಡಿಮೆ ಆಗುತ್ತದೆ.
ಇದನ್ನು ಓದಿ: Walking Tips: ತೂಕ ಇಳಿಸಿಕೊಳ್ಳಲು ವಯಸ್ಸಿಗೆ ಅನುಗುಣವಾಗಿ ಎಷ್ಟು ನಿಮಿಷ ವಾಕಿಂಗ್ ಮಾಡಬೇಕು?
ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ: ಕಳಪೆ ನಿದ್ರೆ ಹೃದ್ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ನಡಿಗೆ, ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಕಾರಿ. ಇದು ಹೃದಯದ ಕಾರ್ಯವನ್ನು ಬೆಂಬಲಿಸಿ ಅಂತೆಯೇ ದೇಹದಲ್ಲಿನ ಸ್ನಾಯುಗಳಿಗೆ ಸಾಕಷ್ಟು ವಿಶ್ರಾಂತಿ ನೀಡಿ ರಾತ್ರಿಯ ನಿದ್ದೆಗೆ ಸಹಕಾರಿಯಾಗುತ್ತದೆ.
ಸ್ನಾಯು ಮತ್ತು ಮೂಳೆಗಳ ಬಲಗೊಳ್ಳುವುದು: ನಿತ್ಯವೂ ನಡೆಯುವ ಅಭ್ಯಾಸ ಮಾಡಿದರೆ ಇದರಿಂದ ಮೂಳೆಗಳು ಹಾಗೂ ಸ್ನಾಯುಗಳು ಬಲಗೊಳ್ಳುತ್ತದೆ. ಮೂಳೆ ಸಾಂದ್ರತೆಯನ್ನು ಹೆಚ್ಚು ಮಾಡಿ, ಸಂಧಿವಾತದಂತಹ ಸಮಸ್ಯೆ ನಿವಾರಿಸುತ್ತದೆ.
ಹಾಗಾಗಿ ನಡಿಗೆಯು ನಿಮ್ಮ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಸರಳ, ಪರಿಣಾಮಕಾರಿ ಮಾರ್ಗ ಎನಿಸಿಕೊಂಡಿದೆ. ಒಟ್ಟಿನಲ್ಲಿ ನಿಯಮಿತ ನಡಿಗೆಯಿಂದ ನಿಮ್ಮ ಹೃದಯ ರಕ್ತನಾಳದ ಆರೋಗ್ಯ ಸುಧಾರಣೆಯಾಗುತ್ತದೆ.