ಬೆಂಗಳೂರು, ಡಿ. 22: ಇತ್ತೀಚಿನ ದಿನದಲ್ಲಿ ಪೋಷಕರು ತಮ್ಮ ಮಕ್ಕಳ ಆರೈಕೆ ಮಾಡಲು ಅಧಿಕ ಆದ್ಯತೆ ನೀಡುತ್ತಿದ್ದಾರೆ. ತಮ್ಮ ಮಗು ಆಟ, ಬೇರೆಯವರ ಜತೆ ಕೀಟಲೆ, ತುಂಟಾಟ ಮಾಡುತ್ತದೆ ಆದರೆ ಊಟ ಮಾತ್ರ ಮಾಡುವುದಿಲ್ಲ ಎಂಬ ದೂರು ಪೋಷಕರಿಂದ ಕೇಳಿ ಬರುತ್ತಲೇ ಇದೆ. ಅಂಗಡಿ ತಿಂಡಿ ತಿನಿಸು ತಿನ್ನುವ ಮಗುವಿಗೆ ಮನೆ ಊಟ ಯಾಕೆ ಹಿಡಿಸುತ್ತಿಲ್ಲ. ಇದಕ್ಕೆ ಕಾರಣ ಏನು? ಮಗು ದಪ್ಪ ಅಥವಾ ಸಣ್ಣ ಆಗಲು ಆಹಾರ ಸೇವನೆ ಕಾರಣ ಆಗುತ್ತಾ? ಮಗುವಿನ ಆರೋಗ್ಯ ಕಾಳಜಿಗಾಗಿ ಯಾವ ರೀತಿ ಆಹಾರ ಕ್ರಮ ಉತ್ತಮ ಎಂಬ ವಿಚಾರದ ಬಗ್ಗೆ ವಿಶ್ವವಾಣಿ ಹೆಲ್ತ್ ಚಾನೆಲ್‌ನ ಸಂದರ್ಶನದಲ್ಲಿ ಖ್ಯಾತ ಮಕ್ಕಳ ತಜ್ಞ ಡಾ. ಸೈಯದ್ ಮುಜಾಹಿದ್ ಹುಸೇನ್ (Dr. Sayed Mujahid Husain) ತಿಳಿಸಿ ಕೊಟ್ಟಿದ್ದಾರೆ. ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಮೇಲೆ ಆಹಾರವು ಪ್ರಧಾನ ಪಾತ್ರ ವಹಿಸಲಿದ್ದು ಈ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಂಬ ಬಗ್ಗೆ ಅವರು ಸಲಹೆ ನೀಡಿದ್ದಾರೆ.
ಭಾರತದ ಶೇ. 80ರಷ್ಟು ಪೋಷಕರು ತಮ್ಮ ಮಕ್ಕಳು ಊಟ ಮಾಡುವುದಿಲ್ಲ ಎಂಬ ಸಮಸ್ಯೆಯನ್ನೇ ವೈದ್ಯರ ಬಳಿಯಲ್ಲಿ ದೂರುತ್ತಿದ್ದಾರೆ. ಊಟ ಮಾಡದ ಕೆಲವು ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಾಣದಿರಬಹುದು. ಊಟ ತಿಂಡಿ ತಿನ್ನದಿದ್ದರೂ ಅಂತಹ ಮಕ್ಕಳ ಬೆಳವಣಿಗೆಯೂ ಚೆನ್ನಾಗಿ ಇರುತ್ತದೆ. ಆದರೆ ಇನ್ನು ಕೆಲವು ಮಕ್ಕಳಿಗೆ ಹಿಮೋಗ್ಲೋಬಿನ್ ಸಮಸ್ಯೆ, ತೂಕ ಸಮಸ್ಯೆ ಇತ್ಯಾದಿ ಕಂಡುಬರುವ ಸಾಧ್ಯತೆ ಇದೆ. ಹಾಗೆಂದು ಮಕ್ಕಳಿಗೆ ಬಲವಂತವಾಗಿ ತಿನ್ನಿಸುವುದರಿಂದ ಏನು ಪ್ರಯೋಜನೆ ಇಲ್ಲ ಎಂದು ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ.
