ನವದೆಹಲಿ: ತಲೆಯನ್ನು ಕುಟ್ಟಿ ಪುಡಿಮಾಡುವಂಥ ನೋವು, ಕೆಲವೊಮ್ಮೆ ತಲೆಯ ಒಂದೇ ಭಾಗಕ್ಕೆ ನೋವು, ಹೊಟ್ಟೆ ತೊಳೆಸಿದಂತಾಗಿ ವಾಂತಿ, ಗಾಢ ಬೆಳಕು ಮತ್ತು ತೀಕ್ಷ್ಣ ಶಬ್ದಕ್ಕೆ ತೊಂದರೆ ಹೆಚ್ಚಾ ಗುವುದು, ಕಣ್ಣಲ್ಲಿ ಕಾಮನಬಿಲ್ಲಿನಂತೆ ಬಣ್ಣ ಕಾಣುವುದು, ದೃಷ್ಟಿ ಮಂಜಾಗುವುದು… ಇಂಥವೆಲ್ಲಾ ಮೈಗ್ರೇನ್ ಲಕ್ಷಣಗಳು. ಅರೆತಲೆಶೂಲೆ ಎಂದೂ ಕರೆಯಲಾಗುವ ಮೈಗ್ರೇನ್ (Migraine) ತಲೆ ನೋವು ನೀಡುವ ಹಿಂಸೆ ಅಷ್ಟಿಷ್ಟೇ ಅಲ್ಲ. ಒಮ್ಮೆ ಮೈಗ್ರೇನ್ ಆರಂಭವಾದರೆ, ಹಲವಾರು ಗಂಟೆಗಳು ಅಥವಾ ನಾಲ್ಕಾರು ದಿನಗಳವರೆಗೆ ನಿತ್ಯದ ಕೆಲಸವನ್ನೂ ಮಾಡಲಿಕ್ಕಾಗದಷ್ಟು ಅವಸ್ಥೆ ಹದಗೆಡುತ್ತದೆ.
ವೈದ್ಯರ ಸಲಹೆಯ ಜೊತೆಗೆ, ಕೆಲವು ಹೆಚ್ಚುವರಿ ಪ್ರಯತ್ನಗಳಿಂದ ಜೀವನಶೈಲಿಯಲ್ಲಿ, ಆಹಾರ ಕ್ರಮಗಳಲ್ಲಿ ಕೆಲವು ಬದಲಾವಣೆ ಮತ್ತು ಬೆರಳೆಣಿಕೆಯ ಮನೆಮದ್ದುಗಳ ನೆರವಿನಿಂದ ಈ ತಲೆ ಶೂಲೆಯನ್ನು ನಿಯಂತ್ರಣದಲ್ಲಿಡಲು ಸಾಧ್ಯ. ಅವುಗಳಲ್ಲಿ ನೈಸರ್ಗಿಕ ಸುಗಂಧ ತೈಲಗಳ ಬಳ ಕೆಯೂ ಒಂದು ಕ್ರಮ. ಉದಾ, ರೋಸ್‌ಮೆರಿ, ಲ್ಯಾವೆಂಡರ್ ಅಥವಾ ಪೆಪ್ಪರ್‌ಮಿಂಟ್ ತೈಲಗಳನ್ನು ಮೈಗ್ರೇನ್ ಹತೋಟಿಗೆಂದು ಬಳಸಲಾಗುತ್ತದೆ. ಇವೆಲ್ಲವೂ ಅಡ್ಡಪರಿಣಾಮಗಳು ಇಲ್ಲದಂತೆ ಒಂದು ಹಂತದವರೆಗಿನ ಉಪಶಮನವನ್ನು ನೀಡಬಲ್ಲವು. ಅವುಗಳಲ್ಲಿ ರೋಸ್‌ಮೆರಿ ತೈಲದ ಬಳಕೆ ಹೇಗೆ ಎಂಬುದನ್ನು ನೋಡೋಣ.
