Mango Fruit: ದಿನಕ್ಕೆ ಎಷ್ಟು ಮಾವಿನ ಹಣ್ಣು ತಿನ್ನಬಹುದು?
Mango Fruit: ದಿನಕ್ಕೆ ಎಷ್ಟು ಮಾವಿನ ಹಣ್ಣು ತಿಂದರೆ ಸಾಕು ಮತ್ತು ಬೇಕು? ಅದನ್ನು ಹೇಗೆ ತಿಳಿಯುವುದು? ಮಧುಮೇಹಿಗಳು ಮಾವು ತಿನ್ನಲೇಬಾರದೇ? ತಿಂದರೆ ಎಷ್ಟು?. ಇಂಥ ಹಲವು ಪ್ರಶ್ನೆಗಳು ಕಾಡಬಹುದು ಮಾವಿನ ಪ್ರಿಯರನ್ನು. ಈ ಪ್ರಶ್ನೆಗಳಿಗೆ ಉತ್ತರಿಸಲು ಈ ಲೇಖನದಲ್ಲಿ ಯತ್ನಿಸಲಾಗಿದೆ.


ಮಾವಿನ ಹಣ್ಣಿನ ಋತು ಪ್ರಾರಂಭವಾಗಿದೆ. ಆ ಹಣ್ಣಿನ ಜಾತಿ, ಬಣ್ಣ, ಆಕೃತಿ, ಗಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ಅದರ ರುಚಿ ಮತ್ತು ಪರಿಮಳಕ್ಕೆ ಮನಸೋಲುವ ದೇಶ ನಮ್ಮದು. ಹಾಗಾಗಿ ಮಾವಿನ ಕಾಲವನ್ನು (Mango Fruit) ದೊಡ್ಡ ಹಬ್ಬದಂತೆಯೇ ಸಂಭ್ರಮಿಸುತ್ತೇವೆ. ಮಿಡಿಯಾಗಿದ್ದಾಗ ಉಪ್ಪಿನಕಾಯಿ (Pickle) ಹಾಕುವುದರಿಂದ ಹಿಡಿದು, ಕಾಯಿ, ಹಣ್ಣುಗಳವರೆಗೆ ಸಿಹಿ-ಖಾರದ ಹಲವು ಅಡುಗೆಗಳನ್ನು ಮಾಡುತ್ತೇವೆ. ವಿಷಯ ಅದಲ್ಲ, ಮಾವಿನ ಹಣ್ಣು ಇಷ್ಟವೆಂದು ಕಷ್ಟ ಬೀಳುವಷ್ಟು ಸೇವಿಸಬಹುದೇ? ದಿನಕ್ಕೆ ಎಷ್ಟು ಮಾವಿನ ಹಣ್ಣು ತಿಂದರೆ ಸಾಕು ಮತ್ತು ಬೇಕು? ಅದನ್ನು ಹೇಗೆ ತಿಳಿಯುವುದು?

ಮಾವು ಕೊಟ್ಟರೆ ಅಷ್ಟೂ ತಿನ್ನುತ್ತೇವೆ ಎನ್ನುವವರಿದ್ದಾರೆ. ಹಾಗಂತ ದಿನಕ್ಕೆ 10 ಮಾವಿನ ಹಣ್ಣು ತಿನ್ನಲಾದೀತೇ? ಹಾಗೆ ತಿಂದರೆ ಆರೋಗ್ಯದ ಗತಿ ಏನು? ಹಾಗಾದರೆ ಒಂದೇ ತಿನ್ನಬೇಕೆ? ಎರಡು ತಿಂದರೆ ಸಾಕೇ? ಅದರಲ್ಲೂ ಮಧುಮೇಹವಿದ್ದವರು ಮಾವಿನ ಹಣ್ಣಿನ ಪ್ರಿಯರಾಗಿದ್ದರೆ… ಅವರ ಕಷ್ಟ ಹೇಳಿ ಸುಖವಿಲ್ಲ. ಹಾಗಾದರೆ ಮಧುಮೇಹಿಗಳು ಮಾವು ತಿನ್ನಲೇಬಾರದೇ? ತಿಂದರೆ ಎಷ್ಟು?. ಇಂಥ ಹಲವು ಪ್ರಶ್ನೆಗಳು ಕಾಡಬಹುದು ಮಾವಿನ ಪ್ರಿಯರನ್ನು. ಈ ಪ್ರಶ್ನೆಗಳಿಗೆ ಉತ್ತರಿಸಲು ಈ ಲೇಖನದಲ್ಲಿ ಯತ್ನಿಸಲಾಗಿದೆ.