ವಿಡಿಯೊ ನೋಡಿ:
ಮಕ್ಕಳ ಮುಂದೆಯೇ ಪೋಷಕರು ಜಂಕ್ ಫುಡ್ ತಿನ್ನುವುದು, ಪ್ಯಾಕೆಟ್ ತಿಂಡಿಯನ್ನು ಹೆಚ್ಚಾಗಿ ಮಕ್ಕಳಿಗೆ ಕೊಡಿಸುವುದನ್ನು ಮಾಡುತ್ತಾರೆ. ಇಂತಹ ತಿಂಡಿಯನ್ನೇ ಮಕ್ಕಳು ಹೆಚ್ಚಾಗಿ ಸೇವಿಸಿದರೆ ಮನೆ ಊಟ ಅವರಿಗೆ ಹಿಡಿಸಲಾರದು. ಜಂಕ್ ಫುಡ್ ಅತಿಯಾಗಿ ಸೇವಿಸಿದಾಗ ಹಸಿವು ಕೂಡ ಆಗಲಾರದು. ಹೀಗಾಗಿ ಪೋಷಕಾಂಶ ಸಮಸ್ಯೆ ಕಂಡು ಬಂದು ಮಕ್ಕಳ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಮನೆ ಆಹಾರ ಸೇವಿಸದೇ ಮಕ್ಕಳ ತೂಕ, ಎತ್ತರ ಇತರ ಬೆಳವಣಿಗೆ ಮೇಲೆ ಯಾವುದೆ ಪರಿಣಾಮ ಬೀರದೆ ನಾರ್ಮಲ್ ಆಗಿದ್ದರೆ ಪೋಷಕರು ತಲೆಕೆಡಿಸಿ ಕೊಳ್ಳಬೇಕಿಲ್ಲ. ಅವರು ಒಂದು ಹಂತದ ಬಳಿಕ ಊಟ ಮಾಡುವುದನ್ನು ರೂಢಿಸಿಕೊಳ್ಳುತ್ತಾರೆ. ಆದರೆ ಊಟ ಬಿಟ್ಟು ಮಕ್ಕಳ ಬೆಳವಣಿಗೆ ಕುಂಠಿತವಾದರೆ ಪೋಷಕರು ಈ ಬಗ್ಗೆ ನಿಗಾ ವಹಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಹಲ್ಲಿನ ಸೆಟ್ ಬದಲು ಡೆಂಟಲ್ ಇಂಪ್ಲ್ಯಾಂಟ್ ಮಾಡಿದರೆ ಈ ಲಾಭ ಸಿಗಲಿದೆ
ಈ ಬಗ್ಗೆ ಗಮನ ಹರಿಸಿ
- ಮಕ್ಕಳು ಊಟ ಮಾಡಬೇಕು ಎಂಬ ಕಾರಣಕ್ಕೆ ಮೊಬೈಲ್ ತೋರಿಸಿ ಊಟ ಮಾಡಿಸಬಾರದು.
- ಮಕ್ಕಳಿಗೆ ಟ್ಯಾಬ್, ಮೊಬೈಲ್, ಟಿವಿ ತೋರಿಸಿ ಊಟ ಮಾಡಿಸುವುದರಿಂದ ಮಕ್ಕಳಲ್ಲಿ ನ್ಯೂಟ್ರಿಶಿಯನ್ ಸಮಸ್ಯೆ ಬರುತ್ತದೆ. ಊಟದ ಮೇಲೆ ಗಮನ ಕೂಡ ಇರಲಾರದು.
- ಮೊಬೈಲ್ ತೋರಿಸಿ ಊಟ ಮಾಡುವುದು ಹವ್ಯಾಸ ಆದಾಗ ಮಕ್ಕಳಿಗೆ ದೈಹಿಕ ಮತ್ತು ಮಾನಸಿಕ ಸಮಸ್ಯೆ ಕಂಡು ಬರುತ್ತದೆ.
- ಮಕ್ಕಳಿಗೆ ಕ್ಯಾಲರಿ, ಮಿನರಲ್ಸ್, ವಿಟಮಿನ್ ಇರುವ ಆಹಾರ ನೀಡಿ.
- ಊಟವನ್ನು ಕ್ರಿಯೇಟಿವ್ ಆಗಿ ನೀಡಿದಾಗ ಅದನ್ನು ಮಕ್ಕಳು ಇಷ್ಟಪಟ್ಟು ಸೇವಿಸಲಿದ್ದಾರೆ.
- ಪೋಷಕರು ತಮ್ಮಮಕ್ಕಳ ವಯಸ್ಸಿನ ಆಧಾರದ ಮೇಲೆ ಅದಕ್ಕೆ ಅನುಗುಣವಾದ ಕ್ಯಾಲರಿಯುಕ್ತ ಆಹಾರ ನೀಡಿದರೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಚೆನ್ನಾಗಿ ಆಗಲಿದೆ.
- ಪೋಷಕರು ಮಕ್ಕಳ ಜತೆ ಕುಳಿತು ಊಟ ಮಾಡಬೇಕು. ಆಗ ಮಕ್ಕಳಿಗೂ ಊಟದ ಮೇಲೆ ಆಸಕ್ತಿ ಮೂಡುತ್ತದೆ.
ಮಕ್ಕಳು ಊಟ ಮಾಡಬೇಕು ಎಂದು ತುಂಬಾ ತಿನ್ನಿಸುವ ಅಗತ್ಯವಿಲ್ಲ. ಅವರ ದೇಹಕ್ಕೆ ಅಗತ್ಯವಾದ ನ್ಯೂಟ್ರಿಶನ್ ಮಾತ್ರ ನೀಡಿದರೆ ಸಾಕಾಗುತ್ತದೆ. ಮಕ್ಕಳು ಊಟ ಮಾಡುವುದಿಲ್ಲ ಎಂದ ಕೂಡಲೇ ವೈದ್ಯರನ್ನು ಸಂಪರ್ಕಿಸುವ ಅಗತ್ಯವಿಲ್ಲ. ಊಟ ಮಾಡದೆ ಮಕ್ಕಳ ಆರೋಗ್ಯ ಏರು ಪೇರಾದಾಗ, ಬೆಳವಣಿಗೆಯಾಗದೆ ಇದ್ದಾಗ ವೈದ್ಯರನ್ನು ಸಂಪರ್ಕಿಸಬೇಕು. ಸಾಧ್ಯವಾದಷ್ಟು ಮಕ್ಕಳ ಜತೆಗೆ ಪೋಷಕರು ನಿಕಟ ಸಂಪರ್ಕ ಇಟ್ಟುಕೊಂಡು ಲಾಲನೆ ಪಾಲನೆ ಮಾಡಬೇಕು ಎಂದು ಡಾ. ಸೈಯದ್ ಮುಜಾಹಿದ್ ಹುಸೇನ್ ಸಲಹೆ ಕೂಡ ನೀಡಿದ್ದಾರೆ.