ಹೇಗೆ ಉಪಯುಕ್ತ?: ರೋಸ್‌ಮೆರಿ ತೈಲವನ್ನು ಶತಮಾನಗಳಿಂದ ಸಾಂಪ್ರದಾಯಿಕ ಔಷಧಗಳಲ್ಲಿ ಬಳಸಲಾಗುತ್ತದೆ. ಭಾರತಕ್ಕೆ ಇದು ಇತ್ತೀಚೆಗೆ ಪರಿಚಯಗೊಂಡರೂ ಪಶ್ಚಿಮ ದೇಶಗಳಲ್ಲಿ ಇದನ್ನು ಅಡುಗೆಗೂ ಬಳಸಲಾಗುತ್ತದೆ. ಮನೆಮದ್ದಿಗೂ ಇದು ಬಳಕೆಯಲ್ಲಿದೆ. ಅದರಲ್ಲೂ ಮೈಗ್ರೇನ್‌ನಂಥ ಸಮಸ್ಯೆಗಳಿಗೆ ಕೆಲವು ರೀತಿಯ ಸುವಾಸನೆಗಳು ಪರಿಣಾಮಕಾರಿ ಉಪಶಮನವನ್ನು ಒದಗಿಸುವ ಹಿನ್ನೆಲೆಯಲ್ಲಿ, ರೋಸ್ ಮೆರಿಯಂಥ ನೈಸರ್ಗಿಕ ಸುಗಂಧ ದ್ರವ್ಯಗಳು ವ್ಯಾಪಕವಾಗಿ ಬಳಕೆಯಲ್ಲಿವೆ.
ಲೇಪನ: ರೋಸ್‌ಮೆರಿ ತೈಲದ ಒಂದೆರಡು ಹನಿಯನ್ನು ಕೊಬ್ಬರಿ ಎಣ್ಣೆ ಇಲ್ಲವೇ ಬಾದಾಮಿ ಎಣ್ಣೆಯಂಥ ಇನ್ನೊಂದು ಎಣ್ಣೆಯೊಂದಿಗೆ ಬೆರೆಸಿಕೊಳ್ಳಿ. ಇದನ್ನು ಹಣೆ, ಹುಬ್ಬಿನ ಅಕ್ಕಪಕ್ಕದಲ್ಲೆಲ್ಲ ಲೇಪಿಸಬೇಕು. ಕುತ್ತಿಗೆಯ ಹಿಂಭಾಗಕ್ಕೂ ಧಾರಾಳವಾಗಿ ಲೇಪಿಸಬಹುದು. ಇದರಿಂದ ಹೊರ ಹೊಮ್ಮುವ ಆಹ್ಲಾದಕರ ಪರಿಮಳವು ಮನಸ್ಸಿನ ಒತ್ತಡ ಕಡಿಮೆ ಮಾಡಿ, ನರಗಳನ್ನು ಶಾಂತ ಗೊಳಿಸುತ್ತದೆ. ಮನಸ್ಸಿಗೆ ಶಾಂತ ಭಾವ ಬರುತ್ತಿದ್ದಂತೆ ಮೈಗ್ರೇನ್ ತೀವ್ರತೆ ಕಡಿಮೆ ಯಾಗುತ್ತದೆ.
ಅರೋಮಾಥೆರಪಿ: ಇದೂ ಸಹ ಪರಿಮಳವನ್ನು ಆಘ್ರಾಣಿಸುವ ಚಿಕಿತ್ಸೆಯೇ. ಇದಕ್ಕಾಗಿ ಮೀಸ ಲಾಗಿರುವ ಸಣ್ಣ ಸ್ಟೀಮರ್‌ನಲ್ಲಿ ಒಂದೆರಡು ಹನಿ ರೋಸ್‌ಮೆರಿ ತೈಲವನ್ನು ಹಾಕಿ, ಸ್ಟೀಮರ್‌ಗೆ ಚಾಲನೆ ನೀಡಿ. ಇದರಿಂದ ಹೊರಹೊಮ್ಮುವ ಸುಗಂಧಪೂರಿತ ಆವಿಯನ್ನು ಆಘ್ರಾಣಿಸಿ. ಇಂಥ ಸ್ಟೀಮರ್‌ಗಳು ಇಲ್ಲದಿದ್ದರೆ, ಬಿಸಿ ನೀರಿಗೆ ಒಂದೆರಡು ಹನಿ ರೋಸ್‌ಮೆರಿ ತೈಲ ಹಾಕಿ. ಟವೆಲ್ ಮುಚ್ಚಿಕೊಂಡು, ಇದರ ಆವಿಗೆ ಮುಖವೊಡ್ಡಿ ದೀರ್ಘವಾಗಿ ಉಸಿರೆಳೆದುಕೊಳ್ಳಿ.