ಸತ್ವಗಳೇನಿವೆ?
ಒಂದು ಮಾವಿನ ಹಣ್ಣನ್ನು ಸಣ್ಣದು, ದೊಡ್ಡದು- ಹೀಗೆಲ್ಲ ವರ್ಣಿಸಿದರೆ ಗೊಂದಲ ಹೆಚ್ಚಾಗುತ್ತದೆ. ಹಾಗಾಗಿ ಒಂದು ಕಪ್ ಅಥವಾ 165 ಗ್ರಾಂ ಮಾವಿನ ಹಣ್ಣು ಎಷ್ಟು ಕ್ಯಾಲರಿಗಳನ್ನು ನಮಗೆ ನೀಡುತ್ತದೆ ಎಂಬುದನ್ನು ತಿಳಿಯೋಣ. 165 ಗ್ರಾಂ ತಾಜಾ ಮಾವಿನ ಹಣ್ಣಿನಲ್ಲಿ ಅಂದಾಜು 100 ಕ್ಯಾಲರಿ ದೊರೆಯುತ್ತದೆ. ಅದರಲ್ಲಿ 1.4 ಗ್ರಾಂ ಪ್ರೊಟೀನ್, 25 ಗ್ರಾಂ ಪಿಷ್ಟ, 2.8 ಗ್ರಾಂ ನಾರು ಮತ್ತು 23 ಗ್ರಾಂ ಸಕ್ಕರೆ ಪ್ರಮುಖವಾದವು. ಅದಲ್ಲದೆ, ದೈನಂದಿನ ಅಗತ್ಯದ ಶೇ.67ರಷ್ಟು ವಿಟಮಿನ್ ಸಿ- ಮಾವಿನ ಹಣ್ಣಿನಿಂದ ದೊರೆಯುತ್ತದೆ. ಜತೆಗೆ, ಫೋಲೇಟ್, ತಾಮ್ರ, ಮೆಗ್ನೀಶಿಯಂ ಹಲವು ವಿಟಮಿನ್‌ಗಳು ಈ ಹಣ್ಣಿನಲ್ಲಿವೆ.
ಎಷ್ಟು ತಿನ್ನಬಹುದು?
ಎರಡು ಕಪ್ ಮಾವಿನ ಹಣ್ಣು ಅಥವಾ 330 ಗ್ರಾಂ ಮಾವಿನ ಹಣ್ಣನ್ನು (ಮಧ್ಯಮ ಗಾತ್ರದ ಎರಡು ಹಣ್ಣು ಎಂದಿಟ್ಟುಕೊಳ್ಳಿ) ಒಂದು ದಿನಕ್ಕೆ ಸೇವಿಸಿದರೆ ಸಾಕು ಎಂಬುದು ಆಹಾರ ತಜ್ಞರ ಲೆಕ್ಕಾಚಾರ. ಇಷ್ಟೊಂದು ರುಚಿಯಾದ ಹಣ್ಣನ್ನು ದಿನಕ್ಕೊಂದು ನಾಲ್ಕಾರು ತಿನ್ನುವಂತಿಲ್ಲವೇ ಎಂದು ಮರುಗಿದರೆ, ಊಹುಂ. ಇದರಲ್ಲಿರುವ ಸಕ್ಕರೆಯಂಶವೇ ಈ ಮಿತಿಯನ್ನು ಅನುಸರಿಸಲು ಕಾರಣ. ಜತೆಗೆ ನಾರು ಸಹ ಇರುವುದರಿಂದ, ಅತಿಯಾಗಿ ತಿಂದರೆ ಅತಿಸಾರ ಅಥವಾ ಡಯರಿಯ ಕಾಡುವುದರಲ್ಲಿ ಅನುಮಾನವಿಲ್ಲ. ಮಿತಿಮೀರಿ ತಿಂದರೆ ತೂಕ ಹೆಚ್ಚುವುದಂತೂ ನಿಶ್ಚಿತ. ಹಾಗಾಗಿ ಮಾವಿನ ಹಣ್ಣನ್ನು ದಿನವೂ ಸೇವಿಸಬಹುದು, ಆದರೆ ಮಿತವಾಗಿ.