ಈ ಸುದ್ದಿಯನ್ನೂ ಓದಿ:Health Tips: ತಲೆಗೂದಲಿಗೆ ಈರುಳ್ಳಿ ತೈಲದ ಲಾಭಗಳೇನು ಗೊತ್ತೇ?
ಕಂಪ್ರೆಸ್: ಇದೊಂದು ರೀತಿಯಲ್ಲಿ ಸುಗಂಧತೈಲದ ಶಾಖ ಎನ್ನಬಹುದು. ಬಿಸಿ ನೀರಿಗೆ ಒಂದೆರಡು ಹನಿ ರೋಸ್‌ಮೆರಿ ತೈಲ ಸೇರಿಸಿ. ಈ ನೀರಿನಲ್ಲಿ ಸ್ವಚ್ಛ ಟವೊಲ್ ಅದ್ದಿ ಹಿಂಡಿ. ಈ ಬಿಸಿ ಬಟ್ಟೆಯಲ್ಲಿ ಹಣೆ ಮತ್ತು ಕುತ್ತಿಗೆಯ ಹಿಂಭಾಗಗಳಿಗೆ ಶಾಖ ಕೊಡಿ. ಇದನ್ನೇ ಹತ್ತಾರು ಬಾರಿ ಪುನರಾವರ್ತಿಸಬೇಕು. ಒಂದೊಮ್ಮೆ ಬಿಸಿ ಅನುಭವದಿಂದ ಸಮಸ್ಯೆ ಹೆಚ್ಚಾಗುತ್ತದೆ ಎನಿಸಿದರೆ, ಸುಗಂಧ ತೈಲವನ್ನು ಬಿಸಿ ನೀರಿನ ಬದಲು ತಣ್ಣೀರಿಗೆ ಹಾಕಿ, ಕೋಲ್ಡ್ ಪ್ಯಾಕ್ ಕೊಡಬಹುದು.
ಇವೆಲ್ಲವುಗಳ ಜೊತೆಗೆ ಧಾರಾಳವಾಗಿ ನೀರು ಕುಡಿಯಿರಿ. ದಾಕ್ಷಿಣ್ಯ ಬಿಟ್ಟು ನಿದ್ದೆ ಮಾಡಿ. ಸಾಕಷ್ಟು ವಿಶ್ರಾಂತಿಯನ್ನು ಮನಸ್ಸು ಮತ್ತು ದೇಹಕ್ಕೆ ನೀಡುವುದು ಮೈಗ್ರೇನ್ ಹತೋಟಿಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಮಾತ್ರವಲ್ಲ, ಯೋಗ, ಧಾನ್ಯ, ಪ್ರಾಣಾಯಾಮದಂಥ ಒತ್ತಡ ಶಮನ ಮಾರ್ಗಗಳು ಬದುಕಿನ ಭಾಗವಾಗಿರಲಿ.
ರೋಸ್‌ಮೆರಿ ತೈಲ ಸಾಮಾನ್ಯವಾಗಿ ಎಲ್ಲ ರೀತಿಯ ಚರ್ಮಕ್ಕೂ ಹೊಂದಿಕೆ ಆಗುವಂಥದ್ದು. ಆದರೂ ಮೊದಲ ಬಾರಿಗೆ ಉಪಯೋಗಿಸುವ ಮುನ್ನ ಪ್ಯಾಚ್ ಟೆಸ್ಟ್ ಮಾಡುವುದು ಒಳಿತು. ಈ ತೈಲವನ್ನು ನೇರವಾಗಿ ಚರ್ಮದ ಮೇಲೆ ಪ್ರಯೋಗಿಸಬೇಡಿ. ಇದನ್ನು ಬಾದಾಮಿ ಎಣ್ಣೆ ಅಥವಾ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿಯೇ ಹಚ್ಚಿಕೊಳ್ಳಿ. ಇದರಿಂದ ಅಲರ್ಜಿ ಆಗುವ ಸಾಧ್ಯತೆ ಕಡಿಮೆ.