ಮಧುಮೇಹಿಗಳು…?
ಅವರಿಗೆ ಈ ಹಣ್ಣು ನಿಷಿದ್ಧವಂತೂ ಅಲ್ಲ. ಆದರೆ ಸರಿಯಾದ ಪ್ರಮಾಣದ ಹಣ್ಣನ್ನು ಸರಿಯಾದ ರೀತಿಯಲ್ಲಿ ತಿನ್ನುವುದು ಮುಖ್ಯ. ಯಾವುದೇ ಆಹಾರವನ್ನು ತಿಂದರೂ ಸಕ್ಕರೆಯಂಶ ವ್ಯತ್ಯಾಸವಾಗುವುದು ಖಚಿತ. ಆದರೆ ಗ್ಲೈಸೆಮಿಕ್ ಸೂಚಿ ಕಡಿಮೆಯಿರುವ ಆಹಾರಗಳಿಂದ ಈ ಏರಿಳಿತವನ್ನು ಮಿತಿಯಲ್ಲಿ ಇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಅದರಲ್ಲೂ ಋತುಮಾನದ ಹಣ್ಣುಗಳು ಎಲ್ಲರ ಆರೋಗ್ಯಕ್ಕೂ ಅಗತ್ಯ.
ಊಟ, ತಿಂಡಿಯ ಜತೆಗೆ ಅಥವಾ ನಂತರ ಮಾವಿನ ಹಣ್ಣನ್ನು ಮಧುಮೇಹಿಗಳು ಸೇವಿಸದಿದ್ದರೆ ಒಳ್ಳೆಯದು. ಅವೆರಡರ ನಡುವಿನ ತಿಂಡಿಯಂತೆ ಇದನ್ನು ಅಲ್ಪಪ್ರಮಾಣದಲ್ಲಿ ಸೇವಿಸಿ ನೋಡಿ. ಉದಾ, ಮೊದಲಿಗೆ ಅರ್ಧ ಹಣ್ಣು ಸೇವಿಸಿ, ಎರಡು ತಾಸುಗಳ ನಂತರ ರಕ್ತದಲ್ಲಿನ ಸಕ್ಕರೆಯಂಶವನ್ನು ಅಳೆಯಿರಿ. ಇದು ಮಿತಿಯಲ್ಲಿ ಇದೆಯೆಂದಾದರೆ ಅರ್ಧ ಹಣ್ಣನ್ನು ನೀವು ಸೇವಿಸಬಹುದು. ಒಂದೊಮ್ಮೆ ಸಕ್ಕರೆಯಂಶ ಏರಿದೆಯೆಂದರೆ, ಹಣ್ಣಿನ ಪ್ರಮಾಣವನ್ನು ಕಡಿಮೆ ಮಾಡಿ. ಈ ಹಣ್ಣನ್ನು ಜ್ಯೂಸ್ ಅಥವಾ ಶೇಕ್ ಮಾಡಿ ಸೇವಿಸುವುದಕ್ಕಿಂತ ಹಣ್ಣನ್ನು ಹಾಗೆಯೇ ತಿನ್ನಿ. ಇದರಿಂದ ಹಣ್ಣಿನ ನಾರೂ ದೇಹ ಸೇರುತ್ತದೆ. ಉಳಿದ ಹಣ್ಣು, ತರಕಾರಿಗಳ ಜತೆಗೆ ಸಲಾಡ್ ಮಾಡಿ ಅದಕ್ಕೆ ಕೊಂಚ ಮಾವು ಸೇರಿಸಿದರೆ ಸಮಸ್ಯೆಯಾಗದು.
ಈ ಸುದ್ದಿಯನ್ನೂ ಓದಿ | Mango Leaf: ಮಾವಿನ ಎಲೆಯ ಔಷಧೀಯ ಗುಣಗಳು ತಿಳಿದಿವೆಯೇ?